ಬೆಂಗಳೂರು (ಡಿ. 18): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 4 ದಿನಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ಬಸ್ಗಳ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಸಾರಿಗೆ ಇಲಾಖೆಗೆ 54 ಕೋಟಿ ರೂ. ನಷ್ಟವಾಗಿತ್ತು. ಹೀಗಾಗಿ, ಮುಷ್ಕರದ ಬೆನ್ನಲ್ಲೇ ಸಾರಿಗೆ ನೌಕರರಿಗೆ ಶಾಕ್ ನೀಡಿರುವ ಸರ್ಕಾರ 200 ಉದ್ಯೋಗಿಗಳನ್ನು ಅಮಾನತು ಮಾಡಿದೆ!
ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಸಾರಿಗೆ ನೌಕರರಿಗೆ ಆಘಾತ ಉಂಟಾಗಿದ್ದು, 200ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿಗೆ ನೋಟೀಸ್ ನೀಡಿ, ಹಲವರಿಗೆ ಅಮಾನತು ಆದೇಶ ನೀಡಲಾಗಿದೆ. ಸಾರಿಗೆ ನೌಕರರ ಮುಷ್ಕರ ಮುಗಿದಿದ್ದರೂ ನೌಕರರಿಗೆ ಕಿರುಕುಳ ಇನ್ನೂ ನಿಂತಿಲ್ಲ. ಮುಷ್ಕರ ನಡೆಸಿದ್ದಕ್ಕೆ ನಾಲ್ಕೂ ನಿಗಮಗಳಿಂದ ಹೊಸ ಅಸ್ತ್ರ ಪ್ರಯೋಗ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ನೌಕರರು ಏಕಾಏಕಿ ಅಮಾನತಾಗಿದ್ದಾರೆ.
ಮುಷ್ಕರ ನಡೆಸಿ ಸಾರಿಗೆ ಸಂಸ್ಥೆಗೆ ನಷ್ಟ ಉಂಟುಮಾಡಿದ್ದಾರೆ ಎಂಬ ನೆಪವೊಡ್ಡಿ ಅಮಾನತು ಮಾಡಲಾಗಿದೆ. ನಾಲ್ಕೂ ನಿಗಮಗಳಿಂದ ಸುಮಾರು 200 ಮಂದಿ ಅಮಾನತಾಗಿದ್ದಾರೆ. ಆಡಳಿತ ವರ್ಗದ ಕ್ರಮಕ್ಕೆ ನೌಕರರು ಫುಲ್ ಗರಂ ಆಗಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಿದರೆ ಅಮಾನತು ಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಈಗ ಎದ್ದಿದೆ.
ಇದನ್ನೂ ಓದಿ: ಕಲಾಪದಲ್ಲಿ ಗಲಾಟೆ ಪ್ರಕರಣ; ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿಯಿಂದ ಶೋಕಾಸ್ ನೋಟೀಸ್ ಜಾರಿ
ಸಾರಿಗೆ ಸಚಿವರು ನೌಕರರ ಹಿತ ಕಾಯುವ ರೀತಿ ಇದೇನಾ? ಅವರ ಗಮನಕ್ಕೆ ಬಾರದೆ ಅಧಿಕಾರಿಗಳು ಅಮಾನತು ಮಾಡಿದರಾ? ಅಮಾನತು ಆದೇಶ ಮತ್ತೊಂದು ಹೋರಾಟಕ್ಕೆ ನಾಂದಿ ಆಗುತ್ತಾ? ಎಂಬಿತ್ಯಾದಿ ಪ್ರಶ್ನೆಗಳೆದ್ದಿವೆ. ಏಕಾಏಕಿ ಸಾರಿಗೆ ನೌಕರರ ಅಮಾನತು ಮಾಡಿದ್ದರಿಂದ ನೌಕರರ ಯೂನಿಯನ್ ಆಕ್ರೋಶ ಹೊರಹಾಕಿದ್ದು, ಕೂಡಲೇ ಅಮಾನತು ಆದೇಶ ವಾಪಾಸ್ ಪಡೆಯಬೇಕು. ಒಂದು ವೇಳೆ ವಾಪಾಸ್ ಪಡೆಯದಿದ್ದರೆ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಆದರೆ, ಮುಷ್ಕರ ಮಾಡಿದ ಸಾರಿಗೆ ಸಿಬ್ಬಂದಿ ಅಮಾನತು ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಇಲಾಖೆ, ಮುಷ್ಕರದ ಸಮಯದಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳ ಮೇಲೆ ದೈಹಿಕ ಹಲ್ಲೆ, ಬಸ್ಸುಗಳನ್ನು ಜಖಂಗೊಳಿಸಿದವರ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಕೆಲವೇ ಸಿಬ್ಬಂದಿಗಳ ಮೇಲೆ ಮಾತ್ರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಇನ್ನಾವುದೆ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿರುವುದಿಲ್ಲ. ಕೋಲಾರ ವಿಭಾಗದಲ್ಲಿ 200 ನೌಕರರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಸತ್ಯಕ್ಕೆ ದೂರವಾದದ್ದು. ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ ಒಟ್ಟು 13 ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮುಷ್ಕರ ಸಮಯದ ನಾಲ್ಕು ದಿನಗಳ ವೇತನ ಪಾವತಿ ಕಡಿತದ ಬಗ್ಗೆಯೂ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಮಂಡಳಿ/ ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದೆ.
ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರಕ್ಕೆ 4 ದಿನಕ್ಕೆ ಬರೋಬ್ಬರಿ 54 ಕೋಟಿ ರೂ. ನಷ್ಟವಾಗಿತ್ತು. ನಾಲ್ಕು ದಿನಗಳ ಕಾಲ ನಾಲ್ಕೂ ನಿಗಮದಿಂದ ಬಸ್ಗಳು ಸಂಚಾರ ನಡೆಸಿರಲಿಲ್ಲ. ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆಯಲ್ಲಿ ಒಟ್ಟು 1.40 ಲಕ್ಷ ಸಾರಿಗೆ ಸಿಬ್ಬಂದಿಗಳಿದ್ದಾರೆ. ನಾಲ್ಕು ನಿಗಮದಿಂದ 36 ಸಾವಿರಕ್ಕೂ ಹೆಚ್ಚು ಸಾರಿಗೆ ಬಸ್ಗಳಿವೆ. 4 ದಿನದ ಮುಷ್ಕರದಿಂದ ಕೆಎಸ್ಆರ್ಟಿಸಿಯಿಂದ 16 ಕೋಟಿ ರೂ., ಬಿಎಂಟಿಸಿಯಿಂದ ಸುಮಾರು 8.4 ಕೋಟಿ ರೂ., ಈಶಾನ್ಯ ರಸ್ತೆ ಸಾರಿಗೆಯಿಂದ ಅಂದಾಜು 15 ಕೋಟಿ ರೂ., ವಾಯುವ್ಯ ರಸ್ತೆ ಸಾರಿಗೆಯಿಂದ ಅಂದಾಜು 14 ಕೋಟಿ ರೂ. ನಷ್ಟವಾಗಿತ್ತು.
ವಾಯುವ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ರಸ್ತೆ ಸಾರಿಗೆ ನಿಗಮ, ಕೆಎಸ್ಆರ್ಟಿಸಿ, ಬಿಎಂಟಿಸಿ ಸಾರಿಗೆ ನೌಕರರ ಮುಷ್ಕರದಿಂದಾಗಿ 4 ದಿನಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು 53.4 ಕೋಟಿ ರೂ. ನಷ್ಟ ಉಂಟಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ