news18-kannada Updated:April 8, 2021, 9:58 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಏ. 8): ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಮುಷ್ಕರ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಮುಷ್ಕರದ ಮಧ್ಯೆಯೇ ಯುಗಾದಿ ಹಬ್ಬ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ರೈಲು ಸಂಚಾರ ಸೇವೆ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ನೈಋತ್ಯ ರೈಲ್ವೆಯಿಂದ ಕೆಲವು ರೈಲುಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಮತ್ತೆ 18 ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಹುಬ್ಬಳ್ಳಿ - ಯಶವಂತಪುರ, ಯಶವಂತಪುರ - ವಿಜಯಪುರ, ಯಶವಂತಪುರ - ಬೆಳಗಾವಿ, ಬೆಳಗಾವಿ - ಯಶವಂತಪುರ, ಮೈಸೂರು - ಬೀದರ್, ಬೀದರ್ - ಮೈಸೂರು, ಯಶವಂತಪುರ - ಬೀದರ್, ಬೀದರ್ - ಯಶವಂತಪುರ, ಸಂಗೊಳ್ಳಿ ರಾಯಣ್ಣ ನಿಲ್ದಾಣ - ಮೈಸೂರು, ಮೈಸೂರು - ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ - ಮೈಸೂರು, ಮೈಸೂರು - ಯಶವಂತಪುರ, ಯಶವಂತಪುರ - ಶಿವಮೊಗ್ಗ, ಶಿವಮೊಗ್ಗ - ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ - ಕಾರವಾರ, ಕಾರವಾರ - ಯಶವಂತಪುರ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ನೈಋತ್ಯ ರೈಲ್ವೆಯಿಂದ ಒಟ್ಟು 18 ಹೆಚ್ಚುವರಿ ರೈಲುಗಳ ಸೇವೆ ನೀಡಲಾಗಿದೆ. ರೈಲುಗಳ ಹೆಚ್ಚುವರಿ ಸೇವೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸೇವೆ ನೀಡಲಾಗಿದೆ.
ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಕಳೆದ 4 ತಿಂಗಳಲ್ಲಿ ಎರಡನೇ ಬಾರಿಗೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಿನ್ನೆಯಿಂದ ಮುಷ್ಕರ ಆರಂಭವಾಗಿದ್ದು, 2ನೇ ದಿನವಾದ ಇಂದು ಕೂಡ ಮುಷ್ಕರ ಮುಂದುವರೆದಿದೆ. ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರ ಖಾಸಗಿ ಬಸ್ ಮೊರೆ ಹೋಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 8,176 ಖಾಸಗಿ ಬಸ್ ಗಳು ಓಡಾಡಿವೆ. ನೌಕರರ ಮುಷ್ಕರದಿಂದ ಸಾರಿಗೆ ಇಲಾಖೆಗೆ ಬರೋಬ್ಬರಿ 17 ಕೋಟಿ ರೂ. ನಷ್ಟವಾಗಿದೆ.
ಇಂದು ಮತ್ತೆ ಮುಂದುವರೆದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದಿಂದ ಸಾರಿಗೆ ಬಸ್ಗಳು ರಸ್ತೆ ಇಳಿದಿಲ್ಲ. ಮುಷ್ಕರದ ಹಿನ್ನೆಲೆಯಲ್ಲಿ ನಿನ್ನೆ ಬಿಎಂಟಿಸಿ ಬಸ್ಗಳ ಬದಲಾಗಿ ಖಾಸಗಿ ಬಸ್ಗಳನ್ನು ರಸ್ತೆಗೆ ಇಳಿಸಿದ್ದ ಸಾರಿಗೆ ಇಲಾಖೆ ಇಂದು ತರಬೇತಿ ಚಾಲಕರ ಮೂಲಕ ಬಿಎಂಟಿಸಿ ಬಸ್ಗಳ ಸಂಚಾರ ಆರಂಭಿಸುವ ಸಾಧ್ಯತೆಯೂ ಇದೆ.
Published by:
Sushma Chakre
First published:
April 8, 2021, 9:55 AM IST