ಶಿವಮೊಗ್ಗ: ಪುತ್ರ ಕಾಂತೇಶ್ (Kantesh Eshwarappa) ಅವರಿಗೆ ಟಿಕೆಟ್ ತಪ್ಪಿದರ ಬಗ್ಗೆ ಇಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ವರಿಷ್ಠರು ಚನ್ನಬಸಪ್ಪ (Channabasappa) ಅವರನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ಧ. ವರಿಷ್ಠರ ಆಯ್ಕೆಯನ್ನು ಯಾರು ಪ್ರಶ್ನೆ ಮಾಡುವ ಹಾಗೆ ಇಲ್ಲ. ಚನ್ನಬಸಪ್ಪ ಗೆಲ್ಲುವವರೆಗೂ ಸುಮ್ಮನೆ ಕೂರುವುದಿಲ್ಲ. ನಾನೇ ಚುನಾವಣೆಗೆ ನಿಂತ ಹಾಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು .
ಕಾಂತೇಶ್ ಗೆ ಮುಂದಿನ ದಿನಗಳಲ್ಲಿ ಅವನ ಕಾರ್ಯವೈಖರಿ ನೋಡಿ ಪಕ್ಷ ಸೂಕ್ತಮಾನ ಕೊಡುವ ಬಗ್ಗೆ ನಿರ್ಧಾರ ಮಾಡುತ್ತದೆ. ಇವತ್ತಿಗೆ ಇದು ಮುಗಿದು ಹೋಗಿಲ್ಲ. ಪಕ್ಷದ ನಾಯಕರು ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಮಾಡಿರುತ್ತಾರೆ ಎಂದು ಹೈಕಮಾಂಡ್ ತೀರ್ಮಾನವನ್ನು ಸಮರ್ಥಿಸಿಕೊಂಡರು.
ಆಯನೂರು ಮಂಜುನಾಥ್ ಜೆಡಿಎಸ್ ಸೇರ್ಪಡೆ ವಿಚಾರ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಜೆಡಿಎಸ್ ಸಿದ್ದಾಂತ ಮೆಚ್ಚಿ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಕಾಂತೇಶ್ ಪ್ರತಿಕ್ರಿಯೆ
ಬಿಜೆಪಿ ಪಕ್ಷ ನಮ್ಮ ತಂದೆಗೆ 37 ವರ್ಷ ಅವಕಾಶ ನೀಡಿದೆ. ಬೂತ್ ಕಾರ್ಯಕರ್ತನಿಂದ ಹಿಡಿದು ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಚನ್ನಬಸಪ್ಪ ಅವರು ಪ್ರಾಮಾಣಿಕ ಕಾರ್ಯಕರ್ತ. ನಮ್ಮ ತಂದೆಯವರ 7 ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಈ ಬಾರಿ ಪಕ್ಷದ ಅಭ್ಯರ್ಥಿಯಾಗಿದ್ದು, ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಕಾಂತೇಶ್ ಹೇಳಿದ್ದಾರೆ.
ಈಶ್ವರಪ್ಪ ಅಭಿಮಾನಿಗಳ ಪ್ರಶ್ನೆ
ಚುನಾವಣಾ ನಿವೃತ್ತಿ ಘೋಷಿಸಿರುವ ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಕ್ಷೇತ್ರದ ಟಿಕೆಟ್ಗಾಗಿ ಆಯನೂರು ಮಂಜುನಾಥ್ ಮತ್ತು ಕಾಂತೇಶ್ ಪ್ರಯತ್ನಿಸಿದ್ದರು. ಪುತ್ರನಿಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಸಹ ಲಾಬಿ ನಡೆಸಿದರು. ಮೊದಲೆರಡು ಪಟ್ಟಿ ಬಿಡುಗಡೆ ಬಳಿಕ ಕಾಂತೇಶ್ ಟಿಕೆಟ್ ಗಾಗಿ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದರು.
ಇದನ್ನೂ ಓದಿ: HD Devegowda: ಮಗನನ್ನ ಸಿಎಂ ಮಾಡಲು ದೈವದ ಮೊರೆ ಹೋದ ಮಾಜಿ ಪ್ರಧಾನಿ
ಚುನಾವಣೆ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರಗೆ ಶಿಕಾರಿಪುರದ ಟಿಕೆಟ್ ನೀಡಲಾಗಿದೆ. ವಿಜಯನಗರದಲ್ಲಿಯೂ ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ. ಆದ್ರೆ ಕಾಂತೇಶ್ಗೆ ಟಿಕೆಟ್ ನೀಡಿಲ್ಲ ಯಾಕೆ ಎಂದು ಕೆಎಸ್ ಈಶ್ವರಪ್ಪ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ