ಬೆಂಗಳೂರು: ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ 11ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ಸಾರಿಗೆ ನೌಕರರ ಸಂಘಟನೆಗಳಲ್ಲಿ ವೈಮನಸ್ಸು ಮೂಡಿದೆ. ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಜಂಟಿ ಕಾರ್ಯದರ್ಶಿ ಕಾಮ್ರೇಡ್ ಮುಕ್ಕೇರಿ ಅವರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಮ್ರೇಡ್ ಮುಕ್ಕೇರಿ ಅವರು ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಿರೀಕ್ಷೆಯಂತೆಯೇ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತನ್ನ ವೈಫಲ್ಯತೆಯನ್ನು ಕಾಮ್ರೇಡ್ ಅನಂತಸುಬ್ಬರಾಯರ ತಲೆಗೆ ಹಾಗೂ ಶರ್ಮಾಜೀ ಅವರ ತಲೆಗೆ ಕಟ್ಟಲಿಕ್ಕೆ ನೋಡುತ್ತಿದ್ದಾರೆ. ಇದು ನಿರೀಕ್ಷೆ ಮಾಡಿದ್ದಾಗಿತ್ತು. ಏಕೆಂದರೆ ದಿಕ್ಕುದೆಸೆಯಿಲ್ಲದೇ ತಾನೊಬ್ಬ ನಾಯಕನಾಗಿ ಬೆಳೆಯುವ ಸ್ವಾರ್ಥದಿಂದ ಮುಷ್ಕರ ಆರಂಭಿಸಿರುವ ಈತ ಕಾರ್ಮಿಕರನ್ನು ಬುದ್ಧಿವಂತರು, ತಿಳಿದವರು, ಓದಿದವರು ಅಂತ ಹೇಳುತ್ತಾ ಹೇಳುತ್ತಾ, "ಸರ್ಕಾರಿ ನೌಕರಿ" ಎಂಬ ಭಾವನಾತ್ಮಕ ವಿಷಯವನ್ನು ತಲೆಯಲ್ಲಿ ತುಂಬಿ ನಾಲ್ಕು ದಿವಸ ಮುಷ್ಕರ ಮಾಡಿಸಿ ಯಾರಿಗೂ ಹೇಳದೇ ಕೇಳದೇ ಸರಕಾರಿ ನೌಕರಿ ಎಂಬ ಬೇಡಿಕೆಯನ್ನು ಕೈಬಿಟ್ಟು ಬಂದಿರುವ ಈತ ಎಲ್ಲಾ ಕಾರ್ಮಿಕರ ಬಾಯಿಗೆ ಮಣ್ಣು ಹಾಕಿದ್ದಾಯಿತು. ಈಗ ಕಾರ್ಮಿಕರು ಈ ಕೂಟದ ನಿಜಬಣ್ಣವನ್ನು ಅರಿತು ತಮ್ಮ ಕೆಲಸಕ್ಕೆ ಮರಳುತ್ತಿರುವದನ್ನು ನೋಡಿ ಮುಷ್ಕರ ಯಾವುದೇ ಪರಿಣಾಮವನ್ನು ಪಡೆಯದೇ, ಯಾವುದೇ ಲಾಭವನ್ನು ಪಡೆಯದೇ ಮುಷ್ಕರ ಅಂತ್ಯ ಆಗುತ್ತಿರುವುದನ್ನು ನೋಡಿ ಈ ವೈಫಲ್ಯತೆಯನ್ನು ಅನಂತಸುಬ್ಬರಾಯರ ಹಾಗೂ ಶರ್ಮಾಜಿ ಅವರ ತಲೆಗೆ ಕಟ್ಟಲಿಕ್ಕೆ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: Bus Strike | ಸರ್ಕಾರಕ್ಕೆ ಸೋಮವಾರದವರೆಗು ಗಡುವು, ಆಗಲೂ ಸ್ಪಂದಿಸದಿದ್ದರೆ ಜೈಲ್ ಭರೋ ಚಳವಳಿ ಆರಂಭ; ಕೋಡಿಹಳ್ಳಿ ಚಂದ್ರಶೇಖರ್
ಇವತ್ತಿನ ಆಡಿಯೋ ನೋಡಿದರೆ ಮುಷ್ಕರ ವಿಫಲವಾಗಿದೆ. ಕಾರ್ಮಿಕರು ತಿರುಗಿ ಬೀಳುತ್ತಿದ್ದಾರೆ ಅಂತ ತಿಳಿದು ಮಾನಸಿಕ ದಿವಾಳಿತನದಿಂದ ಮಾತನಾಡಿದ್ದಾನೆ. ಇವರ ಜನ್ಮಕ್ಕೆ ನಾಚಿಕೆ ಆಗಬೇಕು. ತಾನೊಬ್ಬನೇ ಏಕಚಕ್ರಾಧಿಪತ್ಯ ಸ್ಥಾಪನೆ ಮಾಡಬೇಕು. ನನಗೆ ಯಾರ ಸಹಾಯವೂ ಬೇಡ ಎಂದು ಜಂಭ ಕೊಚ್ಚಿಕೊಂಡಿರುವ ಈ ಚಂದ್ರುಗೆ ಈಗ ಅರಿವಾಗಿದೆ. ಕಾಮ್ರೇಡ್ ಅನಂತಸುಬ್ಬರಾಯರು 8 ಪುಟದ ಪತ್ರ ಬರೆದಾಗ ಅದಕ್ಕೆ ಉತ್ತರವನ್ನು ಕೊಡುವ ಸೌಜನ್ಯತೆಯನ್ನು ತೋರಿಸದೇ, ಪತ್ರವನ್ನು ಇವರ ಆಫೀಸಿಗೆ ಕೊಡಲು ಹೋದ ಕಾಮ್ರೇಡ್ ರಾಜಗೋಪಾಲ್ ಹಾಗೂ ರಜನಿಕಾಂತ್ ಅವರನ್ನು ಆಫೀಸಿನ ಒಳಗೂ ಕರೆಯದೇ ಅಪಮಾನಿಸಿ ಹೊರಗಿನಿಂದ ಹೊರಗೆ ಕಳುಹಿಸಿದ ಈ ಅಹಂಕಾರಿ, ಇವತ್ತು ವಿಧವಾ ವಿಲಾಪ ತೋರುತ್ತಿದ್ದಾನೆ. ನೀವು ನಾಯಕತ್ವ ವಹಿಸಿಕೊಳ್ಳಿರಿ ಎಂದು ಹೇಳಿದ್ದೇ ಅಂತ ಸುಳ್ಳು ಹೇಳುತ್ತಿದ್ದಾನೆ. ಎದೆಗಾರಿಕೆ ಇದ್ದರೆ ಇದು ಸುಳ್ಳು ಅಂತ ಹೇಳಲಿ. ಮಿಸ್ಟರ್ ಚಂದ್ರು, ಕಾಮ್ರೇಡ್ ಅನಂತಸುಬ್ಬರಾಯರಿಗೆ, ಶರ್ಮಾಜಿ ಅವರಿಗೆ ನಾಚಿಕೆ ಆಗಬೇಕು ಅಂತ ಹೇಳಿದ್ಯಲ್ಲ, ನಿನ್ನ ಜನ್ಮಕ್ಕೆ ನಾಚಿಕೆ ಆಗೋದಿಲ್ವ? ನಿನ್ನ ಸ್ವಾರ್ಥಕ್ಕಾಗಿ ಈ ಸಂಸ್ಥೆಯ ಕಾರ್ಮಿಕರನ್ನೇ ಸರ್ವನಾಶದ ಅಂಚಿನಲ್ಲಿ ತಂದು ನಿಲ್ಲಿಸಿದ್ದೀಯಾ. ಯಾವ ಖಾಸಗಿಯವರನ್ನು ಈ ಸಂಸ್ಥೆಯ ಒಳಗೆ ಬರದಂತೆ ನಿರಂತರವಾಗಿ ಹೋರಾಟ ಮಾಡುತ್ತಾ ಈ ಸಂಸ್ಥೆಯನ್ನು ಉಳಿಸಿ, ಬೆಳೆಸಿರುವ ಕಾಮ್ರೇಡ್ ಅನಂತಸುಬ್ಬರಾಯರನ್ನು ನಿಂದಿಸುತ್ತಲೇ ಸಂಘಟನೆ ಕಟ್ಟಿಕೊಂಡಿರುವ ನೀನು ಇಂದು ಈ ಸಂಸ್ಥೆಯನ್ನು ಖಾಸಗೀಕರಣದ ಅಂಚಿಗೆ ತಂದು ನಿಲ್ಲಿಸಿದ್ದೀಯಾ. ಖಾಸಗಿ ಬಸ್ಸುಗಳು ನಮ್ಮ ನಿಲ್ದಾಣದೊಳಗೆ ಬಂದು ಟಿಕೆಟ್ ಹರಿಯುತ್ತಿರುವುದನ್ನು ನೋಡಿದಾಗ ನಮ್ಮ ಹೊಟ್ಟಿಗೆ ಬೆಂಕಿ ಬೀಳುತ್ತಲಿದೆ. ಇಷ್ಟಾದರೂ ನಿನ್ನ ಭಂಡತನವನ್ನು ಬಿಡದೇ, ಕಾರ್ಮಿಕರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಮಾತನಾಡಿ, ನೀನು ಕಾರ್ಮಿಕರ ಪಾಲಿಗೆ ಉದ್ಭವಮೂರ್ತಿ, ದೈವ ಸ್ವರೂಪಿ ಅಂತ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಯಾರಿಗೂ ಗೊತ್ತಾಗುತ್ತಿಲ್ಲ ಎಂದುಕೊಂಡಿದ್ದೀಯಾ? ಎಂದು ಏಕವಚನದಲ್ಲಿ ಪ್ರಶ್ನಿಸಿದ್ದಾರೆ.
ಬೇವಿನ ಮರ ನೆಟ್ಟು ಮಾವಿನ ಹಣ್ಣು ಬಯಸಿದರೆ ಅದು ಸಿಗುತ್ತದೆಯೇ? ನೀವು ಮಾಡಿರುವ ಪಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಸ್ವಾರ್ಥ, ಮೋಸ, ಅನ್ಯಾಯ ಒಂದಲ್ಲ ಒಂದು ದಿವಸ ಪ್ರಾಯಶ್ಚಿತ ಪಡಲೇಬೇಕು. ಇದು ಜಗದ ನಿಯಮ. ಇಲ್ಲಿಯವರೆಗೆ ಕಾರ್ಮಿಕರಿಗೆ ಸುಳ್ಳು ಹೇಳಿ ಮೋಸದಿಂದ ಸಂಘಟನೆಯನ್ನು ಕಟ್ಟಿ ಸಾವಿರಾರು ಕಾರ್ಮಿಕರ ಬಾಯಿಗೆ ಮಣ್ಣು ಹಾಕಿದ ನಂತರ ನಿನ್ನ ಸೋಲಿನ ಅರಿವಾಗಿ ಅದನ್ನು ಒಪ್ಪಿಕೊಳ್ಳದೇ, ಇಡೀ ಸಂಸ್ಥೆಯನ್ನು ಈ ಮಟ್ಟಕ್ಕೆ ಬೆಳೆಸಿದ ಹೋರಾಟಗಾರರು, ತ್ಯಾಗಜೀವಿಗಳನ್ನು ಬೈಕೊಂಡು ನಿನ್ನ ವೈಫಲ್ಯದಿಂದ ಬಚಾವಾಗಲು ಪ್ರಯತ್ನಿಸುತ್ತಿರುವುದು ಯಾರಿಗೂ ತಿಳಿಯುವುದಿಲ್ಲಾ ಎಂದುಕೊಂಡಿದ್ದೀಯಾ? ನಿನ್ನ ಮೋಸದ ಆಟ ಮುಗಿಯಿತು. ನಿನ್ನ ಅಸಲಿಬಣ್ಣ ಬಯಲಾಯಿತು. ನಿಮ್ಮ ಅಂದಭಕ್ತರು ಈಗ ನಿಮ್ಮನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಬಹುಬೇಗ ಅವರಿಗೂ ನಿನ್ನ ನಿಜಸ್ಥಿತಿ ತಿಳಿಯಲಿದೆ. ನೀನು ಕಾರ್ಮಿಕರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ನಾವು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ನಾವುಗಳು, ಈ ಕಾರ್ಮಿಕರನ್ನು ಬೆಳೆಸಿದ ನಾವುಗಳು, ಕಾರ್ಮಿಕರನ್ನು ಇನ್ನು ಮುಂದೆ ನಿಮ್ಮ ಮೋಸದ ಜಾಲಕ್ಕೆ ಬಲಿಯಾಗಲು ಬಿಡುವುದಿಲ್ಲ. ಇಷ್ಟು ದಿವಸ ಪರದೆಯ ಹಿಂದೆ ನಿಂತು ಕಾಮ್ರೇಡ್ ಅನಂತಸುಬ್ಬರಾಯರನ್ನು, ಶರ್ಮಾಜಿಯವರನ್ನು ಅವಮಾನಿಸುತ್ತಾ, ತೋರಿಕೆಗಾಗಿ ಮಾತ್ರ ಗುರುಗಳು, ಗುರುಗಳು ಅಂತ ನಾಟಕವಾಡುತ್ತಿರುವುದು ನಮಗೆ ಮೊದಲೇ ಗೊತ್ತಿತ್ತು. ಈಗ ಬಹಿರಂಗವಾಗಿ ವಿಡಿಯೋದಲ್ಲಿ ಮಾತಾಡಿ ನಿಮ್ಮ ಅಸಲಿಯತ್ತು ತೋರಿಸಿದ್ದೀರಾ. ನಿಮ್ಮ ಅಸಲಿಯತ್ತು ಹೊರಗೆ ಬರಬೇಕಾಗಿತ್ತು, ಅದಕ್ಕಾಗಿ ನಾವು ಕಾಯುತ್ತಿದ್ದೆವು. ಈಗ ಬಂದಾಯ್ತು. ನಾವು ಕೂಡ ಇನ್ನುಮುಂದೆ ಸೆಡ್ಡುಹೊಡೆದು ಓಪನ್ನಾಗಿ ಮೈದಾನಕ್ಕೆ ಬರುತ್ತೇವೆ. ಈ ಸಂಸ್ಥೆಯನ್ನು, ಕಾರ್ಮಿಕರನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಕಾಪಾಡಿಯೇ ಕಾಪಾಡುತ್ತೇವೆ ಎಂದು ಕಾಮ್ರೇಡ್ ಮುಕ್ಕೇರಿ ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ