Karnataka Rain: ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಯಲ್ಲಿ ಹೆಚ್ಚಿದ ಪ್ರವಾಹ, ಜನಜೀವನ ಅಸ್ತವ್ಯಸ್ತ..!

ಬಾದಾಮಿ, ಹುನಗುಂದ, ಗುಳೇಡಗುಡ್ಡ ತಾಲೂಕಿನಲ್ಲಿ ಪ್ರವಾಹದ ಭೀತಿ  ಎದುರಾಗಿದೆ. ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ.

ಉಕ್ಕಿ ಹರಿಯುತ್ತಿರುವ ನದಿ

ಉಕ್ಕಿ ಹರಿಯುತ್ತಿರುವ ನದಿ

  • Share this:
    ಬಾಗಲಕೋಟೆ (ಜು. 23):  ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಬಿಟ್ಟು ಬಿಡದೆ ನಿರಂತರವಾಗಿ ಮಳೆಸುರಿಯುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ಪಾತ್ರದ ಜನರಿಗೆ ಇನ್ನಿಲ್ಲದ ಆತಂಕ ಶುರುವಾಗಿದೆ.  ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ, ಮುಧೋಳ ತಾಲೂಕಿನಲ್ಲಿ ಹರಿಯುವ ಘಟಪ್ರಭಾ ಹಾಗೂ ಬಾದಾಮಿ, ಗುಳೇಡಗುಡ್ಡ, ಹುನಗುಂದ ತಾಲೂಕಿನಲ್ಲಿ  ಹರಿಯುವ ಮಲಪ್ರಭಾ ಸೇರಿದಂತೆ ಮೂರು ನದಿಗಳು ಅಪಾಯದ ಮಟ್ಟವನ್ನ ಮೀರಿ  ಹರಿಯುತ್ತಿವೆ.  ಹಿಡಕಲ್ ಜಲಾಶಯದಿಂದ 25 ಸಾವಿರ, ಹಿರಣ್ಯಕೇಶಿ, ಬಳ್ಳಾರಿ ನಾಲಾದಿಂದ 79 ಸಾವಿರ ಕ್ಯೂಸೆಕ್ಸ್ ನೀರು ಹೊರ ಹರಿವು ಬಿಡಲಾಗಿದ್ದು, ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಪ್ರವಾಹದ ಭೀತಿ ಶುರುವಾಗಿದೆ.

    ಮುಧೋಳ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದ್ದು, ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತವಾಗೋ ಸಾಧ್ಯತೆ ಇದೆ. ಸೇತುವೆ ಮೇಲ್ಬಾಗದಲ್ಲಿ ನೀರು ಹರಿಯುಲು ಒಂದೆರಡು ಅಡಿಯಷ್ಟು ಮಾತ್ರ ಬಾಕಿ ಇದೆ. ನದಿ ದಡದಲ್ಲಿ ರೈತರು ಇಟ್ಟಿದ್ದ ಪಂಪ್​ಸೆಟ್​ಗಳು  ಕೊಚ್ಚಿ ಹೋಗುವು ಆತಂಕದಿಂದ ರೈತರು ಸ್ಥಳಾಂತರ ಮಾಡುತ್ತಿದ್ದಾರೆ. ಜಿಲ್ಲೆಯ ಮಿರ್ಜಿ ಹಾಗೂ ಢವಳೇಶ್ವರ ಗ್ರಾಮಗಳ ಸೇತುವೆಗಳು ಜಲಾವೃತವಾಗಿವೆ. ಢವಳೇಶ್ವರ  ಗ್ರಾಮದಿಂದ ರಬಕವಿ-ಬನಹಟ್ಟಿ ಹಾಗೂ ಗೋಕಾಕ್ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ.  ಇನ್ನು ತಾಲೂಕಿನ 20 ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಭೀತಿ ಶುರುವಾಗಿದೆ. ಹೀಗಾಗಿ ಮುಧೋಳ ತಹಶೀಲ್ದಾರ್ ಸಂಗಮೇಶ ಬಾಡಗಿ ತಾಲೂಕಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಮೂಲಕ ನದಿ ದಡದ ಗ್ರಾಮಗಳಲ್ಲಿ ಡಂಗುರು ಸಾರಿಸಿ, ಜನರು ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡುತ್ತಿದ್ದಾರೆ.

    ಜಿಲ್ಲಾಡಳಿತ ಕೂಡ ಹೈ ಅಲರ್ಟ್ ಆಗಿದ್ದು, ಪ್ರವಾಹ ಪೀಡಿತ ತಾಲೂಕಿನ ತಹಶೀಲ್ದಾರ್ ಗಳಿಗೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚನೆ ನೀಡಿದೆ. ಇತ್ತ ಬಾದಾಮಿ, ಹುನಗುಂದ, ಗುಳೇಡಗುಡ್ಡ ತಾಲೂಕಿನಲ್ಲಿ ಪ್ರವಾಹದ ಭೀತಿ  ಎದುರಾಗಿದೆ. ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನರನ್ನ ಸುರಕ್ಷಿತ ಸ್ಥಳಕ್ಕೆ ತೆರೆಳುವಂತೆ ಸೂಚನೆ ನೀಡಲಾಗಿದೆ. ಯಾವುದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ.

    ಇದನ್ನು ಓದಿ: ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಮಳೆಯಿಂದಾಗಿ 400 ಕೋಟಿ ಹಾನಿ; ಡಿಸಿಎಂ ಗೋವಿಂದ ಕಾರಜೋಳ

    ಇನ್ನು ಜಮಖಂಡಿ ತಾಲೂಕಿನಲ್ಲಿ ಕೃಷ್ಣೆಯ ಆರ್ಭಟ ಜೋರಾಗಿದೆ. ಹಿಪ್ಪರಗಿ ಜಲಾಶಯದಿಂದ ಬೆಳಿಗ್ಗೆ 1ಲಕ್ಷ 12 ಸಾವಿರ ಕ್ಯೂಸೆಕ್ಸ್ ನೀರಿನ್ನ ಹೊರ ಹರಿವು ಬಿಡಲಾಗಿದೆ. ಕೃಷ್ಣಾ ನದಿಗೆ 1ಲಕ್ಷ 13 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಬರುತ್ತಿದೆ. ಚಿಕ್ಕಪಡಸಲಗಿ ಸೇತುವೆ ಬಳಿ ಅಪಾರ ಪ್ರಮಾಣದ ನೀರು ಹರಿಯುತ್ತದೆ.

    ಇನ್ನು  ಆಲಮಟ್ಟಿ ಜಲಾಶಯದಿಂದ ಸುಮಾರು 3 ಲಕ್ಷ ಕ್ಯೂಸೆಕ್ಸ್ ನೀರನ್ನು ಜುಲೈ 23 ರಂದು ಸಂಜೆ 4 ಗಂಟೆಯಿಂದ ಹೊರಹರಿವು ಪ್ರಾರಂಭಿಸಿದ್ದು, ಹಿಪ್ಪರಗಿ ಬ್ಯಾರೇಜನಿಂದ ಸುಮಾರು 1. 12 ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಡುಗಡೆಗೊಳಿಸಿದ್ದು, ಪ್ರವಾಹ ಪರಿಸ್ಥಿತಿ ಎದುರಾಗುವ ಸಂಭವ ಇದೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ಆದ್ದರಿಂದ ಜಿಲ್ಲೆಯ ಎಲ್ಲ ತಹಶೀಲ್ದಾರರು ತಮ್ಮ ತಾಲೂಕುಗಳಲ್ಲಿ ಬರುವ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ದಡದ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಈ ಕುರಿತು ಮುನ್ನೆಚ್ಚರಿಕೆ ನೀಡಿ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲು ಹಾಗೂ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಂಡು ತಯಾರಿಯಲ್ಲಿರಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

    (ವರದಿ:  ಮಂಜುನಾಥ್ ತಳವಾರ) 
    Published by:Seema R
    First published: