ಮುಗಿದ ಸರ್ಕಾರ-ಸಾರಿಗೆ ನೌಕರರ ಹಗ್ಗಜಗ್ಗಾಟ; ನಿಟ್ಟುಸಿರು ಬಿಟ್ಟ ಪ್ರಯಾಣಿಕರು

ಮುಷ್ಕರ ವಾಪಸ್ ಪಡೆದ ಹಿನ್ನೆಲೆಯಲ್ಲಿ  ಜೇವರ್ಗಿ ಪಟ್ಟಣದಲ್ಲಿ ಸಾರಿಗೆ ನೌಕರರು ವಿಜಯೋತ್ಸವ ಆಚರಿಸಿದರು.  ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಬಸ್​ ಪ್ರಯಾಣಕ್ಕೆ ಮುಂದಾದ ಜನರು

ಬಸ್​ ಪ್ರಯಾಣಕ್ಕೆ ಮುಂದಾದ ಜನರು

  • Share this:
ಕಲಬುರ್ಗಿ (ಡಿ.14): ತಮ್ಮನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಳಿಸಿದ್ದಾರೆ. ಮುಷ್ಕರ ನಾಲ್ಕನೆಯ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿಯೂ ತೀವ್ರ ಟೀಕೆಗಳು ಶುರುವಾಗುತ್ತಿದ್ದಂತೆಯೇ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ. ಮುಷ್ಕರ ಅಂತ್ಯದ ಹಿನ್ನೆಲೆಯಲ್ಲಿ ಕಲಬುರ್ಗಿಯಲ್ಲಿ ನೌಕರರು ಸೇವೆಗೆ ಹಾಜರಾಗುತ್ತಿದ್ದು, ಬಸ್ ಗಳ ಸಂಚಾರದಲ್ಲಿ ಏರಿಕೆಯಾಗಲಾರಂಭಿಸಿದೆ. ಮುಷ್ಕರ ನಾಲ್ಕನೆಯ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸಾರಿಗೆ ನೌಕರರ ವಿರೋಧದ ನಡುವೆಯೇ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಗೊಂಡಿತ್ತು. ಪೊಲೀಸ್ ಎಸ್ಕಾರ್ಟ್ ಮುಂದಾಳತ್ವದಲ್ಲಿ ಕೆಲ ಮಾರ್ಗಗಳಿಗೆ ಬಸ್ ಗಳನ್ನು ಬಿಡಲಾಗಿತ್ತು. ಆದರೆ ಬಸ್ ಆರಂಭಗೊಂಡಿವೆ ಎಂದು ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾದರೂ ತಮ್ಮ ಊರುಗಳಿಗೆ ಹೋಗುವ ಭಾಗ್ಯ ಸಿಕ್ಕಿರಲಿಲ್ಲ.

ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆಯೇ ಬಸ್ ಸಂಚಾರ ಆರಂಭಗೊಂಡಿತ್ತು. ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಪ್ರಾರಂಭಗೊಂಡಿತ್ತು. ಹುಮ್ನಾಬಾದ್ ಮಾರ್ಗವಾಗಿ ಹೈದರಾಬಾದ್, ಬೀದರ್ ಮತ್ತಿತರ ಕಡೆ ಬಸ್ ಗಳು ಸಾಗಿವೆ. ವಿಜಯಪುರ, ಯಾದಗಿರಿ, ಸೇಡಂ, ಶಹಾಪುರ, ಸುರಪುರಗಳ ಕಡೆಯೂ ಕೆಲ ಬಸ್ ಗಳು ಸಂಚಾರ ಮುಂದುವರಿಸಿದ್ದವು. ಆದರೆ ಬೀದರ್ ಕಡೆ ತೆರಳಿದ್ದ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಬಸ್ ಗಳನ್ನು ಬಿಡಲು ಹಿಂದೇಟು ಹಾಕುವಂತೆ ಮಾಡಿತ್ತು.

ಹಲವಾರು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರೂ, ಕೆಲವೆಡೆ ನಡೆಯುತ್ತಿರುವ ಅಹಿತಕರ ಘಟನೆಗಳಿಂದಾಗಿ ಬಸ್ ಸಂಚರಿಸಿಕೊಂಡು ಹೋಗಲು ಮೀನಾ-ಮೇಷ ಎಣಿಸುತ್ತಿದ್ದರು. ಹಲವಾರು ನೌಕರರು ಬೆಂಗಳೂರಿನಲ್ಲಿ ತಮ್ಮ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಅದರ ಪ್ರಕಾರ ಮುನ್ನಡೆಯುತ್ತೇವೆ ಎಂದು ಕರ್ತವ್ಯಕ್ಕೂ ಹಾಜರಾಗದೆ ಕುಳಿತಿದ್ದರು. ಕೇಂದ್ರ ಬಸ್ ನಿಲ್ದಾಣದವರೆಗೂ ಪಾದಯಾತ್ರೆಯನ್ನೂ ಹಮ್ಮಿಕೊಂಡಿದ್ದರು. ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟದಿಂದಾಗಿ ಪ್ರಯಾಣಿಕರು ತೀವ್ರ ಕಷ್ಟ ಅನುಭವಿಸುವಂತಾಗಿತ್ತು. ಬೇರೆ ಬೇರೆ ಊರುಗಳಿಗೆ ತೆರಳಲು ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಜನ, ಗಂಟೆಗಟ್ಟಲೆ ಕಾದರೂ ಕೆಲ ರೂಟ ಗಳಿಗೆ ಬಸ್ ಗಳು ಬಾರದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರಿಗೆ ನೌಕರರ ಸಂಘದ ಮುಖಂಡರು ಗಂಟೆಗೊಂದು ನಿರ್ಣಯ ಬದಲಿಸುತ್ತಿದ್ದರಿಂದ ನಮಗೆ ತೀವ್ರ ತೊಂದರೆಯಾಗಿದೆ. ಏಕಾಏಕಿ ಮುಷ್ಕರ ನಡೆಸಿದ್ದುದು ದೊಡ್ಡ ತಪ್ಪು. ಇನ್ನು ಸಾರಿಗೆ ನೌಕರರಿಗೆ ಸಂಬಂಧವೇ ಇರದ ಕೋಡಿಹಳ್ಳಿ ಚಂದ್ರಶೇಖರ್ ಇದರ ನೇತೃತ್ವ ವಹಿಸಿಕೊಂಡು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೋಡಿಹಳ್ಳಿ ಬೇಕಿದ್ದರೆ ದೆಹಲಿಯಲ್ಲಿ ನಡೆದಿರುವ ರೈತ ಚಳುವಳಿಯನ್ನು ಬೆಂಬಲಿಸಿ ಹೋರಾಟ ಮಾಡಲಿ. ಆದರೆ ತಮ್ಮ ಪ್ರತಿಷ್ಟೆಗಾಗಿ ಈ ರೀತಿ ಜನಸಾಮಾನ್ಯರಿಗೆ ತೊಂದರೆ ಕೊಡೋದು ಯಾವ ನ್ಯಾಯ ಎಂದು ಪ್ರಯಾಣಿಕರು ಪ್ರಶ್ನಿಸಿದ್ದರು.

ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುತ್ತಿದ್ದಂತೆಯೇ ಹೋರಾಟಗಾರರು ಒಂದಷ್ಟು ಮೃದುಗೊಂಡು, ಸಾರಿಗೆ ಸಚಿವರ ಲಿಖಿತ ಆದೇಶದ ನಂತರ ಮುಷ್ಕರ ಕೈಬಿಟ್ಟಿದ್ದಾರೆ. ಮುಷ್ಕರ ಅಂತ್ಯಗೊಳ್ಳುತ್ತಿದ್ದಂತೆಯೇ ಬಸ್ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಖುಷಿಯಿಂದಲೇ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.
 
ಜೇವರ್ಗಿಯಲ್ಲಿ ವಿಜಯೋತ್ಸವ..

ಮುಷ್ಕರ ವಾಪಸ್ ಪಡೆದ ಹಿನ್ನೆಲೆಯಲ್ಲಿ  ಜೇವರ್ಗಿ ಪಟ್ಟಣದಲ್ಲಿ ಸಾರಿಗೆ ನೌಕರರು ವಿಜಯೋತ್ಸವ ಆಚರಿಸಿದರು.  ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಜೇವರ್ಗಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಬಳಿ ಸಂಭ್ರಮಾಚರಣೆ ಮಾಡಲಾಯಿತು. ಜೇವರ್ಗಿ ಸಾರಿಗೆ ನೌಕರರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಫಿಟ್ಸ್ ಬಂದ ವ್ಯಕ್ತಿ ಬಿದ್ದು ಗೊಂದಲ

ಒಂದು ಕಡೆ ಸಾರಿಗೆ ಮುಷ್ಕರ ಮುಂದುವರಿದಿರುವ ಸಂದರ್ಭದಲ್ಲಿಯೇ ವ್ಯಕ್ತಿಯೋರ್ವನಿಗೆ ಫಿಟ್ಸ್ ಬಂದು ಕೆಳಗೆ ಬಿದ್ದು ಗೊಂದಲ ಸೃಷ್ಟಿಯಾದ ಘಟನೆ  ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಮುಷ್ಕರದ ನಡುವೆಯೇ ಬಸ್ ಸೇವೆ ಪ್ರಾರಂಭಗೊಂಡಿದೆ. ನಗರ ಸಾರಿಗೆ ಬಸ್ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಫಿಟ್ಸ್ ಬಂದು ಚೇರ್ ನಿಂದ ಕೆಳಗೆ ಬಿದ್ದಿದ್ದಾನೆ. ಸುಮಾರು 45 ವರ್ಷದ ಮಲ್ಲು ಹೊನಗುಂಟಿ ಎಂಬಾತನ ತಲೆಗೆ ಗಾಯಗಳಾಗಿವೆ. ಸಿಟಿ ಬಸ್ ನಲ್ಲಿ ಬಂದು ಕುಳಿತಿದ್ದ ಪ್ರಯಾಣಿಕನಿಗೆ ಫಿಟ್ಸ್ ಬಂದು ಬಿದ್ದಾಗ ಚೇರ್ ಬಡಿದು ತಲೆಗೆ ಗಾಯವಾಗಿದೆ. ತಕ್ಷಣ ಆ್ಯಂಬುಲೆನ್ಸ್ ಕರೆಸಿದ ಪೊಲೀಸರು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಬಸ್ ನಿಲ್ದಾಣದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ ಆ್ಯಂಬುಲೆನ್ಸ್ ಸಿಬ್ಬಂದಿ ನಂತರ ಆಸ್ಪತ್ರೆಗೆ ಕರೆದೊಯ್ದಿದೆ. ಇದರಿಂದಾಗಿ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
Published by:Seema R
First published: