ಬೆಂಗಳೂರು: ನಾಳೆ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರದ ಅನೇಕ ನಾಯಕರು ಬರ್ತಾರೆ. ನಾಳೆ ಕಾರ್ಯಕರ್ತರು ವಾಹನ ಮಾಡಿಕೊಂಡು ಬರಬೇಕು ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ನಾಳೆ ನೂತನ ಮುಖ್ಯಮಂತ್ರಿ (Karnataka CM) ಮತ್ತು ಉಪಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿರುವುದರಿಂದ ಕಂಠೀರವ ಕ್ರೀಡಾಂಗಣಕ್ಕೆ (Kanteerava Stadium) ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಳೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಧ್ಯಮದ ಮೂಲಕವೇ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್, ಬೆಳಗ್ಗೆ 11 ಗಂಟೆ ಒಳಗೆ ಎಲ್ಲರೂ ಸ್ಟೇಡಿಯಂ ಒಳಗೆ ಬರಬೇಕು. ಇದು ಸರ್ಕಾರದ ಕಾರ್ಯಕ್ರಮ ಆಗಿರೋದ್ರಿಂದ ರಾಜ್ಯದ ಜೆಡಿಎಸ್, ಬಿಜೆಪಿ ನಾಯಕರು ಕೂಡ ಬರಬೇಕು ಅಂತ ಮುಖಂಡರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Karnataka Politics: ನೂತನ ಸಿಎಂ-ಡಿಸಿಎಂ ಪ್ರಮಾಣವಚನಕ್ಕೆ ಭರದ ಸಿದ್ಧತೆ; ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ
'ನಾನು ಸಿದ್ದರಾಮಯ್ಯ ದೆಹಲಿಗೆ ಹೋಗ್ತಾ ಇದ್ದೇವೆ'
ಇನ್ನು ನಾನು ಮತ್ತು ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ಹೋಗ್ತಾ ಇದ್ದೇವೆ ಎಂದ ಡಿಕೆ ಶಿವಕುಮಾರ್, ನೂತನ ಕ್ಯಾಬಿನೆಟ್ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಹೋಗ್ತಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಐದು ಗ್ಯಾರೆಂಟಿಗಳ ಬಗ್ಗೆಯೂ ಮಾತನಾಡಿದ ಡಿಕೆಶಿ, ಅದು ಕಾಂಗ್ರೆಸ್ ಗ್ಯಾರಂಟಿ. ನಾವು ಕೊಟ್ಟ ಮಾತು ಈಡೇರಿಸುತ್ತೇವೆ. ರಾಹುಲ್ ಗಾಂಧಿ, ಪ್ರಿಯಾಂಕ, ಸಿದ್ದರಾಮಯ್ಯ ನಾವು ಸೇರಿ ಗ್ಯಾರಂಟಿ ಕೊಟ್ಟಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ. ಹಾಗಾಗಿ ಅದನ್ನ ಜಾರಿ ಮಾಡ್ತೀವಿ ಎಂದು ಹೇಳಿದರು.
ಗ್ಯಾರಂಟಿಗೆ ಕಂಡೀಷನ್ಸ್ ಇರುತ್ತಾ?
ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳಿಗೆ ಕಂಡೀಷನ್ಸ್ ಇರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಒಮ್ಮತದ ಗ್ಯಾರಂಟಿ ಅದು. ಮನೆಯ ಒಡತಿಗೆ ಹಣ ನೀಡುವ ಭರವಸೆಯನ್ನು ಪ್ರಿಯಾಂಕಾ ಗಾಂಧಿ ನೀಡಿದ್ದಾರೆ. ನಾನು ಸಿದ್ದರಾಮಯ್ಯ ಗೃಹಜ್ಯೋತಿ ಬಗ್ಗೆ ಭರವಸೆ ನೀಡಿದ್ದೇವೆ. ಬಸ್ ಪಾಸ್ ಬಗ್ಗೆ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಭರವಸೆ. ಹಾಗಾಗಿ ಅದನ್ನು ಈಡೇರಿಸ್ತೇವೆ. ಜೂನ್ 1 ರಿಂದ ಕರೆಂಟ್ ಬಿಲ್ ಕಟ್ಟೊಲ್ಲ ಎಂಬ ಜನರು ವಾದ ಮಾಡ್ತಿದ್ದಾರೆ. ಮೊದಲ ಕ್ಯಾಬಿನೆಟ್‌ನಲ್ಲಿ ಜಾರಿ ಮಾಡಿದ್ರೆ ಜನರಿಗೆ ತಲುಪೋದು ಯಾವಾಗ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ ನಾನು ಏನು ಹೇಳಬೇಕೋ ಅದನ್ನ ಹೇಳಿದ್ದೇನೆ ಎಂದು ಜಾರಿಕೊಂಡರು.
ಇದನ್ನೂ ಓದಿ: Karnataka New CM: ಸಿದ್ದರಾಮಯ್ಯ ನೂತನ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ: ಕಾಂಗ್ರೆಸ್‌ನಿಂದ ಅಧಿಕೃತ ಘೋಷಣೆ
ಇನ್ನು ನಾಳೆ ಪದಗ್ರಹಣ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಯೂ ನಡೀತಿದೆ ಎಂದ ಡಿಕೆ ಶಿವಕುಮಾರ್, ಸಿದ್ಧತೆ ಬಗ್ಗೆ ಪರಿಶೀಲನೆ ಮಾಡೋಕೆ ಕಂಠೀರವ ಸ್ಟೇಡಿಯಂಗೆ ಬಂದಿದ್ದೆ. ಕಾರ್ಯಕ್ರಮ ಸಿದ್ಧತೆ ಬಗ್ಗೆ ಅಧಿಕಾರಿಗಳಿಗೆ ಕೆಲ ಸಲಹೆ, ಸೂಚನೆ ನೀಡಿದ್ದೇನೆ. ಎಲ್ಲಾ ಜನತೆಗೂ ಹೇಳ್ತಿದೀನಿ. ಯಾರೂ ಕೂಡ ಆಹ್ವಾನಕ್ಕಾಗಿ ಕಾಯ್ಬೇಡಿ. ಎಲ್ಲರಿಗೂ ಅಹ್ವಾನ ಇರುತ್ತೆ. ಎಲ್ಲರೂ ಬರಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ