ಕಲಬುರ್ಗಿ(ಡಿ. 12): ತಮ್ಮನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಆರಂಭಿಸಿರುವ ಅನಿರ್ಧಷ್ಟಾವಧಿ ಮುಷ್ಕರ ಎರಡನೇಯ ದಿನಕ್ಕೆ ಕಾಲಿಟ್ಟಿದೆ. ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸ್ತಬ್ಧವಾದ ಹಿನ್ನಲೆ ಪ್ರಯಾಣಿಕರ ಪರದಾಡುವಂತಾಗಿದೆ. ಮತ್ತೊಂದೆಡೆ ಖಾಸಗಿ ವಾಹನಗಳು ಸಾರಿಗೆ ನೌಕರರ ಮುಷ್ಕರದ ದುರ್ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ವಾಹನಗಳು ಪ್ರಯಾಣಿಕರಿಂದ ಎರಡು-ಮೂರು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿವೆ. ಜೇವರ್ಗಿ, ಶಹಾಪುರ, ಸೇಡಂ, ಹುಮ್ನಾಬಾದ್, ಆಳಂದ, ಅಫಜಲಪುರ ಮತ್ತಿತರ ಕಡೆ ಖಾಸಗಿ ವಾಹನ ಬಿಡಲಾಗಿದ್ದು, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿಗೆ ಇಳಿದಿವೆ. ಕ್ರೂಷರ್, ಆಟೋ, ಖಾಸಗಿ ಬಸ್ ಗಳ ಸಂಚಾರ ನಡೆದಿದ್ದು, 30 ರಿಂದ 40 ರೂಪಾಯಿ ದರಕ್ಕೆ 100 ರಿಂದ 150 ರೂಪಾಯಿ ದರ ವಸೂಲಿ ಮಾಡಲಾಗುತ್ತಿದೆ. ಪ್ರಯಾಣ ದರ ಹೊರೆಯಾದರೂ ಅನಿವಾರ್ಯವಾಗಿ ಜನ ಬೇರೆ ಬೇರೆ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.
ಜಿಲ್ಲೆಯಲ್ಲಿ ಬೆಳಿಗ್ಗೆ ಹೊರ ರಾಜ್ಯದ ಸಾರಿಗೆ ಬಸ್ ಗಳನ್ನು ಬಿಡಲಾಗಿತ್ತು. ಆದರೆ, ಕೆಲ ಸಾರಿಗೆ ನೌಕರರು ಅಲ್ಲಿಗೆ ಬರುತ್ತಿದ್ದಂತೆಯೇ ಹೈದರಾಬಾದ್ ಮತ್ತಿತರ ಕಡೆ ಹೊರಟಿದ್ದ ಬಸ್ ಗಳ ಸೇವೆ ಸ್ಥಗಿತಗೊಳಿಸಲಾಯಿತು. ಇದರಿಂದ ಕುಪಿತಗೊಂಡ ಪ್ರಯಾಣಿಕರು ಸಾರಿಗೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಡಿಸಿದರು. ಸಾರಿಗೆ ಅಧಿಕಾರಿಗಳ ಬಳಿ ಕೆಲ ಪ್ರಯಾಣಿಕರು ವಾಗ್ವಾದಕ್ಕಿಳಿದರು. ದಿಢೀರಾಗಿ ಮುಷ್ಕರ ಮಾಡುವುದು ಎಷ್ಟು ಸರಿ. ಮಹಿಳೆಯರು ಮಕ್ಕಳನ್ನು ಬಸ್ ನಿಲ್ದಾಣಕ್ಕೆ ಕರೆ ತಂದಿದ್ದೇವೆ. ಎಲ್ಲಿಗೂ ಹೋಗಲಾರದ ಪರಿಸ್ಥಿತಿಯಲ್ಲಿದ್ದೇವೆ. ಮುಷ್ಕರ ಮಾಡುವುದಾದರೆ ಮುಂಚಿತವಾಗಿ ಸಾರ್ವಜನಿಕವಾಗಿ ತಿಳಿಸಬೇಕಿತ್ತು. ಅದನ್ನು ಬಿಟ್ಟು ಹೀಗೆ ದಿಢೀರಾಗಿ ಬಸ್ ಸಂಚಾರ ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಸಿಂಧಗಿ ಮೂಲದ ವೈದ್ಯ ಡಾ.ವಿಠಲ ಕಿಡಿಕಾರಿದರು.
ಬಸ್ ಗಾಗಿ ಅಂಧರ ಪರದಾಟ
ಬೆಂಗಳೂರಿಗೆ ಪ್ರಯಾಣಿಸಲು ಸಜ್ಜಾಗಿದ್ದ ಅಂಧರು ಮಾರ್ಗಮಧ್ಯದಲ್ಲೇ ಸಿಲುಕಿಕೊಂಡ ಮತ್ತೆ ಕಲಬುರ್ಗಿಗೆ ಮತ್ತೆ ವಾಪಸ್ಸಾಗಿದ್ದಾರೆ. ನಿನ್ನೆ ರಾತ್ರಿ ಕಲಬುರ್ಗಿಯಿಂದ ಬೆಂಗಳೂರು ಕಡೆ ಹೊರಟಿದ್ದ ಬಸ್ಸನ್ನು ಲಿಂಗಸಗೂರು ಬಳಿ ನೌಕರರು ಅಡ್ಡಗಟ್ಟಿ ತಡೆಹಿಡಿದಿದ್ದರಿಂದ ಬಸ್ ಮತ್ತೆ ಕಲಬುರ್ಗಿಗೆ ವಾಪಸ್ಸಾಗಿದೆ. ಈ ವೇಳೆ ಸಾರಿಗೆ ಬಸ್ಸನ್ನೇ ನಂಬಿಕೊಂಡ ಕೆಲವರು ವಾಪಸ್ಸಾಗಿದ್ದಾರೆ. ಬೆಂಗಳೂರಿಗೆ ಹೊರಟಿದ್ದ ಇಬ್ಬರು ಅಂಧರೂ ಕಲಬುರ್ಗಿಗೆ ವಾಪಸ್ ಬಂದು ಬಸ್ ಗಾಗಿ ಕಾಯುತ್ತಿದ್ದಾರೆ.
ಇದನ್ನು ಓದಿ: ಸಿನಿಮಾ ಬಿಡುಗಡೆಗೂ ಮುನ್ನವೇ ಶುರುವಾಯ್ತು ಕ್ರೇಜ್: ಸಲಗ ಶಾಸನ ರಚಿಸಿದ ದುನಿಯಾ ವಿಜಯ್ ಅಭಿಮಾನಿ
ಹಣ ಇದ್ದವರು ಖಾಸಗಿ ಬಸ್ ಗೆ ಹೋದರು. ನಾವು ಮತ್ತೆ ವಾಪಸ್ಸಾಗಿದ್ದೇವೆ. ನಮ್ಮ ಬಳಿ ಹಣವಿಲ್ಲ. ಸರ್ಕಾರ ಕೊಟ್ಟ ಪಾಸ್ ನೆರವಿನೊಂದಿಗೆ ಬಸ್ ಪ್ರಯಾಣ ಮಾಡಿದ್ದೆವು. ನಿನ್ನೆ ಮಧ್ಯಾಹ್ನ ಟಿಫಿನ್ ಮಾಡಿದವರು ಉಪವಾಸವೇ ಬಿದ್ದಿದ್ದೇವೆ. ಲಾಡ್ಜ್ ನಲ್ಲಿ ಉಳಿದುಕೊಳ್ಳಲು ಹಣವೂ ಇಲ್ಲ. ಬೆಂಗಳೂರಿಗೆ ಬಸ್ ಬಿಡಬಹುದೆಂದು ಕಾಯುತ್ತಿದ್ದೇವೆ ಎಂದು ಅಂಧ ವ್ಯಕ್ತಿಗಳು ಅಳಲನ್ನು ತೋಡಿಕೊಂಡಿದ್ದಾರೆ.
ಬಸ್ ನಿಲ್ದಾಣದಲ್ಲಿ ಪ್ರತಿಭಟನೆ, ಅಲ್ಲಿಯೇ ಊಟ...
ತಮ್ಮ ಬೇಡಿಕೆಯನ್ನು ಈಡೇರಿಸಲೇ ಬೇಕೆಂದು ಪಟ್ಟು ಹಿಡಿದಿರುವ ಸಾರಿಗೆ ನೌಕರರು, ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ನಿಲ್ದಾಣದಲ್ಲಿ ಜಮಾಯಿಸಿದ ನೂರಾರು ನೌಕರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಬಸ್ ನಿಲ್ದಾಣ ಬಿಟ್ಟು ಸಾರಿಗೆ ಕದಲುತ್ತಿಲ್ಲ. ತಾವಿದ್ದ ಬಸ್ ನಿಲ್ದಾಣದಲ್ಲಿಯೇ ಸಾರಿಗೆ ನೌಕರರಿಗೆ ಪಲಾವ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಊಟ ಮಾಡಿ, ಅಲ್ಲಿಯೇ ಪ್ರತಿಭಟನೆ ಮುಂದುವರೆಸಿದ್ದಾರೆ. ಒಟ್ಟಾರೆ ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದ್ದಾರೆ. ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ. ಇದೆಲ್ಲ ಬೆಳವಣಿಗೆಗಳ ಪರಿಣಾಮ ಮಾತ್ರ ಜನಸಾಮಾನ್ಯರ ಮೇಲಾಗುತ್ತಿದ್ದು, ಖಾಸಗಿ ವಾಹನಗಳು ದುರ್ಲಾಭ ಪಡೆದುಕೊಳ್ಳಲಾರಂಭಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ