ಹುಬ್ಬಳ್ಳಿ (ಜು.31): ಸಿದ್ಧರಾಮೋತ್ಸವದ (Siddaramotsava) ಬಗ್ಗೆ ತುಟಿ ಬಿಚ್ಚದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar), ಮಾಜಿ ಸಿಎಂ ಅವರ ಹುಟ್ಟುಹಬ್ಬ (Birthday) ಅನ್ನೋ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಮಾಜಿ ಸಿಎಂ ಅವರ 75 ನೇ ಜನ್ಮದಿನಾಚರಣೆ ಇದೆ. ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ನಾವೆಲ್ಲ ಹೋಗುತ್ತೇವೆ ಎಂದರು. ನೀವು ಸಿದ್ಧರಾಮೋತ್ಸವದಲ್ಲಿ ಭಾಗಿಯಾಗ್ತೀರಾ ಅಂತ ಹೇಳಿದ್ದಕ್ಕೆ ಅದಕ್ಕೆ ಯಾವುದೇ ಉತ್ತರ ಕೊಡಲಿಲ್ಲ. ಈ ಬಗ್ಗೆ ನೀವೇನಾದ್ರೂ ಬರೆದುಕೊಳ್ಳಿ ನಾನೇನೂ ಹೇಳಲ್ಲ. ನಮ್ಮ ಮಾಜಿ ಸಿಎಂ ಅವರ 75 ನೇ ವರ್ಷದ ಜನ್ಮದಿನ ಅಷ್ಟೇ ಅನ್ನೋ ಮೂಲಕ ಡಿಕೆಶಿ ಸಿದ್ದರಾಮೋತ್ಸವದ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದರು.
ರಾಹುಲ್ ಗಾಂಧಿ ಭೇಟಿ ಕುರಿತು ಹೇಳುವಾಗಲೂ ಸಿದ್ಧರಾಮಯ್ಯ ಅವರ ಹೆಸರು ಪ್ರಸ್ತಾಪಿಸದೆ ಮಾಜಿ ಸಿಎಂ ಹುಟ್ಟು ಹಬ್ಬಕ್ಕೆ ಆಗಮಿಸ್ತಿದ್ದಾರೆ ಅಂತ ಡಿಕೆಶಿ ತಿಳಿಸಿದರು. ನಿಮ್ಮ ಹುಟ್ಟು ಹಬ್ಬಕ್ಕೆ ಕರೆದ್ರೂ ಬರ್ತೀನಿ ಅಂತ ಮಾಧ್ಯಮದವರಿಗೆ ಹೇಳಿದರು.
ಆಗಸ್ಟ್ 2 ಕ್ಕೆ ರಾಹುಲ್ ಹುಬ್ಬಳ್ಳಿ ಭೇಟಿ
ಆಗಸ್ಟ್ 2 ರಂದು ಹುಬ್ಬಳ್ಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಅಂದು ಸಂಜೆ 7 ಗಂಟೆಗೆ ಹುಬ್ಬಳ್ಳಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಿದ್ದಾರೆ. ರಾಹುಲ್ ಗಾಂಧಿ ಪೊಲಿಟಿಕಲ್ ಅಫೇರ್ಸ್ ಮೀಟಿಂಗ್ ಮಾಡಲಿದ್ದಾರೆ.
ಸಭೆಯಲ್ಲಿ ರಾಜಕೀಯ ಸಂಬಂಧಿತ ವಿಷಯಗಳ ಕುರಿತು ಸಭೆ ನಡೆಸಲಿದ್ದಾರೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಐತಿಹಾಸಿಕ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: Karnataka Politics: ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಪೈಪೋಟಿಗೆ ಮತ್ತೊಂದು ಹೆಸರು ಸೇರ್ಪಡೆ: ಮಾಜಿ ಸಿಎಂ ಹೇಳಿದ್ದೇನು?
ರಾಜ್ಯ ರಾಜಕಾರಣದ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತಿತರರು ಭಾಗಿಯಾಗಿಲಿದ್ದಾರೆ. ಮರು ದಿನ ರಾಹುಲ್ ಗಾಂಧಿ ಅವರು ಸಿದ್ಧರಾಮಯ್ಯ ಅವರ ಹುಟ್ಟು ಹಬ್ಬದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕೂ ಮುನ್ನ ಚಿತ್ರದುರ್ಗ ಮುರುಘಾ ಮಠಕ್ಕೂ ಭೇಟಿ ನೀಡಲಿದ್ದಾರೆ. ನಂತರ ಹುಬ್ಬಳ್ಳಿಗೆ ಆಗಮಿಸಿ ನೇರವಾಗಿ ದೆಹಲಿಗೆ ವಾಪಸ್ಸಾಗಲಿದ್ದಾರೆ.
ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ಕೊಡ್ತಾರಾ ರಾಹುಲ್?
ಈ ವೇಳೆ ಬೆಂಗೇರಿ ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ನೀಡೋ ಕುರಿತು ಇನ್ನು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲ್ಲ. ರಾಹುಲ್ ಗಾಂಧಿ ಬಂದ ನಂತರ ನಿರ್ಣಯ ಮಾಡಲಾಗುತ್ತೆ ಎಂದರು. ರಾಷ್ಟ್ರ ಧ್ವಜದ ಕುರಿತಾದ ಹೋರಾಟ ಇಲ್ಲಿಗೇ ಕೈ ಬಿಡಲ್ಲ. ಬಿಜೆಪಿಯವರಿಗೆ ಸ್ವತಂತ್ರದ ಬಗ್ಗೆ ಗೌರವ ಇಲ್ಲ. ರಾಷ್ಟ್ರಧ್ವಜದ ಬಗ್ಗೆ ಮಾತನಾಡುವವರಿಗೆ ಅದರ ಇತಿಹಾಸ ಗೊತ್ತಿಲ್ಲ. ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಡಿಕೆಶಿ ಟಾಂಗ್ ನೀಡಿದರು. ಇತಿಹಾಸ ಗೊತ್ತಿಲ್ಲದೇ ರಾಷ್ಟ್ರಧ್ವಜದ ಬಗ್ಗೆ ಮಾತನಾಡುತ್ತಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಮುಂದಿನ ಸಿಎಂ ಬಗ್ಗೆ ಡಿಕೆಶಿ ಗರಂ
ಮುಂದಿನ ಮುಖ್ಯಮಂತ್ರಿ ಯಾರೆಂಬ ಪ್ರಶ್ನೆ ಈಗಲೇ ಉದ್ಭವಿಸಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸೋದಾಗಿ ಎಐಸಿಸಿ ಅಧ್ಯಕ್ಷರು ಹೇಳಿದ್ದು, ಅವರ ಆದೇಶಕ್ಕೆ ಅನುಗುಣವಾಗಿ ಕೆಲಸ ಮಾಡ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಯಾರು ಯಾರು ಏನು ಹೇಳ್ತಾರೋ ಗೊತ್ತಿಲ್ಲ. ಆದರೆ ಎಐಸಿಸಿ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದರು. ವೀರಪ್ಪ ಮೊಯ್ಲಿ ಅವರು ಎಸ್.ಆರ್.ಪಾಟೀಲರೂ ಮುಖ್ಯಮಂತ್ರಿ ಆಗೋಕೆ ಸೂಕ್ತ ಅಭ್ಯರ್ಥಿ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ ಈ ಬಗ್ಗೆ ನಾನೇನು ಹೇಳಲ್ಲ. ಮೊಯ್ಲಿ ಅವರನ್ನೇ ಕೇಳಿ. ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಅವರೇ ನಿಮ್ಮ ಮುಂದೆ ಬರಲಿದ್ದಾರೆ. ಅವರನ್ನೇ ನೀವು ಪ್ರಶ್ನಿಸಿ ಅಂತ ಡಿಕೆಶಿ ಜಾರಿಕೊಂಡರು.
ದ. ಕನ್ನಡ ಜಿಲ್ಲೆಯ ಹತ್ಯೆಗಳಿಗೆ ಡಿಕೆಶಿ ಖಂಡನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರೋ ಹತ್ಯೆಗಳನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಪ್ಪಿತಸ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಪದೇ ಪದೇ ಇಂತಹ ಹತ್ಯೆಗಳು ನಡೆಯುತ್ತಿವೆ. ಪ್ರವೀಣ್ ಜೊತೆ ಮತ್ತಿಬ್ಬರ ಹತ್ಯೆಗಳಾಗಿವೆ. ಇಂತಹ ಹತ್ಯೆಗಳಿಗೆ ನಮ್ಮ ಖಂಡನೆ ಇದೆ. ಸರ್ಕಾರ ಅಂತಹ ಸಾವುಗಳಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕಿದೆ. ತನಿಖೆಯ ವಿಚಾರದಲ್ಲಿ ನಾವು ಭಾಗಿಯಾಗುವುದಿಲ್ಲ. ಸಾವಿಗೆ ನ್ಯಾಯ ಕೊಡಿಸುವ ವಿಚಾರ ಸರ್ಕಾರಕ್ಕೆ ಇದ್ರೆ ನ್ಯಾಯ ಒದಗಿಸಲಿ. ಸಾವು ಯಾರದ್ದೇ ಆದ್ರೂ ಅದು ಮನುಷ್ಯನ ಸಾವು ಎಂದರು.
ಇದನ್ನೂ ಓದಿ: Independence Day 2022: ಪ್ರತಿಯೊಂದು ಮನೆ ಮೇಲೆ ಹಾರಲಿ ತ್ರಿವರ್ಣ ಧ್ವಜ; ಎಲ್ಲೆಲ್ಲೂ ಹರಡಲಿ ಅಮೃತ ಮಹೋತ್ಸವದ ಸಂಭ್ರಮ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ಬಿಜೆಪಿ ವಿರುದ್ಧ ಬಿಜೆಪಿ ಕಾರ್ಯಕರ್ತರ ದಂಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಅವರಿಗೆ ಅವರ ಸರ್ಕಾರದ ಮೇಲೆ ನಂಬಿಕೆ ಇತ್ತು. ಆದ್ರೆ ಸರ್ಕಾರ ಅವರ ನಂಬಿಕೆ ಕಳೆದುಕೊಂಡಿದೆ. ಮುಖ್ಯಮಂತ್ರಿಗಳೇ ಮಾದರಿ ಪೊಲೀಸರಿಗೆ ಪ್ರೋತ್ಸಾಹ ನೀಡಿದ್ರು, ಯಾವುದೇ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ನಾವು ಹೇಳಬೇಕಿಲ್ಲ. ಈ ಬಗ್ಗೆ ಅವರ ರಾಷ್ಟ್ರೀಯ ನಾಯಕರೇ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಇವರ ಕೈಯಿಂದ ಆಗಲ್ಲ. ಬಿಜೆಪಿ ಕಾರ್ಯಕರ್ತರ ನೋವಿನಲ್ಲಿ ನಾನೂ ಇದ್ದೇನೆ. ಹತ್ಯೆಗೊಳಗಾಗಿ ಅಸುನೀಗಿದ ಮೂವರೂ ಅಮಾಯಕರು. ಅವರ ಮನೆಗೆ ಒಂದು ದಿನ ಭೇಟಿ ನೀಡಲಿದ್ದೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ