ಬೆಳಗಾವಿ, ಬಸವಕಲ್ಯಾಣ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ

ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಕಚೇರಿಯಲ್ಲಿ ಅಂತಿಮಗೊಳಿಸಲಾಗಿದ್ದು, ಹೈಕಮಾಂಡ್ಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.

ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್.

  • Share this:
ಬೆಂಗಳೂರು(ಜ. 09): ಪ್ರತಿಷ್ಠೆಯ ವಿಚಾರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದ್ದು, ಅದನ್ನು ಹೈಕಮಾಂಡ್​ಗೆ ಕಳುಹಿಸಲು ನಿರ್ಧರಿಸಲಾಗಿದೆ. ನಿರೀಕ್ಷೆಯಂತೆ ಸತೀಶ್ ಜಾರಕಿಹೊಳಿ, ಪ್ರಕಾಶ್ ಹುಕ್ಕೇರಿ ಮತ್ತು ಚನ್ನರಾಜು ಅವರ ಹೆಸರು ಈ ಪಟ್ಟಿಯಲ್ಲಿದೆ. ಮೂಲಗಳ ಪ್ರಕಾರ, ಸತೀಶ್ ಜಾರಕಿಹೊಳಿ ಅವರಿಗೆ ಅಂತಿಮವಾಗಿ ಟಿಕೆಟ್ ಸಿಗುವ ಸಾಧ್ಯತೆ ಇದೆ. ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ಖಾಲಿ ಬಿದ್ದಿದೆ. ಹೀಗಾಗಿ, ಕಾಂಗ್ರೆಸ್ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಕೆಪಿಸಿಸಿ ಮುಖ್ಯ ಕಚೇರಿಯಲ್ಲಿ ಹಿರಿಯ ನಾಯಕರ ಸಭೆ ನಡೆಯಿತು.

ಇದೇ ವೇಳೆ, ಕೋವಿಡ್ ಮಹಾಮಾರಿಗೆ ಎಂ ನಾರಾಯಣರಾವ್ ಬಲಿಯಾಗುವುದರೊಂದಿಗೆ ತೆರವುಗೊಂಡಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆದಿದೆ. ಕೆಪಿಸಿಸಿ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಮಾಡಿದೆ. ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಮತ್ತು ವಿಧಾನಪರಿಷತ್ ಸದಸ್ಯ ವಿಜಯ್ ಸಿಂಗ್ ಅವರ ಹೆಸರು ಅಂತಿಮಗೊಂಡಿದ್ದು ಹೈಕಮಾಂಡ್ ಅಂಗಳಕ್ಕೆ ಪಟ್ಟಿ ಕಳುಹಿಸಲು ನಿರ್ಧರಿಸಲಾಗಿದೆ. ಮಾಜಿ ಬೀದರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಬುಲ್ಲಾ ಅವರ ಹೆಸರೂ ರೇಸ್​ನಲ್ಲಿತ್ತು.

ಇವತ್ತು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಮಹಾಂತೇಶ್ ಕೌಜಲಗಿ, ಈಶ್ವರ್ ಖಂಡ್ರೆ, ವೀರ್ ಕುಮಾರ್ ಪಾಟೀಲ್ ಹಾಗೂ ಬೆಳಗಾವಿ, ಬಸವಕಲ್ಯಾಣ ಕ್ಷೇತ್ರಗಳ ಸ್ಥಳೀಯ ಕೆಲ ಮುಖಂಡರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಬದುಕಿರುವಾಗಲೇ ಅಭಿಮಾನಿಗಳು ನಿರ್ಮಿಸಿದ ಕಂಚಿನ ಪುತ್ಥಳಿ ಕಂಡು ಭಾವುಕರಾದ ಮಂಡ್ಯ ಶಾಸಕ ಎಂ ಶ್ರೀನಿವಾಸ್

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪಡೆಯಲು ಸಾಕಷ್ಟು ಕಸರತ್ತುಗಳು ನಡೆದವು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜು ಅವರಿಗೆ ಟಿಕೆಟ್ ಕೊಡಿ ಎಂದು ಸಭೆಯಲ್ಲಿ ಸತೀಶ್ ಜಾರಕಿಹೊಳಿ ಹೇಳಿದ್ದು ವಿಶೇಷ. ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದು ಇನ್ನೊಂದು ವಿಶೇಷ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಕೆಲಸ ಮಾಡುವುದಾದರೆ ತಾನು ಸ್ಪರ್ಧೆಗೆ ಸಿದ್ಧ ಎಂದು ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಈ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು. ಈಗ ಸತೀಶ್ ಜಾರಕಿಹೊಳಿ, ಚನ್ನರಾಜು ಮತ್ತು ಪ್ರಕಾಶ್ ಹುಕ್ಕೇರಿ ಪೈಕಿ ಕಾಂಗ್ರೆಸ್ ವರಿಷ್ಠರು ಯಾರನ್ನ ಆಯ್ಕೆ ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ.

ಅತ್ತ, ಬೆಳಗಾವಿ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು ಬಿಜೆಪಿಯಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಸುರೇಸ್ ಅಂಗಡಿ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಟಿಕೆಟ್ ಕೊಡಿ ಎಂಬ ಕೂಗು ಇದೆ. ಹಾಗೆಯೇ, ರಮೇಶ್ ಜಾರಕಿಹೊಳಿ ಅವರು ತಮ್ಮ ಮಗ ಅಮರನಾಥ ಜಾರಕಿಹೊಳಿಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದಾರೆ. ಪ್ರಭಾಕರ್ ಕೋರೆ ಅವರೂ ಕೂಡ ಬಿಜೆಪಿ ಟಿಕೆಟ್ ಗಿಟ್ಟಿಸಲು ಗಂಭೀರ ಪ್ರಯತ್ನ ಮಾಡಿದ್ದಾರೆ.

ಇನ್ನು, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಬಿಜೆಪಿಯೊಳಗೆ ಭಾರೀ ಪೈಪೋಟಿ ಇದೆ. ಮಲ್ಲಿಕಾರ್ಜುನ ಖೂಬಾ, ಸಂಜಯ್ ಪಟವಾರಿ, ಸೂರ್ಯಕಾಂತ ನಾಗಮಾರಪಲ್ಲಿ (ದಿವಂಗತ ಗುರುಪಾದಪ್ಪ ನಾಗಮಾರಪಲ್ಲಿ ಮಗ) ಅವರ ಹೆಸರು ಪ್ರಮುಖವಾಗಿ ಚಾಲನೆಯಲ್ಲಿವೆ.

ವರದಿ: ಚಿದಾನಂದ ಪಟೇಲ್
Published by:Vijayasarthy SN
First published: