HOME » NEWS » State » KPCC PRESIDENT DK SHIVAKUMAR CHALLENGE BJP LEADERS MAK

ನಾವು ಜನಪರ ಹೋರಾಟ ಮಾಡಿದ್ದೇವೆ, ಹೀಗಾಗಿ ಯಾವ ಕೇಸ್‌ಗೂ ಬಗ್ಗಲ್ಲ; ಡಿ.ಕೆ. ಶಿವಕುಮಾರ್ ಸವಾಲು

ಕೊರೋನಾ ಸಮಯದಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಇವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ ಇಂತಹ ವಿಚಾರಗಳ ವಿರುದ್ಧ ಹೋರಾಟ ನಡೆಸಲು ಯಾವುದೇ ಅನುಮತಿ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.

news18-kannada
Updated:June 29, 2020, 5:59 PM IST
ನಾವು ಜನಪರ ಹೋರಾಟ ಮಾಡಿದ್ದೇವೆ, ಹೀಗಾಗಿ ಯಾವ ಕೇಸ್‌ಗೂ ಬಗ್ಗಲ್ಲ; ಡಿ.ಕೆ. ಶಿವಕುಮಾರ್ ಸವಾಲು
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
  • Share this:
ಬೆಂಗಳೂರು (ಜೂನ್ 29); ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಾವು ಜನಪರವಾಗಿ ಹೋರಾಟ ನಡೆಸಿದ್ದೇವೆ. ಹೀಗಾಗಿ ರಾಜ್ಯ ಸರ್ಕಾರ ನಮ್ಮ ಮೇಲೆ ಯಾವ ಕೇಸ್ ಬೇಕಿದ್ದರೂ ಹಾಕಲಿ. ಆದರೆ, ನಾವು ಯಾವ ಕೇಸ್‌ಗೂ ಬಗ್ಗಲ್ಲ, ಕೇಸ್‌ ಹಾಕುವ ಮೂಲಕ ನಮ್ಮನ್ನು ಮಣಿಸುವುದು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪಾತಾಳಕ್ಕೆ ಕುಸಿದಿದೆ. ಆದರೂ, ಸಹ ಭಾರತದಲ್ಲಿ ತೈಲದ ಬೆಲೆ ಸತತವಾಗಿ ಏರಿಸಲಾಗುತ್ತಿದೆ. ಇದನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಸೈಕಲ್ ತುಳಿಯುವ ಮೂಲಕ ಕೇಂದ್ರದ ಇರುದ್ಧ ಪ್ರತಿಭಟನೆ ದಾಖಲಿಸಿದ್ದರು. ಆದರೆ, ಈ ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ ಎಂಬ ಕಾರಣಕ್ಕೆ ಇದೀಗ ಕೈ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್, “ಬೆಳಗಾಂಗೆ ಸಿಎಂ ಯಡಿಯೂರಪ್ಪ ಹೋಗಿದ್ದರು, ಮಹಾಂತೇಶ್ ಕವಟಗಿಮಠ ಮಗಳ ಮದುವೆಯಲ್ಲಿ ಭಾಗಿಯಾಗಿದ್ದರು. ಶ್ರೀರಾಮಲು ಚಿತ್ರದುರ್ಗ ದಲ್ಲಿ ಭಾಗಿಯಾದ ಕಾರ್ಯಕ್ರಮದಲ್ಲೂ ಸಾಮಾಜಿಕ ಅಂತರ ಪಾಲನೆಯಾಗಿರಲಿಲ್ಲ.ಇನ್ನೂ ಬಿಜೆಪಿಯ ಸಚಿವರೇ ಸ್ವಿಮಿಂಗ್ ಪೂಲ್ ನಲ್ಲಿದ್ದು ಕಾನೂನು ಉಲ್ಲಂಘಿಸಿದ್ದರು.

ಶ್ರೀರಾಮುಲು, ಈಶ್ವರಪ್ಪ ಅವರ ಕಾರ್ಯಕ್ರಮಗಳನ್ನು ನಾವು ನೋಡಿದ್ದೇವೆ. ಅವರೆಷ್ಟು ಅನಾಚಾರಗಳನ್ನು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಹೀಗೆ ಕಾನೂನು ಉಲ್ಲಂಘಿಸಿದ ಸಚಿವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರಿ? ಕೊರೋನಾ ನಡುವೆಯೂ ಸ್ವಿಮ್ಮಿಂಗ್ ಮಾಡಿದವರ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಏನು ಕ್ರಮ ಕೈಗೊಂಡಿರಿ?

ಮೊದಲು ಅವರ ಮೇಲೆ ಕ್ರಮ ತೆಗೆದುಕೊಳ್ಳಿ ನಂತರ ನಮ್ಮ ಮೇಲೆ ಕ್ರಮ ಜರುಗಿಸಿ. ನಾವು ಎಂತಹ ಕೇಸ್‌ಗಳನ್ನೂ ಎದುರಿಸಲು ಸಿದ್ಧವಾಗಿಯೇ ಇದ್ದೇವೆ. ಆದರೆ, ಕೇಸ್ ಹಾಕಿ ನಮ್ಮನ್ನು ಎದುರಿಸಲು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ನಾಯಕರು ತಿಳಿದುಕೊಳ್ಳಲಿ” ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಬಡವರ ರಕ್ತ ಹೀರುತ್ತಿದೆ; ಸಿದ್ದರಾಮಯ್ಯ ಕಿಡಿ

"ತೈಲ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡ ಜನರ ರಕ್ತವನ್ನು ಅಮಾನವೀಯವಾಗಿ ಹೀರುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ತೈಲ ಬೆಲೆ ವಿರೋಧಿಸಿ ಪ್ರತಿಭಟಿಸಿದವರ ವಿರುದ್ಧ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಮಾತನಾಡಿರುವ ಅವರು, "ರಾಕ್ಷಸೀಗುಣ ಹೊಂದಿರುವ ಕೇಂದ್ರ ಸರ್ಕಾರ ಬಡವರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ, ಅವರ ರಕ್ತ ಹೀರುತ್ತಿದೆ. ಅಲ್ಲದೆ, ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ.

ಇದನ್ನೂ ಓದಿ : ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನೆ; ಕೈ ನಾಯಕರು ಹೇಳಿದ್ದೇನು ಗೊತ್ತಾ?

ಕೊರೋನಾ ಸಮಯದಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಇವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನೆ ಮಾಡಿರುವ ಅವರು, ಇಂತಹ ವಿಚಾರಗಳ ವಿರುದ್ಧ ಹೋರಾಟ ನಡೆಸಲು ಯಾವುದೇ ಅನುಮತಿ ಬೇಕಾಗಿಲ್ಲ” ಎಂದು ಕಿಡಿಕಾರಿದ್ದಾರೆ.
First published: June 29, 2020, 5:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading