HOME » NEWS » State » KPCC PRESIDENT DK SHIVAKUMAR ALLEGATION ON BS YEDYURAPPA GOVERNMENT SCT

ಯಡಿಯೂರಪ್ಪ ಸರ್ಕಾರ ತಿಂದಿರುವುದನ್ನು ಕಕ್ಕಿಸುವುದು ನಮ್ಮ ಕರ್ತವ್ಯ; ಡಿ.ಕೆ. ಶಿವಕುಮಾರ್ ವಾಗ್ದಾಳಿ

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ತನಿಖೆಗೆ ಒತ್ತಾಯ ಮಾಡಿದ್ದಾಗ ನಾವು ತನಿಖೆಗೆ ನೀಡಲಿಲ್ಲವೇ? ಸಚಿವರ ತಲೆದಂಡ ಮಾಡಲಿಲ್ಲವೇ? ಈಗ ನಿಮ್ಮ ಸರ್ಕಾರದ ಭ್ರಷ್ಟಾಚಾರದ ಕುರಿತೂ ತನಿಖೆಗೆ ಆದೇಶ ನೀಡಿ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.

news18-kannada
Updated:July 27, 2020, 2:37 PM IST
ಯಡಿಯೂರಪ್ಪ ಸರ್ಕಾರ ತಿಂದಿರುವುದನ್ನು ಕಕ್ಕಿಸುವುದು ನಮ್ಮ ಕರ್ತವ್ಯ; ಡಿ.ಕೆ. ಶಿವಕುಮಾರ್ ವಾಗ್ದಾಳಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
  • Share this:
ಬೆಂಗಳೂರು (ಜು. 27): ಯಡಿಯೂರಪ್ಪನವರ ಸರ್ಕಾರಕ್ಕೆ ಒಂದು ವರ್ಷ ಆಗಿದೆ. ಆಪರೇಷನ್ ನಡೆಸಿದ್ದೇವೆ ಅಂತ ಒಪ್ಪಿಕೊಳ್ಳಿ, ಮಾತು ಕೊಟ್ಟವರಿಗೆ ಮಂತ್ರಿಗಿರಿ ಕೊಟ್ಟೆವು ಎಂದು ಹೇಳಿ. ಆದರೆ, ಸಾಧನೆ ಮಾಡಿದ್ದೇವೆ ಎಂದು ಮಾತ್ರ ಹೇಳಬೇಡಿ. ಇದು ಸೂತಕದಲ್ಲಿ ಸಂಭ್ರಮಾಚರಣೆ ಮಾಡುತ್ತಿರುವ ಸರ್ಕಾರ. ಈ ಸರ್ಕಾರ ತಿಂದಿದ್ದನ್ನು ಕಕ್ಕಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿ.ಕೆ. ಶಿವಕುಮಾರ್, ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ನಿವೃತ್ತ ನ್ಯಾಯಾಧೀಶರಿಂದ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಬೇಕು. ಯಡಿಯೂರಪ್ಪ ಸರ್ಕಾರದವರು ತಿಂದಿರುವುದನ್ನು ಕಕ್ಕಿಸಬೇಕಿರುವುದು ನಮ್ಮ ಕರ್ತವ್ಯ. ನಾನು ನಿಮ್ಮ ಬೆದರಿಕೆಗೆ ಬಗ್ಗುವವನಲ್ಲ. ನಮ್ಮದೂ ಸೇರಿಸಿ ತನಿಖೆ ಮಾಡಿಸಿ. ಎಸಿಬಿಗೆ ದೂರು ನೀಡೋದು ನಮಗೆ ಗೊತ್ತಿದೆ. ಎಸಿಬಿಗೆ ನೀಡುವುದು ಕೊನೆಯ ಹಂತ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ತನಿಖೆಗೆ ಒತ್ತಾಯ ಮಾಡಿದ್ದಾಗ ನಾವು ತನಿಖೆಗೆ ನೀಡಲಿಲ್ಲವೇ? ಸಚಿವರ ತಲೆದಂಡ ಮಾಡಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ, ಇದಕ್ಕೆ ಶಕ್ತಿ ಮೀರಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ; ಯಡಿಯೂರಪ್ಪ

ಪ್ರಧಾನಿ ಮೋದಿ 21 ದಿನಗಳಲ್ಲಿ ಕೋವಿಡ್ ಯುದ್ಧ ಮುಗಿಸುತ್ತೇನೆ ಎಂದಿದ್ದರು. ಜನರಿಂದ ದೀಪ ಹಚ್ಚಿ, ಚಪ್ಪಾಳೆ ತಟ್ಟಿಸಿದರು. ಆದರೀಗ ರಾಜ್ಯದ ಜನ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ. ಚಿಕಿತ್ಸೆ ದರ ಪಟ್ಟಿ ನಿಗದಿ ಮಾಡಿದ್ದರು. ಆದರೆ ದರ ಪಟ್ಟಿಯನ್ನು ಈಗ ರದ್ದು ಮಾಡಲಾಗಿದೆ. ಇಡೀ ರಾಜ್ಯ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದೆ. ಕತ್ತಲೆಯಲ್ಲಿ ರಾಜ್ಯ ಮುಳುಗಿ ಹೋಗಿದೆ. ಆದರೆ, ರಾಜ್ಯ ಸರ್ಕಾರ ಕೊರೊನಾ ಹೆಣಗಳಲ್ಲಿ ಹಣ ಮಾಡುತ್ತಿದೆ. ಈ ಸಾಧನೆಯನ್ನು ಎಲ್ಲ ಜಿಲ್ಲೆಗಳಿಗೆ ತಲುಪಿಸುತ್ತೇವೆ ಎಂದು ಟೀಕಿಸಿದ್ದಾರೆ.

ಈ ಸರ್ಕಾರ ನುಡಿದಂತೆ ಯಾವುದನ್ನೂ ಜನರಿಗೆ ತಲುಪಿಸಿಲ್ಲ. ಸುಳ್ಳಿನ ಸರಮಾಲೆ ಕೊಟ್ಟರು. ನೆರೆ ಪರಿಹಾರ ಕೊಡಲು ಈವರೆಗೂ ಸಾಧ್ಯವಾಗಿಲ್ಲ. ಮನೆ ಕಟ್ಟಿಕೊಡುತ್ತೇನೆ ಎಂದು ಸುಳ್ಳು ಹೇಳಿದರು. 33 ಸಾವಿರ ಕೋಟಿ ರೂ. ಪ್ರವಾಹ ನಷ್ಟದ ಮಾಹಿತಿ ನೀಡಿದರು. ಕೇಂದ್ರದಿಂದ 1,800 ಕೋಟಿ ಮಾತ್ರ ಪರಿಹಾರ ಧನ ಬಂದಿತು. ಮುಖ್ಯಮಂತ್ರಿಗಳು ಮಧ್ಯಂತರ ಪರಿಹಾರ 5 ಸಾವಿರ ರೂ. ಕೋಟಿ ಮನವಿ ಮಾಡಿದರು. ಆದರೆ ಯಾವುದೇ ಪರಿಹಾರ ಬರಲಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ: ಬಂಡಾಯ ಶಮನಕ್ಕೆ ಮುಂದಾದ ರಾಜ್ಯ ಸರ್ಕಾರ; ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಸ್ಥಾನ

ಕೋವಿಡ್ ವಿಚಾರದಲ್ಲೂ 2,000 ಕೋಟಿ ರೂ. ಲೂಟಿ ಮಾಡಿದ್ದಾರೆ. 1600 ಕೋಟಿ ಘೋಷಣೆ ಮಾಡಿದ್ದಾರಲ್ಲ. ಯಾರ್ಯಾರಿಗೆ ಕೊಟ್ಟಿದ್ದಾರೆ ಎಂಬ ಪಟ್ಟಿ ಕೊಡಲಿ. ಸಹಾಯಧನ ಕೊಟ್ಟ ಫಲಾನುಭವಿಗಳ ಪಟ್ಟಿ ಕೊಡಿ. ಕೋವಿಡ್ ನಿಂದ ಸತ್ತಮೇಲೆ ಪರಿಹಾರ ಕೊಡುತ್ತೀರಾ? ರೈತರಿಗೆ ಸಾವಿರಾರು ಕೋಟಿ ರೂ. ನಷ್ಟ ಆಗಿದೆ. ರೈತರಿಗೆ ಬೆಂಬಲ ಬೆಲೆ ನೀಡಿರುವ ದಾಖಲೆ ನೀಡಿ. ವಿಪಕ್ಷದವರು ಪ್ರಶ್ನೆ ಮಾಡುವುದು ಸಹಜ. ಆಡಳಿತ ಪಕ್ಷ ಭ್ರಷ್ಟಾಚಾರ ನಡೆಸಿದೆ ಎಂದು ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.ನಾವು ಸರ್ಕಾರಕ್ಕೆ ನಾವು ಲೆಕ್ಕಾ ಕೇಳ್ತಾ ಇದ್ದೇವೆ. ನಮಗೆ ಲೆಕ್ಕ ಕೊಡುವುದು ಸರ್ಕಾರದ ಜವಾಬ್ದಾರಿ. ಆದರೆ, ಸರ್ಕಾರ ಲೆಕ್ಕ ನೀಡುತ್ತಿಲ್ಲ. ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದರು. ಆಗ ನಮ್ಮ ಸರ್ಕಾರಕ್ಕೆ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದಿದ್ದರು. ನಾವು ತಪ್ಪು ಮಾಡಿದ್ದರೆ ಜನರ ಮುಂದೆ ಹೇಳಿ. ಈಗ ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದೆ. ಇದಕ್ಕೆ ಏನಿದೆ ಉತ್ತರ? ಎಂದು ಪ್ರಶ್ನಿಸಿರುವ ಡಿ.ಕೆ. ಶಿವಕುಮಾರ್, ಒಂದು ವೇಳೆ ಹಿಂದೆ ನಾವು ಭ್ರಷ್ಟಾಚಾರ ಮಾಡಿದ್ದರೆ ತನಿಖೆ ಮಾಡಲಿ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ್ದಾರೆ.

ನಿಮ್ಮದು ಎಷ್ಟು ಪರ್ಸೆಂಟ್ ಸರ್ಕಾರ?:

ಈ ದೇಶದ ಪ್ರಧಾನಿ ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದಿದ್ದರು. ಈಗ ನಿಮ್ಮ ಸರ್ಕಾರಕ್ಕೆ ಎಷ್ಟು ಪರ್ಸೆಂಟ್ ಹೋಗಿದೆ ಲೆಕ್ಕ ಇದೆಯಾ? ಕೋವಿಡ್ ಖರೀದಿಯಲ್ಲಿ ಶೇ. 200-300ರಷ್ಟು ಹಣ ಹೊಡೆದಿದ್ದಾರೆ. ನಮ್ಮ ಮೇಲೂ ತನಿಖೆ ಮಾಡಿ. ನಿಮ್ಮ ಸರ್ಕಾರದ ಅವ್ಯವಹಾರದ ವಿರುದ್ಧ ತನಿಖೆ ಮಾಡಿ. ಕೊರೊನಾ ವಿಚಾರದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ಆಗಲಿ. ನಿಮ್ಮ ಗುತ್ತಿಗೆದಾರರನ್ನ ಕರೆದು ಕೇಳಿ. ಎಷ್ಟು ಪರ್ಸೆಂಟ್ ಕಮಿಷನ್ ಹೊಡೆದಿದ್ದಾರೆ ಎಂದು ತಿಳಿಯುತ್ತದೆ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ಕೇಂದ್ರದಿಂದ ಯಾವ ಕೊಡುಗೆ ಬಂದಿದೆ ತೋರಿಸಿ. ಭ್ರಷ್ಟಾಚಾರದ ಕುರಿತು ನಾವು ಸತ್ಯಾಂಶ ತಿಳಿಸಿದ್ದೇವೆ. ಐದು ಜನ ಮಂತ್ರಿಗಳಿಂದ ಉತ್ತರ ಕೊಟ್ಟರು. ನಿಮ್ಮ ಗುತ್ತಿಗೆದಾರರು ನಮಗೆ ಪರಿಚಯ ಇಲ್ಲವೇ? ನಿಮ್ಮ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೆಡಿಕಲ್ ಕಿಟ್ ಖರೀದಿ ದುಬಾರಿ ಬಗ್ಗೆ ಸರ್ಕಾರವೇ ಒಪ್ಪಿಕೊಂಡಿದೆ. ಆಗ ದುಬಾರಿ ಇತ್ತು, ಈಗ ಕಡಿಮೆ ‌ಆಗಿದೆ ಎಂದು ಹೇಳಿದೆ. ಇದು ಎಲ್ಲಾದರೂ ಉಂಟೇ? ಬೇರೆ ರಾಜ್ಯಗಳಲ್ಲಿ‌‌ ಖರೀದಿ ಮಾಡಿರುವುದು ಎಲ್ಲಿಂದ ಹಾಗಾದರೆ? ಬೆಂಗಳೂರಿನಲ್ಲಿದ್ದ ಕಾರ್ಮಿಕರನ್ನು ನೀವು ಸರಿಯಾಗಿ ನೋಡಿಕೊಂಡಿಲ್ಲ. ಹಾಗಾಗಿ, ಎಲ್ಲ ಕಾರ್ಮಿಕರೂ ಬೆಂಗಳೂರು ಬಿಟ್ಟು ಹಳ್ಳಿಗಳ ಕಡೆ ಹೊರಟು ಹೋದರು. ನೀವು ಸರಿಯಾಗಿ ಫುಡ್ ಕಿಟ್ ವಿತರಣೆ ಮಾಡದ ಕಾರಣ ಹಲವರು ರಾಜ್ಯ ಬಿಟ್ಟು ಹೋಗಿದ್ದಾರೆ. ಯುವಕರಿಗೆ ಮುಂದೆ ಕೆಲಸ ಸಿಗುವ ಭರವಸೆ ಇಲ್ಲವಾದ್ದರಿಂದ ಯುವಕರು ಕೂಡ ಊರುಗಳ ಕಡೆ ಹೋಗುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬಿ.ಎಸ್. ಯಡಿಯೂರಪ್ಪನವರ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಅವರ ಸಾಧನೆಯನ್ನು ಬಿಚ್ಚಿಟ್ಟಿದ್ದಾರೆ, ಎಲ್ಲ ಮಂತ್ರಿಗಳನ್ನೂ ಅವರು ಪರಿಚಯ ಮಾಡಿಸಿದ್ದಾರೆ. ಯಡಿಯೂರಪ್ಪನವರ ಸರ್ಕಾರದಲ್ಲಿ ಮೊದಲ ಒಂದು ತಿಂಗಳು ಮಂತ್ರಿಮಂಡಲ ಇರದೆ ತಿಕ್ಕಾಟ, ಎರಡನೇ ತಿಂಗಳು ಪರದಾಟ, ಮೂರನೇ ತಿಂಗಳು ದೊಂಬರಾಟ, 11 ತಿಂಗಳಿಗೆ ಲೂಟಿ ಆಟ ನಡೆಸಿದರು. ಒಂದು ವರ್ಷದ ಯಡಿಯೂರಪ್ಪನವರ ಆಟ ಇಷ್ಟೇ. ಒಂದನೇ ತಿಂಗಳು ಮಂತ್ರಿಮಂಡಲ ಇಲ್ಲದೆ ತಿರುಗಾಟ, ಎರಡನೇ ತಿಂಗಳು ನೆರೆ ಪರಿಹಾರ ಕೊಡದೆ ನರಳಾಟ, ಮೂರನೇ ತಿಂಗಳು ಉಪಚುನಾವಣೆ ಎಂಬ ಬಯಲಾಟ, ನಾಲ್ಕನೇ ತಿಂಗಳು ಮಂತ್ರಿಮಂಡಲ ಎಂಬ ದೊಂಬರಾಟ, 5, 6ನೇ ತಿಂಗಳಲ್ಲಿ ಮಂತ್ರಿಗಿರಿಗಾಗಿ ಕಿತ್ತಾಟ, 7, 8ನೇ ತಿಂಗಳಲ್ಲಿ ಕೊರೋನಾ ಲಾಕ್​ಡೌನ್ ಇದು ಅವರ ಒಂದು ವರ್ಷದ ಸಾಧನೆ ಎಂದು ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
Published by: Sushma Chakre
First published: July 27, 2020, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories