HOME » NEWS » State » KPCC PRESIDENT DK SHIVAKUMAR ANGRY ON BJP GOVERNMENT FOR RISING ELECTRICITY BILL IN KARNATAKA SHM SCT

ಒಂದು ವಾರದೊಳಗೆ ವಿದ್ಯುತ್ ದರ ಏರಿಕೆಯ ಆದೇಶ ಹಿಂಪಡೆಯದಿದ್ದರೆ ಹೋರಾಟ; ಡಿಕೆ ಶಿವಕುಮಾರ್ ಎಚ್ಚರಿಕೆ

ಒಂದು ವಾರದೊಳಗೆ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ವಾಪಾಸ್​ ಪಡೆಯದಿದ್ದರೆ ನಾವು ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ. ನ. 23ರಿಂದ 28ರವರೆಗೆ ತಾಲೂಕು ಕೇಂದ್ರಗಳಲ್ಲಿ ಹೋರಾಟ ಮಾಡಲಿದ್ದೇವೆ ಎಂದು ರಾಜ್ಯ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

news18-kannada
Updated:November 9, 2020, 3:40 PM IST
ಒಂದು ವಾರದೊಳಗೆ ವಿದ್ಯುತ್ ದರ ಏರಿಕೆಯ ಆದೇಶ ಹಿಂಪಡೆಯದಿದ್ದರೆ ಹೋರಾಟ; ಡಿಕೆ ಶಿವಕುಮಾರ್ ಎಚ್ಚರಿಕೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ನ. 9): ರಾಜ್ಯ ಸರ್ಕಾರದ ವಿರುದ್ಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ. ಇದು ಜನ ವಿರೋಧಿ ನೀತಿ. ನಾನು ಇಂಧನ ಇಲಾಖೆಯಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನನಗೂ ಈ ಬಗ್ಗೆ ಅಲ್ಪಸ್ವಲ್ಪ ಮಾಹಿತಿಯಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇಂತಹ ವೇಳೆಯಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ. ಕೂಡಲೇ ಸರ್ಕಾರ ಈ ಆದೇಶವನ್ನು ವಾಪಾಸ್ ಪಡೆಯಬೇಕು. ಒಂದು ವಾರದೊಳಗೆ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ವಾಪಾಸ್​ ಪಡೆಯದಿದ್ದರೆ ನಾವು ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ. ನ. 23ರಿಂದ 28ರವರೆಗೆ ತಾಲೂಕು ಕೇಂದ್ರಗಳಲ್ಲಿ ಹೋರಾಟ ಮಾಡಲಿದ್ದೇವೆ ಎಂದು ರಾಜ್ಯ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ದೇಶ, ರಾಜ್ಯಗಳು ಆರ್ಥಿಕ ಸಂಕಷ್ಟ ದಲ್ಲಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ. ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಿದೆ. ಇದು ಜನರ ವಿರೋಧಿ ನೀತಿಯಾಗಿದೆ. ಈ ಮೂಲಕ ಕೈಗಾರಿಕೆ, ವ್ಯಾಪಾರ, ರೈತರಿಗೂ ಸರ್ಕಾರ ಬರೆ ಎಳೆದಿದೆ. ವಿದ್ಯುತ್ ದರ ಏರಿಕೆಯನ್ನ ಕೂಡಲೇ ವಾಪಸ್ ಪಡೆಯಬೇಕು. ಒಂದೂವರೆ ವರ್ಷ ದರ ಏರಿಕೆ ತೀರ್ಮಾನವನ್ನು ಕೈ ಬಿಡಬೇಕು. ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದು ವಿದ್ಯುತ್ ದರ ಏರಿಕೆಯನ್ನು ಡಿಕೆಶಿ ಖಂಡಿಸಿದ್ದಾರೆ.

ಕರ್ನಾಟಕದಲ್ಲಿ ಪಟಾಕಿ ಬ್ಯಾನ್ ಮಾಡುವ ವಿಚಾರವಾಗಿ ಅಸಮಾಧಾನ ಹೊರಹಾಕಿರುವ ಡಿಕೆಶಿ, ಎಲ್ಲಾ ವ್ಯಾಪಾರಿಗಳನ್ನು ಸರ್ಕಾರ ಸಾಯಿಸುತ್ತಿದೆ. ಪಟಾಕಿ‌ಯನ್ನು ಕರ್ನಾಟಕದವರು ತಯಾರು‌ ಮಾಡಿರಲಿ ಅಥವಾ ಕರ್ನಾಟಕದವರೇ ಸಿದ್ಧಪಡಿಸಿರಲಿ ಅದೊಂದು ಉದ್ಯಮದಲ್ಲೇ ತಯಾರಾಗೋದು. ಸರ್ಕಾರ ವಾಯುಮಾಲಿನ್ಯವನ್ನು ನಿಯಂತ್ರಿಸಲು ಹೊರಟಿರುವುದು ತಪ್ಪಲ್ಲ. ಆದರೆ, ಏಕಾಏಕಿ ಪಟಾಕಿ ಬ್ಯಾನ್ ಮಾಡೋದು ಸರಿಯಲ್ಲ. ಇದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಬೇಕಾದರೆ ಸರ್ಕಾರವೇ ಎಲ್ಲಾ ಪಟಾಕಿ ಖರೀದಿಸಲಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಇಂದು ರಾತ್ರಿಯಿಂದ ನ. 30ರವರೆಗೂ ಪಟಾಕಿ ಮಾರಾಟ, ಬಳಕೆ ನಿಷೇಧ

ನಾಳೆ ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ನಮಗೆ ಸಿಕ್ಕಿರುವ ವರದಿಯಲ್ಲಿ ಕಾಂಗ್ರೆಸ್​ಗೆ ಗೆಲುವು ಸಿಗುತ್ತದೆ ಎಂದು ಇದೆ. ಜನರು ಆರ್​ಆರ್​ ನಗರದಲ್ಲಿ ಮುನಿರತ್ನ ವಿರುದ್ಧ ಮತ ಚಲಾಯಿಸಿದ್ದಾರೆ. ಜೆಡಿಎಸ್ ಅವರು ನಮಗೆ ವೋಟ್ ಮಾಡಿದ್ದೇವೆ ಅಂತ ಹೇಳಿದ್ದಾರೆ. ಬಿಜೆಪಿ ಅವರು ಮುನಿರತ್ನ ವಿರುದ್ಧ ಕುಸುಮಾ ಪರ ಮತ ಹಾಕಿದ್ದಾರೆ. ಹೀಗಾಗಿ ನಮ್ಮ ಗೆಲುವು ಖಚಿತ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಆರ್ ಆರ್ ನಗರ ಕಾಂಗ್ರೆಸ್​ನ ಮಹಿಳಾ ಅಭ್ಯರ್ಥಿಗಾಗಿ ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದು ಆರ್ ಆರ್ ನಗರದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲಾ ಕಾರ್ಯಕರ್ತರು ನಾಯಕರಂತೆ ದುಡಿಮೆ ಮಾಡಿದ್ದಾರೆ. ಕ್ಷೇತ್ರದಲ್ಲಿ ನಾವೇ ಅಭ್ಯರ್ಥಿ ಅಂತ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಎಲ್ಲಾ ಮಹಿಳಾ ಕಾರ್ಯಕರ್ತರರಿಗೆ ಅಭಿನಂದನೆ ತಿಳಿಸುತ್ತೇನೆ. ಎಕ್ಸಿಟ್ ಪೋಲ್ ಏನೇ ಇರಲಿ. ನಮಗೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ. ರಾಜ್ಯ ಸರ್ಕಾರ ಎಷ್ಟೇ ದೌರ್ಜನ್ಯ ಮಾಡಿದರೂ ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಲ್ಲ. ಎರಡೂ ಕಡೆ ಜನ ನಮ್ಮ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Published by: Sushma Chakre
First published: November 9, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories