ಕಾಂಗ್ರೆಸ್​ ಸೇರಲು ಸತೀಶ್​ ಜಾರಕಿಹೊಳಿ ಆಹ್ವಾನ; ಜೆಡಿಎಸ್​ ತೊರೆಯುತ್ತಾರಾ ಅಶೋಕ ಪೂಜಾರಿ?

2019ರ ಗೋಕಾಕ್ ಉಪಚುನಾವಣೆ ಸಂದರ್ಭದಲ್ಲಿ ಅಶೋಕ ಪೂಜಾರಿ ಕಾಂಗ್ರೆಸ್ ಸೇರಿಕೊಳ್ಳಲು ಜಿಲ್ಲೆಯ ಅನೇಕ ನಾಯಕರು ಪ್ರಯತ್ನ ಮಾಡಿದ್ದರು. ಆದರೆ, ಇದು ಯಶಸ್ವಿಯಾಗಿರಲಿಲ್ಲ

ಜೆಡಿಎಸ್​ ನಾಯಕನ ಜೊತೆ ಸತೀಶ್​ ಜಾರಕಿಹೊಳಿ

ಜೆಡಿಎಸ್​ ನಾಯಕನ ಜೊತೆ ಸತೀಶ್​ ಜಾರಕಿಹೊಳಿ

  • Share this:
ಬೆಳಗಾವಿ (ಫೆ.18): ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ದಿನಾಂಕ ನಿಗದಿಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ಗೆಲ್ಲಲ್ಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಇದೀಗ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಆರಂಭವಾಗುವ ಸಾಧ್ಯತೆ ಇದೆ. ಗೋಕಾಕ್ ಕ್ಷೇತ್ರದ ಜೆಡಿಎಸ್ ಮುಖಂಡ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದಾರೆ. ಇದು ಬೆಳಗಾವಿ ರಾಜಕೀಯ ವಲಯದಲ್ಲಿ ಮಹತ್ವ ಬೆಳವಣಿಗೆ ಆಗಿದೆ. ಕೇಂದ್ರ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದಿಂದ  ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಬೇಕಿದೆ. ಇನ್ನೂ ಕೆಲವೇ ದಿನಗಳಲ್ಲಿ ಉಪಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರ ಮಾಡಲು ಇದೀಗ ಸತೀಶ ಜಾರಕಿಹೊಳಿ ಮುಂದಾಗಿದ್ದಾರೆ.

ಗೋಕಾಕ್ ನ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಮನೆಗೆ  ಭೇಟಿ ನೀಡಿದ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ. ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ರಾಜಕೀಯ ಮಾಡಿಕೊಂಡು ಬಂದಿದ್ದಾರೆ.  ಕ್ಷೇತ್ರದಲ್ಲಿ ಕುಟುಂಬ ರಾಜಕೀಯ, ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಅಶೋಕ ಪೂಜಾರಿ 2008, 2013ರಲ್ಲಿ ಜೆಡಿಎಸ್ ನಿಂದ ನಂತರ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ.  2019ರಲ್ಲಿ ನಡೆದ ಗೋಕಾಕ್ ಉಪಚನಾವಣೆಯಲ್ಲಿ ಒತ್ತಡವಿದ್ದರು ಹೊಂದಾಣಿಕೆ ಮಾಡಿಕೊಳ್ಳದೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು.

2019ರ ಗೋಕಾಕ್ ಉಪಚುನಾವಣೆ ಸಂದರ್ಭದಲ್ಲಿ ಅಶೋಕ ಪೂಜಾರಿ ಕಾಂಗ್ರೆಸ್ ಸೇರಿಕೊಳ್ಳಲು ಜಿಲ್ಲೆಯ ಅನೇಕ ನಾಯಕರು ಪ್ರಯತ್ನ ಮಾಡಿದ್ದರು. ಆದರೆ, ಇದು ಯಶಸ್ವಿಯಾಗಿರಲಿಲ್ಲ. ರಮೇಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸಿ ಸೋತಿದ್ದರು. ಚುನಾವಣೆ ಬಳಿಕ ಲಖನ್ ಜಾರಕಿಹೊಳಿ ಪಕ್ಷ ಸಂಘಟನೆ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎನ್ನುವ ಆರೋಪವಿದೆ.

ಇದನ್ನು ಓದಿ: ಡಿಕೆಶಿ ಮಗಳ ಮದುವೆ ಆರತಕ್ಷತೆಯಲ್ಲಿ ​ರಾಹುಲ್​, ಪ್ರಿಯಾಂಕಾ; ಗಮನಸೆಳೆದ ಗೋಕಾಕ್​ ಸಾಹುಕಾರ್​

ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉತ್ಸುಕರಾಗಿದ್ದಾರೆ. ಇದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರ ಇವೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮೂರು ಅಭ್ಯರ್ಥಿಗಳ ಹೆಸರು ಗುರುತಿಸಿದೆ. ಈ ಪೈಕಿ ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿ ಇದೆ. ವೀರಶೈವ ಲಿಂಗಾಯತ ಮತದಾರರನ್ನು ಸೆಳೆಯಲು ಅಶೋಕ ಪೂಜಾರಿ ಸಹಕಾರಿಯಾಲಗಿದ್ದಾರೆ ಎಂಬ ಲೆಕ್ಕಚಾರ ಇದೆ. ಇನ್ನೂ ಅಶೋಕ್ ಪೂಜಾರಿಗೆ ಕಾಂಗ್ರೆಸ್ ಬಂದರೆ ಅವರನ್ನು ಅಭ್ಯರ್ಥಿ ಮಾಡಲಿದ್ದಾರೆ ಎಂಬ ಮಾತುಗಳ ಸಹ ಕೇಳಿ ಬಂದಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ ಪೂಜಾರಿ, ನನಗೆ ಸತೀಶ್ ಜಾರಕಿಹೊಳಿ ಪಕ್ಷ ಸೇರಲು ಆಹ್ವಾನ ನೀಡಿದ್ದಾರೆ. ಆದರೆ, ನಾನು ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅನೇಕ ವರ್ಷಗಳಿಂದ ಕಾರ್ಯಕರ್ತರು ನನ್ನ ಬೆನ್ನಿಗೆ ನಿಂತಿದ್ದು, ಅವರ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
Published by:Seema R
First published: