ಬೆಂಗಳೂರು (ಏ. 14): ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯುವ್ಯ ಸಾರಿಗೆ ನೌಕರರು ಕಳೆದ 8 ದಿನಗಳಿಂದ ಸರ್ಕಾರದ ವಿರುದ್ಧ ಮುಷ್ಕರ ನಡೆಸುತ್ತಿದ್ದಾರೆ. 6ನೇ ವೇತನ ಆಯೋಗದ ಶಿಫಾರಸನ್ನು ಜಾರಿಗೆ ತರಬೇಕೆಂಬ ಪ್ರಮುಖ ಒತ್ತಾಯದೊಂದಿಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇಂದು ಕೂಡ ಮುಷ್ಕರ ಮುಂದುವರೆದಿದ್ದು, 4 ನಿಗಮಗಳ ಬಸ್ಗಳು ಇಂದು ರಸ್ತೆಗೆ ಇಳಿಯುವುದಿಲ್ಲ.
ಕಳೆದ 8 ದಿನಗಳಿಂದ ಚಳುವಳಿ ರೂಪದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಇಂದು ರಾಜ್ಯಾದ್ಯಂತ ಸಾರಿಗೆ ನೌಕರರಿಂದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು. ಬಳಿಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಕೂಟ ಮಾಹಿತಿ ನೀಡಿದೆ.
ಎಂಟನೇ ದಿನ ಇಂದು ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಮೆಜೆಸ್ಟಿಕ್ನಲ್ಲಿ ಖಾಸಗಿ ಬಸ್ ಗಳ ದರ್ಬಾರ್ ಇಂದು ಕೂಡ ಮುಂದುವರೆದಿದೆ. ಬೆರಳಣಿಕೆಯಷ್ಟು ಸಾರಿಗೆ ಬಸ್ ಸೇವೆ ಶುರುವಾಗಿದ್ದು, ಸರ್ಕಾರಿ ರಜೆ ದಿನವಾದ ಹಿನ್ನೆಲೆಯಲ್ಲಿ ಇಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲ. ಪ್ರಯಾಣಿಕರಿಲ್ಲದೆ ಖಾಸಗಿ ಬಸ್ಗಳು ಸಾಲಾಗಿ ನಿಂತಿವೆ. ಬಸ್ ತುಂಬಿದ ನಂತರವಷ್ಟೇ ಬಸ್ ಓಡಾಟ ಶುರುವಾಗಲಿದೆ.
ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ 9 ಭರವಸೆಗಳು:
1) ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ.
2) ಕೋವಿಡ್ 19ನಿಂದ ಸಾವಿಗೀಡಾದರೆ 30 ಲಕ್ಷ ಪರಿಹಾರ.
3) ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ.
4) ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ.
5) ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ತರುವುದು.
6) ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ.
7) ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ.
8) ಎನ್ಐ ಎನ್ ಐಎನ್ಸಿ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ.
9) ವೇತನ ಪರಿಷ್ಕರಣೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಶಿಫಾರಸು ಪರಿಗಣನೆ ( ಸರ್ಕಾರದ ಆರ್ಥಿಕ ಅಂಶ ಪರಿಗಣಿಸಿ ತೀರ್ಮಾನ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ