KS Eshwarappa: ಶಾ ಹೇಳಿಕೆ ವಿರೋಧಿಸಿಲ್ಲ ಆದರೆ ಸಾಮೂಹಿಕ ನಾಯಕತ್ವಕ್ಕೆ ಸಹಮತವಷ್ಟೇ: ಈಶ್ವರಪ್ಪ

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗಬೇಕು. ಇದು ಬಹಳಷ್ಟು ಜನರ ಅಭಿಪ್ರಾಯ ಸಹ ಆಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ರಾಜ್ಯ ಬಿಜೆಪಿ ಅಧ್ಯಕ್ಷ. ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲರ ಮುಂದಾಳತ್ವ ಇರಲಿ.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

 • Share this:
  ನವದೆಹಲಿ: ಮುಂದಿನ ವಿಧಾನಸಭೆ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂಬ ಕೇಂದ್ರ ಗೃಹ ಸಚಿವರ ಅಮಿತ್ ಶಾ ಹೇಳಿಕೆಗೆ ನನ್ನ ವಿರೋಧ ಇಲ್ಲ, ಬಿಜೆಪಿ ರಾಜ್ಯದಲ್ಲಿ ಇಲ್ಲಿಯವರೆಗೆ ಪೂರ್ಣ ಬಹುಮತ ಪಡೆದಿಲ್ಲ. ಆದುದ್ದರಿಂದ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಿದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು. ಜೊತೆಗೆ ತನಗೆ ಯಾವುದೇ ಅಸಮಾಧಾನ ಇಲ್ಲ ಎಂದರು. 

  ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗಬೇಕು

  ದೆಹಲಿಯಲ್ಲಿಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಹೇಳಿದ್ದು ಇಷ್ಟೆ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗಬೇಕು ಅಂತಾ. ಇದು ಬಹಳಷ್ಟು ಜನರ ಅಭಿಪ್ರಾಯ ಸಹ ಆಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ರಾಜ್ಯ ಬಿಜೆಪಿ ಅಧ್ಯಕ್ಷ. ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲರ ಮುಂದಾಳತ್ವ ಇರಲಿ. ನಾನು ಅಮಿತ್ ಶಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ.‌ ಅಂತಿಮವಾಗಿ ಹೈಕಮಾಂಡ್ ನಾಯಕರ ನಿರ್ಧಾರಕ್ಕೆ ನಾನು ಬದ್ದ ಎಂದು ಹೇಳಿದರಲ್ಲದೆ ಪ್ರಧಾನಿ ನರೇಂದ್ರ ಮೋದಿ ರಾಮ ಇದ್ದ ಹಾಗೆ. ಅಮಿತ್ ಶಾ ಲಕ್ಷ್ಮಣ ಇದ್ದ ಹಾಗೆ ಎಂದು ಉಲ್ಲೇಖಿಸಿದರು.

  ಸಿಎಂ ಒಂದು ತಿಂಗಳ ಆಡಳಿತ ಸಂತೋಷ ತಂದಿದೆ

  ದೆಹಲಿಗೆ ಬಂದಿರೋದು ಇಲಾಖೆಯ ಕೆಲಸ ನಿಮಿತ್ತ. ಅಲ್ಲದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೆನೆ. ಖಾಲಿ ಇರುವ ಸಚಿವ ಸ್ಥಾನಗಳನ್ನು  ಭರ್ತಿ ಮಾಡುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹೈಕಮಾಂಡ್ ನಾಯಕರ ನಿರ್ಧಾರಕ್ಕೆ ಬಿಟ್ಟಿದ್ದು. ಸಿಎಂ ಬಸವರಾಜ್ ಬೊಮ್ಮಾಯಿಯ ಒಂದು ತಿಂಗಳ ಆಡಳಿತ ಸಂತೋಷ ತಂದಿದೆ. ಸರ್ಕಾರದಲ್ಲಿ ಒಳ್ಳೆಯ ಕೆಲಸಗಳು ಆಗುತ್ತಿವೆ ಎಂದು ಹೇಳಿದರು.

  ರಾಜ್ಯದ ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿ ಹ್ಯಾಟ್ರಿಕ್ ಜಯ ಸಿಕ್ಕಿದೆ. ಬೆಳಗಾವಿಯಲ್ಲಿ 25 ವರ್ಷಗಳ ಬಳಿಕ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರ ಹಿಡಿದಿದೆ. ಗೆಲುವಿನ ಹಿಂದೆ ಸಿಎಂ ಬಯವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟಿಲ್ ನಾಯಕತ್ವ ಇದೆ ಎಂದು ಹೇಳಿದರು.

  ಇದನ್ನೂ ಓದಿ: Belagavi Corporation Election: ಬೆಳಗಾವಿ ಪಾಲಿಕೆಯಲ್ಲಿ BJPಗೆ ಐತಿಹಾಸಿಕ ಗೆಲವು: MES ಧೂಳೀಪಟ

  ಬೆಳಗಾವಿ ಜನತೆಗೆ ಸವದಿ ಧನ್ಯವಾದ

  ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಬಗ್ಗೆ ಸೋಮವಾರ ನವದೆಹಲಿಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣಸವದಿ ಅವರು, 'ಬೆಳಗಾವಿಯಲ್ಲಿ ಬಿಜೆಪಿ ಮೊದಲ ಬಾರಿಗೆ ಪಕ್ಷದ ಚಿನ್ಹೆ ಮೇಲೆ ಸ್ಫರ್ಧೆ ಮಾಡಿತ್ತು. ಬಿಜೆಪಿ ತತ್ವ ಸಿದ್ದಾಂತ ಮೆಚ್ಚಿ ಕುಂದಾನಗರಿಯ ಜನ ಕೈ ಹಿಡಿದಿದ್ದಾರೆ ಬೆಳಗಾವಿ ಜನತೆಗೆ ಧನ್ಯವಾದಗಳು' ಎಂದು ಹೇಳಿದರು. ಮರಾಠಿಗರು ಮತ್ತು ಹಿಂದೂಗಳು ಒಟ್ಟಾಗಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಮತ್ತು ಎಐಎಮ್ ಐ ಎಮ್ ಪಕ್ಷಗಳ "ಎಂಎಂ" ಸೂತ್ರವೇ ಅವರಿಗೆ ಮುಳುವಾಯಿತು‌. ಬೆಳಗಾವಿ ಪಾಲಿಕೆಯ ಮೇಲೆ ಈಗಾಗಲೇ ಕನ್ನಡ ಬಾವುಟ ಹಾರುತ್ತಿದೆ. ಮುಂದೆಯೂ ಹಾರಲಿದೆ ಎಂದು ಹೇಳಿದರು.

  ಪಾಲಿಕೆ ಚುನಾವಣೆಯ ಫಲಿತಾಂಶ ಹೀಗಿದೆ

  ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದು ಅಧಿಕಾರಕ್ಕೆ ಬರುತ್ತಿದೆ. ಗಡಿಜಿಲ್ಲೆಯಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯ 58 ಕ್ಷೇತ್ರಗಳ ಪೈಕಿ ಬಿಜೆಪಿ 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮರಾಠಿ ಭಾಷಿಕರನ್ನ ಉದ್ರೇಕಿಸಿದ್ದ ಎಂಇಎಸ್ ಪಕ್ಷ ಕೇವಲ 2 ಸ್ಥಾನ ಪಡೆದು ಮುಖಭಂಗ ಅನುಭವಿಸಿದೆ. ಕಾಂಗ್ರೆಸ್​ಗೆ ಎರಡಂಕಿ ಮೊತ್ತವೂ ಸಿಕ್ಕಿಲ್ಲ. ಇನ್ನು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪುರಸಭೆಯನ್ನ ಕಾಂಗ್ರೆಸ್ ಗೆದ್ದುಕೊಂಡಿದೆ. ಇಲ್ಲಿ ಬಿಜೆಪಿ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ  ಬಿಜೆಪಿ ಮೇಲುಗೈ ಸಾಧಿಸಿದೆಯಾದರೂ ಕಾಂಗ್ರೆಸ್ ತೀವ್ರ ಹೋರಾಟ ನೀಡಿದೆ. ಬಿಜೆಪಿ ಇಲ್ಲಿ ಅಧಿಕಾರ ಸ್ಥಾಪಿಸುವ ಸಾಧ್ಯತೆ ಇದೆ. ಬಿಜೆಪಿಯ ಬಂಡಾಯ ಅಭ್ಯರ್ಥಿಗಳಾಗಿ ನಿಂತು ಗೆದ್ದಿದ್ದ ಮೂವರನ್ನ ಮನವೊಲಿಸಿ ಗದ್ದುಗೆಗೆ ಏರಲು ಕೇಸರಿಪಾಳಯ ರೆಡಿಯಾಗಿದೆ.
  Published by:Kavya V
  First published: