Kukke Subrahmanya Temple: ಕುಕ್ಕೆ ವಿವಾದದ ಕಿಡಿಗೆ ತುಪ್ಪ ಸುರಿದ ಪಲಿಮಾರು‌ ಶ್ರೀ

ಈ ಬಾರಿ ಶಿವರಾತ್ರಿಯ ದಿನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶೈವಾಗಮ ಪ್ರಕಾರ ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹಿತರಕ್ಷಣಾ ಸಮಿತಿ ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದೆ. ಇದು ಮಾಧ್ವರನ್ನು ಕೆರಳಿಸಿದೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

  • Share this:
ಉಡುಪಿ(ಮಾ.01): ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಬೇಕಾಗಿರುವ ಶಿವರಾತ್ರಿ  ಮಹೋತ್ಸಕ್ಕೆ ಶೈವ ಮತ್ತು ವೈಷ್ಣವ ಸಂಪ್ರದಾಯದ ನಡುವಿನ ತಿಕ್ಕಾಟ ಬಹುದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಸುಬ್ರಹ್ಮಣ್ಯ ಹಿತ ರಕ್ಷಣಾ ಸಮಿತಿ ಶೈವ ಪೂಜ ಪದ್ದತಿಯನ್ನು ಅನುಸರಿಸುವಂತೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಉಡುಪಿಯ ಮಧ್ವ ಪರಂಪರೆಗಳಲ್ಲಿ ಒಬ್ಬರಾದ  ಪಲಿಮಾರು ಶ್ರೀಗಳು ಮಾಧ್ವ ಸಂಪ್ರದಾಯ ಉಳಿಸಬೇಕು ಎಂದು ಬ್ಯಾಟಿಂಗ್ ಆರಂಭಿಸಿದ್ದಾರೆ. ಈ ನಡುವೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಡ್ಡಗೋಡೆ ಮೇಲೆ ದೀಪವಿಟ್ಟು ನುಣುಚಿಕೊಂಡಿದ್ದಾರೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದೇಶದ ಮೂಲೆ ಮೂಲೆಯಿಂದ ಅಪಾರ ಭಕ್ತರನ್ನು ಹೊಂದಿರುವ ದೇವಾಲಯ. ಸರ್ಕಾರದ ಬೊಕ್ಕಸಕ್ಕೆ ಕೋಟಿ ಆದಾಯ ಮೂಲ ಕೂಡ ಹೌದು. ಆದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸದಾ ಒಂದಲ್ಲ ಒಂದು  ವಿವಾದಗಳ ಜೊತೆಗೆ ಸುದ್ದಿಯಲ್ಲಿ ಇರುತ್ತೆ ಅನ್ನೊದು ಅಷ್ಟೇ ಸತ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶೈವ ಮತ್ತು ಮಾಧ್ವರ ನಡುವಿನ ಕಚ್ಚಾಟಕ್ಕೆ ಹೊಸ ವೇದಿಕೆ ಸಿದ್ಧವಾಗಿದೆ ಶತಮಾನಗಳ ಹಿಂದೆ ಈ ಕ್ಷೇತ್ರದಲ್ಲಿ ಶೈವಾಗಮದ ಪ್ರಕಾರವೇ ಪೂಜೆ ನಡೆಯುತ್ತಿತ್ತು. ಶೈವ ಪದ್ಧತಿಯನ್ನು ಅನುಸರಿಸುವ ಶೃಂಗೇರಿ ಮಠದ ವ್ಯಾಪ್ತಿಗೆ ಈ ಕ್ಷೇತ್ರ ಒಳಪಟ್ಟಿತ್ತು. ಮಾಧ್ವರ ಪ್ರಭಾವ ಹೆಚ್ಚಾದ ನಂತರ, ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ತಂತ್ರಸಾರ ಆಗಮದ ಪ್ರಕಾರ, ವೈಷ್ಣವ ಪದ್ದತಿಯಂತೆ ಪೂಜಾವಿಧಾನ ಆರಂಭವಾಯ್ತು. ಆದರೆ ಮೂಲ ಪದ್ದತಿಯಲ್ಲೇ ಆರಾಧನೆ ನಡೆಯಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನ ಹಿತರಕ್ಷಣಾ ಸಮಿತಿ ಆಗ್ರಹಿಸಲಾರಂಭಿಸಿದೆ.

ಈ ಬಾರಿ ಶಿವರಾತ್ರಿಯ ದಿನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶೈವಾಗಮ ಪ್ರಕಾರ ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹಿತರಕ್ಷಣಾ ಸಮಿತಿ ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದೆ. ಇದು ಮಾಧ್ವರನ್ನು ಕೆರಳಿಸಿದೆ. ಮಾಧ್ವಸಂಪ್ರದಾಯದ ಮೂಲ ಕೇಂದ್ರವಾದ ಉಡುಪಿಯಲ್ಲಿ ಸೇರಿದ ಮಾಧ್ವ ಪಂಡಿತರು,‘ ಸಂಪ್ರದಾಯ ಬದಲಿಸಬೇಡಿ’ ಎಂದು ಆಗ್ರಹಿಸಿದ್ದಾರೆ. ಮಾಧ್ವ ಪಂಡಿತ ಆಗ್ರಹದ ಬೆನ್ನಲ್ಲೇ ಪಲಿಮಾರು ಮಠದ ಶ್ರೀಗಳು ಕೂಡ ಇದೇ ವಿಚಾರವನ್ನು ಪುನರುಚ್ಚರಿಸಿದ್ದಾರೆ. ಮಧ್ವಾಚಾರ್ಯರ ಕಾಲದಿಂದ ಕುಕ್ಕೆಯಲ್ಲಿ ಮಾಧ್ವ ಮಠದವರೇ ಪೂಜೆ ಮಾಡುತ್ತಾ ಬಂದಿದ್ದಾರೆ.

ಅವಕಾಶ ಸಿಕ್ಕರೆ ಖಂಡಿತಾ ಬಿಗ್​ ಬಾಸ್​ಗೆ ಹೋಗುತ್ತೇನೆ; ಎಂಎಲ್​ಸಿ ಹೆಚ್​.ವಿಶ್ವನಾಥ್​

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದೇವಾಲಯದ ಹಾಗೆ ಅಲ್ಲ. ಕುಕ್ಕೆಯ ಆಚರಣೆ ಸಂಪ್ರದಾಯಗಳು ಮಠದಂತೆ ಇದೆ. ಕುಕ್ಕೆಯಲ್ಲಿ ದೇವರ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವ ಉತ್ಸವ ನಡೆಯುವುದಿಲ್ಲ. ಆಚಾರ್ಯ ಮಧ್ವರ ಕಾಲದಿಂದ ಮಾಧ್ವರಿಂದ ಪೂಜೆ ನಡೆಯುತ್ತಿದೆ. ಕುಕ್ಕೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಪೂಜಾ ಪದ್ಧತಿಯನ್ನು ಮುಂದುವರಿಸಬೇಕು. ಆಚರಣೆಯಲ್ಲಿ ಭಿನ್ನವಾದರೆ ದೇವಸ್ಥಾನ ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿಷ್ಠಾ ಕಾಲದಲ್ಲಿ ಪೂಜೆ ಯಾವ ರೀತಿ ಆರಂಭವಾಗಿದೆ ಅದು ಹಾಗೆಯೇ ಮುಂದುವರೆಯಬೇಕು. ಯಾವುದೇ ವ್ಯತ್ಯಾಸಗಳು ಆದರೆ ದೋಷ ಬರುತ್ತದೆ. ನನಗೆ ರುದ್ರನ ಮೇಲೆ ದ್ವೇಷ ಇಲ್ಲ. ನಾನು ರುದ್ರ ಪಾರಾಯಣ ಮಾಡುತ್ತೇನೆ.

ಯಾವುದೇ ದೇವಸ್ಥಾನದಲ್ಲಿ ಆಗಲಿ ಅನೂಚಾನವಾಗಿ ಬಂದ ಆಚರಣೆ ಅದು ಹಾಗೆಯೇ ಮುಂದುವರೆಯಬೇಕು. ಮಂತ್ರ ಕ್ರಮ ಎಲ್ಲವೂ  ತಂತ್ರದ ರೀತಿಯಲ್ಲಿ ಬಂದರೆ ಚಂದ. ಕುಕ್ಕೆಯಲ್ಲಿ ಸ್ಕಂದನ ದೇವಸ್ಥಾನ ಇರುವುದು. ಸ್ಕಂದನ ಪೂಜೆ ಹೇಗೆ ಆಗಬೇಕೋ ಅದು ಹಾಗೆ ನಡೆದುಕೊಂಡು ಬರುತ್ತಿದೆ. ಸುಬ್ರಮಣ್ಯ ಸ್ಕಂದ ಕೇಂದ್ರಿತ ವಾದಂತಹ ಕ್ಷೇತ್ರ. ಬದಲಾವಣೆಗಳು ಆಗಬೇಕಾದರೆ ವಿಮರ್ಶೆ ಮಾಡಬೇಕು. ನನ್ನ ಅಭಿಪ್ರಾಯ ಕೇಳಿದರೆ ಯಾವುದೇ ಪೂಜಾ ಬದಲಾವಣೆಗಳು ಬೇಡ  ಎಂದಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶಿವರಾತ್ರಿ ಪೂಜೆ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.ಸದ್ಯ ವಿವಾದ ಚೆಂಡು ಮುಜರಾಯಿ ಇಲಾಖೆಯ ಅಂಗಳಕ್ಕೆ ಬಿದ್ದಿದೆ. ಪೂಜಾಪದ್ಧತಿಯ ಬಗ್ಗೆ ಮಾಧ್ವ, ಶೈವ ಗುಂಪುಗಳ ನಡುವೆ ಜಿಜ್ಞಾಸೆ ಮೂಡಿದ್ದು, ಎರಡೂ ಗುಂಪಿನರನ್ನು ಕರೆದು ಮಾತನಾಡುವ ಬಗ್ಗೆ ಮುಜರಾಯಿ ಸಚಿವರು ಚಿಂತನೆ ನಡೆಸಿದ್ದಾರೆ. ಶಿವನ ಅಂಶ ಇರುವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಮಾಡಲು ಇಲಾಖೆ ಸೂಚಿಸುತ್ತದೆ.

ಕುಕ್ಕೆಯಲ್ಲಿ ಈ ಬಗ್ಗೆ ಚರ್ಚೆ ಇದ್ದರೆ ಆಗಮ ಪಂಡಿತರು ತೀರ್ಮಾನ ಕೈಗೊಳ್ಳುತ್ತಾರೆ. ದೇವಸ್ಥಾನ, ಮುಜರಾಯಿ ಇಲಾಖೆಯ ಆಗಮ ಪಂಡಿತರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು. ಅಷ್ಟಮಂಗಲದ ವಿಚಾರಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಗಮನಿಸುತ್ತದೆ. . ಅದ್ರೆ ಶಿವನ ಅಂಶ ಇರುವ ಕಡೆ ಶಿವನ ಆರಾಧನೆ ಸರ್ಕಾರ ಅವಕಾಶ ನೀಡುತ್ತದೆ ಎನ್ನುವ ಮೂಲಕ ಶೈವ ಸಂಪ್ರದಾಯದ ಪರ ನಿಂತವರಿಗೆ ಸಚಿವರು ಪರೋಕ್ಷವಾಗಿ ಬೆಂಬಲ ವ್ಯಕ್ತ ಪಡಿಸಿದಂತೆ ಕಾಣುತ್ತೆ.

ಒಟ್ಟಿನಲ್ಲಿ ಕುಕ್ಕೆ ವಿವಾದ ಪರಿಹಾರ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಮುಜರಾಯಿ ಇಲಾಖೆಯ  ಮಧ್ಯಸ್ಥಿಕೆಯಲ್ಲಿ ಸೋಮವಾರ ಶೈವ ಹಾಗೂ ಮಧ್ವ ಸಂಪ್ರದಾಯದ ಪರ ನಿಂತವರ ಜೊತೆಗೆ ಮಾತುಕತೆ ನಡೆಸಲಾಗುತ್ತೆ. ಆಗಮ ಪಂಡಿತರ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಂತರವಾದ್ರೂ ಕಗ್ಗಂಟಾದ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುತ್ತಾ ಕಾದು ನೋಡಬೇಕು.
Published by:Latha CG
First published: