ಬಗೆಹರಿಯದ ಕೆಪಿಸಿಸಿ ಬಿಕ್ಕಟ್ಟು; ಇನ್ನೊಂದು ವರದಿ ತರಿಸಿಕೊಂಡ ಹೈಕಮಾಂಡ್; ಡಿಕೆಶಿ ಕೊನೆ ಪ್ರಯತ್ನ?

ಹೈ ಕಮಾಂಡ್ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಬೇಕು ಎಂಬ ಬಗ್ಗೆ ಗೊಂದಲ ಹೊಂದಿದೆ. ಈ ಕಾರಣದಿಂದ ವಿಪಕ್ಷ ಹಾಗೂ ಅಧ್ಯಕ್ಷ ಸ್ಥಾನ ಆಯ್ಕೆ ಕುರಿತು ಮತ್ತೊಂದು ವರದಿಯ ಮೊರೆ ಹೋಗಿದೆ. 

news18-kannada
Updated:January 16, 2020, 12:41 PM IST
ಬಗೆಹರಿಯದ ಕೆಪಿಸಿಸಿ ಬಿಕ್ಕಟ್ಟು; ಇನ್ನೊಂದು ವರದಿ ತರಿಸಿಕೊಂಡ ಹೈಕಮಾಂಡ್; ಡಿಕೆಶಿ ಕೊನೆ ಪ್ರಯತ್ನ?
ಸೋನಿಯಾ ಗಾಂಧಿ ಮತ್ತು ಸಿದ್ದರಾಮಯ್ಯ.
  • Share this:
ನವದೆಹಲಿ(ಜ. 16): ದಿನೇಶ್​ ಗುಂಡೂರಾವ್​ ರಾಜೀನಾಮೆಯಿಂದ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟವನ್ನು ಯಾರಿಗೆ ಕಟ್ಟಬೇಕು ಎಂಬ ಗೊಂದಲ ಕಾಂಗ್ರೆಸ್​ ಅಧ್ಯಕ್ಷರಲ್ಲಿ ಮೂಡಿದೆ. ರಾಜ್ಯ ಕಾಂಗ್ರೆಸ್​ನಲ್ಲಿ ಎರಡು ಬಣಗಳು ಏರ್ಪಟ್ಟಿದ್ದು, ಸಿದ್ದರಾಮಯ್ಯ ಬಣಕ್ಕೆ ಪಟ್ಟ ಕಟ್ಟಬೇಕೆ ಅಥವಾ ಡಿಕೆ ಶಿವಕುಮಾರ್​ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆ ಎಂಬ ಗೊಂದಲ ಮುಂದುವರೆದಿದೆ. ಈ ಮೂಲಕ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನು ಕೊಂಚ ಮುಂದುವರೆಯುವ ಸಾಧ್ಯತೆ ಇದೆ. 

ಈಗಾಗಲೇ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಹೈಕಮಾಂಡ್​, ಈ ಕುರಿತು ಚರ್ಚೆ ನಡೆಸಿದೆ. ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡುವುದರ ಜೊತೆಗೆ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಬೇಕು. ಈ ಹಿನ್ನೆಲೆಯಲ್ಲಿ ಎಂಬಿ ಪಾಟೀಲ್​ ಇದಕ್ಕೆ ಸೂಕ್ತ ವ್ಯಕ್ತಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ, ಮೂಲ ಕಾಂಗ್ರೆಸ್ಸಿಗರ ಮತ್ತೊಂದು ಬಣವು ಸಿದ್ದರಾಮಯ್ಯ ಬೆಂಬಲಿತ ಅಭ್ಯರ್ಥಿಯ ಆಯ್ಕೆಗೆ ನಕಾರ ತೋರಿದ್ದು, ಹೈ ಕಮಾಂಡ್​ನಲ್ಲಿ ತಲೆ ನೋವು ತರಿಸಿದೆ.

ಇನ್ನು, ಕಾಂಗ್ರೆಸ್​ ಆಪತ್ಭಾಂಧವನಂತೆ ಕೆಲಸ ಮಾಡಿದ್ದ ಡಿಕೆ ಶಿವಕುಮಾರ್​ ಪರ ಕೂಡ ಹೈ ಕಮಾಂಡ್​ ಒಲವು ಹೊಂದಿದೆ. ಈ ಹಿನ್ನೆಲೆ ಹೈ ಕಮಾಂಡ್ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಬೇಕು ಎಂಬ ಬಗ್ಗೆ ಗೊಂದಲ ಹೊಂದಿದೆ. ಈ ಕಾರಣದಿಂದ ವಿಪಕ್ಷ ಹಾಗೂ ಅಧ್ಯಕ್ಷ ಸ್ಥಾನ ಆಯ್ಕೆ ಕುರಿತು ಮತ್ತೊಂದು ವರದಿಯ ಮೊರೆ ಹೋಗಿದೆ. ಎಐಸಿಸಿಯ ಮಧುಯಾಸ್ಕಿ ಗೌಡ, ವಿಶ್ವನಾಥ್, ಮಾಣಿಕ್ ಠ್ಯಾಗೂರ್, ಶೈಲಜನಾಥ್​, ವೇಣುಗೋಪಾಲ್​ರಿಂದ ಮತ್ತೊಂದು ವರದಿ ತರಿಸಿಕೊಳ್ಳಲಾಗಿದೆ.

ಇನ್ನು, ಈ ವರದಿ ಪ್ರಕಾರ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ಸ್ಥಾನಕ್ಕೆ ಮುಂದುವರೆಸುವಂತೆ ಸಲಹೆ ನೀಡಲಾಗಿದೆ. ಸಿದ್ದರಾಮಯ್ಯ ನೀಡಿರುವ ರಾಜೀನಾಮೆ ಅಂಗೀಕರಿಸಿದರೆ, ಪಕ್ಷಕ್ಕೆ ಅಪಾಯ. ಪಕ್ಷದಲ್ಲಿ ಸಿದ್ದರಾಮಯ್ಯ ಬಣ ಪ್ರಬಲವಾಗಿದ್ದು, ಅವರು ಸಿಡಿದೇಳುವ ಸಾಧ್ಯತೆ ಇದೆ. ಇದರಿಂದ ಮತ್ತಷ್ಟು ಭಿನ್ನಾಭಿಪ್ರಾಯ ಇರಲಿದ್ದು, ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ಸ್ಥಾನಕ್ಕೆ ಮುಂದುವರೆಸುವಂತೆ ಸೂಚಿಸಲಾಗಿದೆ.

ಆದರೆ, ಸಿದ್ದರಾಮಯ್ಯ ಪ್ರಭಾವವನ್ನು ಪಕ್ಷದಲ್ಲಿ ಕಡಿಮೆ ಮಾಡಬೇಕು. ಇದಕ್ಕಿರುವ ಮಾರ್ಗ ಎಂದರೆ ಅವರ ವಿರೋಧಿ ಬಣದವರಿಗೆ ವಿಪಕ್ಷ ಉಪನಾಯಕನ ಸ್ಥಾನ ಕಟ್ಟುವುದು. ಹಾಗೂ ವಿಪ್ ಅಧಿಕಾರವನ್ನೂ ದಯಪಾಲಿಸುವುದು. ಈ ಮೂಲಕ ಸಿದ್ದರಾಮಯ್ಯ ಅವರೇ ಪರಮೋಚ್ಚ ನಾಯಕ ಎಂಬ ಭಾವನೆ  ಬಿಂಬಿತವಾಗುವುದು ತಪ್ಪಲಿದೆ.

ಇದನ್ನು ಓದಿ: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ; ರಾಹುಲ್ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿಕೆ

ಇದೇ ತಂತ್ರವನ್ನು ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಮುಂದುವರೆಸುವಂತೆ ಕೂಡ ಸೋನಿಯಾ ಗಾಂಧಿಗೆ ಶಿಫಾರಸು ಮಾಡಲಾಗಿದೆ. ಯಾರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೂ ಅವರ ವಿರೋಧಿ ಬಣದವರಿಗೆ ಕಾರ್ಯಾಧ್ಯಕ್ಷ ಹುದ್ದೆ ಕೊಡಬೇಕೆಂಬ ಸಲಹೆಯನ್ನು ವರದಿಯಲ್ಲಿ ನೀಡಲಾಗಿದೆ. ಅಂದರೆ, ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಸಿದ್ದರಾಮಯ್ಯ ಬಣದ ಒಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಬಹುದು. ಒಂದು ವೇಳೆ ಸಿದ್ದರಾಮಯ್ಯ ಬೆಂಬಲಿತ ಎಂಬಿ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಡಿಕೆ ಶಿವಕುಮಾರ್ ತಿಳಿಸಿದ ವ್ಯಕ್ತಿಯನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಬಹುದು. ಇದರಿಂದ ಎರಡೂ ಬಣದವರಿಗೆ ಸಮಾಧಾನವಾಗಬಹುದು. ಎರಡೂ ಬಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬುದು ತಂತ್ರಗಾರಿಕೆ.
First published: January 16, 2020, 12:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading