ಬೆಂಗಳೂರು (ಏ. 14): ಕಳೆದ 8 ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇಂದು ಕೂಡ ಮುಂದುವರೆದಿದೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ನೌಕರರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಖಾಸಗಿ ಬಸ್ಗಳು ಹಾಗೂ ಕ್ಯಾಬ್ ಕಂಪನಿಗಳಿಗೆ ಹೆಚ್ಚುವರಿಯಾಗಿ ಸಂಚಾರ ಮಾಡಲು ಸರ್ಕಾರ ಸೂಚಿಸಿದೆ. ಆದರೆ, ಕಳೆದ 8 ದಿನಗಳ ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 146 ಕೋಟಿ ರೂ. ನಷ್ಟವಾಗಿದೆ!
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ರಾಜ್ಯ ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ಆದಾಯ ನಷ್ಟವಾಗಿದೆ. ಕಳೆದ ಎಂಟು ದಿನದಿಂದ ಸಾರಿಗೆ ನಿಗಮಗಳಿಗೆ ಬರೋಬ್ಬರಿ 146 ಕೋಟಿ ಆದಾಯ ನಷ್ಟವಾಗಿದೆ. ನಾಲ್ಕು ಸಾರಿಗೆ ನಿಗಮಗಳಿಂದ ಪ್ರತಿದಿನ 17 ಕೋಟಿ ರೂ. ಆದಾಯ ಸಿಗುತ್ತಿತ್ತು. ಕೆಎಸ್ಆರ್ಟಿಸಿಗೆ ನಿತ್ಯ ಪ್ರತಿದಿನ 7 ಕೋಟಿ ರೂ. ಆದಾಯ ಹರಿದುಬರುತ್ತಿತ್ತು. ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಆದಾಯ ಸಿಗುತ್ತಿತ್ತು. ಆದರೆ, ಯುಗಾದಿ ಹಬ್ಬದ ಸಮಯದಲ್ಲೇ ನೌಕರರು ಮುಷ್ಕರ ಹೂಡಿರುವುದರಿಂದ ಸರ್ಕಾರಕ್ಕೆ ಕಳೆದ ಎರಡು ದಿನಗಳಲ್ಲಿ 44 ಕೋಟಿ ನಷ್ಟವಾಗಿದೆ.
ಇನ್ನು, ಬಿಎಂಟಿಸಿ ನಿತ್ಯ ಕಾರ್ಯಾಚರಣೆಯ ಆದಾಯ 3 ಕೋಟಿ ರೂ., ವಾಯುವ್ಯ ಸಾರಿಗೆ ನಿಗಮದ ನಿತ್ಯ ಆದಾಯ 3.5 ಕೋಟಿ ರೂ., ಈಶಾನ್ಯ ಸಾರಿಗೆ ನಿಗಮದ ನಿತ್ಯದ ಆದಾಯ 3.5 ಕೋಟಿ ರೂ. ಇರುತ್ತಿತ್ತು. ಹೀಗಾಗಿ, ಕಳೆದ ಎಂಟು ದಿನಗಳಲ್ಲಿ ಸಾರಿಗೆ ನಿಗಮಗಳಿಗೆ ಬರೋಬ್ಬರಿ 146 ಕೋಟಿ ರೂ. ಆದಾಯಕ್ಕೆ ಹೊಡೆತ ಬಿದ್ದಿದೆ.
ಇದನ್ನೂ ಓದಿ: KSRTC BMTC Strike: 8ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಮೆಜೆಸ್ಟಿಕ್ನಲ್ಲಿ ಖಾಸಗಿ ಬಸ್ಗಳ ದರ್ಬಾರ್
ಸಾರಿಗೆ ನೌಕರರ ಮುಷ್ಕರದಿಂದಾಗಿ ನಷ್ಟದಲ್ಲಿರುವ ನಿಗಮಗಳಿಗೆ ಇನ್ನಷ್ಟು ನಷ್ಟ ಹೆಚ್ಚಾಗಿದೆ ಎಂದು ಕೆಎಸ್ಆರ್ಟಿಸಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ಮುಷ್ಕರ ಮಾಡಿದ್ದ ಸಾರಿಗೆ ನೌಕರರ ಮುಷ್ಕರ ಈಗ 8ನೇ ದಿನಕ್ಕೆ ಕಾಲಿಟ್ಟಿದೆ. ಮತ್ತೆ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭವಾಗಿದ್ದು, ಆರನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದಿದ್ದಾರೆ. ಇವತ್ತೂ ಕೂಡ ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿಯಾಗಿದ್ದು, ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ಭರಾಟೆ ಜೋರಾಗಿದೆ.
ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ 9 ಭರವಸೆಗಳು:
1) ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ.
2) ಕೋವಿಡ್ 19ನಿಂದ ಸಾವಿಗೀಡಾದರೆ 30 ಲಕ್ಷ ಪರಿಹಾರ.
3) ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ.
4) ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ.
5) ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ತರುವುದು.
6) ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ.
7) ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ.
8) ಎನ್ಐ ಎನ್ ಐಎನ್ಸಿ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ.
9) ವೇತನ ಪರಿಷ್ಕರಣೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಶಿಫಾರಸು ಪರಿಗಣನೆ ( ಸರ್ಕಾರದ ಆರ್ಥಿಕ ಅಂಶ ಪರಿಗಣಿಸಿ ತೀರ್ಮಾನ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ