ಬೆಂಗಳೂರು: ಬೆಂಗಳೂರಿನ ಕೋರಮಂಗಲದ ಕೆಎಸ್‍ಆರ್‌ಪಿ ಮೈದಾನದಲ್ಲಿ ಕಳೆದ ಶುಕ್ರವಾರ ವೈದ್ಯರು, ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ ಬೆಂಗಳೂರು ಬೆಟಾಲಿಯನ್‍ನ 250 ಮಂದಿ ಸಿಬ್ಬಂದಿಯ ತೂಕವನ್ನು ಪರಿಶೀಲಿಸುವಾಗ, ಪ್ರತಿಯೊಬ್ಬ ಪೊಲೀಸ್ ಕೊಂಚ ಗಾಬರಿಯಿಂದಲೇ ತೂಕದ ಯಂತ್ರದ ಮೇಲೆ ನಿಂತಿದ್ದರು ! ಪೊಲೀಸರಿಗೆ ಗಾಬರಿಯೇ ಎಂದು ಅಚ್ಚರಿಪಡಬೇಡಿ. ಅದಕ್ಕೆ ಕಾರಣ ಇಲಾಖೆಯ ಒಂದು ಆದೇಶ..! ಹೌದು, ಆರೋಗ್ಯ ಶಿಬಿರದಲ್ಲಿ ನಡೆಸುವ ತಪಾಸಣೆಯಲ್ಲಿ ಯಾವುದೇ ಸಿಬ್ಬಂದಿ ಅತೀ ತೂಕ ಹೊಂದಿರುವುದು ಪತ್ತೆಯಾದಲ್ಲಿ, ಅಂತವರು ಒಂದು ವರ್ಷದ ಒಳಗೆ 10 ಕೆಜಿ ತೂಕವನ್ನು ಇಳಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ. ಅವರು ತೂಕ ಕಡಿಮೆ ಮಾಡಿಕೊಳ್ಳದಿದ್ದರೆ, ಅವರ ಭಡ್ತಿ ಸೇರಿದಂತೆ, ಇನ್ನುಳಿದ ಸೌಲಭ್ಯಗಳನ್ನು ತಡೆ ಹಿಡಿಯಲಾಗುವುದು ಎಂದು ಕೆಎಸ್‍ಆರ್‌ಪಿಯ ಅಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ, ಹೆಚ್ಚಿನ ಮಂದಿ ನಿತ್ಯವೂ 5 ಕಿ.ಮೀ ಓಡುತ್ತಿದ್ದರು ಮತ್ತು ಆಹಾರ ತಜ್ಞರು ನಿಗದಿ ಪಡಿಸಿದ ಕಡ್ಡಾಯ ಕ್ರಮಗಳನ್ನು ಅನುಸರಿಸಿದ್ದರು. ಅವರ ಫಲಿತಾಂಶ ಶನಿವಾರದೊಳಗೆ ಸಿಗಲಿದೆ. ಎರಡು ವರ್ಷಗಳ ಹಿಂದೆ, ರಾಜ್ಯದ ವಿಭಿನ್ನ ಬೆಟಾಲಿಯನ್‍ಗಳ 450 ಪೊಲೀಸರು ಅತೀ ತೂಕ ಹೊಂದಿರುವುದು ಪತ್ತೆಯಾಗಿತ್ತು. ಅವರಿಗೂ ಇದೇ ಕಾರ್ಯ ನೀಡಲಾಗಿತ್ತು. ಅವರಲ್ಲಿ 400 ಮಂದಿ ಪೊಲೀಸರು ಒಂದು ವರ್ಷದೊಳಗೆ ತೂಕ ಇಳಿಸಿಕೊಳ್ಳುವುದರಲ್ಲಿ ಸಫಲರಾಗಿದ್ದರು. ಇನ್ನುಳಿದ ಸುಮಾರು 50 ಮಂದಿ ವಿಫಲರಾಗಿದ್ದರು. ಅವರ ಭಡ್ತಿ ಮತ್ತು ಇನ್ನುಳಿದ ಸೌಲಭ್ಯಗಳನ್ನ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.
ಕೆಎಸ್‍ಆರ್ಪಿ ಸಿಬ್ಬಂದಿಯ ಪ್ರಾಥಮಿಕ ಆರೋಗ್ಯ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಕರ್ತವ್ಯ ನಿರತ ಸುಮಾರು 60 ಶೇಕಡಾ ಕೆಎಸ್‍ಆರ್ಪಿ ಸಿಬ್ಬಂದಿ ಸಾವು, ಮಧುಮೇಹ ಮತ್ತು ಹೃದಯಾಘಾತದಂತಹ ಆರೋಗ್ಯ ಸಮಸ್ಯೆಗಳ ಕಾರಣದಿಂದ ಸಂಭವಿಸುತ್ತದೆ ಮತ್ತು ಅವರಲ್ಲಿ ಹೆಚ್ಚಿನವರು ಅತೀ ತೂಕ ಹೊಂದಿದ್ದಾರೆ.
ಅವರುಗಳ ಆರೋಗ್ಯ ಉತ್ತಮವಾಗಿರಿಸಲು ಆರೋಗ್ಯ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದೆವು. ಆ ಶಿಬಿರಗಳಲ್ಲಿ ಕೆಎಸ್‍ಆರ್‌ಪಿ ಪೊಲೀಸರಲ್ಲಿ ಅತಿ ತೂಕ ಅತ್ಯಂತ ಸಾಮಾನ್ಯ ಮತ್ತು ಪ್ರಮುಖ ಸಮಸ್ಯೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದರು ಎಂದು ಅವರು ಹೇಳಿದರು.
ಎರಡು ವರ್ಷಗಳ ಹಿಂದೆ, ರಾಜ್ಯದೆಲ್ಲೆಡೆ ಕೆಎಸ್‍ಆರ್‌ಪಿ ಪೊಲೀಸರಲ್ಲಿ 50 ಮಂದಿ ಮದ್ಯಪಾನ ಮತ್ತು ತಂಬಾಕು ಸೇವನೆಯ ಚಟಕ್ಕೆ ದಾಸರಾಗಿರುವುದು ಕಂಡು ಬಂತು, ಅಂತವರನ್ನು ಡಿಅಡಿಕ್ಷನ್ ಸೆಂಟರ್‌ಗಳಿಗೆ ಕಳಿಸಿ, ಮೂರು ತಿಂಗಳುಗಳ ಕಾಲ ಚಿಕಿತ್ಸೆ ನೀಡಲಾಯಿತು.”5 ಮಂದಿಯನ್ನು ಹೊರತುಪಡಿಸಿ, ಉಳಿದವರು ಚಟವನ್ನು ಬಿಟ್ಟುಬಿಟ್ಟರು” ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ರಾಜ್ಯ ಕೆಎಸ್‍ಆರ್‌ಪಿಯಲ್ಲಿ ಒಟ್ಟು 10,500 ಸಿಬ್ಬಂದಿ ಇದ್ದಾರೆ, ಅವರಲ್ಲಿ 10,490 ಮಂದಿಗೆ ಕೋವಿಡ್ -19 ಲಸಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶನಿವಾರ ತಪಾಸಣೆಗೊಳಗಾದ 250 ಸಿಬ್ಬಂದಿಯ ಸಂಪೂರ್ಣ ಆರೋಗ್ಯ ವರದಿ ಶನಿವಾರ ಸಿಗಲಿದೆ. ಅದನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ