ಬೆಂಗಳೂರು: ಕರ್ನಾಟಕ ಪಿಎಸ್ಐ ಪರೀಕ್ಷೆಯಲ್ಲಿ (Karnataka PSI Exam) ಬಹುಕೋಟಿ ಗೋಲ್ಮಾಲ್ ನಡೆದಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಅದರ ತನಿಖೆ ನಡೆಯುತ್ತಿರುವಾಗಲೇ ಕೆಪಿಟಿಸಿಎಲ್ ಎಕ್ಸಾಂನಲ್ಲೂ (KPTCL Exam) ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂತು. ಇದೀಗ ಕೆಪಿಟಿಸಿಎಲ್ ಕಿರಿಯ ಸಹಾಯಕ (Junior Assistant) ಹಾಗೂ ವಿವಿಧ ಹುದ್ದೆಗೆ ನಡೆಸಲಾಗಿದ್ದ ಪರೀಕ್ಷಾ ಫಲಿತಾಂಶ (Exam Result) ಪ್ರಕಟಿಸಿದ್ದು, ಅದೂ ಕಾಟಾಚಾರಕ್ಕೆ ಪ್ರಕಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೆಪಿಟಿಸಿಎಲ್ ಸೂಚನೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಂತಿಮ ಕೀ ಉತ್ತರವನ್ನು (Key Answer) ಪ್ರಕಟಿಸಿದೆ. ಆದರೆ ಅದರಲ್ಲೇ ತಪ್ಪಾದ ಉತ್ತರ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಈ ಬಗ್ಗೆ ನೊಂದ ಅಭ್ಯರ್ಥಿಗಳು ಹೋರಾಟದ ಹೆಜ್ಜೆ ಇಡುವ ಸೂಚನೆ ಕೊಟ್ಟಿದ್ದಾರೆ.
ಕಳೆದ ಆಗಸ್ಟ್ನಲ್ಲಿ ನಡೆದಿದ್ದ ಪರೀಕ್ಷೆ
ಕೆಪಿಟಿಸಿಎಲ್ನ ಕಿರಿಯ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಗೆ ರಾಜ್ಯ ಇಂಧನ ಇಲಾಖೆಯು 2022, ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಪರೀಕ್ಷೆ ನಡೆಸುವ ಹೊಣೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ನೀಡಲಾಗಿತ್ತು. ವಿವಿಧ ಹುದ್ದೆಗಳಿಗೆ 2022, ಜುಲೈ 23 ಮತ್ತು 24ರಂದು, ಕಿರಿಯ ಸಹಾಯಕ ಹುದ್ದೆಗಳಿಗೆ 2022, ಆಗಸ್ಟ್ 7ರಂದು ರಾಜ್ಯಾದ್ಯಂತ ಪರೀಕ್ಷೆ ನಡೆಸಲಾಗಿತ್ತು.
ಮೊದಲೇ ತಪ್ಪು ಉತ್ತರ ಪ್ರಕಟಿಸಿದ್ದ ಪರೀಕ್ಷಾ ಪ್ರಾಧಿಕಾರ
ಆಗಸ್ಟ್ 25ರಂದು ಕೆಇಎ ಬಿಡುಗಡೆ ಮಾಡಿದ ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಕೀ ಉತ್ತರಗಳು ಬಹುತೇಕ ತಪ್ಪಾಗಿತ್ತು. ಮರುದಿನ ಅಂದರೆ ಆಗಸ್ಟ್ 26ಕ್ಕೆ ಪರಿಷ್ಕೃತ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿತ್ತು. ಆದರೆ ಅಂತಿಮ ಕೀ ಉತ್ತರ ಪ್ರಕಟಿಸಿರಲಿಲ್ಲ.
ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಆಕ್ರಮ
ಪಿಎಸ್ಐ ಪರೀಕ್ಷಾ ಹಗರಣದ ಬೆನ್ನಲ್ಲೇ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಹಗರಣ ನಡೆದಿರುವ ಆರೋಪ ಕೇಳಿ ಬಂದಿತ್ತು. ಕಲ್ಬುರ್ಗಿ ಸೇರಿದಂತೆ ಕೆಲವೆಡೆ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಕಾಪಿ ಮಾಡಿರೋ ಆರೋಪ ಬಂದಿದ್ದು, ಕೆಲವರನ್ನು ಬಂಧಿಸಿ, ಇನ್ನೂ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: Explained: ಏನಿದು PSI Exam Scam? ಇದರ ಆಳ, ಅಗಲ ಏನು? ಈವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ
ಈ ಬಾರಿಯ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಕೆಪಿಟಿಸಿಎಲ್ 1492 ಹುದ್ದೆಗಳ ಪರೀಕ್ಷಾ ಫಲಿತಾಂಶದ ಬಗ್ಗೆ ಪ್ರಶ್ನಿಸಿದ್ದರು. ಈ ವೇಳೆ ಇಂಧನ ಸಚಿವ ಸುನೀಲ್ ಕುಮಾರ್ ಉತ್ತರ ನೀಡಿದ್ದು, ಒಂದೇ ವಾರದೊಳಗೆ ಕೀ ಉತ್ತರ ಪ್ರಕಟಿಸಿ, ಜನವರಿ ಮೊದಲ ವಾರದಲ್ಲಿ ಕೆಪಿಟಿಸಿಎಲ್ ಫಲಿತಾಂಶ ಪ್ರಕಟಿಸುತ್ತೇವೆ ಅಂತ ಘೋಷಿಸಿದ್ರು. ಅದರಂತೆ ಸಚಿವ ಸುನೀಲ್ ಕುಮಾರ್ ಡಿಸೆಂಬರ್ 31ರಂದು ಟ್ವೀಟ್ ಮಾಡಿ, ಜನವರಿ 3ರಂದು ಕೆಪಿಟಿಸಿಎಲ್ ಪರೀಕ್ಷಾ ಫಲಿತಾಂಶ ಪ್ರಕಟಿಸುತ್ತೇವೆ ಎಂದಿದ್ದರು.
ತಪ್ಪು ಕೀ ಉತ್ತರ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಅದರಂತೆ ಜನವರಿ 3ರಂದು ಕೆಪಿಟಿಸಿಎಲ್ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. 35ಕ್ಕಿಂತ ಹೆಚ್ಚು ಅಂಕ ಪಡೆದ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿತು. ಜೊತೆಗೆ ಅಂತಿಮ ಕೀ ಉತ್ತರಗಳನ್ನೂ ಪ್ರಕಟಿಸಿತ್ತು. ಆದರೆ ಅವುಗಳಲ್ಲಿ ಹಲವು ತಪ್ಪುಗಳಿದ್ದು, ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.
ತರಾತುರಿಯಲ್ಲಿ ಗೊಂದಲದ ಉತ್ತರ ಪ್ರಕಟ
ವಿಧಾನಸಭೆಯಲ್ಲಿ ಸಚಿವರು ಘೋಷಿಸಿದರು ಎಂಬ ತರಾತುರಿಯಲ್ಲಿ ಪಟ್ಟಿ ಪ್ರಕಟಿಸಿದಂತೆ ಕಂಡು ಬಂದಿದೆ. ಪರೀಕ್ಷೆಯಲ್ಲಿ ಬೇರೆ ಬೇರೆ ಸರಣಿಯ ಪ್ರಶ್ನೆ ಪತ್ರಿಕೆ ನೀಡಲಾಗಿದ್ದು, ಈ ಪೈಕಿ ಹಲವು ಪ್ರಶ್ನೆ ಪತ್ರಿಕೆಯ ಉತ್ತರಗಳು ಗೊಂದಲಮಯವಾಗಿವೆ.
ಚುನಾವಣಾ ಆಯೋಗದ ಮುಖ್ಯಸ್ಥರನ್ನು ನೇಮಿಸುವುದು ಯಾರು?
ಉದಾಹರಣೆ – ಭಾರತದ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಯಾರು ನೇಮಕ ಮಾಡುತ್ತಾರೆ? ಅಂತ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರವಾಗಿ (A) ಪ್ರಧಾನಮಂತ್ರಿ (B) ಪಾರ್ಲಿಮೆಂಟ್ (C) ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು (D) ರಾಷ್ಟ್ರಪತಿಗಳು ಎಂದು ಆಯ್ಕೆಗಳನ್ನು ನೀಡಲಾಗಿತ್ತು. ಇದಕ್ಕೆ ಸರಿ ಉತ್ತರ (D) ರಾಷ್ಟ್ರಪತಿಗಳು ಎಂದಾಗಬೇಕು. ಆದರೆ ಕೀ ಉತ್ತರದಲ್ಲಿ (B) ಪಾರ್ಲಿಮೆಂಟ್ ಅಂತ ತಪ್ಪಾಗಿ ಕೊಡಲಾಗಿದೆ. ಭಾರತದ ಸಂವಿಧಾನದ 324(2) ಅನ್ವಯ ಮುಖ್ಯ ಚುನಾವಣಾ ಆಯುಕ್ತರನ್ನು ಕೇಂದ್ರ ಸಚಿವ ಸಂಪುಟದ ಸಲಹೆ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ. ಆದರೆ ಉತ್ತರದಲ್ಲಿ ಪಾರ್ಲಿಮೆಂಟ್ ಅಂತ ಕೊಡಲಾಗಿದೆ.
ಹಣಕಾಸಿನ ಪರಿಸ್ಥಿತಿಯಲ್ಲಿ ಹೇಗಿರುತ್ತದೆ?
ಇನ್ನೊಂದು ಪ್ರಶ್ನೆ - ಹಣಕಾಸು ತುರ್ತು ಪರಿಸ್ಥಿತಿಯಲ್ಲಿ (A) ರಾಜಕಾರಣಿಗಳು ಮತ್ತು ಮಂತ್ರಿಗಳು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ. (B) ಹಣಕಾಸಿನ ನಿಯಮಗಳನ್ನು ಅನುಸರಿಸಬೇಕು (C) ಎಲ್ಲಾ ನೌಕರರ ವೇತನ ಕಡಿತಗೊಳಿಸಲಾಗುತ್ತದೆ (D) ನ್ಯಾಯಾಂಗದ ಸದಸ್ಯರ ವೇತನ ಕಡಿಮೆ ಮಾಡಲಾಗುತ್ತದೆ ಎಂಬ ಉತ್ತರ ನೀಡಲಾಗಿದೆ. ನಿಯಮದಂತೆ ಇದಕ್ಕೆ ಎಲ್ಲಾ ಉತ್ತರಗಳೂ ಅನ್ವಯಿಸುತ್ತವೆ. ಆದರೆ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದ ಕೀ ಉತ್ತರದಲ್ಲಿ (D) ನ್ಯಾಯಾಂಗದ ಸದಸ್ಯರ ವೇತನ ಕಡಿಮೆ ಮಾಡಲಾಗುತ್ತದೆ ಎಂಬ ಉತ್ತರ ನೀಡಲಾಗಿದೆ.
Requested Executive director of KEA to revisit final key answer of KPTCL Junior Assistant exam again and then release the results .@Bhavyanmurthy pic.twitter.com/oWQkoZ3rn7
— KSCEAA (@ksceaa) January 4, 2023
ಇನ್ನು ಪರೀಕ್ಷಾ ಪ್ರಾಧಿಕಾರದ ಈ ಬೇಜವಾಬ್ದಾರಿ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಕಾಂಗ್ರೆಸ್ ವಕ್ತಾರೆಯೂ ಆಗಿರುವ ಯುವ ನಾಯಕಿ ಭವ್ಯಾ ನರಸಿಂಹಮೂರ್ತಿ ಅವರು ನೊಂದ ಅಭ್ಯರ್ಥಿಗಳ ಬೆನ್ನಿಗೆ ನಿಂತಿದ್ದಾರೆ. ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಸಂಘದ (KSCEAA) ಅಧ್ಯಕ್ಷೆಯೂ ಆಗಿರುವ ಭವ್ಯಾ ನರಸಿಂಹಮೂರ್ತಿ, ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.
ಅಭ್ಯರ್ಥಿಗಳ ಜೊತೆ ದಾಖಲೆಗಳ ಸಮೇತ ಪ್ರಾಧಿಕಾರದ ಕಚೇರಿಗೆ ತೆರಳಿದ ಭವ್ಯಾ ನರಸಿಂಹಮೂರ್ತಿ, ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ವಿವರಿಸಿದ್ದಾರೆ. ಪರೀಕ್ಷಾ ಪ್ರಾಧಿಕಾರವೇ ಮಾಡಿರುವ ಎಡವಟ್ಟುಗಳನ್ನು ತೆರೆದಿಟ್ಟಿದ್ದಾರೆ.
“ಪರೀಕ್ಷೆಯಲ್ಲಿ ಎಡವಟ್ಟುಗಳು ಇದೇ ಮೊದಲಲ್ಲ”
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಭವ್ಯಾ ನರಸಿಂಹಮೂರ್ತಿ, ಈ ರೀತಿ ಪರೀಕ್ಷೆಯಲ್ಲಿ ಗೋಲ್ಮಾಲ್, ಗೊಂದಲಗಳು ನಡೆಯುತ್ತಿರುವುದು ಇದೇ ಮೊದಲಲ್ಲ ಎಂದಿದ್ದಾರೆ. ಕೆಪಿಟಿಸಿಎಲ್ಗಾಗಿ ಕೆಇಎ ನಡೆಸಿದ್ದ ಪರೀಕ್ಷೆಯ ಕೀ ಆನ್ಸರ್ಸ್ ತಪ್ಪಾಗಿ ಕೊಟ್ಟಿದ್ದಾರೆ. ತಪ್ಪಾಗಿರೋ ಬಗ್ಗೆ ಪರೀಕ್ಷಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿದ್ದೇವೆ. ಅಭ್ಯರ್ಥಿಗಳಿಗೆ ಒಂದೊಂದು ಮಾರ್ಕ್ ಕೂಡ ಇಂಪಾರ್ಟೆಂಟ್ ಆಗಿರುತ್ತೆ. ಇದನ್ನ ಮನವರಿಕೆ ಮಾಡಿ, ದಾಖಲೆಗಳನ್ನು ಇಮೇಲ್ ಮಾಡಿದ್ದೇವೆ ಅಂತ ಹೇಳಿದ್ದಾರೆ. ನಾವು ಕೆಪಿಟಿಸಿಎಲ್ ಪರೀಕ್ಷೆ ಕೀ ಆನ್ಸರ್ ಗೊಂದಲದಿಂದಾಗಿ ನೊಂದ ಅಭ್ಯರ್ಥಿಗಳ ಪರ ಇರುತ್ತೇವೆ ಅಂತ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Explained: ಪಿಎಸ್ಐ Exam Scamನ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಯಾರು? ಇಲ್ಲಿದೆ ಓದಿ 'ದಿವ್ಯ' ಇತಿಹಾಸ!"ಪರೀಕ್ಷೆ ಬರೆಯುವುದೇ ಬೇಸರವಾಗಿದೆ"
"ರಾಜ್ಯ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ಈ ರೀತಿ ಪದೇ ಪದೇ ಗೋಲ್ಮಾಲ್ ಆಗುತ್ತಾ ಇದೆ. ಕೆಪಿಟಿಸಿಎಲ್ ಪರೀಕ್ಷೆಯಲ್ಲೇ ಗೋಲ್ಮಾಲ್ ಆಗಿರುವಾಗಲೇ, ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ ಕೀ ಆನ್ಸರ್ ಕೂಡ ತಪ್ಪಾಗಿದ್ದು ಬೇಜವಾಬ್ದಾರಿಗೆ ಹಿಡಿದ ಕನ್ನಡಿ. ಈ ರೀತಿಯ ಪರೀಕ್ಷೆ ಬರೆದು ಟೆನ್ಶನ್ ಮಾಡಿಕೊಳ್ಳುವುದಕ್ಕಿಂತ ಬರೆಯದೇ ಕೂಲಿ ನಾಲಿ ಮಾಡುವುದೇ ಉತ್ತಮ" - ನೊಂದ ಅಭ್ಯರ್ಥಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ