DK Shivakumar| ಮತೀಯ ಗೂಂಡಾಗಿರಿ ಸಹಿಸುವುದಾದರೆ ಪೊಲೀಸರೇಕೆ? ಸಿಎಂ ವರ್ತನೆ ಅಪಾಯಕಾರಿ; ಡಿ.ಕೆ. ಶಿವಕುಮಾರ್ ಕಿಡಿ

ದ್ವೇಷವನ್ನು ಹರಡುವ ಕೆಲಸವನ್ನು ಮುಖ್ಯಮಂತ್ರಿಯವರು ಸಮರ್ಥಿಸಿಕೊಳ್ಳಬಾರದು. ಒಂದು ವೇಳೆ ಅವರು ಇದನ್ನು ಸಮರ್ಥಿಸಿಕೊಂಡರೆ, ನಾಳೆ ನೀವು ಯಾವ ಯಾವ ಬಟ್ಟೆ ಧರಿಸಬೇಕು, ಯಾವುದರಲ್ಲಿ ಕಾಫಿ ಕುಡಿಯಬೇಕು ಎಂಬುದನ್ನು ಬಿಜೆಪಿ ಸ್ನೇಹಿತರು ನಿರ್ಧಾರ ಮಾಡುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.

ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್.

 • Share this:
  ಬೆಂಗಳೂರು (ಅಕ್ಟೋಬರ್​ 17); ರಾಜ್ಯದಲ್ಲಿ ಇತ್ತೀಚೆಗೆ ನೈತಿಕ ಪೊಲೀಸ್​ ಗಿರಿ (Moral Policing) ಪ್ರಕರಣಗಳು ಅಧಿಕವಾಗುತ್ತಲೆ ಇದೆ. ಹಿಂದೂ ಹುಡುಗಿ ಮುಸ್ಲಿಂ ಹುಡುಗನ ಜೊತೆ ಬೈಕಲ್ಲಿ ತೆರಳಿದರೆ, ಮುಸ್ಲಿಂ ಹುಡುಗಿ ಹಿಂದೂ ಹುಡುಗನ ಜೊತೆ ತೆರಳಿದರೆ ಅವರನ್ನು ಎರಡೂ ಕೋಮಿನವರು ಹಿಡಿದು ಸಾರ್ವಜನಿಕವಾಗಿ ಶಿಕ್ಷಿಸುವ ಪ್ರಸಂಗಗಳು ದಿನೇ ದಿನೇ ಅಧಿಕವಾಗುತ್ತಿದೆ. ಅದರಲ್ಲೂ ಕರಾವಳಿಯಲ್ಲಿ (Coastal Area) ನೈತಿಕ ಪೊಲೀಸ್​ ಗಿರಿ ಹೆಸರಿನಲ್ಲಿ ಕೆಲವು ಹಿಂದೂಪರ (Hindu Group) ಸಂಘಟನೆಗಳು ದಿನನಿತ್ಯ ಇದೇ ಕೆಲಸದ ಮೇಲೆ ನಿಯೋಜನೆಗೊಂಡಂತೆ ವರ್ತಿಸುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಈ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್​ ಗಿರಿಯನ್ನು ಬೆಂಬಲಿಸಿದ್ದರು. ಆದರೆ, ಸಿಎಂ ಬೊಮ್ಮಾಯಿ (Basavaraja Bommai) ಅವರ ಈ ವರ್ತನೆ ದುರಾದೃಷ್ಟಕರ ಎಂದು ಹೀಗೆಳೆದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​ "ನೈತಿಕ ಪೊಲೀಸ್​ ಗಿರಿ ಹೆಸರಿನಲ್ಲಿ ಮತೀಯ ಗೂಂಡಾಗಿರಿಯನ್ನು ಸಹಿಸಿಕೊಳ್ಳುವುದು ಸರಿಯಲ್ಲ" ಎಂದು ಕಿಡಿಕಾರಿದ್ದಾರೆ.

  ಒಂದು ಪ್ರಶ್ನೆ ವಿಡಿಯೋ ಸರಣಿಯ ಮೂಲಕ ಪ್ರಚಲಿತ ವಿದ್ಯಮಾನಗಳ ಕುರಿತು ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇಂದು ಮತೀಯ ಗೂಂಡಾಗಿರಿಯನ್ನು ಬೆಂಬಲಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ಈ ವಿಡಿಯೋ ಸರಣಿಯಲ್ಲಿ ಖಂಡಿಸಿದ್ದಾರೆ.  ಈಗ ಬಿಡುಗಡೆಯಾಗಿರುವ ವಿಡಿಯೋದಲ್ಲಿ, "ಸಂವಿಧಾನಬದ್ಧ ಪ್ರಜಾಪ್ರಭುತ್ವದ ನೆರಳಲ್ಲಿ ನಾವೆಲ್ಲ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ನಮ್ಮಿಷ್ಟದಂತೆ ಬದುಕುವ ಹಕ್ಕನ್ನು ಸಂವಿಧಾನ ನಮ್ಮೆಲ್ಲರಿಗೂ ನೀಡಿದೆ. ನಿಮ್ಮ ಬದುಕಿನ ಹಕ್ಕಿನ ಬಗ್ಗೆ ಮಾತನಾಡಲು ನಿಮ್ಮ ಮುಂದೆ ನಿಂತಿದ್ದೇನೆ" ಎಂದು ಅವರು ಮಾತು ಆರಂಭಿಸಿ ಮತೀಯ ಗೂಂಡಾಗಿರಿಯನ್ನು ಪ್ರಶ್ನಿಸಿದ್ದಾರೆ.

  ನೈತಿಕ ಪೊಲೀಸ್​ ಗಿರಿಗೆ ಸಂವಿಧಾನದಲ್ಲಿ ಅವಕಾಶ ಇದೆಯಾ?;

  "ನೈತಿಕ ಪೊಲೀಸ್‌ಗಿರಿ (ಮತೀಯ ಗೂಂಡಾಗಿರಿ) ನಡೆಸಲು ಸಂವಿಧಾನದಲ್ಲಿ ಅವಕಾಶ ಇದೆಯಾ? -ಇದು ಈ ವಾರ ನಾನು ನಿಮ್ಮ ಮುಂದೆ ಇಡುತ್ತಿರುವ ಪ್ರಶ್ನೆ" ಎಂದಿದ್ದಾರೆ. "ಜನರು ಬಿಜೆಪಿಯ ಸಿದ್ಧಾಂತದಂತೆಯೇ ಬದುಕಬೇಕೆಂದು ಸರ್ಕಾರ ಬಯಸುತ್ತಿದೆ. ಮಹಿಳೆಯರ ಹಕ್ಕನ್ನೇ ಕಿತ್ತಿಕೊಳ್ಳಲು ಪ್ರಯತ್ನಿಸುತ್ತಿದೆ. ಯುವಜನರನ್ನು ಹಿಂಸಾತ್ಮಕ ದಾರಿಗೆ ದೂಡಲಾಗುತ್ತಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ಮುಖ್ಯಮಂತ್ರಿಯವರೇ ಮತೀಯ ಗೂಂಡಾಗಿರಿಯನ್ನು ಸಮರ್ಥಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

  ದ್ವೇಷ ಹರಡುವುದು ಸರಿಯಲ್ಲ:

  "ದ್ವೇಷವನ್ನು ಹರಡುವ ಕೆಲಸವನ್ನು ಮುಖ್ಯಮಂತ್ರಿಯವರು ಸಮರ್ಥಿಸಿಕೊಳ್ಳಬಾರದು. ಒಂದು ವೇಳೆ ಅವರು ಇದನ್ನು ಸಮರ್ಥಿಸಿಕೊಂಡರೆ, ನಾಳೆ ನೀವು ಯಾವ ಯಾವ ಬಟ್ಟೆ ಧರಿಸಬೇಕು, ಯಾವುದರಲ್ಲಿ ಕಾಫಿ ಕುಡಿಯಬೇಕು ಎಂಬುದನ್ನು ಬಿಜೆಪಿ ಸ್ನೇಹಿತರು ನಿರ್ಧಾರ ಮಾಡುತ್ತಾರೆ" ಎಂದು ಎಚ್ಚರಿಸಿರುವ ಅವರು, ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಕೋರಿದ್ದಾರೆ.

  ಈ ಹಿಂದೆ ಹಲವು ಸಂಗತಿಗಳನ್ನು ಚರ್ಚಿಸಿದ್ದ ಡಿಕೆಶಿ:

  ಒಂದು ಪ್ರಶ್ನೆ ಕಾರ್ಯಕ್ರಮದ ಮೂಲಕ ಡಿ.ಕೆ.ಶಿವಕುಮಾರ್‌ ಈ ಹಿಂದೆಯೂ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ನಾಲ್ಕನೇ ಕಂತಿನಲ್ಲಿ ‘ಉದ್ಯೋಗ ಸೃಷ್ಟಿ’ಯ ಕುರಿತು ಮಾತನಾಡಿದ್ದರು. “ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಏಳು ವರ್ಷ ಆಯಿತು. ಹದಿನಾಲ್ಕು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಿತ್ತು. ನಾನು ನಿಮ್ಮಲ್ಲಿ ಸರ್ಕಾರದ ಉದ್ಯೋಗವನ್ನು ಕೊಡಿ ಎಂದು ಕೇಳುತ್ತಿಲ್ಲ. ಖಾಸಗಿ ಉದ್ಯೋಗಗಳನ್ನು ಸೃಷ್ಟಿ ಮಾಡುವ ಅವಕಾಶ ಸರ್ಕಾರಕ್ಕೆ ಇಲ್ಲವೇ?” ಎಂದು ಅವರು ಪ್ರಶ್ನಿಸಿದ್ದರು.

  ಇದನ್ನೂ ಓದಿ: Bengaluru Victoria Hospital: ಶವದ ಪಕ್ಕದಲ್ಲೇ ರೋಗಿಗೆ ಚಿಕಿತ್ಸೆ ನೀಡಿದ್ರಾ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು? 

  ನಮ್ಮ ಜನ, ನಮ್ಮ ಯುವಕರು, ಪದವಿ ಪಡೆದವರು ಉದ್ಯೋಗವಿಲ್ಲದೆ ಹಳ್ಳಿಗಳಲ್ಲಿ ನರೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸರ್ಕಾರ ಆರ್ಥಿಕವಾಗಿ ಸಹಾಯವನ್ನು ಕೊಡಬೇಕಾಗಿದೆ. ಆದರೆ ಬಂಡವಾಳಶಾಹಿಗಳಿಗೆ ಮಾತ್ರ ಅನೇಕ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದು ಟೀಕಿಸಿದ್ದರು.

  ಇದನ್ನೂ ಓದಿ: Morning Digest: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ, ರೈಡರ್ ಸಿನಿಮಾದ ಸಾಂಗ್ ರಿಲೀಸ್, ಕೇರಳದಲ್ಲಿ ಪ್ರವಾಹ; ಬೆಳಗಿನ ಟಾಪ್ ನ್ಯೂಸ್​ಗಳು

  ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ನಗರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದ್ದವರಿಗೆ ಯಾವುದೇ ಸಹಕಾರವನ್ನು ನೀಡುತ್ತಿಲ್ಲ. ಸರ್ಕಾರ ಇಂತಹ ವಿಚಾರಗಳಲ್ಲಿ ಯಾವ ದಿಕ್ಕಿನಲ್ಲಿ ಹೋಗಬೇಕು? ಉದ್ಯೋಗಗಳನ್ನು ಸೃಷ್ಟಿ ಮಾಡಲಿಕ್ಕೆ, ಕೈಗಾರಿಕೆಗಳನ್ನು ತರಲಿಕ್ಕೆ, ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಗಳನ್ನು ಜನರಿಗೆ ಕೊಡಲಿಕ್ಕೆ ಯಾವೆಲ್ಲ ರೀತಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ನಿಮ್ಮ ಸಲಹೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನಲ್ಲಿ ತಿಳಿಸಿರಿ ಎಂದು ಅವರು ಮನವಿ ಮಾಡಿದ್ದರು.
  Published by:MAshok Kumar
  First published: