HOME » NEWS » State » KPCC PRESIDENT DK SHIVAKUMAR URGE MINISTER SRIRAMULU AND KARNATAKA MINISTERS TO GIVE RESIGNATION SCT

ಕೊರೋನಾದಿಂದ ದೇವರೇ ಕಾಪಾಡಬೇಕು ಅನ್ನೋರು ತಕ್ಷಣ ರಾಜೀನಾಮೆ ಕೊಡಿ; ಡಿ.ಕೆ. ಶಿವಕುಮಾರ್ ಆಗ್ರಹ

DK Shivakumar: ಪ್ರತಿಪಕ್ಷವಾಗಿ ಈಗ ನಾವು ಅನಿವಾರ್ಯವಾಗಿ ಮಾತನಾಡುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ನಿಭಾಯಿಸಲು ನಿಮಗೆ ಸಾಧ್ಯವಿಲ್ಲ ಎಂದಾದರೆ, ಇಡೀ ಸರ್ಕಾರ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

news18-kannada
Updated:July 16, 2020, 3:47 PM IST
ಕೊರೋನಾದಿಂದ ದೇವರೇ ಕಾಪಾಡಬೇಕು ಅನ್ನೋರು ತಕ್ಷಣ ರಾಜೀನಾಮೆ ಕೊಡಿ; ಡಿ.ಕೆ. ಶಿವಕುಮಾರ್ ಆಗ್ರಹ
ಡಿ.ಕೆ ಶಿವಕುಮಾರ್
  • Share this:
ಬೆಂಗಳೂರು (ಜು. 16): ಅಧಿಕಾರಕ್ಕಾಗಿ ಬಿಜೆಪಿಯವರು ಏನೇನೋ ಮಾಡಿದರು. ಈಗ ನಮ್ಮ ಕೈಯಲ್ಲಿ ಆಗಲ್ಲ ಅಂತ ಹೇಳುತ್ತಿದ್ದಾರೆ. ಕೊರೋನಾ ಸೋಂಕಿನ ಪರಿಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಿಲ್ಲ, ದೇವರೇ ನಮ್ಮನ್ನು ಕಾಪಾಡಬೇಕು ಎಂದು ಒಪ್ಪಿಕೊಳ್ಳುವವರು ಅಧಿಕಾರದಲ್ಲಿ ಯಾಕಿರಬೇಕು? ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಕೊರೋನಾದಿಂದ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಸಚಿವ ಬಿ. ಶ್ರೀರಾಮುಲು ಹೇಳಿಕೆಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆ ಎಲ್ಲೆಲ್ಲಿಗೋ ಹೋಗುತ್ತಿದೆ.  ಅದು ಕೇವಲ ಸಚಿವ ಶ್ರೀರಾಮುಲು ಹೇಳಿಕೆ ಅಲ್ಲ, ಸರ್ಕಾರದ ಹೇಳಿಕೆ. ಈಗ ಮುಖ್ಯಮಂತ್ರಿಯರವರ ಟೀಂ ನಾವು ಏನೂ ಮಾಡಕ್ಕೆ ಆಗಲ್ಲ ದೇವರೇ ಕಾಪಾಡಬೇಕು ಎಂದರೆ ಹೇಗೆ? ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸೋಕೆ ಆಗದಿದ್ದರೆ ಅವರೆಲ್ಲ ಅಧಿಕಾರದಲ್ಲಿ ಯಾಕಿರಬೇಕು? ಎಂದು ರಾಜ್ಯ ಸರ್ಕಾರದ ಸಚಿವರನ್ನು  ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇನ್ನೆರಡು ತಿಂಗಳಲ್ಲಿ ಕೊರೋನಾ ಹೆಚ್ಚಳ, ಆ ದೇವರೆ ನಮ್ಮನ್ನು ಕಾಪಾಡಬೇಕು; ಸಚಿವ ಶ್ರೀರಾಮುಲು

ಅವರು ಒಂದು ಕ್ಷಣವೂ ವೇಸ್ಟ್ ಮಾಡದೆ ರಾಜೀನಾಮೆ ನೀಡಲಿ, ರಾಜ್ಯಪಾಲರ ಆಳ್ವಿಕೆ ಜಾರಿಗೆ ಬರಲಿ. ಇವರ ಬದಲಾಗಿ ಅಧಿಕಾರಿಗಳೇ ಆಡಳಿತ  ನಡೆಸುತ್ತಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಮಿತಿಮೀರುತ್ತಿರುವ ಈ ಸಂದರ್ಭದಲ್ಲಿ ನಾವು ರಾಜಕಾರಣ ಮಾಡಲಿಲ್ಲ. ಕೊರೋನಾ ವಿಚಾರದಲ್ಲಿ ಸಂಪೂರ್ಣ ಸಹಕಾರವನ್ನು ನೀಡಿದ್ದೆವು. ಆದರೂ ಪರಿಸ್ಥಿತಿ ನಿಭಾಯಿಸೋಕೆ ಆಗಲ್ಲ ಅಂದ್ರೆ ಏನು ಮಾಡಬೇಕು? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷವಾಗಿ ಈಗ ನಾವು ಅನಿವಾರ್ಯವಾಗಿ ಮಾತನಾಡುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಶ್ರೀರಾಮುಲು ಹೇಳಿಕೆ ಈಗ ಇಡೀ ರಾಜ್ಯವನ್ನೇ ತಲ್ಲಣಗೊಳಿಸುತ್ತಿದೆ. ಇದು ಕೇವಲ ಶ್ರೀರಾಮುಲು ಹೇಳಿಕೆಯಲ್ಲ ಇದು ಸರ್ಕಾರದ ಮಾತಾಗಿದೆ. ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ.  ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ನಿಮಗೆ ನೀಡಲಾಗಿದೆ ಅದನ್ನು ನಿಭಾಯಿಸಲು ನಿಮಗೆ ಸಾಧ್ಯವಿಲ್ಲ ಎಂದಾದರೆ, ಇಡೀ ಸರ್ಕಾರ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.ನಿನ್ನೆ ಚಿತ್ರದುರ್ಗದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಕೊರೋನಾ ನಿಯಂತ್ರಣ ಯಾರ ಕೈಯಲ್ಲಿದೆ? ಆ ದೇವರೇ ನಮ್ಮನ್ನು ಕಾಪಾಡಬೇಕು. ಮುಂದಿನ ಎರಡು ತಿಂಗಳಲ್ಲಿ ಇಡೀ ವಿಶ್ವದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತದೆ. ಹಾಗಾಗಿ, ಎಲ್ಲರೂ ಜಾಗೃತರಾಗಿ ಇರಬೇಕಿದೆ. ಇದು ಆಡಳಿತ ಪಕ್ಷ, ಶ್ರೀಮಂತರು ಬಡವರು ಎಂಬುದಾಗಿ ವಿಭಾಗ ಮಾಡಿ ಬರುತ್ತಿಲ್ಲ. ಮುಂದಿನ 2 ತಿಂಗಳಲ್ಲಿ ಜಾಸ್ತಿ ಆಗುವ ಅವಕಾಶ ನೂರಕ್ಕೆ ನೂರು ಪರ್ಸೆಂಟ್ ಇದೆ. ನಾವೇನಾದರೂ ತಪ್ಪು ಮಾಡಿದ್ದರೆ ಪ್ರಾಯಶ್ಚಿತ್ತ ಅನುಭವಿಸಲು ಸಿದ್ದರಿದ್ದೇವೆ. ಇದು ಬಹಳ ಸಂದಿಗ್ದ ಸಂದರ್ಭ. ಇದರಲ್ಲಿ ಕಾಂಗ್ರೆಸ್​ನವರು ರಾಜಕೀಯ ಮಾಡಬಾರದು ಎಂದು ಹೇಳಿದ್ದರು. ಈ ಮೂಲಕ ರಾಜ್ಯ ಸರ್ಕಾರದ ವೈಫಲ್ಯವನ್ನು ಸಚಿವರೇ  ಬಹಿರಂಗವಾಗಿ ಒಪ್ಪಿಕೊಂಡಿದ್ದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು.
Published by: Sushma Chakre
First published: July 16, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories