ಕಾಂಗ್ರೆಸ್​ ಬಿಟ್ಟು ಹೋದವರು ಮತ್ತೆ ಪಕ್ಷಕ್ಕೆ ವಾಪಾಸ್ ಬರಬಹುದು; ಡಿಕೆ ಶಿವಕುಮಾರ್ ಆಹ್ವಾನ

DK Shivakumar: ಯಾರೆಲ್ಲ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿದ್ದೀರೋ ಅವರು ಮತ್ತೆ ಪಕ್ಷಕ್ಕೆ ಮರಳಿ ಬರಬಹುದು ಎಂದಿರುವ ಡಿಕೆ ಶಿವಕುಮಾರ್ ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಹೋದವರನ್ನು ಕಾಂಗ್ರೆಸ್​ಗೆ ಮತ್ತೆ ಆಹ್ವಾನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

  • Share this:
ಬೆಂಗಳೂರು (ಫೆ. 21): ಕಾಂಗ್ರೆಸ್ ಪಕ್ಷ ಸೇರುವವರಿಗೆ ನಾನು ಮುಕ್ತ ಆಹ್ವಾನ ಕೊಡುತ್ತಿದ್ದೇನೆ. ಯಾವುದೇ ಷರತ್ತುಗಳಿಲ್ಲದೆ ಪಕ್ಷದ ತತ್ವ -ಸಿದ್ದಾಂತಗಳನ್ನು ಒಪ್ಪಿಕೊಂಡು ಬರುವ ಯಾರನ್ನಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಪಕ್ಷ ಬಿಟ್ಟು ಹೋದವರಿಗೂ ಮತ್ತೆ ಸೇರ್ಪಡೆಗೆ ಅವಕಾಶ ಕೊಡುತ್ತಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವವರಿಗೆ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ.

ಷರತ್ತು ರಹಿತವಾಗಿ ಯಾರೇ ಪಕ್ಷಕ್ಕೆ ಬಂದರೂ ನಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಲಾಗುವುದು. ಯಾರೆಲ್ಲ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿದ್ದೀರೋ ಅವರು ಮತ್ತೆ ಪಕ್ಷಕ್ಕೆ ಮರಳಿ ಬರಬಹುದು. ಪಕ್ಷ ಬಿಟ್ಟು ಹೋದವರಿಗೆ ಮತ್ತೆ ಪಕ್ಷ ಸೇರಲು ಅವಕಾಶ ನೀಡಲಾಗುವುದು ಎಂದಿರುವ ಡಿಕೆ ಶಿವಕುಮಾರ್ ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಹೋದವರನ್ನು ಕಾಂಗ್ರೆಸ್​ಗೆ ಮತ್ತೆ ಆಹ್ವಾನಿಸಿದ್ದಾರೆ.

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಧ್ರುವ ನಾರಾಯಣ ಹಾಗೂ ರಾಮಲಿಂಗಾ ರೆಡ್ಡಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಾರೆ. ಆದರೆ, ನನಗೆ ಇದು ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಮಾತ್ರ ನನಗೆ ಮುಖ್ಯ ಎನ್ನುವ ಮೂಲಕ ಸಿದ್ದರಾಮಯ್ಯ ಆಪ್ತರ ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ದುಡ್ಡಿಲ್ಲ ಅಂದ್ರೆ ಕುರ್ಚಿ ಬಿಟ್ಟು ಇಳಿಯಪ್ಪ ಯಡಿಯೂರಪ್ಪ, ನಾವ್ಯಾರಾದ್ರೂ ಬರ್ತೀವಿ; ಸಿದ್ದರಾಮ್ಯಯ ಲೇವಡಿ

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ‌ ತರಬೇಕು. ತತ್ವ, ಸಿದ್ಧಾಂತ ಮರೆತಾಗ ಕಾಂಗ್ರೆಸ್ ಪಕ್ಷ ಸೋಲುತ್ತದೆ. ಸಿದ್ಧಾಂತ, ತತ್ವವನ್ನು ನಂಬಿದಾಗ ಯಶಸ್ಸು ಸಿಗುತ್ತದೆ. ನಾವು ಇಂದು ಹೋರಾಟ ರೂಪಿಸಬೇಕಿದೆ. ಅವಕಾಶಗಳನ್ನ ನಾವು ಹುಡುಕಿ ಹೋಗಬೇಕಿಲ್ಲ. ಬಿಜೆಪಿ ಸರ್ಕಾರವೇ ಆ ಅವಕಾಶವನ್ನು ತಂದುಕೊಟ್ಟಿದೆ. ಅದನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು. ಅವಕಾಶ ಇವತ್ತು ನಮ್ಮ ಕೈಯಲ್ಲೇ ಇದೆ. ಸರ್ಕಾರದ ನಿರ್ಧಾರದಿಂದ ಜನ ನೊಂದಿದ್ದಾರೆ. ಸರ್ಕಾರದ ವೈಫಲ್ಯಗಳನ್ನ ನಾವು ಬಳಸಿಕೊಳ್ಳಬೇಕು. ಸಿಎಎ, ಕೋವಿಡ್​ನಿಂದ ಜನ ನೊಂದಿದ್ದಾರೆ. ನೊಂದ ವ್ಯಕ್ತಿಗಳಿಗೆ ನಾವು ಜೀವ ತುಂಬಬೇಕಿದೆ. ರೈತರು, ಕಾರ್ಮಿಕರು, ವ್ಯಾಪಾರಿಗಳು ಕಷ್ಟದಲ್ಲಿದ್ದಾರೆ. ಸಮಾಜದಲ್ಲಿರುವ ಎಲ್ಲಾ ವರ್ಗಗಳು ಸಂಕಷ್ಟಕ್ಕೊಳಗಾಗಿವೆ. ಈ ಸಮಸ್ಯೆಗಳಿಗೆ ನಾವು ಪರಿಹಾರ ಹುಡುಕಬೇಕಿದೆ. ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡಬೇಕಿದೆ. ಸರ್ಕಾರದಲ್ಲಿ ಹೊಸ ಬದಲಾವಣೆ ತರಬೇಕಿದೆ ಎಂದು ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದ್ದಾರೆ.

ಯಾವುದೇ ಶಾಸಕರು, ಪ್ರಮುಖರು ತಮ್ಮ ಮನೆಗಳಲ್ಲಿ ಪಕ್ಷದ ಸಭೆಗಳನ್ನು ಮಾಡುವಂತಿಲ್ಲ. ಪಕ್ಷದ ಕಚೇರಿಯಲ್ಲೇ ಸಭೆಗಳನ್ನು ಮಾಡಬೇಕು ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಶಾಸಕರ ಜೊತೆಯಲ್ಲಿ ಮನೆಯಲ್ಲಿ ಸಭೆ ಮಾಡುತ್ತಿದ್ದ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಪಕ್ಷದ ಕಚೇರಿಯಲ್ಲಿಯೇ ಸಭೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಇನ್ನೇನಿದ್ದರೂ ನಾವು ಜನಗಳ ಮಧ್ಯೆ ನಿಂತು ಹೋರಾಟ ಮಾಡಬೇಕು. ಕನಿಷ್ಟ ಎರಡು ಕಿ.ಮೀ ಪಾದಯಾತ್ರೆ ಮಾಡಬೇಕು. ಹಾಗಾಗಿ ಜನರ ಮಧ್ಯೆ ಹೋರಾಟ ಮಾಡುವ ನಾಯಕರನ್ನು ಗುರುತಿಸಲು ತಂಡ ಕಳುಹಿಸುತ್ತೇವೆ. ಅಂತಹ ಪ್ರಮುಖರನ್ನು ಗುರುತಿಸಿ ಅಂತಹವರಿಗೆ ಮಾತ್ರ ಚುನಾವಣೆ ಟಿಕೆಟ್ ಕೊಡಲಾಗುತ್ತದೆ ಎಂದಿದ್ದಾರೆ.
Published by:Sushma Chakre
First published: