ಸ್ಥಳಕ್ಕೆ ಸಚಿವರು ಬಂದು ಲಿಖಿತ ಭರವಸೆ ತಲುಪಿಸುವವರೆಗೂ ಮುಷ್ಕರ ಹಿಂಪಡೆಯಲ್ಲ: ಕೋಡಿಹಳ್ಳಿ ಚಂದ್ರಶೇಖರ್

ಸಾರಿಗೆ ನೌಕರರ ಒಂಬತ್ತು ಬೇಡಿಕೆ ಈಡೇರಿಸುವ ಬಗ್ಗೆ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿ ಸಚಿವರ ಮೂಲಕ ನಮಗೆ ತಲುಪಿಸಬೇಕು. ಅಲ್ಲಿಯವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್​

ಕೋಡಿಹಳ್ಳಿ ಚಂದ್ರಶೇಖರ್​

  • Share this:
ಬೆಂಗಳೂರು(ಡಿ. 14): ಸಾರಿಗೆ ನೌಕರರ ಮುಷ್ಕರ ನಾಟಕೀಯ ತಿರುವು ಪಡೆಯುತ್ತಲೇ ಇದೆ. ಇವತ್ತು ಸಾರಿಗೆ ನೌಕರರು ಸೇವೆಗೆ ಹಾಜರಾಗುತ್ತಿರುವಂತೆಯೇ ಇದೀಗ ಮುಷ್ಕರ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯುತ್ತೇವೆ ಎಂದು ಹೇಳಿದ್ದ ಕೋಡಿಹಳ್ಳಿ ಚಂದ್ರಶೇಖರ್ ಇದೀಗ ಹೊಸ ಷರತ್ತು ಮುಂದಿಟ್ಟಿದ್ದಾರೆ. ಸಾರಿಗೆ ನೌಕರರು ಮುಂದಿಟ್ಟಿದ್ದ 10 ಬೇಡಿಕೆಗಳ ಪೈಕಿ ಸರ್ಕಾರ ಒಂಬತ್ತನ್ನ ಈಡೇರಿಸಲು ಒಪ್ಪಿದೆ. ಆದರೆ, ಇದು ಬಾಯಿ ಮಾತಿನದ್ದಾಗದೆ ಲಿಖಿತ ರೂಪದಲ್ಲಿರಲಿ. ಸರ್ಕಾರದ ಕಡೆಯಿಂದ ಒಬ್ಬ ಸಚಿವರ ಮೂಲಕ ಈ ಲಿಖಿತ ಭರವಸೆಯನ್ನು ಈ ಸ್ಥಳಕ್ಕೆ ಬಂದು ತಲುಪಲಿ. ಆ ನಂತರ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಫ್ರೀಡಂ ಪಾರ್ಕ್​ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಆರನೇ ವೇತನ ಪರಿಷ್ಕರಣೆ ಮಾಡುವ ನಿರ್ಧಾರದಲ್ಲಿ ಇನ್ನೂ ಗೊಂದಲ ಇದೆ. ಆರನೇ ವೇತನ ಆಯೋಗದ ಪ್ರಕಾರ ವೇತನ ಯಾವಾಗಿನಿಂದ ಕೊಡುತ್ತೀರಾ? ಸರ್ಕಾರ ನಮಗೆ ಸ್ಪಷ್ಟತೆ ಕೊಡಲಿ. ನಮಗೆ ಕಾರ್ಮಿಕರು ಮತ್ತು ಸಾರ್ವಜನಿಕರ ಹಿತ ಎರಡೂ ಮುಖ್ಯ. ಹೋರಾಟದಲ್ಲಿರುವ ನೌಕರರ ಮೇಲೆ ಕಾನೂನು ಕ್ರಮ ಹಿಂಪಡೆಯಬೇಕು. ಅಧಿಕೃತವಾಗಿ ಲಿಖಿತ ಪತ್ರ ನಮಗೆ ತಲುಪುವವರೆಗೂ ಮುಷ್ಕರ ಮುಂದುವರಿಯುತ್ತೆ. ಇದಕ್ಕೆ ಸರ್ಕಾರವೇ ಹೊಣೆ ಎಂದು ರೈತಪರ ಹೋರಾಟಗಾರರೂ ಆದ ಅವರು ತಿಳಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಅವರ ಈ ಷರತ್ತು ಹೊರಟ ಬಂದ ಬೆನ್ನಲ್ಲೇ ಸರ್ಕಾರ ಅಲರ್ಟ್ ಆಗಿದ್ದು, ಒಂದು ಬೇಡಿಕೆ ಈಡೇರಿಕೆ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲು ಅಣಿಗೊಂಡಿದೆ. ಆದರೆ, ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಸರ್ಕಾರದ ಮಧ್ಯೆ ವೈಯಕ್ತಿಕ ಪ್ರತಿಷ್ಠೆ ಅಡ್ಡಿಯಾದಂತೆ ತೋರುತ್ತಿದೆ. ಕೋಡಿಹಳ್ಳಿ ಅವರು ತಾವಿದ್ದ ಸ್ಥಳಕ್ಕೆ ಬಂದು ಸಚಿವರೊಬ್ಬರು ಲಿಖಿತ ಭರವಸೆ ತಲುಪಿಸಬೇಕು ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ, ತಮ್ಮಲ್ಲಿಗೆ ಬಂದು ಲಿಖಿತ ಪತ್ರ ಪಡೆದುಕೊಳ್ಳುತ್ತಾರೆಂದು ಕೋಡಿಹಳ್ಳಿ ಹೇಳಿದ್ದು, ನಾವೂ ಕಾಯುತ್ತಿದ್ದೇವೆ ಎಂದು ಸಚಿವರಾದ ಆರ್. ಅಶೋಕ್ ಮತ್ತು ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರದ ಹಿಂದೆ ಕಾಣದ ಶಕ್ತಿಗಳ ಷಡ್ಯಂತ್ರ; ಕಾರ್ಮಿಕರನ್ನು ದಿಕ್ಕು ತಪ್ಪಿಸುವವರ ವಿರುದ್ಧ ಅಶ್ವತ್ಹನಾರಾಯಣ ಕಿಡಿ

ಇದೇ ವೇಳೆ, ಈ ಕಣ್ಣಾಮುಚ್ಚಾಲೆ ಆಟದಿಂದ ಸಾರಿಗೆ ನೌಕರರಲ್ಲೇ ಗೊಂದಲ, ಅಸಮಾಧಾನಗಳು ಸೃಷ್ಟಿಯಾಗಿವೆ. ಸಾರಿಗೆ ನೌಕರರ ವಿವಿಧ ಸಂಘಟನೆಗಳು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಹೋರಾಟದ ಬಗ್ಗೆ ಅಸಮಾಧಾನ ಹೊರಹಾಕಿವೆ. ಸಾರಿಗೆ ನಿಗಮಗಳ ಎಸ್​ಸಿ-ಎಸ್​ಟಿ ನೌಕರರ ಸಂಘ ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲವೆಂದು ತಿಳಿಸಿದೆ ಎಂದು ಸವದಿ ಹೇಳಿದ್ದಾರೆ. ಎಸ್​ಸಿ-ಎಸ್​ಟಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೂಡ ಇದನ್ನು ಖಚಿತಪಡಿಸಿದ್ದಾರೆ. ಈ ಸಂಘದಲ್ಲಿ 35 ಸಾವಿರ ನೌಕರರು ಇದ್ದು ಅವರೆಲ್ಲರೂ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಸಂಘದ ಅಧ್ಯಕ್ಷ ಡಿ.ಎಸ್. ವೀರಯ್ಯ ಕೂಡ ಸ್ಪಷ್ಟಪಡಿಸಿದ್ಧಾರೆ. ಹಾಗೆಯೇ, ನಿಗಮಗಳಲ್ಲಿನ ಒಕ್ಕಲಿಗರ ಸಂಘವೂ ಕೂಡ ಮುಷ್ಕರ ವಾಪಸ್ ಪಡೆದಿದೆ ಎಂಬ ಸುದ್ದಿ ಇದೆ.

ವರದಿ: ಕೃಷ್ಣ ಜಿ.ವಿ. / ಸಂಜಯ್ ಎಂ ಹುಣಸನಹಳ್ಳಿ / ಹರ್ಷವರ್ಧನ್
Published by:Vijayasarthy SN
First published: