KSRTC BMTC Strike: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ನಿನ್ನೆ ಒಂದೇ ದಿನ 17 ಕೋಟಿ ರೂ. ನಷ್ಟ

ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರ ಖಾಸಗಿ ಬಸ್ ಮೊರೆ ಹೋಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 8,176 ಖಾಸಗಿ ಬಸ್ ಗಳು ಓಡಾಡಿವೆ. ನೌಕರರ ಮುಷ್ಕರದಿಂದ ಸಾರಿಗೆ ಇಲಾಖೆಗೆ ಬರೋಬ್ಬರಿ 17 ಕೋಟಿ ರೂ. ನಷ್ಟವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಏ. 8): ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಕಳೆದ 4 ತಿಂಗಳಲ್ಲಿ ಎರಡನೇ ಬಾರಿಗೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಿನ್ನೆಯಿಂದ ಮುಷ್ಕರ ಆರಂಭವಾಗಿದ್ದು, 2ನೇ ದಿನವಾದ ಇಂದು ಕೂಡ ಮುಷ್ಕರ ಮುಂದುವರೆದಿದೆ. ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರ ಖಾಸಗಿ ಬಸ್ ಮೊರೆ ಹೋಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 8,176 ಖಾಸಗಿ ಬಸ್ ಗಳು ಓಡಾಡಿವೆ. ನೌಕರರ ಮುಷ್ಕರದಿಂದ ಸಾರಿಗೆ ಇಲಾಖೆಗೆ ಬರೋಬ್ಬರಿ 17 ಕೋಟಿ ರೂ. ನಷ್ಟವಾಗಿದೆ.

    ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ಮುಷ್ಕರ ಮಾಡಿದ್ದ ಸಾರಿಗೆ ನೌಕರರ ಮುಷ್ಕರ ಈಗ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇವತ್ತಿಂದ ಮತ್ತೆ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭವಾಗಿದ್ದು, ಆರನೇ ವೇತನಕ್ಕೆ ಪಟ್ಟು ಹಿಡಿದಿದ್ದಾರೆ. ಇವತ್ತೂ ಕೂಡ‌ ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿಯಾಗಿದ್ದು, ಖಾಸಗಿ ಬಸ್​ಗಳನ್ನು ನಿನ್ನೆಯಂತೆಯೇ ವ್ಯವಸ್ಥೆ ಮಾಡಿದೆ. ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ಭರಾಟೆ ಜೋರಾಗಿದೆ.

    ನಿನ್ನೆಯಂತೇ ಪ್ರಯಾಣಿಕರಿಗೆ ಅನುಕೂಲವಾಗಲು ಇಂದು ಪ್ಲಾಟ್ ಫಾರಂಗಳಲ್ಲಿ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಆಟೋಗಳಿಂದ ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ಸುಲಿಗೆಯಾಗುತ್ತಿದೆ. ಬೇರೆ ಬೇರೆ ರಾಜ್ಯಗಳ ಸಾರಿಗೆಗಳಲ್ಲಿ ಬಂದಿರೋ ಪ್ರಯಾಣಿಕರು ಲಗೇಜ್ , ಮಕ್ಕಳನ್ನ ಹೊತ್ತು ಬಸ್ ಗಳಿಗಾಗಿ ಕಾಯುತ್ತಿದ್ದಾರೆ. ಸದ್ಯ ಅನೇಕಲ್ ,ಜಿಗಣಿ, ಹೊಸಕೋಟೆ ಸೇರಿದಂತೆ ಕೆಲ ಭಾಗಗಳಿಗೆ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಬಸ್​ಗಳಲ್ಲಿ ಮತ್ತೆ ಹೆಚ್ಚು ಹಣ ಪಡೆಯುತ್ತಿರೋ ಆರೋಪ ಕೇಳಿಬಂದಿದ್ದು, ಬಿಎಂಟಿಸಿಯ ಪ್ಲಾಟ್ ಫಾರಂಗಳಿಗೆ ಟಿಟಿ ವಾಹನ, ಆಟೋ ಸೇರಿ ಖಾಸಗಿ ಬಸ್​ಗಳು ಎಂಟ್ರಿಯಾಗಿವೆ.

    ಇದನ್ನೂ ಓದಿ: KSRTC Workers Strike - ಸಾರಿಗೆ ನೌಕರರ ಮುಷ್ಕರ ಮೊದಲ ದಿನ ಸಂಪೂರ್ಣ ಯಶಸ್ವಿ

    ಸದ್ಯ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎರಡನೇ ದಿನಕ್ಕೆ ಸಾರಿಗೆ ನೌಕರರ ಮುಷ್ಕರ ಕಾಲಿಟ್ಟಿದೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಚುಕ್ಕಾಣಿಯಲ್ಲಿ ನಡೆಯುತ್ತಿರುವ ಬಸ್ ಬಂದ್ ಹೋರಾಟ ಮೊದಲ ದಿನವಾದ ನಿನ್ನೆ ಸಂಪೂರ್ಣ ಯಶಸ್ವಿಯಾಗಿತ್ತು. ಇಂದು ಮತ್ತೆ ಮುಂದುವರೆದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದಿಂದ ಸಾರಿಗೆ ಬಸ್​ಗಳು ರಸ್ತೆ ಇಳಿದಿಲ್ಲ. ಮುಷ್ಕರದ ಹಿನ್ನೆಲೆಯಲ್ಲಿ ನಿನ್ನೆ ಬಿಎಂಟಿಸಿ ಬಸ್​ಗಳ ಬದಲಾಗಿ ಖಾಸಗಿ ಬಸ್​ಗಳನ್ನು ರಸ್ತೆಗೆ ಇಳಿಸಿದ್ದ ಸಾರಿಗೆ ಇಲಾಖೆ ಇಂದು ತರಬೇತಿ ಚಾಲಕರ ಮೂಲಕ ಬಿಎಂಟಿಸಿ ಬಸ್​ಗಳ ಸಂಚಾರ ಆರಂಭಿಸುವ ಸಾಧ್ಯತೆಯೂ ಇದೆ.

    ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ 9 ಭರವಸೆಗಳು:

    1) ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ.

    2) ಕೋವಿಡ್ 19ನಿಂದ ಸಾವಿಗೀಡಾದರೆ 30 ಲಕ್ಷ ಪರಿಹಾರ‌.

    3) ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ.

    4) ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ.

    5) ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ತರುವುದು.

    6) ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ.

    7) ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ.

    8) ಎನ್ಐ ಎನ್ ಐಎನ್ಸಿ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ.

    9) ವೇತನ ಪರಿಷ್ಕರಣೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಶಿಫಾರಸು ಪರಿಗಣನೆ ( ಸರ್ಕಾರದ ಆರ್ಥಿಕ ಅಂಶ ಪರಿಗಣಿಸಿ ತೀರ್ಮಾನ)
    Published by:Sushma Chakre
    First published: