ಬಾಗಲಕೋಟೆ (ಜ. 25) : ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಪ್ರಮುಖ ಆರೋಪಿ ದ್ವಿತೀಯ ದರ್ಜೆ ಸಹಾಯಕ ರಮೇಶ್ ಮತ್ತು ಸ್ಟೇನೋಗ್ರಾಫರ್ ಆಗಿದ್ದ ಸನಾ ಬೇಡಿ ಎಂಬುದು ಸಿಸಿಬಿ ತನಿಖೆ ವೇಳೆ ಗೊತ್ತಾಗಿದೆ. ಅಷ್ಟೇ ಅಲ್ಲದೇ , ಸೋರಿಕೆ ಮಾಡಿದ ಪ್ರಮುಖ ಆರೋಪಿ ಕೂಡ ಎಫ್ಡಿಎ ಪರೀಕ್ಷೆ ಎದುರಿಸಬೇಕಿತ್ತು ಎಂಬ ಅಂಶ ಬಯಲಾಗಿದೆ. ಪರೀಕ್ಷೆಯ ಹಿಂದಿನ ದಿನ ಹಲವು ವರ್ಷಗಳ ಬಳಿಕ ತನ್ನೂರಿಗೆ ಬಂದಿದ್ದ ಈತ, ಅಲ್ಲಿ ಹಲವರಿಗೆ 12 ಲಕ್ಷ ರೂಗೆ ಪತ್ರಿಕೆಯನ್ನು ಹಂಚಿಕೆ ಮಾಡಿದ್ದಾನೆ. ಕೆಪಿಎಸ್ಸಿ ಕಚೇರಿಯಲ್ಲಿಯೇ ಎಸ್ಡಿಎ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಈತ, ಪ್ರಕರಣ ಬಯಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಳ್ಳುವ ಯತ್ನ ನಡೆಸಿದ್ದ. ಈ ಪ್ರಕರಣ ಕುರಿತು ಮಾತನಾಡಿರುವ ಆತನ ತಾಯಿ ಶಾಂತವ್ವ, ತಮ್ಮ ಮಗ ಅಮಾಯಕನಾಗಿದ್ದು, ಯಾರೋದೋ ಕೃತ್ಯಕ್ಕೆ ಬಲಿಯಾಗಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಈ ರಮೇಶ್
ರಮೇಶ್ ಹೆರಕಲ್, ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬೂದಿಹಾಳ ಎಸ್ ಜಿ ಗ್ರಾಮದವನು. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೆಕ್ಯಾನಿಕ್ ಇಂಜಿನಿಯರಿಂಗ್ ಪದವೀಧರ. ಚಿಕ್ಕಪಡಸಲಗಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಜಮಖಂಡಿಯಲ್ಲಿ ಪಿಯುಸಿ ಪಡೆದುಕೊಂಡಿದ್ದಾನೆ. ಜನವರಿ 15, 2017ರಂದು ಕೆಪಿಎಸ್ಸಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ನೇಮಕಗೊಂಡಿದ್ದ. ತಮ್ಮ ಮಗ ಓದಿನಲ್ಲಿ ಮುಂದಿದ್ದ ಆತನಿಗಾಗಿ ಕಷ್ಟ ಪಟ್ಟು ಸಾಲ ಮಾಡಿ ವಿದ್ಯಾಭ್ಯಾಸ ನೀಡಿದ್ದೇವೆ ಎನ್ನುತ್ತಾರೆ ರಮೇಶ್ ತಾಯಿ ಶಾಂತವ್ವ.
ಕೆಪಿಎಸ್ಸಿಯಲ್ಲಿ ರಹಸ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ
ಕೆಪಿಎಸ್ಸಿ ಕಚೇರಿಯಲ್ಲಿ ರಹಸ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಹೆರಕಲ್ ಮತ್ತು ಸ್ಟೇನೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದ ಸನಾ ಬೇಡಿ ಸ್ನೇಹಿತರಾಗಿದ್ದರು. ಪ್ರಶ್ನೆ ಪತ್ರಿಕೆಯನ್ನು ಸನಾ ಬೇಡಿ ಸೋರಿಕೆ ಮಾಡಿ ರಮೇಶ್ ನಿಗೆ ಕೊಟ್ಟಿದ್ದಾಳೆ. ಜ. 23ರಂದು ಬೆಂಗಳೂರಿನಿಂದ ರಮೇಶ್ ಹೆರಕಲ್ ಬೂದಿಹಾಳ ಗ್ರಾಮಕ್ಕೆ ಬಂದಿದ್ದಾನೆ. ತಾಯಿ ತಂದೆಗೆ ಭೇಟಿಯಾಗಿ ಮಾತುಕತೆ ನಡೆಸಿ, ವಾಪಸ್ ಪರೀಕ್ಷೆ ಇದೆ ಎಂದು ತಾಯಿ ತವರೂರು ಹಿರೇಪಡಸಲಗಿ ಗ್ರಾಮಕ್ಕೆ ಹೋಗಿದ್ದಾನೆ. ಅಂದೇ ರಾತ್ರಿ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ರಮೇಶ್ ಹೆರಕಲ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ.
ಇದನ್ನು ಓದಿ: ಮುಗಿಯದ ಖಾತೆ ಕಗ್ಗಂಟು: ವೈದ್ಯಕೀಯ ಖಾತೆ ಪಡೆಯುವಲ್ಲಿ ಸುಧಾಕರ್ ಯಶಸ್ವಿ; ಮೂವರಿಗೆ ಖಾತೆ ಮರುಹಂಚಿಕೆ
ಇನ್ನು ಜಮಖಂಡಿ ಭಾಗದ ಚಿಕ್ಕಪಡಸಲಗಿ ಗ್ರಾಮದ ಅಶೋಕ್ ಕೃಷ್ಣಾ, ಚಿನಗುಂಡಿ ಗ್ರಾಮದ ರಮೇಶ್ ಕರಿಯಪ್ಪ ಮತ್ತಿತರ ಅಭ್ಯರ್ಥಿಗಳಿಗೆ ಈತ 12ಲಕ್ಷ ರೂಗೆ ಡೀಲ್ ಮಾಡಿದ್ದಾನೆ.. ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದ್ದಂತೆ ಸಿಸಿಬಿ ಪೊಲೀಸರು ಬೆನ್ನಟ್ಟಿ, ಬಾಗಲಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಬೀಳಗಿ ಪೊಲೀಸರು ಹುಟ್ಟೂರು ಬೂದಿಹಾಳ ಎಸ್ ಜಿ ಗ್ರಾಮಕ್ಕೆ ಹೋದಾಗ ರಮೇಶ್ ಇಲ್ಲದಿದ್ದಾಗ ಸಹೋದರ ಶ್ರೀಕಾಂತ್ ನನ್ನು ವಿಚಾರಿಸಿದ್ದಾರೆ. ಬಳಿಕ ಹಿರೇಪಡಸಲಗಿ ಗ್ರಾಮದಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಸಿಸಿಬಿ ಪೊಲೀಸರಿಗೆ ಒಪ್ಪಿಸಿದ್ದಾರೆ
ರಮೇಶ್ ಹೆರಕಲ್ ಗೆ ಸಿಸಿಬಿ ಪೊಲೀಸರು ಡ್ರೀಲ್, ಸೋರಿಕೆ ಕಹಾನಿ ಹೊರಕ್ಕೆ!
ರಮೇಶ್ ಹೆರಕಲ್ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದಾಗ ಇದರ ಪ್ರಮುಖ ಆರೋಪಿ ಕುರಿತು ರೋಚಕ ಮಾಹಿತಿ ಬಿಟ್ಟು ಕೊಟ್ಟಿದ್ದಾನೆ. ಪ್ರಶ್ನೆ ಪತ್ರಿಕೆಯನ್ನು ಸನಾ ಬೇಡಿ ಕೊಟ್ಟಿದ್ದು, ಅದನ್ನು ಚಂದ್ರು ಸೇರಿದಂತೆ ಹಲವರಿಗೆ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾನೆ. ಸದ್ಯ ಕಳೆದ ಮೂರು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಫ್ ಡಿ ಎ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ಕಿಂಗ್ ಪಿನ್ ಪ್ರಮುಖ ಆರೋಪಿಗಳಿಬ್ಬರು ಸಿಸಿಬಿ ಕಸ್ಟಡಿಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ