KSRTC BMTC Strike: ಸಾರಿಗೆ ನೌಕರರ ಮುಷ್ಕರ; ಎಸ್ಮಾ ಜಾರಿ ಕುರಿತು ಸಿಎಂ ಯಡಿಯೂರಪ್ಪ ಮಹತ್ವದ ಸಭೆ

ಯುಗಾದಿ ಹಬ್ಬ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಇದೇ ಕಾರಣಕ್ಕೆ 20 ಸಾವಿರಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಬಿ.ಎಸ್. ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ

 • Share this:
  ಬೆಂಗಳೂರು (ಏ. 8): 2 ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಎಸ್ಮಾ ಜಾರಿ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಮಹತ್ವದ ಸಭೆ ನಡೆಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಾರಿಗೆ ನೌಕರರ ಹಿಂದೆ ಕಾಣದ ಕೈಗಳ ಆಟ ನಡೆಯುತ್ತಿದ್ದು, ರಾಜಕೀಯ ಪಕ್ಷವೊಂದಕ್ಕೆ ಅನುಕೂಲ ಮಾಡಿಕೊಡಲು ಕೋಡಿಹಳ್ಳಿ ಚಂದ್ರಶೇಖರ್ ನೆರವು ನೀಡಿರುವ ಶಂಕೆಯಿದೆ.

  ಈಗಾಗಲೇ ಸಿಎಂ ಯಡಿಯೂರಪ್ಪ ಹಲವು ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನದ ಮುಷ್ಕರ ನಿರತರು ಸರ್ಕಾರದ ಜೊತೆಗೆ ಸಂಧಾನ ಮಾತುಕತೆಗೆ ಬಗ್ಗೋದು ಅನುಮಾನ ಎನ್ನಲಾಗುತ್ತಿದೆ. ಯುಗಾದಿ ಹಬ್ಬ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಇದೇ ಕಾರಣಕ್ಕೆ 20 ಸಾವಿರಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

  ಅಗತ್ಯ ಬಿದ್ದರೆ ಹೆಚ್ಚುವರಿ ರೈಲು ಸೇವೆಗೆ ಮನವಿ ಸಲ್ಲಿಸಲಾಗುವುದು. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಜೊತೆ ಸಂಜೆ ದೂರವಾಣಿ ನಡೆಸುವ ಬಗ್ಗೆ ಸಿಎಂ ಯಡಿಯೂರಪ್ಪ ಚಿಂತನೆ ನಡೆಸಲಿದ್ದಾರೆ. ಮುಷ್ಕರ ತೀವ್ರ ಸ್ವರೂಪ ಪಡೆದರೆ ಎಸ್ಮಾ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತುಕ್ರಮ ಜರುಗಿಸಲು ಚಿಂತಿಸಲಾಗಿದೆ. ಸೇವೆಯಿಂದ ಅಮಾನತು ಸೇರಿದಂತೆ ಹಲವು ರೀತಿ ಕಾನೂನು ಕ್ರಮಕ್ಕೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ನ್ಯೂಸ್ 18 ಕನ್ನಡಕ್ಕೆ ಸರ್ಕಾರದ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.

  ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಮುಷ್ಕರ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಮುಷ್ಕರದ ಮಧ್ಯೆಯೇ ಯುಗಾದಿ ಹಬ್ಬ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ರೈಲು ಸಂಚಾರ ಸೇವೆ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ನೈಋತ್ಯ ರೈಲ್ವೆಯಿಂದ ಕೆಲವು ರೈಲುಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಮತ್ತೆ 18 ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

  ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಕಳೆದ 4 ತಿಂಗಳಲ್ಲಿ ಎರಡನೇ ಬಾರಿಗೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಿನ್ನೆಯಿಂದ ಮುಷ್ಕರ ಆರಂಭವಾಗಿದ್ದು, 2ನೇ ದಿನವಾದ ಇಂದು ಕೂಡ ಮುಷ್ಕರ ಮುಂದುವರೆದಿದೆ. ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರ ಖಾಸಗಿ ಬಸ್ ಮೊರೆ ಹೋಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 8,176 ಖಾಸಗಿ ಬಸ್ ಗಳು ಓಡಾಡಿವೆ. ನೌಕರರ ಮುಷ್ಕರದಿಂದ ಸಾರಿಗೆ ಇಲಾಖೆಗೆ ಬರೋಬ್ಬರಿ 17 ಕೋಟಿ ರೂ. ನಷ್ಟವಾಗಿದೆ.
  Published by:Sushma Chakre
  First published: