ಸಾರಿಗೆ ನೌಕರರ ಮುಷ್ಕರ ಅಂತ್ಯ; ಸಾರ್ವಜನಿಕರು ನಿರಾಳ; ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ

ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಅಜ್ಞಾನದಿಂದ ಮುಷ್ಕರಕ್ಕೆ ಕರೆ ಕೊಟ್ಟು ಸಾರ್ವಜನಿಕರಿಗೆ ಸಂಕಷ್ಟ ತಂದಿದ್ದರು. ಅವರ ಹುಂಬತನ ಇದಕ್ಕೆ ಕಾರಣ. ಇದಕ್ಕೆ ಅವರು ಕ್ಷಮೆಯಾಚಿಸಬೇಕು ಎಂದು ಸಾರಿಗೆ ಸಿಬ್ಬಂದಿ ಒಕ್ಕೂಟ ಅಧ್ಯಕ್ಷ ಅನಂತಸುಬ್ಬರಾವ್ ಒತ್ತಾಯಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು(ಡಿ. 14): ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಇಂದು ಅಂತ್ಯಗೊಂಡಿದೆ. ಹಲವು ಹೇಳಿಕೆ ಪ್ರತಿಹೇಳಿಕೆಗಳಿಂದ ಮೂಡಿದ್ದ ಗೊಂದಲಗಳು ಕೊನೆಗೂ ತೆರೆಬಿದ್ದಿದೆ. ನಾಗರಿಕ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯುತ್ತಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಅವರ ಸಂದೇಶ ಹೊರಟ ಬೆನ್ನಲ್ಲೇ ರಾಜ್ಯಾದ್ಯಂತ ಬಸ್ಸುಗಳ ಸಂಚಾರ ಸುಗಮವಾಗಿ ಸಾಗಿದೆ. ಸಾರಿಗೆ ನೌಕರರು ಯಾವುದೇ ಗೊಂದಲ ಇಲ್ಲದೆ ಬಸ್ ಸಂಚಾರಕ್ಕೆ ಮರಳಿದ್ದಾರೆ.

  ಇಂದು ಬೆಳಗ್ಗೆ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಗೊಂಡಿರಲಿಲ್ಲ. ಪ್ರತಿಭಟನಾಕಾರರು ಕಲ್ಲುತೂರಾಟ ಮಾಡುವ ಸಾಧ್ಯತೆ ಇದ್ದರಿಂದ ಪ್ರತಿಯೊಂದು ಬಸ್ಸಿಗೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ, ಒಂಬತ್ತು ಗಂಟೆಯಷ್ಟರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರ ಕಡೆಯಿಂದ ಮುಷ್ಕರ ಹಿಂಪಡೆಯುವ ಸೂಚನೆ ಸಿಗುತ್ತಿದ್ದಂತೆ ರಸ್ತೆಗಿಳಿಯುವ ಬಸ್ಸುಗಳ ಸಂಖ್ಯೆ ಹೆಚ್ಚಾಗಿದೆ.

  ಮೂರು ದಿನಗಳ ಸಾರಿಗೆ ಮುಷ್ಕರದಿಂದ ಸಾರ್ವಜನಿಕರು ಪರದಾಡಿದಷ್ಟೇ ಅಲ್ಲ, ಸಾರಿಗೆ ಇಲಾಖೆಗೆ 23 ಕೋಟಿ ರೂ ನಷ್ಟವಾಗಿದೆ. ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರು ಈ ಮಾಹಿತಿ ನೀಡಿದ್ದು ಸರ್ಕಾರದಿಂದ ಆರ್ಥಿಕ ನೆರವು ಯಾಚಿಸಿದ್ದಾರೆ. ಇದೇ ವೇಳೆ, ಸಾರಿಗೆ ನೌಕರರ ಸರ್ಕಾರಿ ನೇಮಕಾತಿ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಸವದಿ ಪುನರುಚ್ಚರಿಸಿದ್ದಾರೆ. ಸಾರಿಗೆ ನಿಗಮಗಳ ನೌಕರರ 10 ಬೇಡಿಕೆಗಳ ಪೈಕಿ ಒಂಬತ್ತನ್ನು ಈಡೇರಿಸಲು ಒಪ್ಪಿದ್ದೇವೆ. ಸಂಧಾನದ ವೇಳೆ ಮುಷ್ಕರ ಹಿಂಪಡೆಯಲು ಒಪ್ಪಿಕೊಂಡ ಸಂಘಟನೆಗಳ ಮುಖಂಡರು ನಂತರ ದಿಢೀರ್ ಯೂಟರ್ನ್ ಯಾಕೆ ಹೊಡೆದರೋ ಗೊತ್ತಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಅವರು ರಾಜಕೀಯ ಪ್ರೇರಿತವಾಗಿ ಸಾರಿಗೆ ನೌಕರರನ್ನು ದಾರಿತಪ್ಪಿಸುವ ಕೆಲಸ ಮಾಡಿದರು ಎಂದು ಡಿಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

  ಇದನ್ನೂ ಓದಿ: ಬಸವ ನಾಡಿನಲ್ಲಿ ಸದ್ದುಗದ್ದಲವಿಲ್ಲದೆ ಬಸ್ ಸಂಚಾರ ಆರಂಭ; ಪೊಲೀಸ್ ಭದ್ರತೆ ಇಲ್ಲದೇ ರಸ್ತೆಗಳಿದ ಬಸ್​ಗಳು

  ಸಾರಿಗೆ ನೌಕರರಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ನೌಕರರು ತಮ್ಮ ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಬೇಕು ಎಂದು ಲಕ್ಷ್ಮಣ ಸವದಿ ಮತ್ತೊಮ್ಮೆ ಮನವಿ ಮಾಡಿದರು.

  ಮತ್ತೊಬ್ಬ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದರು. ಕೋಡಿಹಳ್ಳಿ ಅವರು ಸ್ವಪ್ರತಿಷ್ಠೆಗಾಗಿ ಮುಷ್ಕರ ಮಾಡಿದ್ದರು. ಒಬ್ಬ ಹೋರಾಟಗಾರ ಇಂಥ ಹೋರಾಟ ಮಾಡುವ ಮುನ್ನ ಸಾಧಕ ಬಾಧಕಗಳನ್ನ ಯೋಚಿಸಬೇಕು. ತಡವಾಗಿಯಾದರೂ ಕೋಡಿಹಳ್ಳಿ ಅವರಿಗೆ ಜ್ಞಾನೋದಯವಾಗಿದೆ. ಮುಂದೆ ಹೋರಾಟ ಮಾಡಬೇಕು ಅಂದರೆ ಎಲ್ಲರ ಜೊತೆ ಚರ್ಚಿಸಿ ಸಮಾಲೋಚನೆ ನಡೆಸಬೇಕು. ಅವರು ರೈತರ ಪರ ಹೋರಾಟ ಮಾಡಲಿ. ರೈತ ಪರ ಹೋರಾಟಗಾರರಾಗಿಯೇ ಇರಬೇಕು. ಆ ಕಡೆ ಈ ಕಡೆ ಹೋಗಬಾರದು ಎಂದು ಕಾರಜೋಳ ಕಿವಿಮಾತು ಹೇಳಿದರು.

  ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರದ ಹಿಂದೆ ಕಾಣದ ಶಕ್ತಿಗಳ ಷಡ್ಯಂತ್ರ; ಕಾರ್ಮಿಕರನ್ನು ದಿಕ್ಕು ತಪ್ಪಿಸುವವರ ವಿರುದ್ಧ ಅಶ್ವತ್ಹನಾರಾಯಣ ಕಿಡಿ

  ಇನ್ನು, ಸಾರಿಗೆ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷ ಅನಂತಸುಬ್ಬರಾವ್ ಅವರೂ ಸಹ ಕೋಡಿಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋಡಿಹಳ್ಳಿ ಚಂದ್ರಶೇಖರ್ ಅವರೇನಾದರೂ ಉದ್ಭವ ಮೂರ್ತಿಯಾ? ಅಜ್ಞಾನದಿಂದ ಅವರು ಮುಷ್ಕರಕ್ಕೆ ಕರೆಕೊಟ್ಟಿದ್ದರು. ಅವರಿಗೆ ಈ ರೀತಿಯ ಮುಷ್ಕರ ಕರೆ ಕೊಟ್ಟು ಅನುಭವ ಇಲ್ಲ. ಅವರ ಅಜ್ಞಾನ, ಹುಂಬತನ ಇದಕ್ಕೆಲ್ಲ ಕಾರಣ. ನಾಲ್ಕು ದಿನ ಪ್ರಯಾಣಿಕರಿಗೆ ಸಂಕಷ್ಟವಾಗಿದೆ. ಇದಕ್ಕೆ ಅವರು ಕ್ಷಮಾಪಣೆ ಕೇಳಬೇಕು ಎಂದು ಅನಂತ ಸುಬ್ಬರಾವ್ ಒತ್ತಾಯಿಸಿದರು.

  ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ಕೊಡುವ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಒಂದೂ ಮಾತು ಹೇಳಿಲ್ಲ, ಕರೆದಿಲ್ಲ. ಮುಷ್ಕರದಲ್ಲಿ ನನ್ನ ಭಾವಚಿತ್ರ ಸುಡುತ್ತಾರೆ. ಇಷ್ಟೆಲ್ಲಾ ಇದ್ದರೂ ನಾವು ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ದೇವೆ. ನಿನ್ನೆ ಮುಷ್ಕರ ಹಿಂಪಡೆಯುತತೇವೆ ಎಂದು ಹೇಳಿ ಉಲ್ಟಾ ಹೊಡೆದರೆ ಹೇಗೆ? ಸಾರಿಗೆ ನೌಕರರು ಸರ್ಕಾರಿ ನೌಕರರಾದರೆ ಸಾರಿಗೆ ನಿಗಮ ಏನಾಗುತ್ತದೆ ಎಂಬುದು ಗೊತ್ತಿದೆಯೇ? ಎಂದು ಅನಂತ ಸುಬ್ಬರಾವ್ ಪ್ರಶ್ನೆ ಮಾಡಿದರು.
  Published by:Vijayasarthy SN
  First published: