ಯಾದಗಿರಿ(ಏ.12): ರಾಜ್ಯಾದ್ಯಂತ ಕಳೆದ ಐದು ದಿನಗಳಿಂದ ಸಾರಿಗೆ ನೌಕರರು ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ಈಶಾನ್ಯ ಸಾರಿಗೆ ಸಂಸ್ಥೆಯು ಭಾರಿ ನಷ್ಟವಾಗಿದೆ. ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 31 ಸಾರಿಗೆ ನೌಕರರನ್ನು ವಜಾ ಮಾಡಲಾಗಿದ್ದು, ಕೆಲಸಕ್ಕೆ ಗೈರಾಗಿದ್ದವರಿಗೆ ಈಗ ಶಾಕ್ ಆಗಿದೆ. 31 ಜನ ನೌಕರರನ್ನು ವಜಾ ಮಾಡಲಾಗಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್ ತಿಳಿಸಿದ್ದಾರೆ.
ಈಶಾನ್ಯ ಸಾರಿಗೆ ಸಂಸ್ಥೆಯ 8 ತರಬೇತಿ ಸಿಬ್ಬಂದಿ ಹಾಗೂ 23 ಖಾಯಂ ಸಿಬ್ಬಂದಿ ಸೇರಿ 31 ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಇದಲ್ಲದೇ 53 ಚಾಲನಾ ಸಿಬ್ಬಂದಿ,20 ತಾಂತ್ರಿಕ ಸಿಬ್ಬಂದಿ,2 ಆಡಳಿತ ಸಿಬ್ಬಂದಿ ಸೇರಿದಂತೆ 75 ಸಿಬ್ಬಂದಿಗಳಿಗೆ ಸಂಸ್ಥೆಯ ಅಂತರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.122 ಚಾಲನಾ ಮತ್ತು 27 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 149 ಸಿಬ್ಬಂದಿಗಳ ಎರವಲು ಸೇವೆ ರದ್ದುಗೊಳಿಸಿ ಮೂಲ ಹುದ್ದೆಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮುಖಕ್ಕೆ ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಕೇಳೋದೆ ಬೇಡ; ಕೊರೋನಾ ಮಧ್ಯಯೇ ಚಿಕ್ಕಮಗಳೂರಿನಲ್ಲಿ ಬೈಕ್ ರ‍್ಯಾಲಿ
ಸಾರಿಗೆ ನೌಕರರ ಮುಷ್ಕರದ ನಡುವೆಯೂ ಪ್ರಯಾಣಿಕರಿಗೆ ತೊಂದರೆಯಾಗದಂತೆ 358 ಖಾಸಗಿ ಬಸ್,191 ಆಂಧ್ರಪ್ರದೇಶ ಮತ್ತು ತೆಲಂಗಾಣದ ಸಾರಿಗೆ ಸಂಸ್ಥೆಯ ವಾಹನಗಳು ಹಾಗೂ 2757 ಇತರೆ ವಾಹನಗಳನ್ನು ಬಸ್ ನಿಲ್ದಾಣದ ಮೂಲಕ ಸಂಚಾರಕ್ಕೆ ಅವಕಾಶ ಮಾಡಿ ಅನುಕೂಲ ಮಾಡಲಾಗಿದೆ. ಸುಮಾರು 300 ಕ್ಕೂ ಹೆಚ್ಚು ಬಸ್ ಗಳು ಸಿಬ್ಬಂದಿಗಳ ಮನವೊಲಿಸಿ ಬಸ್ ಗಳ ಕಾರ್ಯಚರಣೆ ಮಾಡಲಾಗಿದೆ.
ಈಶಾನ್ಯ ಸಾರಿಗೆ ಸಂಸ್ಥೆಗೆ ಸಾರಿಗೆ ನೌಕರರ ಮುಷ್ಯದಿಂದ 4.5 ಕೋಟಿ ನಷ್ಟು ಆದಾಯ ಕೊರತೆಯಾಗಿದೆ. ಸಂಸ್ಥೆಯ ವ್ಯಾಪ್ತಿಯ ಕಲಬುರಗಿ, ಬೀದರ,ಯಾದಗಿರಿ ಮೊದಲಾದ ಭಾಗದಲ್ಲಿ ಇಂದು ಕೂಡ ಸಂಸ್ಥೆ ಬಸ್ ಗಳು ಕಾರ್ಯಾಚರಣೆ ಆರಂಭ ಮಾಡಿವೆ. ಕಲಬುರಗಿ, ಬೀದರ್,ಯಾದಗಿರಿ ಜಿಲ್ಲೆಯಲ್ಲಿ ಕೂಡ ಖಾಸಗಿ ವಾಹನಗಳ ಕಾರುಬಾರು ಹೆಚ್ಚಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಕೂಡ ಭಾನುವಾರ ಸಂಸ್ಥೆಯ ಅಧಿಕಾರಿಗಳ ಮನವೊಲಿಕೆಯಿಂದ 11 ಜನ ನೌಕರರು ಕೆಲಸಕ್ಕೆ ಹಾಜರಾಗಿದ್ದು, 11 ಬಸ್ ಗಳು ಸಂಚರಿಸಿವೆ. ಯಾದಗಿರಿ ಜಿಲ್ಲೆಯಲ್ಲಿ ಕೆಲಸಕ್ಕೆ ಗೈರಾದ ಓರ್ವ ನೌಕರರನ್ನು ವಜಾ ಮಾಡಲಾಗಿದೆ. ಈಗಾಗಲೇ ಸಂಸ್ಥೆ ವ್ಯಾಪ್ತಿಯಲ್ಲಿ 31 ನೌಕರರನ್ನು ವಜಾ ಮಾಡಿದ ಹಿನ್ನೆಲೆ, ಆತಂಕಗೊಂಡ ನೌಕರರು ಅನಿವಾರ್ಯವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಪ್ರತಿವರ್ಷ ಯುಗಾದಿ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರು ಪಾದಯಾತ್ರೆ ಹಾಗೂ ಖಾಸಗಿ ವಾಹನ,ಸಾರಿಗೆ ಸಂಸ್ಥೆಯ ವಾಹನಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕರ್ನೂಲ್ ಜಿಲ್ಲೆಯ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯಲು ತೆರಳುತ್ತಾರೆ. ಆದರೆ, ಈಗ ಸಾರಿಗೆ ಸಂಸ್ಥೆಯ ಬಸ್ ಗಳ ಮೂಲಕ ಶ್ರೀಶೈಲಗೆ ತೆರಬೇಕೆಂದರೆ ಬಸ್ ಇಲ್ಲದ ಹಿನ್ನೆಲೆ ಭಕ್ತರು ಪರದಾಡುವಂತಾಗಿದೆ.ಕೆಲವರು ಖಾಸಗಿ ವಾಹನ ಬಾಡಿಗೆ ಪಡೆದು ಹೋದ್ರೆ ಮತ್ತೆ ಕೆಲವರು ಶ್ರೀ ಶೈಲಗೆ ತೆರಳಲು ಸಾಧ್ಯವಾಗದೇ ಮನೆಯಲ್ಲಿ ಉಳಿದುಕೊಳ್ಳುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ