news18-kannada Updated:October 23, 2020, 3:37 PM IST
ಡಿಕೆ ಶಿವಕುಮಾರ್
ಬೆಂಗಳೂರು (ಅ.23): ನನ್ನ ಬಗ್ಗೆ ಮಾತನಾಡಿದರೆ, ಬಿಜೆಪಿ ನಾಕರುಗೆ ಪ್ರಮೋಷನ್ ಸಿಗುತ್ತದೆ ಎನ್ನಿಸುತ್ತದೆ. ಅದಕ್ಕಾಗಿ ಚುನಾವಣಾ ಸಮಯದಲ್ಲಿ ಅಶ್ವತ್ಥ ನಾರಾಯಣ್ ಸಾಹೇಬ್ರು, ಅಶೋಕಣ್ಣ ಮತ್ತು ಸಿಟಿ ರವಿ ನನ್ನ ಬಗ್ಗೆ ಬಹಳ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಾನು ಇವರನ್ನೆಲ್ಲಾ ಮರೆತು ಬಿಟ್ಟಿದ್ದೆ. ನನ್ನ ಬಗ್ಗೆ ಮಾತನಾಡುವ ಮೂಲಕ ಅವರು ಈಗ ನೆನಪು ಮಾಡಿಕೊಂಡಿದ್ದಾರೆ. ಈಗಾಗಲೇ ಅಶೋಕಣ್ಣ ಅವರಿಗೆ ಡಿ ಪ್ರಮೋಷನ್ ಆಗಿದೆ. ಈಗ ನನ್ನ ಬೈದು ಪ್ರಮೋಷನ್ ಗಿಟ್ಟಿಸಿಕೊಳ್ಳೋಣ ಎಂದು ಲೆಕ್ಕಾಚಾರ ಹಾಕಿದ್ದಾರೆ. ಆದರೆ, ನಾನು ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕುಟುಕಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಹೇಳಿಕೆ ವಿರುದ್ಧ ಹರಿಹಾಯ್ದ ಅವರು, ಅಧ್ಯಕ್ಷರು ಯಾರೋ ಬಂಡೆಯನ್ನ ಡೈನಾಮಿಟ್ ಇಟ್ಟು ಪುಡಿ ಪುಡಿ ಮಾಡುತ್ತೇನೆ ಎಂದಿದ್ದಾರೆ. ನಾನೇನು ಬಂಡೆ, ಕನಕಪುರ ಬಂಡೆ ಅಂತ ಹೆಸರು ಇಟ್ಕೊಂಡಿಲ್ಲ. ಬಂಡೆ ಎಂಬುದು ಪ್ರಕೃತಿ. ಅದನ್ನು ಕಡೆದರೆ ಆಕೃತಿ, ಪೂಜಿಸುವುದು ಸಂಸ್ಕೃತಿ. ನನ್ನನ್ನು ಜನರು ಪ್ರೀತಿಯಿಂದ ಬಂಡೆ ಎಂದು ಕರೆಯುತ್ತಾರೆ. ಅದಕ್ಕೆ ಸಂತೋಷವಿದೆ. ಬಂಡೆಯಾಗಿ ನಾನು ವಿಧಾನ ಸೌಧಕ್ಕೆ ಚಪ್ಪಡಿಯಾದರೆ, ಜನ ನಡೆದುಕೊಂಡು ಹೋಗಲು ಆಗುತ್ತದೆ. ಡೈನಾಮಿಟ್ ಇಟ್ಟು ಪುಡಿ ಮಾಡಿದರೆ ಜಲ್ಲಿ ಕಲ್ಲು ಆಗಿ, ಅಡಿಪಾಯಕ್ಕೆ ಉಪಯೋಗಕ್ಕೆ ಬರುತ್ತದೆ. ಈ ಕಲ್ಲು ಬಂಡೆ, ಜಲ್ಲಿಯಾಗಿ, ಇಟ್ಟಿಗೆಯಾಗಿ ಎಲ್ಲಾ ರೀತಿಯಲ್ಲೂ ಉಪಯೋಗವಾಗುತ್ತದೆ ಎಂದರು.
ಶೋಭಕ್ಕ ಗಂಡನ ಹೆಸರು ಬಳಸಬಾರದು ಅಂತಾರೆ ಹೆಂಗೆ?
ಆರ್ಆರ್ ನಗರದ ನಮ್ಮ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ದಿ.ಐಎಎಸ್ ಅಧಿಕಾರಿ, ಡಿಕೆ ರವಿ ಅವರನ್ನು ಅಗ್ನಿ ಸಾಕ್ಷಿಯಾಗಿ, ಸಪ್ತಪದಿ ತುಳಿದು, ಎಲ್ಲರ ಸಾಕ್ಷಿಯಾಗಿ ಮದುವೆ ಆಗಿದ್ದಾರೆ. ಆದರೆ, ಅಕ್ಕ, ನಮ್ಮಕ್ಕ ಶೋಭಕ್ಕ ಗಂಡನ ಹೆಸರು ಬಳಸಬಾರದು ಅಂತಾರೆ ಹೆಂಗೆ? ಅವರು ಹೆಸರು ಬಳಸಬಾರದು ಅಂತ್ಯಾಕೆ ಹೇಳಬೇಕು ಎಂದು ಪ್ರಶ್ನಿಸಿದರು.
ಇದನ್ನು ಓದಿ: ಚುನಾವಣೆ ಮುಗಿದ್ಮೇಲೆ ಬಂಡೆ ಛಿದ್ರವಾಗುತ್ತೆ, ಹುಲಿಯಾ ಕಾಡಿಗೆ ಹೋಗುತ್ತೆ; ಡಿಕೆಶಿ-ಸಿದ್ದರಾಮಯ್ಯ ಬಗ್ಗೆ ಕಟೀಲ್ ವ್ಯಂಗ್ಯ
ನಾವು ಜನರಿಗೆ ಒಳ್ಳೆಯ ನೆರಳು ಸಿಗಲಿ ಎಂದು ಬೀಜ ಬಿತ್ತುತ್ತೇವೆ. ಆದರೆ, ಕೆಲವರು ಏನೇನೋ ಆಗುತ್ತಾರೆ. ರಮ್ಯಾ, ತೇಜಸ್ವಿನಿಯನ್ನೂ ನಾವು ನಿಲ್ಲಿಸಿದ್ದೇವು. ಈಗ ಮತ್ತೊಬ್ಬ ಹೆಣ್ಣುಮಗು ಕುಸುಮಾ ನಿಂತಿದ್ದಾಳೆ. ಡಿ.ಕೆ.ರವಿ ಪತ್ನಿ ಕುಸುಮಾ ನಿಂತಿದ್ದಾಳೆ. ನಮ್ಮ ಶೋಭಕ್ಕ ಮಾತ್ರ ಹೀಗಳೆಯುತ್ತಾರೆ. ನೀನು ಗಂಡನ ಹೆಸರು ಉಪಯೋಗಿಸಬೇಡ ಅಂತಾರೆ ನಮ್ಮಕ್ಕ. ನೀನು ಅದೇ ಸ್ಥಾನದಲ್ಲಿದ್ದರೆ ಈ ರೀತಿ ಹೇಳುತ್ತಿದ್ದೇಯಾ ಅಕ್ಕ. ರಾಜಕಾರಣಕ್ಕಾಗಿ ಸಂಪ್ರದಾಯವನ್ನೇ ತೆಗೆಯಬೇಕಾ ಎಂದು ಕೇಳಿದರು.
Published by:
Seema R
First published:
October 23, 2020, 3:17 PM IST