KSRTC Strike: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರ ಪ್ರತಿಭಟನೆ; ಏ. 7ಕ್ಕೆ ಬಸ್ ಸಂಚಾರ ಬಂದ್

KSRTC Strike: ತಮ್ಮ 9 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಇಂದಿನಿಂದ ವಿಭಿನ್ನ ಧರಣಿ ನಡೆಸಲಿದ್ದಾರೆ. ಏ. 7ರಂದು ಎಲ್ಲ ಸಾರಿಗೆ, ಬಸ್​ ಸಂಚಾರ ಸ್ತಬ್ಧವಾಗಲಿದೆ.

ಕೆಎಸ್​ಆರ್​ಟಿಸಿ

ಕೆಎಸ್​ಆರ್​ಟಿಸಿ

  • Share this:
    ಬೆಂಗಳೂರು (ಏ. 1): ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಇನ್ನೂ ಈಡೇರಿಸದ ಹಿನ್ನೆಲೆಯಲ್ಲಿ ಇಂದಿನಿಂದ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಚಳುವಳಿ ನಡೆಸಲಿದ್ದಾರೆ. ತಮ್ಮ 9 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ವಿಭಿನ್ನ ಧರಣಿ ನಡೆಸಲಿದ್ದಾರೆ. ಏ. 7ರಂದು ಎಲ್ಲ ಸಾರಿಗೆ, ಬಸ್​ಗಳು ಸ್ತಬ್ಧವಾಗಲಿದ್ದು, ಇಂದಿನಿಂದಲೇ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಸಮರ ಸಾರಿದ್ದಾರೆ.

    ಇಂದು ನಾಲ್ಕು ನಿಗಮದ ಡಿಪೋಗಳಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಸಾರಿಗೆ ನೌಕರರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದು, ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಚಳುವಳಿ ನಡೆಯಲಿದೆ.

    ಇಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ. ಏಪ್ರಿಲ್ 2ರಂದು ಬೆಂಗಳೂರಿನ ಸರ್ಕಲ್ ಗಳಲ್ಲಿ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ- ಬೋಂಡ ಮಾರಾಟ ಮಾಡಲಿದ್ದಾರೆ. ಏಪ್ರಿಲ್ ‌3ರಂದು ನೌಕರರು ಹಾಗೂ ಅವರ ಕುಟುಂಬದವರೊಂದಿಗೆ ನಗರಗಳ ಸರ್ಕಲ್ ಗಳಲ್ಲಿ ಮಾನವ ಸರಪಳಿ ನಿರ್ಮಿಸಿ, ಭಿತ್ತಿಪತ್ರ ಪ್ರದರ್ಶನ ಮಾಡಲಿದ್ದಾರೆ.

    ಇದನ್ನೂ ಓದಿ: Ramesh Jarkiholi CD Case: ಸಿಡಿ ಯುವತಿಯಿಂದ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರದ ಆರೋಪ; ಎಸ್​ಐಟಿಯಿಂದ ಇಂದು ಸ್ಥಳ ಮಹಜರು

    ಏಪ್ರಿಲ್ 4ರಂದು ಸಾರ್ವಜನಿಕರಿಗೆ ಕರಪತ್ರ ಹಂಚಲಿರುವ ಸಾರಿಗೆ ನೌಕರರು ಏಪ್ರಿಲ್ 5ರಂದು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಏಪ್ರಿಲ್ 6ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಏಪ್ರಿಲ್ 7ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಲಿದ್ದಾರೆ. ಇಂದಿನಿಂದ ಏಪ್ರಿಲ್ 7ರವರೆಗೆ ಸಾರಿಗೆ ನೌಕರರ ಪ್ರತಿಭಟನೆ ನಡೆಯಲಿದೆ.

    ಸಾರಿಗೆ ನೌಕರರ  ಬೇಡಿಕೆಗಳೇನು?:

    ನಿಗದಿತ ಸಮಯಕ್ಕೆ ಮಾಸಿಕ ವೇತನ ಪಾವತಿಸಬೇಕು ಮತ್ತು ಬಾಕಿ ವೇತನ ತಕ್ಷಣ ಬಿಡುಗಡೆಗೊಳಿಸಬೇಕು. ಷರತ್ತುಗಳಿಲ್ಲದೆ ಕಡ್ಡಾಯವಾಗಿ ವಾರದ ರಜೆ ನೀಡಬೇಕು. ಕಡಿತ ಮಾಡಿದ ರಜೆಗಳನ್ನು ವಾಪಾಸ್ ಕೊಡಬೇಕು. ಪೂರ್ಣ ಪ್ರಮಾಣದಲ್ಲಿ 4 ಪಾಳಿಗಳಲ್ಲಿ ಬಸ್ ಕಾರ್ಯಾಚರಣೆ ಮಾಡಬೇಕು. ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯ ಕೆಲಸಕ್ಕೆ ಆದ್ಯತೆ ನೀಡಬೇಕು. ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್​ ಪಡೆಯುವ ಯೋಜನೆಯನ್ನು ಕೈಬಿಡಬೇಕು ಎಂಬಿತ್ಯಾದಿ 9 ಪ್ರಮುಖ ಬೇಡಿಕೆಗಳನ್ನು ಸಾರಿಗೆ ನೌಕರರು ಸರ್ಕಾರದ ಮುಂದಿಟ್ಟಿದ್ದಾರೆ.

    ಸಾರಿಗೆ ನೌಕರರು ರಾಜ್ಯ ಸರ್ಕಾರದ ಮುಂದಿಟ್ಟಿದ್ದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಆ ಭರವಸೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಇಂದು ಸಾರಿಗೆ ನೌಕರರು ಮತ್ತೆ ರಸ್ತೆಗಿಳಿದಿದ್ದಾರೆ. ಹೀಗಾಗಿ, ಸಾರಿಗೆ ನೌಕರರಿಗೂ ಸರ್ಕಾರ ಎಚ್ಚರಿಕೆಯನ್ನು ರವಾನಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ನೌಕರರಿಗೆ ವೇತನ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದೆ.
    Published by:Sushma Chakre
    First published: