KSRTC BMTC Loss: ಸಾರಿಗೆ ನೌಕರರ ಮುಷ್ಕರದಿಂದ 15 ದಿನದಲ್ಲಿ 287 ಕೋಟಿ ರೂ. ನಷ್ಟ!

ಕೆಎಸ್​ಆರ್​ಟಿಸಿ

ಕೆಎಸ್​ಆರ್​ಟಿಸಿ

ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರದಿಂದ ಸಾರಿಗೆ ಸಂಸ್ಥೆಗೆ ಭಾರೀ ಹೊಡೆತ ಬಿದ್ದಿದ್ದು, ಕಳೆದ 15 ದಿನಗಳಿಂದ ನಡೆದ ಮುಷ್ಕರದಲ್ಲಿ ನಾಲ್ಕು ನಿಗಮಗಳಿಗೆ 287 ಕೋಟಿ ರೂ. ನಷ್ಟವಾಗಿದೆ.

  • Share this:

ಬೆಂಗಳೂರು (ಏ. 22): ಕಳೆದ 15 ದಿನಗಳಿಂದ ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರ ಇದ್ದುದರಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ. ಸಾರಿಗೆ ನೌಕರರ ಮುಷ್ಕರದಿಂದ ಸಾರಿಗೆ ಸಂಸ್ಥೆಗೆ ಭಾರೀ ಹೊಡೆತ ಬಿದ್ದಿದ್ದು, ಮುಷ್ಕರದಿಂದ ಸಾರಿಗೆ ನಿಗಮಕ್ಕೆ ಬರೋಬ್ಬರಿ 287 ಕೋಟಿ ರೂ. ಆದಾಯ ನಷ್ಟವಾಗಿದೆ.


ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ನಡೆದ ಮುಷ್ಕರದಲ್ಲಿ ನಾಲ್ಕು ನಿಗಮಗಳಿಗೆ 287 ಕೋಟಿ ರೂ. ನಷ್ಟವಾಗಿದೆ. KSRTC ನಿಗಮಕ್ಕೆ 122.50 ಕೋಟಿ ರೂ ನಷ್ಟವಾಗಿದ್ದು, BMTCಗೆ 45 ಕೋಟಿ ರೂ. ನಷ್ಟವಾಗಿದೆ. NWKRTCಗೆ 57.50 ಕೋಟಿ ರೂ ನಷ್ಟವಾಗಿದೆ. NEKRTCಗೆ 62 ಕೋಟಿ ರೂ ನಷ್ಟವಾಗಿದೆ. ತರಬೇತಿ ಹಂತದಲ್ಲಿದ್ದ 995 ನೌಕರರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ನಾಲ್ಕು ಸಾರಿಗೆ ನಿಗಮಗಳಿಂದ ಒಟ್ಟು 2,941 ನೌಕರರನ್ನು ಅಮಾನತು ಮಾಡಲಾಗಿದೆ. 7,666 ಮಂದಿಗೆ ನೋಟೀಸ್ ಜಾರಿ ‌ಮಾಡಲಾಗಿದೆ.


6ನೇ ವೇತನ ಆಯೋಗ ಜಾರಿ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 15 ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಏಪ್ರಿಲ್ 7ರಿಂದ 21ರವರೆಗೆ ಸಾರಿಗೆ ನೌಕರರ ಮುಷ್ಕರ ನಡೆದಿತ್ತು. ಹೈಕೋರ್ಟ್ ಆದೇಶದಂತೆ ನಿನ್ನೆ ನೌಕರರ ಸಂಘದವರು ಮುಷ್ಕರವನ್ನು ವಾಪಾಸ್ ಪಡೆದಿದ್ದರು. ಇಂದು ಮುಂಜಾನೆಯಿಂದ ಮೆಜೆಸ್ಟಿಕ್​ನ ಬಿಎಂಟಿಸಿ, ಹಾಗೂ ಕೆಎಸ್ಆರ್​ಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. 15 ದಿನಗಳಿಂದ ಬಸ್ಸಿಲ್ಲದೇ ಪರದಾಡ್ತಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.


15 ದಿನಗಳ ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗಿದೆ. ನಾಲ್ಕು ಸಾರಿಗೆ ನಿಗಮಗಳಿಂದ ಪ್ರತಿದಿನ 17 ಕೋಟಿ ರೂ. ಆದಾಯ ಸಿಗುತ್ತಿತ್ತು. ಕೆಎಸ್ಆರ್​ಟಿಸಿಗೆ ನಿತ್ಯ ಪ್ರತಿದಿನ 7 ಕೋಟಿ ರೂ. ಆದಾಯ ಹರಿದುಬರುತ್ತಿತ್ತು. ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಆದಾಯ ಸಿಗುತ್ತಿತ್ತು. ಆದರೆ, ಯುಗಾದಿ ಹಬ್ಬದ ಸಮಯದಲ್ಲೇ ನೌಕರರು ಮುಷ್ಕರ ಹೂಡಿರುವುದರಿಂದ ಸರ್ಕಾರಕ್ಕೆ ಎರಡೇ ದಿನಗಳಲ್ಲಿ 44 ಕೋಟಿ ನಷ್ಟವಾಗಿತ್ತು. ಬಿಎಂಟಿಸಿ ನಿತ್ಯ ಕಾರ್ಯಾಚರಣೆಯ ಆದಾಯ 3 ಕೋಟಿ ರೂ., ವಾಯುವ್ಯ ಸಾರಿಗೆ ನಿಗಮದ ನಿತ್ಯ ಆದಾಯ 3.5 ಕೋಟಿ ರೂ., ಈಶಾನ್ಯ ಸಾರಿಗೆ ನಿಗಮದ ನಿತ್ಯದ ಆದಾಯ 3.5 ಕೋಟಿ ರೂ. ಇರುತ್ತಿತ್ತು. ಹೀಗಾಗಿ, ಕಳೆದ 15 ದಿನಗಳಲ್ಲಿ ಸಾರಿಗೆ ನಿಗಮಗಳಿಗೆ 287 ಕೋಟಿ ರೂ. ನಷ್ಟವಾಗಿದೆ.


ಮುಷ್ಕರದ ವೇಳೆ ಬಸ್ಸಿಲ್ಲದೇ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣಗಳು ಇಂದು ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಮುಷ್ಕರ ವಾಪಾಸ್ ಪಡೆದಿದ್ದರಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎಲ್ಲಾ ಡಿಪೋಗಳಿಂದ ಬಿಎಂಟಿಸಿ ಬಸ್ ಗಳು ಆಪರೇಟ್ ಆಗಿವೆ. ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಕೈಗೊಂಡಿದ್ದ ಮುಷ್ಕರವನ್ನು ಕೈ ಬಿಡುವಂತೆ ಹೈಕೋರ್ಟ್​​ ಆದೇಶ ನೀಡಿತ್ತು. ಸರ್ಕಾರ ಮತ್ತು ಸಾರಿಗೆ ನೌಕರರ ಮಧ್ಯ ಪ್ರವೇಶ ಮಾಡಿದ್ದ ಕರ್ನಾಟಕದ ಉಚ್ಛ ನ್ಯಾಯಾಲಯ ಸೇವೆಗೆ ಹಾಜರಾಗುವಂತೆ ಸಾರಿಗೆ ನೌಕರರಿಗೆ ಸೂಚಿಸಿತ್ತು.

First published: