ಮುಷ್ಕರಕ್ಕೆ ಬಗ್ಗದಿದ್ದಲ್ಲಿ ಕುಟುಂಬ ಸಮೇತ ಜೈಲ್ ಭರೋ; ಹುಬ್ಬಳ್ಳಿಯಲ್ಲಿ ಸಾರಿಗೆ ನೌಕರರ ಎಚ್ಚರಿಕೆ

ಖಾಸಗಿ ಬಸ್ ಗಳ ಸಿಬ್ಬಂದಿಯೂ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಅಲ್ಲಿಗೂ ಸರ್ಕಾರ ಸ್ಪಂದಿಸದಿದ್ದಲ್ಲಿ ಏಪ್ರಿಲ್ 13 ರಂದು ಜೈಲ್ ಭರೊ ಚಳುವಳಿ ಮಾಡ್ತೇವೆ. ಕುಟುಂಬ ಸಮೇತ ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ನೀರಲಕೇರಿ ತಿಳಿಸಿದ್ದಾರೆ.

ವಾಯುವ್ಯ ಕರ್ನಾಟಕ ಸಾರಿಗೆ

ವಾಯುವ್ಯ ಕರ್ನಾಟಕ ಸಾರಿಗೆ

  • Share this:
ಹುಬ್ಬಳ್ಳಿ(ಏ.06):  ನಾಳೆಯಿಂದ ಮುಷ್ಕರ ಮಾಡಿಯೇ ತೀರುತ್ತೇವೆ. ಅದಕ್ಕೂ ಬಗ್ಗದಿದ್ದಲ್ಲಿ ಕುಟುಂಬ ಸಮೇತ ಜೈಲ್ ಭರೋ ಚಳುವಳಿ ನಡೆಸೋದಾಗಿ ಕರ್ನಾಟಕ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಪಿ.ಎಚ್.ನೀರಲಕೇರಿ ಎಚ್ಚರಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಷ್ಕರದ ನಿರ್ಧಾರ ಅಚಲ. 6 ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಲೇ ಬೇಕು. ವೇತನ ಆಯೋಗದ ಶಿಫಾರಸ್ಸು ಜಾರಿ ವಿಚಾರದಲ್ಲಿ ಸರ್ಕಾರದಿಂದ ಮೊಂಡುತನ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ಮುಷ್ಕರ ನಡೆಸಿದಾಗ ಒಂಬತ್ತು ಬೇಡಿಕಗಳ ಪೈಕಿ 8 ಬೇಡಿಕೆ ಈಡೇರಿಸೋದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಯಾವುದೆ ಬೇಡಿಕೆ ಈಡೇರಿಸದೆ ಸರ್ಕಾರ ವಚನ ಭ್ರಷ್ಟವಾಗಿದೆ. ಸಾರಿಗೆ ನೌಕರರನ್ನು ಕಾಲ ಕಸದಂತೆ ನೋಡಿಕೊಳ್ಳುತ್ತಿದೆ. 6 ವೇತನ ಆಯೋಗದ ಎಲ್ಲ ಶಿಫಾರಸ್ಸುಗಳನ್ನು ಜಾರಿಗೆ ತರಬೇಕೆನ್ನೋದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಉಳಿದವು ಸಣ್ಣ ಪುಟ್ಟ ಬೇಡಿಕೆಗಳಿವೆ. ಮುಖ್ಯ ಬೇಡಿಕೆ ಈಡೇರುವವರೆಗೂ ಮುಷ್ಕರ ಕೈ ಬಿಡಲ್ಲ.

ನಾಳೆಯಿಂದ ಯಾರೂ ಕೆಲಸ ಮಾಡಲ್ಲ. ಧಾರವಾಡ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ಮಾಡ್ತೇವೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಹೋರಾಟ ಮಾಡುತ್ತೇವೆ. ಹಿಂಸಾತ್ಮಕ ಹೋರಾಟ ಮಾಡಲ್ಲ. ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡಲ್ಲ. ಶಾಂತಿಯುತವಾಗಿ ಹೋರಾಟ ಮಾಡ್ತೇವೆ. ಬಹುತೇಕ ಸಾರಿಗೆ ನೌಕರರು ನಮ್ಮ ಜೊತೆಗಿದ್ದಾರೆ. ಕೆಲವೊಂದು ಜನ ಮಾತ್ರ ಇದಕ್ಕೆ ವಿರೋಧವಿದ್ದು, ಅವರನ್ನೂ ಮನವೊಲಿಕೆ ಮಾಡ್ತೇವೆ.

ಕೊರೋನಾ ಹಿನ್ನಲೆ: ಏ.10 ರಿಂದ 13ರವರೆಗೆ ಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಗೆ ಭಕ್ತರ ಪ್ರವೇಶ ನಿಷೇಧ

ಖಾಸಗಿ ಬಸ್ ಗಳ ಸಿಬ್ಬಂದಿಯೂ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಅಲ್ಲಿಗೂ ಸರ್ಕಾರ ಸ್ಪಂದಿಸದಿದ್ದಲ್ಲಿ ಏಪ್ರಿಲ್ 13 ರಂದು ಜೈಲ್ ಭರೊ ಚಳುವಳಿ ಮಾಡ್ತೇವೆ. ಕುಟುಂಬ ಸಮೇತ ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ನೀರಲಕೇರಿ ತಿಳಿಸಿದ್ದಾರೆ.

ಪ್ರಯಾಣಿಕರ ಅಸಮಾಧಾನ

ರಾಜ್ಯ ಸರ್ಕಾರ ತಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಆರೋಪಿಸಿ, ನಾಳೆಯಿಂದ ಮುಷ್ಕರ ನಡೆಸಲು ಸಾರಿಗೆ ನೌಕರರು ತೀರ್ಮಾನಿಸಿರೋದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರಾಜ್ಯ ಸಾರಿಗೆ ನೌಕರರ ಕೂಟದಿಂದ ಮುಷ್ಕರಕ್ಕೆ ಕರೆ ನೀಡಿದೆ. ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಕರೆಯಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಬಣ ಈ ಹಿಂದೆಯೂ ದಿಢೀರಾಗಿ ಮುಷ್ಕರಕ್ಕೆ ಕರೆ ನೀಡಿತ್ತು. ಈಗ ಮತ್ತೆ ಅನಿರ್ಧಿಷ್ಟ ಮುಷ್ಕರ ನಡೆಸಲು ತೀರ್ಮಾನಿಸಿರೋದು ಸರಿಯಲ್ಲ. ಏಕಾಏಕಿ ಮುಷ್ಕರ ಅಂದ್ರೆ ನಮಗೆ ತೊಂದರೆಯಾಗುತ್ತೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿ ದಿಢೀರ್ ಮುಷ್ಕರಕ್ಕಿಳಿಯೋದು ಸರಿಯಲ್ಲ. ಇದರಿಂದ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರಿಗೂ ತೀವ್ರ ತೊಂದರೆಯಾಗಲಿದೆ. ಏಕಾಏಕಿ ಮುಷ್ಕರ ನಡೆಸಬಾರದು. ಮುಷ್ಕರಕ್ಕೆ ಮುನ್ನವೇ ಅವರ ಬೇಡಿಕೆಗೆ ಸ್ಪಂದಿಸೋ ಕೆಲಸ ರಾಜ್ಯ ಸರ್ಕಾರ ಮಾಡಲಿ. ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರದ ಹಗ್ಗ ಜಗ್ಗಾಟದ ನಡುವೆ ಪ್ರಯಾಣಿಕರನ್ನು ಬಲಿಪಶು ಮಾಡಬಾರದೆಂಬ ಆಗ್ರಹ ವ್ಯಕ್ತವಾಗಿದೆ.
Published by:Latha CG
First published: