Chitradurga: KPTCL ಪರೀಕ್ಷೆಗೆ ಕಟ್ಟು ನಿಟ್ಟಿನ ಕ್ರಮ! ಮೆಟಲ್ ಡಿಟೆಕ್ಟರ್, ಸಿಸಿಟಿವಿ ಅಳವಡಿಕೆ

ಕೆಪಿಟಿಸಿಎಲ್ (KPTCL) ಸ್ಪರ್ಧಾತ್ಮಕ ಪರೀಕ್ಷೆಯನ್ನು (Competitive Exam) ಸುವ್ಯವಸ್ಥಿತವಾಗಿ ಹಾಗೂ ಸುಗಮವಾಗಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪರೀಕ್ಷೆ ಸಂದರ್ಭ ಪೂರ್ವಭಾವಿ ಸಭೆ

ಪರೀಕ್ಷೆ ಸಂದರ್ಭ ಪೂರ್ವಭಾವಿ ಸಭೆ

  • Share this:
ಚಿತ್ರದುರ್ಗ(ಆ.05): ಆಗಸ್ಟ್ 07ರಂದು ನಡೆಯಲಿರುವ ಕೆಪಿಟಿಸಿಎಲ್ (KPTCL) ಸ್ಪರ್ಧಾತ್ಮಕ ಪರೀಕ್ಷೆಯನ್ನು (Competitive Exam) ಸುವ್ಯವಸ್ಥಿತವಾಗಿ ಹಾಗೂ ಸುಗಮವಾಗಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ KPTCL ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಸಿದ್ಧತೆ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ಕೆಪಿಟಿಸಿಎಲ್ ನೇಮಕಾತಿಯ  (Recruitment) ಸ್ಪರ್ಧಾತ್ಮಕ ಪರೀಕ್ಷೆಗೆ ಜಿಲ್ಲೆಯಲ್ಲಿ 8592 ಅಭ್ಯರ್ಥಿಗಳು ಹಾಜರಾಗಲಿದ್ದು, ಪರೀಕ್ಷೆ ನಡೆಯಲಿರುವ ಎಲ್ಲಾ 19 ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿ ವಿದ್ಯಾರ್ಥಿಗಳನ್ನು (Students) ತಪಾಸಣೆಗೆ ಒಳಪಡಿಸಬೇಕು ಹಾಗೂ ಪರೀಕ್ಷೆ ನಡೆಯುವ ಎಲ್ಲಾ ಕೊಠಡಿಗಳಲ್ಲಿ ಸಿಸಿ ಟಿವಿ  (CCTV) ಕ್ಯಾಮರಾ ಅಳವಡಿಸಬೇಕು ಎಂದು ಸೂಚನೆ ನೀಡಿದರು.

ಅಲ್ಲದೇ ಪರೀಕ್ಷೆಯಲ್ಲಿ ಪಾವಿತ್ರ್ಯತೆ ಕಾಪಾಡಿ, ಪರೀಕ್ಷಾ ಕಾರ್ಯವನ್ನು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆಯನ್ನು ಸುಗಮವಾಗಿ ನಡೆಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಬಳಿಕ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಮಾತನಾಡಿ, ಆಗಸ್ಟ್ 07ರಂದು ಬೆಳಿಗ್ಗೆ 10.30 ರಿಂದ 12.30 ರವರೆಗೆ ಕಿರಿಯ ಸಹಾಯಕ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಕಿರಿಯ ಸಹಾಯಕ ಹುದ್ದೆಗೆ 8592 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.

ಎಲ್ಲೆಲ್ಲಿ ಪರೀಕ್ಷೆ

ಚಿತ್ರದುರ್ಗ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಮಹಾರಾಣಿ ಪದವಿಪೂರ್ವ ಕಾಲೇಜು, ಬೃಹನ್ಮಠ ಪದವಿಪೂರ್ವ ಕಾಲೇಜು, ಕೆಎಂಎಸ್ ಪದವಿಪೂರ್ವ ಕಾಲೇಜು, ಚಿನ್ಮೂಲಾದ್ರಿ ಸಂಯುಕ್ತ ಪದವಿಪೂರ್ವ ಕಾಲೇಜು, ಡಾನ್ ಬಾಸ್ಕೋ ಪದವಿಪೂರ್ವ ಕಾಲೇಜು, ಎಸ್‍ಆರ್​ಎಸ್ ಪದವಿಪೂರ್ವ ಕಾಲೇಜು, ಎಸ್‍ಎಲ್‍ವಿ ಪದವಿಪೂರ್ವ ಕಾಲೇಜಲ್ಲಿ ನಡೆಯಲಿದೆ.



ಎಸ್‍ಜೆಎಂ ಸಂಯುಕ್ತ ಪದವಿಪೂರ್ವ ಕಾಲೇಜು, ವೆಸ್ಟರ್ನ್ ಹಿಲ್ಸ್ ಪದವಿಪೂರ್ವ ಕಾಲೇಜು, ಮಹೇಶ್ ಪದವಿಪೂರ್ವ ಕಾಲೇಜು, ವಾಸವಿ ಕನ್ನಡ ಪ್ರೌಢಶಾಲೆ, ಎಸ್‍ಜೆಎಂ ಪಾಲಿಟೆಕ್ನಿಕ್ ಜೆಎಂಐಟಿ ಕ್ಯಾಂಪಸ್ ಚಿತ್ರದುರ್ಗ, ಎಸ್‍ಜೆಎಂ ಪದವಿಪೂರ್ವ ಕಾಲೇಜು, ಸರ್ಕಾರಿ ಕಲಾ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು, ಎಸ್‍ಜೆಎಂ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಒಟ್ಟು 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಆಗಸ್ಟ್ 7 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಕನ್ನಡ ಭಾಷೆಯನ್ನು ಅಧ್ಯಯನ ಮಾಡದೇ ಇರುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಲಿದ್ದು, ಕನ್ನಡ ಭಾಷಾ ಪರೀಕ್ಷೆಯು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಈ ಪರೀಕ್ಷೆಗೆ 384 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದರು.

ಜೆರಾಕ್ಸ್ ಅಂಗಡಿ ಕ್ಲೋಸ್

ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪರೀಕ್ಷೆ ಕೇಂದ್ರಗಳು ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಜಾಗೃತದಳ ನೇಮಕ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಅವಶ್ಯಕತೆ ಇದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಬೇಕು.

ವಾಚ್ ಧರಿಸುವಂತಿಲ್ಲ

ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಯಾವುದೇ ರೀತಿಯ ಕೈ ಗಡಿಯಾರವನ್ನು ಧರಿಸುವಂತಿಲ್ಲ ಮತ್ತು ಕೊಂಡೊಯ್ಯುವಂತಿಲ್ಲ. ಮೊಬೈಲ್ ಪೋನುಗಳನ್ನು ತರವುದು ಕಡ್ಡಾಯವಾಗಿ ನಿಷೇಧಿಸಿದೆ. ಇನ್ನೂ ಉಪನ್ಯಾಸಕರು, ಶಿಕ್ಷಕರು ಹಾಗೂ ಸಂಬಂಧಿಕರ, ಸ್ವಂತ ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದರೆ ಅಂತಹ ಉಪನ್ಯಾಸಕರು, ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವಂತೆ ಇಲ್ಲ ಎಂದರು.

ಇದನ್ನೂ ಓದಿ: Evening Digest: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆ: ನಟಿ ರಶ್ಮಿಕಾ ಸಿನಿಮಾಗೆ ಎದುರಾಯ್ತು ಕಂಟಕ: ಇಂದಿನ ಪ್ರಮುಖ ಸುದ್ದಿಗಳು

ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ತುರ್ತು ವೈದ್ಯಕೀಯ ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಆಶಾಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಮನವಿ ಮಾಡಿದರು. ಪರೀಕ್ಷಾ ನಡೆಯುವ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಿದೆ.

ಅಭ್ಯರ್ಥಿಗಳ ವಸ್ತ್ರ ಸಂಹಿತೆ

ಅಭ್ಯರ್ಥಿಗಳು ಸಮವಸ್ತ್ರ ಸಂಹಿತೆ ಪಾಲಿಸಬೇಕು. ಅರ್ಧತೋಳಿನ ಷರ್ಟ್ ಧರಿಸಬೇಕು. ಆಭರಣ ಧರಿಸುವಂತಿಲ್ಲ ಎಂದು ಹೇಳಿದರು. ಅಭ್ಯರ್ಥಿಗಳು, ಪರೀಕ್ಷೆ ಪ್ರಾರಂಭವಾಗುವ ಮೊದಲನೇ ಬೆಲ್ ಆಗುವ ಕನಿಷ್ಟ ಎರಡು ಗಂಟೆಯ ಕೊಠಡಿಯ ಒಳಗೆ ಅನುಮತಿಸುವುದಿಲ್ಲ ಎಂದರು.

ಇದನ್ನೂ ಓದಿ: ಅನಧಿಕೃತ ಬ್ಯಾನರ್​​ಗಳ ಹಾವಳಿ: ಪ್ರಿಂಟಿಂಗ್ ಶಾಪ್​​ಗಳ ಮೇಲೆ ಬಿಬಿಎಂಪಿ ಹದ್ದಿನ ಕಣ್ಣು

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಪೋನು, ಬ್ಲೂಟೂಥ್, ಸ್ಲೈಡ್ ರೂಲ್ಸ್, ವೈಟ್ ಪ್ಲೂಯಿಡ್, ವೈರ್ಲೆಸ್ ಸೆಟ್ಸ್, ಪೇಪರ್ ಚೀಟಿ, ಬುಕ್ಸ್, ಇತ್ಯಾದಿಗಳನ್ನು ತರುವುದನ್ನು ನಿಷೇಧ ಎಂದಿದ್ದಾರೆ.
Published by:Divya D
First published: