ಕೆಎಸ್​ಆರ್​​ಟಿಸಿ, ಬಿಎಂಟಿಸಿ ನೌಕರರ ಮುಷ್ಕರ; ಯೂನಿಯನ್ ಲೀಡರ್​ಗಳ ಸಭೆ ಕರೆದ ಡಿಸಿಎಂ ಲಕ್ಷ್ಮಣ ಸವದಿ

KSRTC BMTC Employees Strike: ಕೊರೋನಾ ಸಂದರ್ಭದಲ್ಲಿ ಸಾರಿಗೆ ನೌಕರರಿಗೆ ನಾಲ್ಕು ತಿಂಗಳು ಸಂಬಳ ನೀಡಿದ್ದೇವೆ. ಸಿಎಂ ಜತೆ ಚರ್ಚೆ ಮಾಡಿ ನಮ್ಮ ನೌಕರರಿಗೆ ಸಂಬಳ ಕೊಡಿಸಿದ್ದೇವೆ. ಇದನ್ನ ನಮ್ಮ ನೌಕರರು ತಿಳಿದುಕೊಳ್ಳಬೇಕು. ಈಗ ಮುಷ್ಕರವನ್ನು ವಾಪಾಸ್ ಪಡೆಯಿರಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಬೆಂಗಳೂರು (ಡಿ. 11): ತಮ್ಮನ್ನು ಸರ್ಕಾರಿ ನೌಕರರನ್ನಾಗಿ ನೇಮಿಸುವಂತೆ ಆಗ್ರಹಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಇಂದು ಸರ್ಕಾರಿ ಬಸ್​ಗಳ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಬೇಡಿಕೆ ಸಂಬಂಧ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಗೌಪ್ಯ ಸಭೆ ನಡೆಸಿದ್ದಾರೆ. 

ಮಾಧ್ಯಮಗಳಿಗೆ ಮಾಹಿತಿ ನೀಡದೆ ಸಭೆ ನಡೆಸುತ್ತಿರುವ ಸಚಿವ ಲಕ್ಷ್ಮಣ ಸವದಿ ಸಭೆ ಬಗ್ಗೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಬೆಂಗಳೂರಿನ ಜಯಮಹಲ್ ಬಳಿಯ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸುತ್ತಿರುವ ಸಚಿವ ಸವದಿ ಸಾರಿಗೆ ನಿಗಮದ ಅಧಿಕಾರಿಗಳ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ಅವರು, 12 ಗಂಟೆಗೆ ಯೂನಿಯನ್ ನಾಯಕರನ್ನು ಕರೆಸಿ, ಚರ್ಚೆ ನಡೆಸುತ್ತೇನೆ. ಈಗಾಗಲೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ನೌಕರರು ಮುಷ್ಕರವನ್ನು ನಿಲ್ಲಿಸಬೇಕು ಎಂದಿದ್ದಾರೆ.

ಇಂದು ಬೆಳಗ್ಗೆ ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಇಂದು ಅಧಿಕಾರಿಗಳ ಸಭೆ ಮಾಡಿದ ಬಳಿಕ ನೌಕರರ ಜೊತೆ ಸಭೆ ಮಾಡುತ್ತೇನೆ. ಕೋವಿಡ್ ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಇಂತಹ ಸಂದರ್ಭದಲ್ಲಿ ಜನರಿಗೆ ತೊಂದರೆ ಕೊಡೋದು ಬೇಡ. ಸಾರಿಗೆ ನೌಕರರು ಪ್ರತಿಭಟನೆ ಕೈ ಬಿಟ್ಟು, ಬೇಡಿಕೆ ಬಗ್ಗೆ ಕೂತು ಚರ್ಚೆ ಮಾಡಬೇಕು. ಒಂದು ನಿಗಮವನ್ನು ಸಾರಿಗೆ ನಿಗಮ ಅಂತ ಘೋಷಣೆ ಮಾಡಿದರೆ ಎಲ್ಲ ನಿಗಮಗಳನ್ನೂ ಘೋಷಣೆ ಮಾಡುವ ಒತ್ತಾಯ ಬರುತ್ತದೆ. ಇದರಿಂದ ಸರ್ಕಾರಕ್ಕೆ ಒಂದು ದೊಡ್ಡ ಸವಾಲು ಎದುರಾಗುತ್ತದೆ. ಹೀಗಾಗಿ, ತಕ್ಷಣಕ್ಕೆ ಈ ಬಗ್ಗೆ ನಿರ್ಧಾರ ಮಾಡೋಕೆ ಆಗುವುದಿಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಿ ನಿರ್ಧಾರ ಮಾಡಬೇಕು. ನೌಕರರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದರು.

ಇದನ್ನೂ ಓದಿ: ಬಸ್ ಪ್ರಯಾಣಿಕರೇ ಗಮನಿಸಿ!; ಇಂದು KSRTC, BMTC ಸೇರಿದಂತೆ 4 ಸಾರಿಗೆ ನೌಕರರ ಮುಷ್ಕರ

ಸಾರಿಗೆ ನೌಕರರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಸಮಸ್ಯೆ ವಿಚಾರವಾಗಿ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಕೋವಿಡ್ ಸಂದರ್ಭದಲ್ಲಿ ಎರಡು ತಿಂಗಳು ಬಂದ್ ಇತ್ತು. ಆಗ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಸಮಸ್ಯೆ ಆಗುತ್ತದೆ. ಆದರೆ ಸಾರ್ವಜನಿಕರೂ ನಮ್ಮ ಜೊತೆ ಕೈ ಜೋಡಿಸಬೇಕು. ಏಕ ಕಾಲದಲ್ಲಿ ಎಲ್ಲವನ್ನೂ ಮಾಡೋಕೆ ಆಗುವುದಿಲ್ಲ. ಬದಲಿ ವ್ಯವಸ್ಥೆ ಮಾಡುತ್ತೇವೆ, ಆದರೆ ಅದಕ್ಕೆ ಜನರು ಸಹಕಾರ ಕೊಡಬೇಕು. ಕೊರೋನಾ ಸಂದರ್ಭದಲ್ಲಿ ಸಾರಿಗೆ ನೌಕರರಿಗೆ ನಾಲ್ಕು ತಿಂಗಳು ಸಂಬಳ ನೀಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಸಂಬಳ ನೀಡಿಲ್ಲ. ಸಿಎಂ ಜತೆ ಚರ್ಚೆ ಮಾಡಿ ನಮ್ಮ ನೌಕರರಿಗೆ ಸಂಬಳ ಕೊಡಿಸಿದ್ದೇವೆ. ಇದನ್ನ ನಮ್ಮ ನೌಕರರು ತಿಳಿದುಕೊಳ್ಳಬೇಕು. ಈಗ ಮುಷ್ಕರವನ್ನು ವಾಪಾಸ್ ಪಡೆಯಿರಿ. ಸರ್ಕಾರ ನಿಮ್ಮ ಜತೆ ಇದೆ ಎಂದು ಮನವಿ ಮಾಡಿದ್ದಾರೆ.

ನಿನ್ನೆಯ ಅಧಿವೇಶನದಲ್ಲಿ ನಾವೆಲ್ಲರೂ ಸದನದಲ್ಲಿ ಇರಬೇಕಿತ್ತು. ಎಲ್ಲಾ ಸದಸ್ಯರು ಇದ್ದು ಬಿಲ್ ಪಾಸ್ ಮಾಡಬೇಕಿತ್ತು. ನಮಗೆ ಮಸೂದೆಗಳನ್ನು ಪಾಸ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ನಾನು ನಿನ್ನೆ ಸದನದಲ್ಲಿ ಇದ್ದೆ. ಅದಕ್ಕಾಗಿ ಪ್ರತಿಭಟನೆ ಸ್ಥಳಕ್ಕೆ ಹೋಗೋಕೆ ಆಗಿರಲಿಲ್ಲ. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ನೌಕರರು ಮುತ್ತಿಗೆ ಹಾಕುವ ಕೆಲಸ ಮಾಡಿದರು. ಅದಕ್ಕಾಗಿ ನಿಯಂತ್ರಿಸಲು ಹಾಗೂ ಮುಂದಿನ ಅನಾಹುತ ತಪ್ಪಿಸಲು ಪೊಲೀಸರು ಅವರನ್ನು ಬಂಧಿಸಿದರು. ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಇವತ್ತು ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.
Published by:Sushma Chakre
First published: