ನಾಳೆಯೂ ಮುಂದುವರೆಯಲಿದೆ ಸಾರಿಗೆ ನೌಕರರ ಮುಷ್ಕರ; ಮಾತುಕತೆಗೆ ಬಾರದೇ ಇದ್ದರೆ ಎಸ್ಮಾ ಜಾರಿ ಸುಳಿವು ನೀಡಿದ ಸಚಿವರು

ksrtc bmtc employees strike: ಈಗಾಗಲೇ ಕೊರೋನಾದಿಂದ ಬಹಳಷ್ಟು ಜನ ನೊಂದಿದ್ದಾರೆ. ಮುಷ್ಕರದಿಂದ ಪ್ರಯಾಣಿಕರಿಗೆ , ಸಾರ್ವಜನಿಕರಿಗೆ ತೊಂದರೆ ಆಗಬಾರದು. ಕೂಡಲೇ ಮುಷ್ಕರ ಕೈ ಬಿಟ್ಟು, ಮಾತುಕತೆಗೆ ಬನ್ನಿ- ಸವದಿ

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

 • Share this:
  ಬೆಂಗಳೂರು (ಡಿ. 11): ತಮ್ಮನ್ನು ಸರ್ಕಾರಿ ನೌಕರರನ್ನಾಗಿ ನೇಮಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಾರಿಗೆ ನೌಕರರು ಮುಂದಾಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಾರಿಗೆ ನೌಕರರು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದರು. ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರಿಗೆ ಸಚಿವರು ಸೇರಿದಂತೆ ಸಿಎಂ ಬಿಎಸ್​ ಯಡಿಯೂರಪ್ಪ ಚಿಂತೆಗೆ ಒಳಗಾಗಿದ್ದು, ಒಂದರ ಹಿಂದೆ ಒಂದರಂತೆ ಸಭೆ ನಡೆಸುತ್ತಿದ್ದಾರೆ. ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗಳೊಂದಿಗೆ ಮಾತುಕತೆಗೆ ಇನ್ನು ಸರ್ಕಾರದಿಂದ ಕರೆ ಬಂದಿಲ್ಲ. ಈ ಹಿನ್ನಲೆ  ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಬಳಿಕ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಮಾತುಕತೆಗೆ ಆಹ್ವಾನಿಸಿದ್ದು, ಒಂದು ವೇಳೆ ಪ್ರತಿಭಟನೆ ಮುಂದುವರೆಸಿದರೆ, ಎಸ್ಮಾ ಜಾರಿ ಮಾಡುವ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. 

  ಈ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್​, ಸಿಬ್ಬಂದಿಗಳು ಸಾರಿಗೆ ಇಲಾಖೆ ಬಂದ್ ಅಗದ ರೀತಿಯಲ್ಲಿ ಸರ್ಕಾರ ನೋಡಿಕೊಳ್ಳಬಹುದಿತ್ತು. ಬಂದ್ ಮುಂದೂಡಿಸುವ ಸಾಧ್ಯತೆ ಇತ್ತು. ಇಂದು ನಡೆದ ಸಭೆಗೆ ಬಂದ್ ಗೆ ಕರೆ ಕೊಟ್ಟವರನ್ನ ಕರೆಯದೇ ಮನೆಯಲ್ಲಿ ಇದ್ದವರನ್ನ ಕರೆದರು. ಈಗ ನಾನು ಬಿಡುವಾಗಿದ್ದೀನಿ ಮಾತುಕತೆ ಮಾಡೋಣ ಎನ್ನುವ ರೀತಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಿದ್ದಾರೆ. ಸಭೆ ಮಾಡುವ ಮುನ್ನ ಶಿಷ್ಟಾಚಾರ ಇದೆ. ಸಾರಿಗೆ ಇಲಾಖೆ ಸಂಪೂರ್ಣ ಸ್ಥಗಿತಗೊಳಿಸಿ ಶಾಂತಿಯಿಂದ ನಡೆದುಕೊಳ್ಳಲು ಕರೆ ನೀಡಲಾಗಿದೆ. ನಾಳೆ ಅನಿರ್ದಿಷ್ಟವಾದಿ ಬಂದ್​ ಮುಂದುವರೆಯಲಿದೆ. ಸರ್ಕಾರ ನಮ್ಮ ಜೊತೆ ಸಭೆ ನಡೆಸಬೇಕು. ಬೇಡಿಕೆ ಈಡೇರಿಸಿದರೆ ಮುಷ್ಕರ ವಾಪಸ್ ಪಡೆಯುತ್ತೇವೆ. ಸರ್ಕಾರಿ ನೌಕರರು ಎಂದು ಘೋಷಣೆ ಆಗಬೇಕು. ಕೋವಿಡ್ ವಾರಿಯರ್ ರೀತಿಯಲ್ಲಿ ಕೋರೊನಾದಿಂದ ಮೃತಪಟ್ಟವರಿಗೆ 30 ಲಕ್ಷ ಕೊಟ್ಟಿದ್ದಾರೆ ಒಳ್ಳೆಯದು. ನಮ್ಮ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎನ್ನುವುದರ ಮೇಲೆ ಮುಂದಿನ ಹೋರಾಟ ರೂಪುಗೊಳ್ಳಲಿದೆ.

  ಚಿಂತೆಯಲ್ಲಿ ಸವದಿ

  ರಾಜ್ಯ ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ  ಸಾರಿಗೆ ಸಚಿವ ಸವದಿ ಚಿಂತಿತರಾಗಿದ್ದಾರೆ. ಗೊಂದಲವನ್ನು ಬಗೆಹರಿಸುವಂತೆ ಸಿಎಂ  ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.  ಸಿಎಂ ಜೊತೆಗಿನ ಸಭೆ ಬಳಿಕ ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದರು. ಬಿಎಂಟಿಸಿ ಎಂಡಿ ಶಿಖಾ ಮತ್ತು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಜೊತೆಗೆ ಸವದಿ ಸಭೆ ನಡೆಸಿದರು.

  ಗೃಹ ಸಚಿವರೊಂದಿಗೆ ಸಿಎಂ ಸಭೆ

  ಸಾರಿಗೆ ನೌಕರರ ದಿಢೀರ್​ ಮುಷ್ಕರದ ಹಿನ್ನಲೆ ಗೃಹ ಸಚಿವ ಬಸವರಾಜ್​ ಬೊಮ್ಮಯಿ ಅವರೊಂದಿಗೆ ಸಿಎಂ ಚರ್ಚೆ ನಡೆಸಿದ್ದಾರೆ. ಸಚಿವ ಸವದಿ ಬಳಿಕ ಗೃಹ ಸಚಿವರೊಂದಿಗೂ ಸಿಎಂ ಸಭೆ ನಡೆಸಿದ್ದು, ಕುತೂಹಲ ಮೂಡಿಸಿದೆ.

  ಮಾತಿಗೆ ಸ್ಪಂದನೆ ಇಲ್ಲ; ಸವದಿ

  ರಾಜ್ಯ ಸಾರಿಗೆ ನೌಕರರ ಪ್ರತಿಭಟನೆ ಕುರಿತು ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಯಶವಂತಪುರಕ್ಕೆ ನಂದೀಶ್​ ರೆಡ್ಡಿ ಕಳಿಸಿದ್ದೆ. ಸಾರಿಗೆ ನೌಕರರು ನಮ್ಮ ಮಾತಿಗೆ ಸ್ಪಂದಿಸಿಲ್ಲ. ಚಾಲಕರು, ನಿರ್ವಾಹಕರು ಕೆಲಸ ಕಾರ್ಯ ಬಿಟ್ಟು ಸಂಚಾರ ಸ್ಥಗಿತಗೊಳಿಸಿದ್ದಾರೆ. ನಾಲ್ಕೂ ಟ್ರೇಡ್ ಯೂನಿಯನ್ ಗಳ ಜೊತೆ ಚರ್ಚೆ ಮಾಡಿದ್ದೇನೆ. ಬೆಳಿಗ್ಗೆಯಿಂದ ಇಲ್ಲಿವರೆಗೂ ನಡೆದ ಮಾತುಕತೆ ಮಾಹಿತಿ ಸಿಎಂ‌ ಗೆ ತಿಳಿಸಿದ್ದೇನೆ. ನಾನು ನಾಳೆಯೂ ಬೆಂಗಳೂರಲ್ಲಿ ಇರುತ್ತೇನೆ. ಮಾತುಕತೆಗೆ ಯಾವಾಗ ಬೇಕಾದರೂ ಬರಬಹುದು. ನಿಮ್ಮ ಮನವಿ ಪಡೆಯಲು ಸಿದ್ದನಿದ್ದೇನೆ. ಕೂಡಲೇ ಹೋರಾಟ ಕೈ ಬಿಡಿ ಎಂದು ಮನವಿ ಮಾಡಿದರು.

  ಈಗಾಗಲೇ ಕೊರೋನಾದಿಂದ ಬಹಳಷ್ಟು ಜನ ನೊಂದಿದ್ದಾರೆ. ಮುಷ್ಕರದಿಂದ ಪ್ರಯಾಣಿಕರಿಗೆ , ಸಾರ್ವಜನಿಕರಿಗೆ ತೊಂದರೆ ಆಗಬಾರದು. ಕೂಡಲೇ ಮುಷ್ಕರ ಕೈ ಬಿಟ್ಟು, ಮಾತುಕತೆಗೆ ಬನ್ನಿ ಎಂದು ಆಹ್ವಾನಿಸಿದರು.

  ಎಸ್ಮಾ ಜಾರಿ ಸುಳಿವು

  ಇದೇ ವೇಳೆ ಮಾತುಕತೆ ಬರದೆ  ಮುಷ್ಕರ ಮುಂದುವರೆಸಿದರೆ ಎಸ್ಮಾ ಜಾರಿಗೊಳಿಸುವ ಸೂಚನೆ ನೀಡಿದರು.  ಕೋಡಿಹಳ್ಳಿ ಚಂದ್ರಶೇಖರ್ ಗೂ ಸಾರಿಗೆ ನೌಕರರಿಗೂ ಸಂಬಂಧವಿಲ್ಲ. ನೌಕರರ ಪರ ಬಂದು ಕಾಳಜಿ ತೋರಿಸಿದ್ದಾರೆ. ಅವರು ರೈತಪರ ಹೋರಾಟ ಮಾಡುವವರು.  ಈ ಬಗ್ಗೆ ನಮಗೆ ಅಸಮಾಧಾನ ಇಲ್ಲ. ಮುಷ್ಕರ ಮಾಡಬೇಕಾದರೆ ನೋಟೀಸ್ ಕೊಡಬೇಕು. ನೋಟೀಸ್ ಕೊಟ್ಟು, ಬೇಡಿಕೆಗಳನ್ನು ಮುಂದಿಡಬಹುದಿತ್ತು. ಆದರೆ ನೋಟೀಸ್ ಕೊಟ್ಟಿಲ್ಲ. ಕಾನೂನು ಇದೇ ಜಾರಿ ಮಾಡಲ್ಲ ಎಂದು ಇದೇ ವೇಳೆ ತಿಳಿಸಿದರು.
  Published by:Seema R
  First published: