ಹುಬ್ಬಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಗೆ (Karnataka Assembly Election) ಕೆಲವೇ ತಿಂಗಳುಗಳು ಬಾಕಿ ಇದೆ. ಈಗಾಗಲೇ ಚುನಾವಣೆಗೆ ಸಿದ್ಧತೆಗಳನ್ನು ನಡೆಸಿಕೊಂಡಿರುವ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರಲೇ ಬೇಕು ಎಂಬ ಹಠದೊಂದಿಗೆ ಯಾತ್ರೆಗಳನ್ನು ಕೈಗೊಳ್ಳಲು ಮುಂದಾಗಿದೆ. ಅಲ್ಲದೇ ನಿರಂತರವಾಗಿ ಆಡಳಿತರೂಢ ಬಿಜೆಪಿ ಸರ್ಕಾರದ (BJP Government) ವಿರುದ್ಧ ಅಭಿಯಾನಗಳನ್ನು ನಡೆಸುತ್ತಿದೆ. ಈ ನಡುವೆ ಚಳಿಗಾಲದ ಅಧಿವೇಶನ (Winter Session) ಡಿಸೆಂಬರ್ 19ರಿಂದ ಆರಂಭವಾಗುತ್ತಿದ್ದು, ಅಧಿವೇಶನದಲ್ಲೂ ಸರ್ಕಾರ ವಿರುದ್ಧ ಮುಗಿಬಿದ್ದು, ಆಡಳಿತ ಪಕ್ಷದ ಹುಳುಕುಗಳನ್ನು ಎತ್ತಿಹಿಡಿಯಲು ಮುಂದಾಗಿದೆ.
ಅಧಿವೇಶನದ ಬೆನ್ನಲ್ಲೇ ಕಾಂಗ್ರೆಸ್ ಬಸ್ ಯಾತ್ರೆ
ಅಧಿವೇಶನದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಬೃಹತ್ ಬಸ್ ಯಾತ್ರೆಯನ್ನು ಕೈಗೊಳ್ಳಲು ಸಿದ್ಧವಾಗಿದೆ. ಆದರೆ ಈ ಬಸ್ ಯಾತ್ರೆಗೂ ಮುನ್ನ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೈಕಮಾಂಡ್ ಎದುರು ಕೆಲ ಕಂಡೀಷನ್ಗಳನ್ನ ಇಟ್ಟಿದ್ದರು ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅಂತಹ ಯಾವುದೇ ಕಂಡೀಷನ್ಗಳನ್ನು ಹಾಕಿಲ್ಲ ಎಂದು ತಿಳಿಸಿದ್ದಾರೆ.
"ಯಾರೂ ಕಂಡೀಷನ್ ಹಾಕಲ್ಲ"
ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬಸ್ನಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಯಾತ್ರೆ ಪ್ರಾರಂಭವಾಗುತ್ತೆ. ಕೃಷ್ಣಾ ನದಿ ವಿಚಾರವಾಗಿ ವಿಜಯಪುರದಲ್ಲಿ ಹೋರಾಟ ನಡೆಯುತ್ತೆ. ಮಹದಾಯಿ ವಿಚಾರದಲ್ಲಿ ಜನವರಿ 02ರಂದು ಹುಬ್ಬಳ್ಳಿಯಲ್ಲಿ ಹೋರಾಟ ಸಮಾವೇಶ ಮಾಡುತ್ತೇವೆ. ಆಯಾ ಭಾಗದ ನಾಯಕರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ಅಂತಿಮಗೊಳಿಸುತ್ತೇವೆ ಎಂದು ವಿವರಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರು ಬಸ್ ಯಾತ್ರೆಗೆ ಕಂಡೀಷನ್ ಹಾಕಿದ್ದಾರಂತೆ ಅನ್ನೋ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ಕಂಡೀಷನ್ ಹಾಕಲ್ಲ, ಪಕ್ಷದ ತೀರ್ಮಾನವೇ ಅಂತಿಮ. ಪ್ರತಿ ವಿಚಾರದಲ್ಲೂ ಸಿದ್ದರಾಮಯ್ಯ, ಹರಿಪ್ರಸಾದ್ ಸೇರಿದಂತೆ ಕಾರ್ಯಾಧ್ಯಕ್ಷರ ಜೊತೆಗೆ ಚರ್ಚಿಸುತ್ತಿದ್ದೇನೆ. ಈ ಬಾರಿ ಗೆಲ್ಲುವವರಿಗೆ ಪಕ್ಷ ಟಿಕೆಟ್ ಕೊಡುತ್ತದೆ. ಕಷ್ಟ ಕಾಲದಲ್ಲಿ ನಮ್ಮೊಂದಿಗೆ ಇದ್ದವರಿಗೆ ಟಿಕೆಟ್ ಕೊಡುತ್ತೇವೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಅಲ್ಲದೇ ಸಿದ್ದರಾಮಯ್ಯ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರೊಂದಿಗೆ ಎಲ್ಲಾ ವಿಷಯಗಳ ಚರ್ಚೆಯಾಗುತ್ತೆ ಎಂದರು.
ಸಿದ್ದರಾಮಯ್ಯ ಹಾಕಿರೋ ಕಂಡೀಷನ್ ಏನು?
ಡಿಸೆಂಬರ್ 19 ಅಂದರೇ, ನಾಳೆಯಿಂದ ಆರಂಭ ಆಗಲಿರುವ ಚಳಿಗಾಲದ ಅಧಿವೇಶನದ ಬಳಿಕ ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತ್ಯೇಕ ಬಸ್ ಯಾತ್ರೆ ಆರಂಭಿಸಲಿದ್ದಾರೆ. ಈ ಮೂಲಕ 224 ಕ್ಷೇತ್ರಗಳಿಗೂ ಭೇಟಿ ನೀಡುವ ಪ್ಲಾನ್ ಕಾಂಗ್ರೆಸ್ ಮಾಡಿಕೊಂಡಿದೆ. ಆದರೆ ಬಸ್ ಯಾತ್ರೆಗೂ ಮುನ್ನ ಟಿಕೆಟ್ ಘೋಷಣೆ ಮಾಡಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಒತ್ತಡ ಹಾಕ್ತಿದ್ದಾರಂತೆ. ಬಸ್ ಯಾತ್ರೆ ಹಿನ್ನೆಲೆ ಕನಿಷ್ಠ 100 ಕ್ಷೇತ್ರಗಳಿಗಾದ್ರೂ ಟಿಕೆಟ್ ಘೋಷಣೆ ಮಾಡುವಂತೆ ಸಿದ್ದರಾಮಯ್ಯ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಕಂಡೀಕ್ಷನ್ಗೆ ಕಾರಣವೇನು?
ಕಾಂಗ್ರೆಸ್ ಪಕ್ಷದಲ್ಲಿ ಪ್ರತಿ ಕ್ಷೇತ್ರದಲ್ಲಿ ಮೂರರಿಂದ ಐದು ಆಕಾಂಕ್ಷಿಗಳಿದ್ದಾರೆ. ಇದರಿಂದ ಕ್ಷೇತ್ರಗಳಲ್ಲಿ ಗೊಂದಲ ಉಂಟಾಗಲಿದೆ. ಜನ ಸೇರಿಸೋ ವಿಚಾರದಲ್ಲೂ ಅಭ್ಯರ್ಥಿ ಯಾರು ಅನ್ನೋದು ತೊಡಕಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರಂತೆ. ಟಿಕೆಟ್ ಘೋಷಣೆ ಮಾಡಿದರೆ ಒಂದು ರೌಂಡ್ ಅಧಿಕೃತ ಚುನಾವಣಾ ಪ್ರಚಾರ ಮಾಡಿದಂತಾಗುತ್ತದೆ. ಇಲ್ಲದಿದ್ದರೆ ಯಾರ ಪರ ನಾವು ಮಾತನಾಡುವುದು ಎನ್ನುವುದು ಗೊತ್ತಾಗಲ್ಲ. ಇದರಿಂದ ಕಾರ್ಯಕರ್ತರಿಗೂ ಗೊಂದಲ ಉಂಟಾಗಲಿದೆ ಎಂಬ ಕಾರಣಗಳನ್ನು ಹೈಕಮಾಂಡ್ ಮುಂದೆ ಇರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ