ಬೆಂಗಳೂರು(ನ.30): ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಇಂದು ಗ್ರಾ.ಪಂ.ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಡಿಸೆಂಬರ್ 22 ಮತ್ತು 27ರಂದು ಮತದಾನ ನಡೆಯಲಿದೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣೆಗೆ ಗ್ರಾಮ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಒತ್ತಾಯ ಮಾಡಿತ್ತು. ನಾವು ಹೈಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದೆವು. ಜನರಿಗೆ ಅಧಿಕಾರ ಕೊಡಬೇಕು ಎನ್ನುವುದು ನಮ್ಮಆಸೆ. ಚುನಾವಣೆ ಆಗಬೇಕು ಎನ್ನುವುದು ನಮ್ಮ ಇಚ್ಛೆ. ಗ್ರಾ.ಪಂ.ಚುನಾವಣೆ ಜೊತೆಗೆ ಬಿಬಿಎಂಪಿ ಚುನಾವಣೆ ಸಹ ನಡೆಯಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಡಿಕೆಶಿ ಬಿಜೆಪಿ ನಡೆ ಕುರಿತು ಮಾತನಾಡಿದರು. ಬಿಜೆಪಿ ನಿರ್ಧಾರಗಳು, ರಾಜ್ಯದ ಪ್ರಸಕ್ತ ಬೆಳವಣಿಗೆ ಬಗ್ಗೆ ಚರ್ಚೆ ಮಾಡ್ತಿದ್ದೇವೆ. ಪಕ್ಷದಲ್ಲಿ ನನ್ನೊಬ್ಬನ ನಿರ್ಧಾರ ಅಂತಿಮ ಅಲ್ಲ. ಎಲ್ಲರ ನಾಯಕತ್ವ, ಸಾಮೂಹಿಕ ನಾಯಕತ್ವದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಈ ಕುರಿತು ಹಿರಿಯರಿಗೆ ಆಹ್ವಾನ ನೀಡಿದ್ದೇವೆ. ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಮುಂದುವರೆದ ಅವರು, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗ್ರಾ.ಪಂ ಚುನಾವಣೆಯಲ್ಲಿ ಜನರಿಗೆ ರಕ್ಷಣೆ ಕೊಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಸರ್ಕಾರ ಜನರನ್ನು ರಕ್ಷಣೆ ಮಾಡುವ ಕೆಲಸ ಮಾಡಲಿ ಎಂದು ಕಿಡಿಕಾರಿದರು.
ಇನ್ನು, ಮುಸ್ಲಿಮರಿಗೆ ಬಿಜೆಪಿ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಅದು ಬಿಜೆಪಿ ಸಿದ್ದಾಂತ. ಸಂವಿಧಾನ ಸುಟ್ಟು ಬಿಡಲಿ ಬಿಡಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಒಂದು ಸಲ ಸಂವಿಧಾನ ಓದಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ