ಹುಬ್ಬಳ್ಳಿ: ಮಹಾರಾಷ್ಟ್ರದ (Maharashtra) ಒಂದು ಹಳ್ಳಿಯೂ ನಮಗೆ ಬೇಡ. ಹಾಗೆಯೇ ರಾಜ್ಯದ (Karnataka) ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ (Hubballi Airport) ಮಾತನಾಡಿದ ಡಿಕೆ ಶಿವಕುಮಾರ್, ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂಬ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ (Uddhav Thackeray) ಹೇಳಿಕೆಗೆ ಕಿಡಿಕಾರಿದರು. ಮಹಾರಾಷ್ಟ್ರದ ಒಂದು ಹಳ್ಳಿಯೂ ನಮಗೆ ಬೇಡ. ಹಾಗೆಯೇ ಕರ್ನಾಟಕದ ಒಂದಿಂಚೂ ಭೂಮಿಯನ್ನು ಬಿಟ್ಟು ಕೊಡೋಕೆ ಸಾಧ್ಯವಿಲ್ಲ ಎಂದು ಗುಡುಗಿದರು.
ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿ ರಾಜ್ಯದ ಒಂದು ಹಳ್ಳಿಯನ್ನೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ನಮ್ಮ ರಾಜ್ಯದ ಬಾರ್ಡರ್ ಈಗಾಗಲೇ ಸೀಲ್ ಆಗಿದೆ. ಮಹಾರಾಷ್ಟ್ರದ ಬಾರ್ಡರ್ ಸಹ ಈಗಾಗಲೇ ಸೀಲ್ ಆಗಿದೆ. ನಮ್ಮ ರಾಜ್ಯದ ಗಡಿಯೊಳಗೆ ಅವರು ಪ್ರವೇಶ ಮಾಡದಿದ್ದರೆ ಅಷ್ಟೇ ಸಾಕು ಎಂದರು.
ಮುಂದೆ ನಮ್ಮದೇ ಆದ ಕಾಂಗ್ರೆಸ್ ಸರ್ಕಾರ ಬರುತ್ತೆ. ಆಗ ಬೆಳಗಾವಿ ಮತ್ತು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಪ್ಯಾಕೇಜ್ ಕೊಡುತ್ತೇವೆ. ಉದ್ಯೋಗ ಸೃಷ್ಟಿಗಾಗಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡುತ್ತೇವೆ. ಇಲ್ಲಿನ ಜನ ಬೇರೆ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಯಾಕೆ ಶಾಂತಿ ಭಂಗ ಉಂಟು ಮಾಡ್ತಾರೆ ಗೊತ್ತಾಗ್ತಿಲ್ಲ ಎಂದು ಹೇಳಿದರು.
ಇದೆಲ್ಲವೂ ಬಿಜೆಪಿ ಪಕ್ಷದ ಜಾಲ
ಬಿಜೆಪಿ ಸರ್ಕಾರದ ದೌರ್ಬಲ್ಯದಿಂದ ಈ ರೀತಿ ಆಗ್ತಿದೆ. ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯ ಕೊಡಿ ಅಂತ ಕೇಳಿದರು. ಈಗ ಮಹಾರಾಷ್ಟ್ರ ಶಿವಸೇನೆ ಅವರು ಕೇಂದ್ರಾಡಳಿತ ಪ್ರದೇಶ ಘೋಷಣೆ ಮಾಡಿ ಅಂತಾರೆ. ಇದೆಲ್ಲವೂ ಬಿಜೆಪಿ ಪಕ್ಷದ ಜಾಲ ಎಂದು ಆರೋಪಿಸಿದರು.
ಕೇಂದ್ರ ಗೃಹ ಸಚಿವರು ಎರಡು ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಸಿದರು. ಅವರ ಮಾತುಕತೆ ಏನಾಯ್ತು? ನಮಗೂ ಮಹಾರಾಷ್ಟ್ರ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ನೆಲ ಜಲ ಸಂರಕ್ಷಣೆ ವಿಚಾರದಲ್ಲಿ ನಾವು ಯಾವುದೇ ರಾಜಕಾರಣ ಮಾಡಲ್ಲ ಎಂದು ಡಿಕೆಶಿ ಅಭಿಪ್ರಾಯಪಟ್ಟರು.
ಒಕ್ಕಲಿಗರು ಭಿಕ್ಷಕರಲ್ಲ ಎಂದು ಡಿಕೆಶಿ ಕಿಡಿ
ಒಕ್ಕಲಿಗರು ಭಿಕ್ಷುಕರಲ್ಲ, ನಮ್ಮ ಬೇಡಿಕೆಯಂತೆ ಶೇ.12 ರಷ್ಟು ಮೀಸಲಾತಿ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು. ತರಾತುರಿಯಲ್ಲಿ ಮೀಸಲಾತಿ ಭಾಗ ಮಾಡಿಬಿಟ್ಟಿದಾರೆ. ನಮ್ಮ ಒಕ್ಕಲಿಗರೇನಾದ್ರೂ ಭಿಕ್ಷುಕರಾ? ಒಕ್ಕಲಿಗರಿಗೆ ಮೂರು ಪರ್ಸೆಂಟ್ ಕೊಡೋಕೆ ನಾವು ಭಿಕ್ಷುಕರಲ್ಲ. ಒಕ್ಕಲಿಗರು ಅನ್ನದಾತರು, ಅವರು ಸಮಾಜಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದ್ದಾರೆ. ಮೂರು ಪರ್ಸೆಂಟ್ ಗೆ ಯಾರೂ ಭಿಕ್ಷೆ ಬೇಡೋಕೆ ಹೋಗಿಲ್ಲ ಎಂದು ಹೇಳಿದರು.
12 ಪರ್ಸೆಂಟ್ ಮೀಸಲಾತಿ ಕೊಡಿ.
ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೀನಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಟ್ಟರೆ ನಮ್ಮ ತಕರಾರಿಲ್ಲ. ಒಕ್ಕಲಿಗರ ಸ್ವಾಮೀಜಿ 12 ಪರ್ಸೆಂಟ್ ಮೀಸಲಾತಿ ಕೊಡಿ ಎಂದು ಕೇಳಿದ್ದಾರೆ. ಬೇರೆ ಯಾರದೋ ಕಿತ್ತುಕೊಂಡು ಕೊಡೋದು ನಮಗೆ ಬೇಡ. ಅಲ್ಪ ಸಂಖ್ಯಾತರು, ಪಂಚಮಸಾಲಿ, ವೀರಶೈವ, ಎಸ್ ಸಿ.ಎಸ್.ಟಿ ಅವರಿಗೆ ಮೀಸಲಾತಿ ಸಿಗಲಿ. ನಮ್ಮ ಸಮಾಜದ ಜನಸಂಖ್ಯೆ ಗೆ ಅನುಗುಣವಾಗಿ 12 ಪರ್ಸೆಂಟ್ ಮೀಸಲಾತಿ ಕೊಡಿ.
ಮುಖ್ಯಮಂತ್ರಿಗಳು ಕೊಡ್ತೀವಿ ಅಂತಾರೆ, ಇದೀಗ ಮೂರು ಪರ್ಸೆಂಟ್ ಎಂದು ಹೇಳುತ್ತಿದಾರೆ. ಮೂರು ಪರ್ಸೆಂಟ್ ತಗೊಳ್ಳೋಕೆ ನಾವು ಭಿಕ್ಷುಕರಲ್ಲ, ನಮಗೆ 12 ಪರ್ಸೆಂಟ್ ಸಿಗಬೇಕೆಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.
ಕೋವಿಡ್ ಬರಲಿ ಬಿಡಲಿ, ನಮ್ಮ ಬಸ್ ಯಾತ್ರೆ ನಿಲ್ಲಲ್ಲ
ಕೋವಿಡ್ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏನು ಬೇಕಾದ್ರೂ ಮಾಡಿಕೊಳ್ಳಲಿ, ನಾವು ಬಸ್ ಯಾತ್ರೆ ಮಾಡ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇಂದಿನಿಂದ ಮಾಸ್ಕ್ ಕಡ್ಡಾಯ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರು ಹೇಳಿದ್ರೂ ಬಸ್ ಯಾತ್ರೆ ಮಾಡುತ್ತೇವೆ. ಬಿಟ್ಟರೂ ನಾವು ಮಾಡ್ತೀವಿ ಎಂದರು.
ಇದು ನಮ್ಮ ಹಕ್ಕು. AC ರೂಮ್ನಲ್ಲಿ ಯಾಕೆ ಮಾಸ್ಕ್, ಇವರ ಕಾರು, ಆಫಿಸ್ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಿ. ಸುಮ್ಮನೆ ಜನರಿಗೆ ಭಯ ಹುಟ್ಟಿಸುವ ಕೆಲಸ ಬಿಡಲಿ. ಹೊರಗಡೆಯಿಂದ ಬರೋದನ್ನ ತಪ್ಪಿಸಿ, ಹಿಂದೆ ನೀವೇನು ಸಹಾಯ ಮಾಡಿಲ್ಲ. ಇದೀಗ ಜನರಿಗೆ ದೊಡ್ಡ ಭಯ ಉಂಟು ಮಾಡ್ತಿದಾರೆ ಎಂದರು.
ಕಾಂಗ್ರೆಸ್ ಮೊದಲ ಪಟ್ಟಿ ಜನವರಿ 15 ರೊಳಗೆ ಬಿಡುಗಡೆ ಮಾಡುವ ಗುರಿ ಇದೆ. ಚುನಾವಣಾ ಸಮಿತಿಗೆ ಪಟ್ಟಿ ಸಲ್ಲಿಸಲು ಸೂಚಿಸಿದ್ದೇವೆ ಎಂದರು.
ಕೂಸ ಹುಟ್ಟಲಿ, ನಾಮಕರಣವಾಗಲಿ ಎಂದ ಡಿಕೆಶಿ
ಜನಾರ್ದನ ರೆಡ್ಡಿ ಪಕ್ಷದ ಕುರಿತು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು. ಮೊದಲು ಪಕ್ಷ ಉದಯಗವಾಗಲಿ, ರೆಡ್ಡಿ ಪಾರ್ಟಿಯಿಂದ ಯಾರಿಗೆ ಲಾಭ ಅನ್ನೋ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಮಗು ಹುಟ್ಟಲಿ, ಚಿಹ್ನೆ ಬರಲಿ, ನಾಮಕಾರಣ ಆಗಲಿ ಎಂದು ವ್ಯಂಗ್ಯವಾಡಿದರು.
ನೋಡಪ್ಪ ಮಗು ಹುಟ್ಟಿದ ಮೇಲೆ ಕಿವಿ, ಮೂಗು ಚುಚ್ಚಬೇಕು, ನಾಮಕಾರಣ ಆಗಬೇಕು, ಇದೆಲ್ಲ ಆಗಲಿ. ನಮ್ಮ ಸಂಪರ್ಕದಲ್ಲಿ ಯಾರೂ ಇಲ್ಲ ಎಂದರು. ರೆಡ್ಡಿ ಬಗ್ಗೆ ನಾನು ಏನೂ ಮಾತಾಡೋಕೆ ಹೋಗಲ್ಲ ಎಂದರು.
ನಾನ್ಯಾಕೆ ಒಬ್ಬರನ್ನ ವೀಕ್ ಮಾಡಲಿ
ರಾಜಕಾರಣದಲ್ಲಿ ಏನಾದ್ರೂ ಆಗಬಹುದು. ನಾನ್ಯಾಕೆ ಒಬ್ಬರನ್ನ ವೀಕ್ ಮಾಡಲಿ. ಒಂದು ಪತ್ರಿಕಾಗೋಷ್ಠಿಯಿಂದ ತೀರ್ಮಾನಕ್ಕೆ ಬರೋದು ಸರಿ ಅಲ್ಲ. ನನಗೂ ಅನುಭವ ಇದೆ. ರೆಡ್ಡಿ ದುಡ್ಡು ಕೊಟ್ಟಿರೋ ಬಗ್ಗೆ ನನಗೆ ಗೊತ್ತಿಲ್ಲ. ಹಣ ಕೊಟ್ಟಿರೋ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಶ್ರೀನಿವಾಸ್ ಪ್ರಸಾದ ಅವರ ಬಗ್ಗೆ ಯಾರೂ ಮಾತಾಡ್ತಿಲ್ಲ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: Belagavi: ಮಾರುವೇಷದಲ್ಲಿ ಗಡಿ ಪ್ರವೇಶಕ್ಕೆ ಮುಂದಾದ ಮರಾಠಿ ಪುಂಡ ನಾಯಕ
ಮಂಗಳಮುಖಿಯರಿಗೆ 500 ರೂಪಾಯಿ ಕೊಟ್ಟ ಡಿಕೆಶಿ
ಮಂಗಳಮುಖಿಯರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಿ ಗರಿ ನೋಟು ನೀಡಿದರು. ಬೆಳಗಾವಿಗೆ ಹೋಗಲೆಂದು ಹುಬ್ಬಳ್ಳಿಗೆ ಬಂದಿಳಿದ ಡಿಕೆ ಶಿವಕುಮಾರ್ ಅವರನ್ನು ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಮಂಗಳಮುಖಿಯರು ಮುತ್ತಿಕೊಂಡರು. ಈ ವೇಳೆ ಡಿಕೆಶಿ 500ರ ಗರಿ ಗರಿ ನೋಟು ಕೊಟ್ಟರು. ಡಿಕೆ ಶಿವಕುಮಾರ್ ಅವರಿಗೆ ದೃಷ್ಟಿ ತಗೆದ ಮಂಗಳಮುಖಿಯರು, ಒಳ್ಳೆಯದಾಗಲಿ ಎಂದು ಹಾರೈಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ