ರಾಯಚೂರು(ಫೆ.22): ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಎರಡು ರಾಜ್ಯಗಳ ಸಂಪರ್ಕ ಕಲ್ಪಿಸುವ ಸೇತುವೆ ಇದೆ. ಕೃಷ್ಣಾ ನದಿಯ ಮೇಲಿರುವ ಈ ಸೇತುವೆಯು ಹೈದ್ರಾಬಾದ್ ನಿಜಾಂ ಕಾಲದಲ್ಲಿ ನಿರ್ಮಾಣವಾಗಿದೆ. ಈ ಸೇತುವೆಯ ರಿಪೇರಿ ಮಾಡಿಲ್ಲ, ಈಗ ಸೇತುವೆಯನ್ನು ಪುನರ್ ನಿರ್ಮಿಸಲು ಕೇಂದ್ರ ಸರಕಾರ 155 ಕೋಟಿ ರೂಪಾಯಿ ಯೋಜನೆ ಮಂಜೂರು ಮಾಡಿ ಎಜೆನ್ಸಿ ಫಿಕ್ಸ್ ಮಾಡಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸೇತುವೆ ನಿರ್ಮಾಣಕ್ಕೆ ಪರವಾನಿಗೆ ಕೊಡಬೇಕಾಗಿದೆ.
ರಾಜ್ಯದ ಪ್ರಮುಖ ನದಿಯಾಗಿರುವ ಕೃಷ್ಣಾ ನದಿಯು ರಾಜ್ಯದಿಂದ ತೆಲಂಗಾಣ ಪ್ರವೇಶವನ್ನು ರಾಯಚೂರು ಜಿಲ್ಲೆಯ ಮುಖಾಂತರ ಸೇರುತ್ತದೆ. ಆದರೆ ಕೃಷ್ಣಾ ನದಿಯ ಉಪನದಿಗಳಾದ ಕೃಷ್ಣಾ, ಭೀಮಾ, ದೋಣಿ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಬಹುತೇಕ ನದಿಗಳು ಸೇರಿರುತ್ತವೆ. ತುಂಗಭದ್ರಾ ನದಿ ಹೊರತು ಪಡಿಸಿ, ರಾಯಚೂರಿನ ಶಕ್ತಿನಗರ ಬಳಿಯಲ್ಲಿ ಕೃಷ್ಣಾ ನದಿ ಯಾವಾಗಲೂ ನೀರು ಹರಿಯುತ್ತಿರುತ್ತದೆ. ಪ್ರವಾಹ ಸಂದರ್ಭದಲ್ಲಿ ಸುಮಾರು 10.15 ಲಕ್ಷ ಕ್ಯೂಸೆಕ್ ನೀರು ಹರಿಯುತ್ತದೆ. ಆದರೂ ಈ ಸೇತುವೆ ಮುಳಗಡೆಯಾಗಿಲ್ಲ. ಈ ಪ್ರಮಾಣಕ್ಕಿಂತ ಅಧಿಕವಾಗಿ ನೀರು ಹರಿದರೆ ಸೇತುವೆ ಮುಳಗಡೆಯಾಗುವ ಸಾಧ್ಯತೆ ಇದೆ.
2009 ರಲ್ಲಿ ಮಾತ್ರ ಒಮ್ಮೆ ಇಲ್ಲಿ ಸಂಚಾರ ಸ್ಥಗಿತಗೊಂಡಿತ್ತು, ಭಾರೀ ಪ್ರಮಾಣದ ನೀರು ಹರಿಯುತ್ತಿದ್ದರೂ ಸೇತುವೆ ಗಟ್ಟಿಯಾಗಿ ನಿಂತಿದೆ. ಆದರೆ ಸೇತುವೆ ಮೇಲ್ಭಾಗದಲ್ಲಿ ಭಾರಿ ಪ್ರಮಾಣದ ಗುಂಡಿಗಳು ಬಿದ್ದಿವೆ. ಸೇತುವೆಯ ನಿರ್ಮಾಣಕ್ಕಾಗಿ ಹಾಕಿದ ಕಬ್ಬಿಣದ ಸಳಿಗಳು ಮೇಲೆಕ್ಕೆದ್ದಿವೆ. ಈ ಸೇತುವೆಯ ಮೇಲೆ ಸಂಚರಿಸುವಾಗ ಪ್ರಯಾಣಿಕರು ಭಯ ಪಡುತ್ತಾರೆ. ಚಾಲಕರು ಜೀವವನ್ನು ಕೈಯಲ್ಲಿಡಿದು ವಾಹನ ಚಲಾಯಿಸುತ್ತಾರೆ.
ನವಜಾತ ಶಿಶುಗಳಿಗೆ ಮುತ್ತಿಡುವ ಮುನ್ನ ಎಚ್ಚರ...! ನಿಮ್ಮ ಪ್ರೀತಿಯ ಚುಂಬನ ಮಗುವಿಗೆ ಮಾರಕವಾಗಬಹುದು
ಈ ಸೇತುವೆ ನಿರ್ಮಾಣದ ಹಿಂದೆ ಇತಿಹಾಸವಿದೆ. ಹೈದ್ರಾಬಾದಿನ ಅಶಪ್ ಜಾಹಿ ಸಂಸ್ಥಾನದ ಕೊನೆಯ ಅರಸ ಮೀರ ಉಸ್ಮಾನ ಅಲಿಖಾನ್ ಬಹದ್ದೂರು ಹೈದ್ರಾಬಾದ್ ಸಂಸ್ಥಾನದಲ್ಲಿ ಆಡಳಿತ ಮಾಡುವಾಗ ಅವರ ಮಗ ರಾಜಕುಮಾರ ಸಿರಾತ್ ಎ ಜೂದಿ ಸ್ಮರಣಾರ್ಥವಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕನ್ಯಾಕುಮಾರಯಿಂದ ಉತ್ತರ ಭಾರತ, ದಕ್ಷಿಣ ರಾಜ್ಯದಿಂದ ಉತ್ತರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಲಾಗಿದೆ.
ರಾಜಕುಮಾರ ಸಿರಾತ್ ಎ ಜೂದಿಯು ರಾಯಚೂರಿಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ಈ ಸೇತುವೆ ನಿರ್ಮಿಸಲು ನಿಜಾಂ ಉದ್ದೇಶಿಸಿದ್ದರು. ಅಂದಿನ ಹೈದ್ರಾಬಾದ್ ನಿಜಾಂ ಸರಕಾರದ ಮುಖ್ಯ ಇಂಜಿನಿಯರ್ ಆಗಿರುವ ಹಮೇದ ಮಿರ್ಜಾರವರು ವಿನ್ಯಾಸಗೊಳಿಸಿದ ಸೇತುವೆಯನ್ನು ಅಂದಿನ 13.24 ಲಕ್ಷ ಹಾಲಿಯಾ ನಾಣ್ಯ ವಿನಯೋಗಿಸಿ ಸೇತುವೆ ನಿರ್ಮಿಸಲಾಗಿದೆ. 1933 ರಲ್ಲಿ ನಿರ್ಮಾಣ ಕಾರ್ಯ ಆರಂಭಿಸಿ 1943 ರಲ್ಲಿ ಸೇತುವೆ ಪೂರ್ಣಗೊಂಡಿದೆ. 2883 ಅಡಿ ಉದ್ದ, 20 ಅಡಿ ಅಗಲ ಹಾಗು 60 ಅಡಿ ಎತ್ತರ ಸೇತುವೆಯನ್ನು ನಿರ್ಮಿಸಲಾಗಿದೆ.
ನಿರ್ಮಾಣಗೊಂಡು 9 ದಶಕಗಳಾಗುತ್ತಾ ಬಂದರೂ ಈ ಸೇತುವೆ ರಿಪೇರಿಯಾಗಿಲ್ಲ. ರಾಯಚೂರು ಜಿಲ್ಲೆಯ ದೇವಸಗೂರು ಹಾಗು ಮಹಿಬೂಬನಗರ ಜಿಲ್ಲೆಯ ಕೃಷ್ಣಾ ಗ್ರಾಮಗಳ ಮಧ್ಯೆ ಇರುವ ಈ ಸೇತುವೆಯನ್ನು ಬೋಸ್ಟನ್ ಮಾದರಿಯಲ್ಲಿ ಪುನರ್ನಿಮಿಸಲು 2019 ಮೇ 7 ರಂದು ಕೇಂದ್ರ ಸರಕಾರ ಮಂಜೂರಾತಿ ನೀಡಿದೆ. ಈ ಸೇತುವೆಯನ್ನು ಮಹಾರಾಷ್ಟ್ರ ಮೂಲದ ತೇಜಸ್ ಸುಪರ್ ಕನಸ್ಟ್ಕಕ್ಷನ್ ಕಂಪನಿಯು ಯೋಜನೆಯನ್ನು ಸಿದ್ದಪಡಿಸಿದೆ. ಈ ಮಧ್ಯೆ ನ್ಯಾಷನಲ್ ಹೈ ವೇ ಅಥಾರಿಟಿಯವರು ಈ ವಿನ್ಯಾಸವನ್ನು ಪರಿಶೀಲಿಸಬೇಕಾಗಿದೆ. ಈ ಮಧ್ಯೆ ಹೆದ್ದಾರಿ ಈಗ ದ್ವಿಪಥವಿದ್ದು ಇದನ್ನು ಚತುಷ್ಪಥ ಹೆದ್ದಾರಿ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ ವಿನ್ಯಾಸ ಬದಲಾವಣೆ ಮಾಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ