ಕೊಪ್ಪಳ: ಬಿಜೆಪಿಗೆ ಸೆಡ್ಡು ಹೊಡೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragathi Paksha) ಸ್ಥಾಪನೆ ಮಾಡಿರುವ ಗಾಲಿ ಜನಾರ್ದನ ರೆಡ್ಡಿ ( Janardhana Reddy) ಶೀಘ್ರದಲ್ಲೇ ತಮ್ಮ ಪಕ್ಷದ 40 ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ನಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಲ್ಯಾಣ ಕರ್ನಾಟಕದಲ್ಲಿ (Kalyana Karnataka) ಮಾತ್ರವಲ್ಲ, ಇಡೀ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜನರ ಸ್ಪಂದನೆಯೇ ನಮಗೆ ಮುಂದಿನ ವಿಧಾನಸಭಾ ಚುನಾವಣೆಗೆ (Assembly Election) ಭರವಸೆ ಮೂಡಿಸುತ್ತಿದೆ ಎಂದು ಮಾಜಿ ಸಚಿವ ಹೇಳಿದ್ದಾರೆ. ಅಭ್ಯರ್ಥಿಗಳ ವರ್ಚಸ್ಸು ಮತ್ತು ಗೆಲ್ಲುವ ಸಾಧ್ಯತೆಯನ್ನು ಗಮನದಲ್ಲಿಟ್ಟಕೊಂಡು ಟಿಕೆಟ್ ನೀಡಲಾಗುವುದು. ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದ ಅವರು, ಕೆಆರ್ಪಿಪಿ (KRPP) ಅಭ್ಯರ್ಥಿಗಳು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಗಂಗಾವತಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ಕೆಲವೇ ದಿನಗಳಲ್ಲಿ ನಮ್ಮ ಅಭ್ಯರ್ಥಿಗಳು ಎಲ್ಲೆಲ್ಲಿ ಗೆಲ್ಲಬಹುದು ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡು 40 ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದ್ದೇವೆ. ನಮ್ಮ ಉದ್ದೇಶ ಚುನಾವಣೆಯಲ್ಲಿ ಬೇರೆ ಪಕ್ಷಗಳನ್ನು ಸೋಲಿಸುವುದಲ್ಲ, ನಮ್ಮ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸುವುದಾಗಿದೆ. ಈಗಾಗಲೇ ರಾಜ್ಯದ 30ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಸಮೀಕ್ಷೆ ಮಾಡಿಸುತ್ತಿದ್ದೇವೆ. ಸಮೀಕ್ಷೆ ಫಲಿತಾಂಶ ನೋಡಿಕೊಂಡು ಟಿಕೆಟ್ ಘೋಷಣೆ ಮಾಡಲಿದ್ದೇವೆ ಎಂದರು.
ವರ್ಚಸ್ಸಿರುವ ಅಭ್ಯರ್ಥಿಗಳ ಆಯ್ಕೆ
ಪಕ್ಷದಲ್ಲಿ ವರ್ಚಸ್ಸು ಇರುವ ಅಭ್ಯರ್ಥಿಗಳು ಸಾಕಷ್ಟು ಮಂದಿ ಇದ್ದಾರೆ. ಒಳ್ಳೆಯ ನಾಗರಿಕತೆ ಇರುವುವರನ್ನು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ನೀಡುತ್ತೇವೆ. ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಯಾದಗಿರಿ, ಕಲಬುರಗಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಯಾರಾಗಬೇಕೆಂದು ಈಗಾಗಲೇ ನಿರ್ಧರಿಸಲಾಗಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.
ಬೆಂಗಳೂರಿನಲ್ಲೂ ಉತ್ತಮ ಪ್ರತಿಕ್ರಿಯೆ
ನಮ್ಮ ಪಕ್ಷಕ್ಕೆ ಕೇವಲ ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಬೆಂಗಳೂರಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲಿರುವ ದೊಡ್ಡ ಮನೆತನದವರು ಕೆಆರ್ಪಿಪಿ ಪಕ್ಷಕ್ಕೆ ಸೇರಲು ಬಯಸಿದ್ದಾರೆ. ಸದ್ಯಕ್ಕೆ ಆ ಬಗ್ಗೆ ಈಗ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿವರ ನೀಡುತ್ತೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ವಿಭಿನ್ನ ಪ್ರಣಾಳಿಕೆ
ನಮ್ಮ ಪಕ್ಷದ ಪ್ರಣಾಳಿಕೆ ಬೇರೆ ಪಕ್ಷಗಳ ಪ್ರಣಾಳಿಕೆಗೆ ವಿಭಿನ್ನವಾಗಿ ಮತ್ತು ಮಾದರಿಯಾಗಿರುತ್ತದೆ. ಪ್ರಣಾಳಿಕೆ ತಯಾರಿಸುವಲ್ಲಿ ನಮ್ಮ ತಂಡ ನಿರತವಾಗಿದೆ. ಶೀಘ್ರವೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ. ಎಲ್ಲಾ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸುತ್ತೇವೆ ಎಂದು ತಿಳಿಸಿದರು.
ಗಂಗಾವತಿಯಿಂದ ಸ್ಪರ್ಧೆ
ಪಕ್ಷ ಸ್ಥಾಪನೆ ದಿನವೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದೇನೆ. ಈ ಕ್ಷೇತ್ರದಲ್ಲಿದ್ದುಕೊಂಡು ಪ್ರತಿ ಗ್ರಾಮ, ವಾರ್ಡ್ಗಳಿಗೆ ಭೇಟಿ ನೀಡಲಿದ್ದೇನೆ. ಅಲ್ಲಿನ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಮಾಡಲಿದ್ದೇನೆ. ಕೊಪ್ಪಳ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡುವ ಉದ್ದೇಶಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಅದಕ್ಕಾಗಿ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.
ಯಾರನ್ನು ಆಹ್ವಾನಿಸಲ್ಲ
ನಮ್ಮ ಕೆಆರ್ಪಿಪಿ ಪಕ್ಷಕ್ಕೆ ಬನ್ನಿ ಎಂದು ಯಾವ ಪಕ್ಷದವರನ್ನೂ ಒತ್ತಾಯಪೂರ್ವಕವಾಗಿ ಆಹ್ವಾನಿಸುವುದಿಲ್ಲ. ನನ್ನ ಕಾರ್ಯವನ್ನು ಮೆಚ್ಚಿ, ಭವಿಷ್ಯದಲ್ಲಿ ನಾನು ಸಾಧನೆ ಮಾಡಬಹುದು ಎನ್ನುವ ನಂಬಿಕೆಯಿಂದ ಯಾರೇ ಬಂದರೂ ಪ್ರೀತಿಯಿಂದ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇನೆ. ಹಾಗೆಯೇ ಬೇರೆ ಪಕ್ಷಗಳ ಟಿಕೆಟ್ ಘೋಷಿಸಿದ ಬಳಿಕ ಅವಕಾಶ ಸಿಗದವರಿಗೆ ಅಥವಾ ಅಸಮಾಧಾನಿತರನ್ನು ಸೇರಿಸಿಕೊಳ್ಳುವ ಉದ್ದೇಶ ನಮ್ಮ ಪಕ್ಷಕ್ಕಿಲ್ಲ. ಹೊಸ ಅಭ್ಯರ್ಥಿಗಳು, ಅದರಲ್ಲೂ ತಮ್ಮ ವರ್ಚಸ್ಸಿನ ಮೂಲಕ ಗುರುತಿಸಿಕೊಂಡಿರುವವರು, ಯುವ ಉತ್ಸಾಹಿಗಳಿಗೆ ಅವಕಾಶ ನೀಡುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ