Transport Strike - ಸಾರಿಗೆ ನೌಕರರ ಮುಷ್ಕರ ಇವತ್ತೂ ಮುಂದುವರಿಕೆ; ಪೊಲೀಸ್ ಭದ್ರತೆಯಲ್ಲಿ ರಸ್ತೆಗಿಳಿದ ಕೆಲ ಬಸ್ಸುಗಳು

ಸಾರಿಗೆ ನೌಕರರ ಸಂಘಟನೆಗಳ ಜೊತೆ ನಿನ್ನೆ ಸರ್ಕಾರ ಮಾತುಕತೆ ನಡೆಸಿತ್ತು. ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಮುಖ ಬೇಡಿಕೆ ಬಿಟ್ಟು ಉಳಿದ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಒಪ್ಪಿಕೊಂಡಿದೆ. ಆದರೆ, ಪ್ರಮುಖ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.

ಕೆಎಸ್​ಆರ್​ಟಿಸಿ ಬಸ್ ಸಾಂದರ್ಭಿಕ ಚಿತ್ರ

ಕೆಎಸ್​ಆರ್​ಟಿಸಿ ಬಸ್ ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಡಿ. 14): ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಸರ್ಕಾರ ನಿನ್ನೆ ನಡೆಸಿದ ಮಾತುಕತೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದವರಿಸಿದ್ದಾರೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ತಮ್ಮ ಮುಖ್ಯ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಒಪ್ಪದ ಕಾರಣ ಮುಷ್ಕರ ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಸಂಘಟನೆಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಇಂದು ಕೂಡ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಪೂರ್ಣಪ್ರಮಾಣದಲ್ಲಿ ರಸ್ತೆಗಿಳಿದಿಲ್ಲ. ನಿನ್ನೆ ಪ್ರತಿಭಟನೆ ನಡುವೆಯೂ ಕೆಲ ಬಸ್ಸುಗಳು ಸಂಚಾರ ಮಾಡಿದ್ದವು. ಬಸ್ ಓಡಿಸಲು ಇಚ್ಛಿಸಿದ ಸಿಬ್ಬಂದಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಇಂದು ಬೆಳಗ್ಗೆ ಬೆರಳೆಣಿಕೆ ಬಸ್ಸುಗಳು ಮಾತ್ರ ಡಿಪೋದಿಂದ ಹೊರಟಿವೆ. ಮಧ್ಯಾಹ್ನದಷ್ಟರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಸ್ಸುಗಳು ಸಂಚಾರ ಮಾಡುವ ನಿರೀಕ್ಷೆ ಇದೆ. ವಿವಿಧ ಜಿಲ್ಲೆಗಳಲ್ಲಿ ಬಸ್ಸುಗಳನ್ನ ಓಡಿಸಲು ಹಲವು ನೌಕರರು ಸಿದ್ಧವಾಗಿದ್ದಾರೆನ್ನಲಾಗಿದೆ.

  ಅಸಹಾಯಕ ಪ್ರಯಾಣಿಕರಿಂದ ಖಾಸಗಿ ಬಸ್ಸು ಮತ್ತು ಆಟೋರಿಕ್ಷಾಗಳು ಹೆಚ್ಚಿನ ದರ ವಸೂಲಿ ಮಾಡುತ್ತಿದ್ದರೂ ಮೊದಲೆರಡು ದಿನಗಳಷ್ಟು ದುಬಾರಿ ಆಗಿಲ್ಲ. ಆಟೋಗಳ ದುರಾಸೆಗೆ ಪೊಲೀಸರು ಮೊನ್ನೆಯೇ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದರು. ಇಂದು ಕೆಲ ಆಟೋಗಳು ಮೀಟರ್ ಮೇಲೆ ಇಂತಿಷ್ಟು ಹೆಚ್ಚುವರಿ ಹಣಕ್ಕೆ ಪ್ರಯಾಣಿಕರಿಂದ ಬೇಡಿಕೆ ಇಟ್ಟಿದ್ದಾರೆ.

  ವಿಕಾಸಸೌಧದಲ್ಲಿ ನಿನ್ನೆ ಕೆಎಸ್​​ಆರ್​​ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್​ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿ ಅನೇಕರು ಸಂಧಾನ ಮಾತುಕತೆ ನಡೆಸಿದ್ದರು. ಮಾತುಕತೆ ಮುಗಿಸಿ ಹೊರ ಬಂದ ನಂತರ ಮಾತನಾಡಿದ್ದ ಚಂದ್ರು, ಸಂಧಾನ ಯಶಸ್ವಿ ಆಗಿದೆ ಎಂದು ಹೇಳಿದ್ದರು. ಆದರೆ, ಫ್ರೀಡಂ ಪಾರ್ಕ್​ಗೆ ಬಂದ ನಂತರದಲ್ಲಿ ಚಂದ್ರು ತಮ್ಮ ಹೇಳಿಕೆ ಬದಲಾಯಿಸಿದರು. ಸರ್ಕಾರದ ಜತೆ ಮಾತುಕತೆ ವಿಫಲವಾಗಿದೆ. ಇನ್ನೊಂದು ಸುತ್ತಿನ ಮಾತುಕತೆಯ ಅಗತ್ಯ ಇದೆ. ಯಾರೂ ಬಸ್​ ತೆಗೆಯಬಾರದು ಎಂದು ನೌಕರರಿಗೆ ಮನವಿ ಮಾಡಿದರು.

  ಈ ಬಗ್ಗೆ ನಿನ್ನೆ ಮಾತನಾಡಿದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ಅಪೂರ್ಣ ತೀರ್ಮಾನ ತೆಗೆದುಕೊಂಡಿದೆ. ಮಂತ್ರಿಗಳು ಬೇಕಾದ ಹಾಗೆ ಹೇಳಿಕೆ ಕೊಟ್ಟು ಜನರ ದಿಕ್ಕು ತಪ್ಪಿಸಿದ್ದಾರೆ. ಸರ್ಕಾರ ತೀರ್ಮಾನದ ಒಂದು ಕಾಪಿಯನ್ನು ನಮಗೆ ಕೊಡಬೇಕಿತ್ತು. ಇದು ಬೇಜವಾಬ್ದಾರಿ ನಡೆ. ಸರ್ಕಾರ ತಮ್ಮವರನ್ನು ಇಟ್ಕೊಂಡು ನಮ್ಮ ಮೇಲೆ ಟೀಕೆ ಟಿಪ್ಪಣಿ ಮಾಡಿಸುತ್ತಿದ್ದಾರೆ. ಉಪವಾಸ ಸತ್ಯಾಗ್ರಹ ಇಂದಿಗೆ ಅಂತ್ಯವಾಗಿದೆ. ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ ಎಂದು ಹೇಳಿದರು.

  ಸಾರಿಗೆ ಸಂಚಾರ ಸಂಪೂರ್ಣ ಬಂದಿರುತ್ತದೆ. ಬಸ್​ಗಳು ರಸ್ತೆಗೆ ಇಳಿಯಲ್ಲ. ಅಲ್ಲಿ ಚರ್ಚೆ ಅಷ್ಟೇ ಮಾಡಲಾಗಿದೆ. ತೀರ್ಮಾನ ಈಗ ನಾವು ಹೇಳುತ್ತಿದ್ದೇವೆ. ಸಂಧಾನ ವಿಫಲವಾಗಿದೆ. ಯಾವುದೇ ಗೊಂದಲ ಇಲ್ಲ. ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅನ್ನೋದು ನಮ್ಮ ಪ್ರಮುಖ ಬೇಡಿಕೆ. ಅದು ಆಗಲೇ ಬೇಕು ಅದರ ಹೊರತು ಯಾವುದೇ ಸವಲತ್ತು ಕೊಟ್ಟರೂ ನಮ್ಮ ಮುಷ್ಕರ ಮುಂದುವರೆಯುತ್ತೆ ಎಂದು ರೈತ ಮುಖಂಡರೂ ಆದ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

  ಖಾಸಗಿ ಬಸ್​ಗಳ ಬೆಂಬಲ:

  ಕೆಎಸ್​ಆರ್​ಟಿಸಿ ನೌಕರರ ಹೋರಾಟಕ್ಕೆ ಖಾಸಗಿ ಬಸ್​ಗಳ ಒಕ್ಕೂಟ ಬೆಂಬಲ ನೀಡಿದೆ. ಸರ್ಕಾರದ ನಡೆಗಳು ಅತಿರೇಕವಾಗಿವೆ. ಕಾರ್ಮಿಕರ ಬೇಡಿಕೆ ಈಡೇರಿಸಲು ಹಿಂದೆಮುಂದೆ ನೋಡುತ್ತಿದ್ದಾರೆ. ಇದು ಸಾರಿಗೆ ಸಚಿವ ಲಕ್ಷಣ ಸವದಿ ಅವರ ವೈಫಲ್ಯ. ಖಾಸಗಿ ಬಸ್ಸುಗಳಿಗೆ ನೀಡಿರುವ ಇವರ ಟೊಳ್ಳು ಭರವಸೆಗಳಿಗೆ ನಾವು ಬಲಿಯಾಗಲ್ಲ ಎಂದು ಖಾಸಗಿ ಬಸ್ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದರು.

  ಖಾಸಗಿ ಬಸ್ ಗಳ ಒಕ್ಕೂಟದ ಜೊತೆ ಮಾತುಕತೆ ನಡೆಸಿದ್ದೀವಿ ಎಂದು ಸರ್ಕಾರ ಹೇಳಿದೆ. ಆದರೆ, ನಮ್ಮ ಯಾವುದೇ ಸಂಘಟನೆಗಳ ಜೊತೆ ಸರ್ಕಾರ ಸಂಪರ್ಕ ಮಾಡಿಲ್ಲ. ಅದಾಗಿಯೂ ಮಾಧ್ಯಮಗಳ ಮುಂದೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ ಎಂದು ನಟರಾಜ್​​​​ ಶರ್ಮಾ ಆರೋಪಿಸಿದರು.

  ಇದೇ ವೇಳೆ, ಸರ್ಕಾರ ಇವತ್ತೂ ಕೂಡ ಕಾದುನೋಡುವ ತಂತ್ರಕ್ಕೆ ಮೊರೆಹೋಗಿದೆ. ನಿನ್ನೆ ಹಲವು ಮಾತುಕತೆಗಳು ನಡೆದರೂ ಸಂಘಟನೆಗಳು ಮೊಂಡುತನ ಮುಂದುವರಿಸಿವೆ ಎಂಬುದು ಮುಖ್ಯಮಂತ್ರಿಗಳ ಮುನಿಸು. ನೌಕರರು ಇವತ್ತು ಸೇವೆಗೆ ಹಾಜರಾಗದೇ ಮುಷ್ಕರ ನಡೆಸಿದರೆ ಎಸ್ಮಾ ಹೇರುವ ಗಂಭೀರ ಆಲೋಚನೆಯಲ್ಲಿದೆ ಸರ್ಕಾರ.
  Published by:Vijayasarthy SN
  First published: