ಶಿವಮೊಗ್ಗ (ಮೇ. 20): ನಗರದ ಹೃದಯ ಭಾಗದಲ್ಲಿರುವ ಕೆಲವು ರಸ್ತೆಗಳಲ್ಲಿನ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಕೆಲವು ಪುಂಡರು ಪುಡಿ ಮಾಡಿ ಹಾನಿ ನಡೆಸಿರುವ ಘಟನೆ ನಡೆದಿದೆ. ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ಗಳ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಯಾರೋ ದುರುದ್ದೇಶ ಪೂರ್ವಕವಾಗಿ ಈ ಘಟನೆ ನಡೆಸಿದ್ದಾರೆ. ಘಟನೆ ಬೆಳಕಿಗೆ ಬಂದಾಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಘಟನೆ ಕುರಿತು ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ ಎಸ್ ಈಶ್ವರಪ್ಪ, ಇದು ಮುಸ್ಲಿಂ ಗೂಂಡಾಗಳಿಂದ ನಡೆದ ಕೃತ್ಯವಿರಬಹುದು ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಗರದ ಎಂಕೆಕೆ ರಸ್ತೆ, ಸಿದ್ಧಯ್ಯ ರಸ್ತೆ, ಗಾಂಧಿ ಬಜಾರ್, ಮಂಜುನಾಥ ಟಾಕೀಸ್ ರಸ್ತೆಗಳ ಮನೆ ಮುಂದೆ ನಿಲ್ಲಿಸಿದ ವಾಹನಗಳ ಮೇಲೆ ಯಾರೋ ಕಿಡಿಗೇಡಿಗಳು ಹಾನಿ ನಡೆಸಿದ್ದಾರೆ. ಮನೆ ಮುಂದೆ ನಿಂತಿದ್ದ ಕಾರುಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ. ನಗರದಲ್ಲಿ ಕೆಲ ಮುಸ್ಲಿಂ ಗೂಂಡಾಗಳು ಈ ಕೃತ್ಯ ನಡೆಸಿದ್ದಾರೆ. ನಾನು ಎಲ್ಲಾ ಮುಸ್ಲಿಂ ಗೂಂಡಾಗಳು ಎಂದು ಹೇಳಲು ಇಚ್ಚಿಸುವುದಿಲ್ಲ. ಕೆಲ ಮುಸ್ಲಿಂ ಗೂಂಡಾಗಳು ಆಗಾಗ್ಗೆ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮೂರ್ನಾಲ್ಕು ವರ್ಷಗಳ ಹಿಂದೆ ಸೀಗೆ ಹಟ್ಟಿ ಭಾಗದಲ್ಲಿ ಇದೇ ರೀತಿ ಆಟೋಗಳಿಗೆ ಹಾನಿ ಮಾಡಿ, ಬೆಂಕಿ ಹಚ್ಚಿದ್ದ ಘಟನೆ ನಡೆದಿದ್ದು, ಈ ವೇಳೆ ಪೊಲೀಸರು ಬಿಗಿ ಕ್ರಮ ಕೈಗೊಂಡರು. ಅಲ್ಲಂದ ಇಲ್ಲಿಯವರೆಗೆ ಈ ರೀತಿಯ ಘಟನೆ ಮರುಕಳಿಸಿರಲಿಲ್ಲ. ಆದರೆ, ಈಗ ಕೋವಿಡ್ನ ಸೋಂಕು ಹರಡುತ್ತಿರುವ ಈ ಹೊತ್ತಿನಲ್ಲಿ ನಿನ್ನೆ ರಾತ್ರಿ ಇದ್ದಕ್ಕಿಂದಂತೆ ಈ ಕೃತ್ಯ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಸಭೆ ನಡೆಸಲಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು. ನಗರವನ್ನು ಶಾಂತಿಯುತವಾಗಿ ಇಟ್ಟುಕೊಳ್ಳಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಇದನ್ನು ಓದಿ: ಪ್ರೆಗ್ನೆನ್ಸಿ ಪರೀಕ್ಷೆಯಂತೆ ಇನ್ಮುಂದೆ ಮನೆಯಲ್ಲಿಯೇ ನಡೆಸಬಹುದು ಕೊರೋನಾ ಟೆಸ್ಟ್; ಮಾರುಕಟ್ಟೆಗೆ ಬರಲಿದೆ ಕೋವಿಸೆಲ್ಫ್ ಕಿಟ್
ತಡ ರಾತ್ರಿ ಕಿಡಿಗೇಡಿಗಳು ಗಾಜುಗಳನ್ನು ಪುಡಿ ಪುಡಿ ಮಾಡುವಾಗ ಅಲ್ಲಿನ ಸ್ಥಳೀಯರೇ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ಶಾಹಿಲ್ ಖಾನ್ (21), ಮನ್ಸೂರ್ ಅಹಮದ್ (32) ಎಂದು ತಿಳಿದು ಬಂದಿದೆ
ಇದನ್ನು ಓದಿ: ತಾಯಿ ಕಳೆದುಕೊಂಡ ದುಃಖದಲ್ಲಿ ಖ್ಯಾತ ಸಿಂಗರ್ ಅರ್ಜಿತ್ ಸಿಂಗ್
ಇನ್ನು ಘಟನ ಕುರಿತು ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ, ಯಾರೋ ಕಿಡಿಗೇಡಿಗಳು ಕುಡಿದು, ಗಾಂಜಾ ಸೇವಿಸಿ ಈ ಕೃತ್ಯ ಎಸಗಿದ್ದಾರೆ ಎಂಬ ಚರ್ಚೆಯಾಗುತ್ತಿದೆ. ಆದರೆ, ಇದಕ್ಕೆ ಬೇರೆ ಪ್ರಮುಖ ಕಾರಣವಿದೆ. ಕಾರಣ ಈ ಹಿಂದೆ ಕೂಡ ಈ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ. ಈ ಬಗ್ಗೆ ತನಿಖೆ ಅವಶ್ಯಕತೆ ಇದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಅವಿರಹಿತ ಶ್ರಮವಹಿಸಿರುವಾಗ ಯಾರು ಈ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು. ಇದಕ್ಕೆ ಒಂದು ಶಾಶ್ವತ ಪರಿಹಾರ ಬೇಕಿದೆ ಎಂದು ಅವರು ಆಗ್ರಹಿಸಿದರು.
ಈ ಹಿಂದೆ ಕೂಡ ನಗರದಲ್ಲಿ ಈ ರೀತಿಯ ದುಷ್ಕೃತ್ಯಗಳು ನಡೆದಿದ್ದು, ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿಗೆ ಹಾನಿಯಾಗಿದೆ. 17 ಕಾರುಗಳು, 5 ಕ್ಕೂ ಹೆಚ್ಚು ಬೈಕು, ಒಂದು ಆಟೋಗೆ ಹಾನಿಯಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ನಡೆಸಿದ ಈ ಘಟನೆ ಗಂಭೀರ ಸ್ವರೂಪದ್ದಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ