• Home
  • »
  • News
  • »
  • state
  • »
  • ಸಾರಿಗೆ ನೌಕರರ ನಿದ್ದೆಗೆಡಿಸಿದ ಶಿಸ್ತುಕ್ರಮದ ನೋಟಿಸ್; ಕೊರೋನಾ ಟೈಮಲ್ಲೂ ಅಧಿಕಾರಿಗಳ ಚೆಲ್ಲಾಟ

ಸಾರಿಗೆ ನೌಕರರ ನಿದ್ದೆಗೆಡಿಸಿದ ಶಿಸ್ತುಕ್ರಮದ ನೋಟಿಸ್; ಕೊರೋನಾ ಟೈಮಲ್ಲೂ ಅಧಿಕಾರಿಗಳ ಚೆಲ್ಲಾಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಾಕ್ ಡೌನ್ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ಲೋಕಾಭಿರಾಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದೇ ಮಹಾಪರಾಧ ಎನ್ನುವಂತೆ ಬಿಂಬಿಸಿ ನೌಕರ ಮುಖಂಡರನ್ನು ಅಮಾನತುಗೊಳಿಸಲಾಗುತ್ತದೆ.

  • Share this:

ಬೆಂಗಳೂರು (ಜು.6): ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿದಂತೆ ಒಟ್ಟು ನಾಲ್ಕು ಸಾರಿಗೆ ನಿಗಮಗಳ ನೌಕರರ ಸಿಬ್ಬಂದಿ ಅಕ್ಷರಶಃ ಕನಲಿ ಹೋಗಿದ್ದಾರೆ. ಕೊರೋನಾ ವೈರಸ್​ ಹೆಚ್ಚುತ್ತಿರುವ ಮಧ್ಯೆ ತಮ್ಮ ಮೇಲೆ ಅಧಿಕಾರಿಗಳಿಂದ ನಡೆಯುತ್ತಿರುವ ದೌರ್ಜನ್ಯಕ್ಕೆ ದಾರಿ ತೋಚದೆ ಕೂತಿದ್ದಾರೆ.

ಕೊರೋನಾ ಭೀತಿಯಿಂದ ಈಗಾಗಲೇ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ನಲುಗಿಹೋಗಿದ್ದಾರೆ. ಈ ಮಧ್ಯೆ ಅಧಿಕಾರಿಗಳು ತೋರುತ್ತಿರುವ  ನೌಕರ ವಿರೋಧಿ ಧೋರಣೆಯಿಂದಾಗಿ ನೌಕರಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿಬಿಟ್ಟಿದೆ. ಕೊರೋನಾದಂಥ ಸಂಕೀರ್ಣ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ದುಡಿಯುತ್ತಿರುವ ರಸ್ತೆ ಸಾರಿಗೆ ನೌಕರರ ಮೇಲೆ ಅಧಿಕಾರಿಗಳಿಂದ ದೌರ್ಜನ್ಯ ನಡೆಯುತ್ತಿದೆ ಎನ್ನುವಂಥ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಅವರನ್ನು‌ ಮಾನವೀಯವಾಗಿ ನಡೆಸಿಕೊಳ್ಳಲಾಗ್ತಿಲ್ಲ ಎನ್ನೋ ಆಕ್ಷೇಪದ ಮಾತುಗಳೂ ಕೇಳಿಬರುತ್ತಿವೆ. ಕ್ಷುಲ್ಲಕ ಎನ್ನುವಂಥ ಕಾರಣಗಳಿಗೂ ಕೂಡ ನೋಟಿಸ್ ಜಾರಿ ಮಾಡಿ ಸಸ್ಪೆಂಡ್ ಮಾಡುವಂತಹ ಕೆಟ್ಟ ಚಾಳಿಯನ್ನೂ ಅಧಿಕಾರಿಗಳು ಮುಂದುವರೆಸಿದ್ದಾರೆ‌‌. ಇದಕ್ಕೆ ಪೂರಕ‌ ಎನ್ನುವಂಥ ಸಾಕ್ಷ್ಯಗಳು ನ್ಯೂಸ್ 18 ಕನ್ನಡಕ್ಕೆ ದೊರೆತಿದೆ.

ಕೊರೋನಾ ಭಯದ ನಡುವೆಯೇ ಬದುಕಬೇಕಾದ ಹಾಗೆಯೇ ಕೆಲಸ ಮಾಡಬೇಕಾದ ಅಸಹಾಯಕ ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ನೌಕರರಿದ್ದಾರೆ. ಅವರಿಗೆ ಅದಕ್ಕಿಂತ ದೊಡ್ಡ ಮಟ್ಟದ ಸಂಕಟ ಹಾಗೂ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿರುವುದು ತಮ್ಮ ಮೇಲಾಧಿಕಾರಿಗಳಿಂದ. ತಮ್ಮ ಸಂಕಷ್ಟ ಏನೆಂಬುದು ಎನ್ನುವುದು ಗೊತ್ತಿದ್ದರೂ, ಅದನ್ನು ಅರ್ಥೈಸಿಕೊಳ್ಳದೆ ಮೇಲಾಧಿಕಾರಿಗಳು ದರ್ಪ ಹಾಗೂ ದೌರ್ಜನ್ಯ ಎಸಗುತ್ತಿದ್ದಾರೆ ಎನ್ನುವ ಆರೋಪ ಸಿಬ್ಬಂದಿಯದು. ಇದು ಸತ್ಯವೂ ಕೂಡ.

ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ನೌಕರರ ಸಿಬ್ಬಂದಿ ಅದ್ರಲ್ಲೂ ಪ್ರಯಾಣಿಕರ ನಡುವೆಯೇ ಹೆಚ್ಚು ಕೆಲಸ ಮಾಡುವಂಥ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ, ಯಾವೆಲ್ಲ ಕಾರಣಗಳಿಗೆ ನೋಟಿಸ್ ನೀಡಲಾಗ್ತಿದೆ, ಕೆಲಸದಿಂದ ಅಮಾನತುಗೊಳಿಸಲಾಗ್ತಿದೆ ಎಂದು ಕೇಳಿದರೆ ಅಚ್ಚರಿ ಪಡ್ತೀರಾ. ಬಸ್ ಗಳಿಗೆ ಹತ್ತುವ ಪ್ರಯಾಣಿಕರು ಮಾಸ್ಕ್ ಹಾಕದಿದ್ದರೆ ಕಂಡಕ್ಟರ್ ಗೆ ನೋಟಿಸ್ ನೀಡಲಾಗುತ್ತದೆ. ಕಂಡಕ್ಟರ್ ಗರ್ಭಿಣಿ ಎನ್ನೋ ಮನುಷ್ಯತ್ವವೂ ಇಲ್ಲದಂತೆ ಪ್ರಯಾಣಿಕೆಯೊಬ್ಬಳು ವರ್ತಿಸಿದ್ರೂ ನೋಟಿಸ್ ಸರ್ವ್ ಆಗೋದು ಆ ಕಂಡಕ್ಟರ್​​ಗೇನೆ.

ಇನ್ನು ಕ್ವಾರಂಟೈನ್ ಸೀಲ್ ಮುಚ್ಚಿಟ್ಟು ಪ್ರಯಾಣಿಕರು ಬಸ್ಸನ್ನೇರಿದ್ರೂ ನೋಟಿಸ್ ನೀಡೋದು ಕಂಡಕ್ಟರ್ ಗೇನೆ. ಸಿಬ್ಬಂದಿ ಪರಸ್ಪರ ಕಷ್ಟ ಸುಖ ಮಾತನಾಡಿಕೊಂಡರೂ ಸಂಸ್ಥೆ ವಿರುದ್ದ ಮಾತ್ನಾಡಿದ್ದಾರೆನ್ನೂ ಗುಮಾನಿ ಮೇಲೆ ಡ್ರೈವರ್-ಕಂಡಕ್ಟರ್​ಗೆ ನೋಟಿಸ್ ನೀಡುತ್ತಾರೆ. ಅದು ಒತ್ತಟ್ಟಿಗಿರಲಿ, ನಿಗಮದ ಅಧಿಕಾರಿಗಳೇ ಪ್ರಶ್ನೆ ಕೇಳುವ ವೇಳೆ ಸಮಸ್ಯೆ ಹೇಳಿಕೊಂಡರೂ ಡ್ರೈವರ್ ಹಾಗೂ ಕಂಡಕ್ಟರ್ ಗೆ ನೋಟಿಸ್ ಶಿಕ್ಷೆ ದೊರೆಯುತ್ತೆ.

ಲಾಕ್ ಡೌನ್ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ಲೋಕಾಭಿರಾಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದೇ ಮಹಾಪರಾಧ ಎನ್ನುವಂತೆ ಬಿಂಬಿಸಿ ನೌಕರ ಮುಖಂಡರನ್ನು ಅಮಾನತುಗೊಳಿಸಲಾಗುತ್ತದೆ.

ಸಂಸ್ಥೆ ವಿರುದ್ಧ ಮಾತ್ನಾಡದೆ ನೌಕರರು ಲಾಕ್ ಡೌನ್ ಸಂದರ್ಭದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು, ಯಾವೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು, ಸಂಸ್ಥೆಯ ಆಡಳಿತ ಮಂಡಳಿ ಜತೆಗೆ ಯಾವ ರೀತಿ ಸಮನ್ವಯ ಸಾಧಿಸಿ ಕೊಂಡುಹೋಗಬೇಕು ಎನ್ನುವಂಥ ಸಂಗತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಕ್ಕೇನೆ ತಮ್ಮನ್ನು ಅಮಾನತು‌ ಮಾಡಲಾಯಿತು. ಆಡಳಿತ ಮಂಡಳಿ ಹಾಗೂ ನೌಕರರ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡಿದ್ದೇ ನನ್ನ ತಪ್ಪಾ ಎಂದು ಪ್ರಶ್ನಿಸ್ತಾರೆ ನೌಕರ ಮುಖಂಡ ಆನಂದ್.

ಕ್ಷುಲ್ಲಕ ಕಾರಣಗಳಿಗೆ ನೋಟಿಸ್ ಮೇಲೆ ನೋಟಿಸ್ ಕೊಟ್ಟು ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿ, ವಿಚಾರಣೆ ಎದುರಿಸುವಂತೆ ಮಾಡುತ್ತಿರುವ ಮೇಲಾಧಿಕಾರಿಗಳ ಕ್ರಮಕ್ಕೆ ನೌಕರರು ಅಕ್ಷರಶಃ ಬೇಸತ್ತಿದ್ದಾರೆ. ಮೊದಲು ಒಂದು ತಿಂಗಳಿಗೆಲ್ಲಾ ವಿಚಾರಣೆ ಮುಗಿಸಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದ ನೌಕರರು ಇಂದು ಆರು ತಿಂಗಳು ಕಾಲ ಅಮಾನತು ಶಿಕ್ಷೆ ಎದುರಿಸುವಂತೆ ಮಾಡಲಾಗಿದೆ.

ಇದನ್ನೂ ಓದಿ: ಲಡಾಖ್​ ಗಡಿಯ ವಿವಾದಿತ ಪ್ರದೇಶದಿಂದ ಕೊನೆಗೂ ಹಿಂದೆ ಸರಿದ ಚೀನಾ ಸೇನೆ

ಎಷ್ಟು ಸಾಧ್ಯವಾಗುತ್ತದೋ ಅಷ್ಟು ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ದೂರ ಬೆಳೆಸುವ ಕೆಲಸವನ್ನು ಆಡಳಿತ ಮಂಡಳಿ ಮಾಡುತ್ತಿದೆಯೇ ಎನ್ನುವ ಗುಮಾನಿ ಕಾಡುತ್ತಿದೆ.ಈ ರೀತಿ ಮಾಡಿದರೆ ಅವರ ಸಂಬಳವನ್ನು ಉಳಿಸಿದಂತಾಗುತ್ತದೆ ಎನ್ನುವ ಲೆಕ್ಕಾಚಾರ ಆಡಳಿತ ಮಂಡಳಿಯದಾ ಗೊತ್ತಿಲ್ಲ. ಆದರೆ ಅಧಿಕಾರಿಗಳು ನೌಕರರಿಗೆ ನೊಟೀಸ್ ಕೊಡುತ್ತಿರುವ,ಇಲಾಖಾ ವಿಚಾರಣೆ ನೆವದಲ್ಲಿ‌ ಅಮಾನತು ಗೊಳಿಸುವ ರೀತಿ ಹಾಗೂ ವೇಗವನ್ನು ನೋಡಿದರೆ, ಆಡಳಿತ ಮಂಡಳಿಯೇ ನೌಕರರನ್ನು ಹಣಿದು ಹಾಕುವ ಗುತ್ತಿಗೆಯನ್ನು ಅಧಿಕಾರಿಗಳಿಗೆ ನೀಡಿ ಬಿಟ್ಟಿದೆಯಾ ಎನ್ನುವ ಅನುಮಾನ ಕಾಡಿದೆ.


ನೌಕರರನ್ನು ಅಕ್ಷರಶಃ ಜೀತದ ಆಳುಗಳಂತೆ ನಡೆಸಿಕೊಂಡು ಅವರ ಮೇಲೆ ಕ್ರೌರ್ಯವನ್ನು ಎಸಗುತ್ತಿರುವ ಅಧಿಕಾರಿಗಳ ದೌರ್ಜನ್ಯದ ಮಾಹಿತಿ ಇದ್ದಾಗ್ಯೂ ಎಂಡಿ ಶಿಖಾ ಮೇಡಮ್ ಯಾಕೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ನೌಕರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುತ್ತಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸುತ್ತಿಲ್ಲವೋ ಗೊತ್ತಾಗುತ್ತಿಲ್ಲ..ಆದ್ರೆ ಅಧಿಕಾರಿಗಳ‌ ದೌರ್ಜನ್ಯ ಹೀಗೇ ಮುಂದುವರುದ್ರೆ ನೌಕರ ಸಿಬ್ಬಂದಿಯ ಬಂಡಾಯ ಯಾವ್ ಸ್ವರೂಪ‌ ಪಡೆದುಕೊಳ್ಳಲಿದೆ ಎನ್ನುವ ಮಾತು ಕೇಳಿ ಬಂದಿದೆ.

Published by:Rajesh Duggumane
First published: