ಬೆಂಗಳೂರು: ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆ (Assembly Election) ಹತ್ತಿರವಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಶುರುವಾಗಿವೆ. ಕಾಂಗ್ರೆಸ್ನಿಂದ (Congress) ಹೊರಬಂದು ಬಿಜೆಪಿ (BJP) ಸೇರಿರುವ ರಮೇಶ್ ಜಾರಕಿಹೊಳಿ (Ramesh Jarkiholi), ಡಿಕೆ ಶಿವಕುಮಾರ್ ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದು, ನಮ್ಮ ಪಕ್ಷವನ್ನು ಹಾಳು ಮಾಡಿದವನೇ ಅವನು, ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಅವನೇ ಎಂದು ಕಿಡಿಕಾರಿದ್ದಾರೆ. ಜೊತೆಗೆ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ನೆನೆಪಿಸಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ ನಿಮ್ಮ ವಿರುದ್ಧ ಸಿಬಿಐ ತನಿಖೆ ಮಾಡಿಸುತ್ತಾರೆಂಬ ವಿಷಯಕ್ಕೆ ಪ್ರತಿಕ್ರಿಯಿಸಿದರು. ಯಾವ ತನಿಖೆ ಮಾಡಿಸಲಿ, ಇದು ರಾಜಕಾರಣ, ಆದರೆ ನಮ್ಮ ಪಕ್ಷವನ್ನು ಹಾಳು ಮಾಡಿದ ರಮೇಶ್ ಜಾರಕಿಹೊಳಿ, ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸಿದ್ದು ನಾನೇ ಎಂದು ಹೇಳಿದ್ದಾನೆ. ಇದಕ್ಕೆಲ್ಲಾ ಮೊದಲು ಉತ್ತರ ಕೊಡಲಿ ಎಂದು ಕಿಡಿ ಕಾರಿದರು.
ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದೆ ಅವನು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಅವನಿಗೆ ಲಂಚ ತೆಗೊಳಿ ಅಂತಾ ಹೇಳಿಕೊಟ್ಟಿದ್ನಾ, ಮತಕ್ಕಾಗಿ ಜನರಿಗೆ 6000 ಹಣ ಕೊಡು ಅಂತಾ ನಾನೇನು ಹೇಳಿಕೊಟ್ಟಿದ್ನಾ? ಎಂದು ಅಸಮಧಾನ ವ್ಯಕ್ತಪಡಿಸಿದ ಅವರು ಯಾವ ತನಿಖೆಯನ್ನಾದರೂ ಮಾಡಿಸಲಿ ನಾನು ಎದರುವುದಿಲ್ಲ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಹೇಳಿದ್ದೆನು?
ಮತದಾರರಿಗೆ 6000 ರೂ ಕೊಡುವ ಹೇಳಿಕೆ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ವಿರುದ್ಧ ದೂರು ದಾಖಲಿಸಿತ್ತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ನಾನು ಅಭಿವೃದ್ಧಿಗಾಗಿ ಹಣ ಕೊಡುತ್ತೇನೆ ಎಂದಿದ್ದೆ ಹೊರತು ಮತಕ್ಕಾಗಿ ಅಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಜೊತೆಗೆ ಹೇಳಿಕೆ ನೀಡಿದ್ದ ನಾನು, ಅದರೆ ಕಾಂಗ್ರೆಸ್ನವರು ಸಿಎಂ ಮೇಲೆ ದೂರು ನೀಡಿದ್ದಾರೆ. ಯಾಕಂದ್ರೆ ಡಿಕೆ ಶಿವಕುಮಾರ್ಗೆ ರಮೇಶ್ ಜಾರಕಿಹೊಳಿ ಕಂಡರೆ ಭಯ ಎಂದು ವ್ಯಂಗ್ಯವಾಡಿದ್ದರು.
ನನ್ನನ್ನು ಸಿಕ್ಕಿಸಲು 40 ಕೋಟಿ ಖರ್ಚು
ನನ್ನನ್ನು ಪ್ರಕರಣದಲ್ಲಿ ಸಿಕ್ಕಿಸಲು ಡಿಕೆ ಶಿವಕುಮಾರ್ 40 ಕೋಟಿ ರೂ. ಖರ್ಚು ಮಾಡಿದ್ದಾರೆ. ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡಿದ್ದೇ ಅವರು. ಇದಕ್ಕೆಲ್ಲಾ ನನ್ನ ಬಳಿ ಸಾಕ್ಷಿ ಇದೆ. ಇಂತಹ ನೂರು ಸಿ.ಡಿ ಬಂದರೂ ನಾನು ಗಟ್ಟಿ ಇದ್ದೇನೆ. ಆದರೆ ಒಂದತ್ತು ಸತ್ಯ, ನನ್ನಿಂದಲೇ ಡಿಕೆ ಶಿವಕುಮಾರ್ ರಾಜಕೀಯ ಜೀವನ ಅಂತ್ಯವಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಮೇಶ್ ಜಾರಕಿಹೊಳಿ ವಿರುದ್ಧ ದೂರು
ಇದಕ್ಕೂ ಮುನ್ನ ಕಾಂಗ್ರೆಸ್ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿತ್ತು. ಕಾರ್ಯಕ್ರಮವೊಂದರಲ್ಲಿ ಪ್ರತಿ ಮತದಾರರಿಗೆ 6000 ರೂ ನೀಡುತ್ತೇವೆ ನಮಗೆ ಮತ ಹಾಕಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರ ವಿರುದ್ಧ ಕಾಂಗ್ರೆಸ್ ದೂರು ನೀಡಿತ್ತು. ಬುಧವಾರ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲು ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಸರಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಸೋಲುವ ಭಯದಿಂದ ಆಮಿಷ
ಇತ್ತೀಚೆಗೆ ಬಿಜೆಪಿಯ ಕೆಲವು ಶಾಸಕರ ಹೇಳಿಕೆಗಳನ್ನು ಗಮನಿಸಿದ್ದೇವೆ. ಅವರಿಗೆ ಸೋಲುವ ಭೀತಿ ಕಾಡುತ್ತಿದೆ. ಹಾಗಾಗಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. 40% ಕಮಿಷನ್ನಿಂದ ರಾಜ್ಯ ಸರ್ಕಾರ ಸಾವಿರಾರು ಕೋಟಿ ಸಂಗ್ರಹ ಮಾಡಿಟ್ಟುಕೊಂಡಿದೆ. ಮತದಾರರಿಗೆ ಆರು ಸಾವಿರ ಕೊಡ್ತೀವಿ ಎಂದು ಹೇಳಿರುವ ಆಡಿಯೋ, ವೀಡಿಯೋ ದಾಖಲೆಗಳಿವೆ. ಹೀಗಾಗಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಹಿತಿ ನೀಡಿದರು.
ಮತವನ್ನು ಖರೀದಿ ಮಾಡುವ ಸಂಚು
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಈಗಾಗಲೇ ಅವರಿಗೆ ಅರಿವಾಗಿದೆ. ಇಂದು ರಾಜ್ಯದಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ. ಈ ರೀತಿ ಸುಮಾರು ದುಡ್ಡು ಗಳಿಸಿಕೊಂಡಿದ್ದು, ಅದನ್ನು ಜನರಿಗೆ ನೀಡಿ ಮತಗಳ ಖರೀದಿಗೆ ಷಡ್ಯಂತ್ರ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 5 ಕೋಟಿ ಜನರಿದ್ದು, ಒಬ್ಬರಿಗೆ 6 ಸಾವಿರದಂತೆ ನೀಡಿದರೆ 30 ಸಾವಿರ ಕೋಟಿ ರೂ ಆಗುತ್ತದೆ. ಹಾಗಾಗಿ ನಾವು ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಟ್ಟಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ