koppala: ಮತ್ತೇ ಚಾಲ್ತಿಗೆ ಬಂದ ಶ್ರೀದೇವಿ ಆ್ಯಂಡ್ ಕಂಪನಿ ಹೆಸರು!

ಇನ್ನು ಮುಂದೆ ಮರಳು, ಅರಣ್ಯಭೂಮಿ, ಮಟಕಾ, ಅಕ್ಕಿದಂಧೆ ಎಲ್ಲ ನಿಲ್ಲಬೇಕು. ಅಕ್ರಮದಲ್ಲಿ ಯಾರೇ ತೊಡಗಿದ್ದರೂ ಅವರ ವಿರುದ್ಧ ಕ್ರಮ ಜರುಗಬೇಕು ಎಂದು ಆದೇಶಿಸಿದರು.

ಕೆಡಿಪಿ ಸಭೆ

ಕೆಡಿಪಿ ಸಭೆ

  • Share this:
ಕೊಪ್ಪಳ (ಏ. 17): ಕಳೆದ ಕೆಲವು ದಿನಗಳ ಹಿಂದೆ ಭಾರಿ ಸಂಚಲನ ಮೂಡಿಸಿದ್ದ ಶ್ರೀದೇವಿ ಆ್ಯಂಡ್ ಮಟಕಾ ಕಂಪನಿ ಹೆಸರು ಮತ್ತೆ ಸದ್ದು ಮಾಡಿದೆ.  ನಗರದ ಕಿಮ್ಸ್ ಸಭಾಂಗಣದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಶ್ರೀದೇವಿ ಮಟಕಾ ದಂಧೆಗೆ ಪೊಲೀಸರ ಕೃಪಾಕಟಾಕ್ಷ ಇರುವ ಬಗ್ಗೆ ದೂರುಗಳು ಬಂದಿವೆ. ಈ ಕುರಿತು ಯಾವ  ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಟಿ.ಶ್ರೀಧರ್ ಅವರನ್ನು ಸಚಿವರು ಪ್ರಶ್ನಿಸಿದ್ದಾರೆ. ಈ ಕುರಿತು ಪ್ರಶ್ನೆ ಮೂಡುತ್ತಲೇ  ಎಚ್ಚೆತ್ತುಕೊಂಡ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಅವರು, ಇದು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರದ್ದು ಎಂದು ಮಧ್ಯ ಪ್ರವೇಶಿಸಿದರು. ತಕ್ಷಣವೇ ಪ್ರತಿಕ್ರಿಯಿಸಿದ ಸಚಿವರು ಅಕ್ರಮ ಯಾರೇ ಮಾಡಿರಲಿ, ಅವರ ವಿರುದ್ಧ ತನಿಖೆ ನಡೆದು ಕ್ರಮ ಜರುಗಬೇಕಷ್ಟೇ. ಇದುವರೆಗೂ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ. ಇನ್ನು ಮುಂದೆ ಮರಳು, ಅರಣ್ಯಭೂಮಿ, ಮಟಕಾ, ಅಕ್ಕಿದಂಧೆ ಎಲ್ಲ ನಿಲ್ಲಬೇಕು. ಅಕ್ರಮದಲ್ಲಿ ಯಾರೇ ತೊಡಗಿದ್ದರೂ ಅವರ ವಿರುದ್ಧ ಕ್ರಮ ಜರುಗಬೇಕು ಎಂದು ಆದೇಶಿಸಿದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ನಾಗೇಶನಹಳ್ಳಿ ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ನಾಗೇಶನಹಳ್ಳಿಯಲ್ಲಿರುವ ರಾಘವೇಂದ್ರ ಕ್ರಷರ್ ಮೇಲೆ ಗಂಗಾವತಿ ಗ್ರಾಮೀಣ ಸಿಪಿಐ ದಾಳಿ ಮಾಡಿದ್ದೇಕೆ? ಆನಂತರ ವ್ಯವಹಾರ ಮಾತನಾಡಿದ್ದೇಕೆ? ಆಮೇಲೆ ಕ್ರಷರ್​ನಲ್ಲೂ ಎಲ್ಲ ಪಾಲುದಾರರು ಠಾಣೆಗೆ ಬರಬೇಕು ಎಂದು ಪಟ್ಟು ಹಿಡಿದಿದ್ದೇಕೆ? ಮುನಿರಾಬಾದ್ ವ್ಯಾಪ್ತಿಯಲ್ಲಿ ಗಂಗಾವತಿ ಸಿಪಿಐನದ್ದೇನು ಕೆಲಸ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಸ್.ಪಿ ಟಿ.ಶ್ರೀಧರ್ ಅವರು, ಬಳ್ಳಾರಿ ಐಜಿಯವರು ನೇರವಾಗಿ ಗಂಗಾವತಿ ಗ್ರಾಮೀಣ ಸಿಪಿಐಗೆ ತನಿಖೆ ಮಾಡುವಂತೆ ಸೂಚಿಸಿದ್ದರಿಂದ ಅವರು ಅಲ್ಲಿಗೆ ತೆರಳಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು, ಹಾಗಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂದಂಗಾಯ್ತು ಎಂದರು. ಇದು ಹಂಚಿಕೊಂಡ ಸಂದೇಶ ಆಗಿರುವುದರಿಂದ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದು ಎಸ್ಪಿ ಉತ್ತರಿಸಿದರು.

ಅಧಿಕಾರಿಗಳು ಬಡ್ಡಿ ವ್ಯವಹಾರ ಮಾಡ್ತಾರೆ:

ಜಿಲ್ಲಾಮಟ್ಟದ ಅಧಿಕಾರಿಗಳು ವಾರದಲ್ಲಿ ಎರಡು ದಿನಗಳು ಮಾತ್ರ ಕಚೇರಿಯಲ್ಲಿ ಇರುತ್ತಾರೆ. ಇನ್ನುಳಿದ ದಿನ ಊರಿಗೆ ಹೋಗಿ ಬಡ್ಡಿ ವ್ಯವಹಾರ ಮಾಡ್ತಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದ ಅವರು, ಜಿಲ್ಲಾಮಟ್ಟದ ಅಧಿಕಾರಿಗಳ ಬೇಜವಾಬ್ದಾರಿತನದ ಉತ್ತರದಿಂದ ಕೆಂಡಾಮಂಡಲರಾಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ. ಇನ್ನು ಮುಂದೆ ಅವರಿಗೂ ಬಯೋಮೆಟ್ರಿಕ್ ವ್ಯವಸ್ಥೆ ಮಾಡಬೇಕು. ಅಂದಾಗ ಮಾತ್ರ ಜಿಲ್ಲಾಮಟ್ಟದ ಅಧಿಕಾರಿಗಳು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಾದರೂ ಕಚೇರಿಯಲ್ಲಿ ಇರುತ್ತಾರೆ ಎಂದು ಸಚಿವರು ಸಲಹೆ ನೀಡಿದರು.

ಅಂಬೇಡ್ಕರ್ ನಿಗಮದ ಅಧಿಕಾರಿ ಕಳೆದ ಕೆಡಿಪಿ ಸಭೆಯಲ್ಲಿ ಕಾಮಗಾರಿಯೊಂದರ ಕುರಿತು ಇಂದಿನ ಸಭೆಯಲ್ಲೂ ಮಾಹಿತಿ ನೀಡುವಲ್ಲಿ ತಡಬಡಾಯಿಸಿದ್ದರಿಂದ ಸಚಿವರು ಜಿಪಂ ಸಿಇಓ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಸಿಇಓ ಅವರು ಅಂಬೇಡ್ಕರ್ ನಿಗಮದ ಅಧಿಕಾರಿಗೆ ಡೆಡ್​ಲೈನ್​​ ನೀಡಿದರೂ ಉದಾಸೀನ ಮಾಡಿರುವುದಾಗಿ ದೂರಿದರು. ಹಾಗಾಗಿ ಅಂಬೇಡ್ಕರ್ ನಿಗಮದ ಅಧಿಕಾರಿಯನ್ನು ಅಮಾನತುಗೊಳಿಸುವ, ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಯೋಚಿಸಿ ಎಂದು ಸಚಿವ ಬಿ.ಸಿ.ಪಾಟೀಲರು ತಿಳಿಸಿದರು.

ಭೂಸೇನಾ ನಿಗಮದಡಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ:

ಭೂ ಸೇನಾ ನಿಗಮದಡಿ ಯಲಬುರ್ಗಾ ಭಾಗದಲ್ಲಿ ಸುಮಾರು 63 ಕೋಟಿ ರೂಪಾಯಿ ಅವ್ಯವಹಾರದ ದೂರುಗಳಿವೆ. ಜೊತೆಗೆ ಭೂಸೇನೆಯ ಅಧಿಕಾರಿಗಳೇ ಅವ್ಯವಹಾರದ ತನಿಖೆ ನಡೆಸಿದಾಗ ಸುಮಾರು 7-8 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಿದ್ದಾರೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ದೂರಿದರು.
ಇದಕ್ಕೆ ಉತ್ತರಿಸಿದ ಭೂಸೇನಾ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಚಿಂಚೋಳಿಕರ್, ಅದು ಈ ಹಿಂದೆ ಇದ್ದ ಅಧಿಕಾರಿಗಳಿಂದ ಆಗಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.

ಭೂ ಸೇನಾ ನಿಗಮದವರು ಅನುದಾನ ಬಂದಾಗ ಮಾತ್ರ ಕಾಮಗಾರಿ ನಡೆಸುತ್ತಾರೆ. ಅನುದಾನ ಮುಗಿದ ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಾರೆ. ಮತ್ತೇ ಅನುದಾನ ಬಂದ ಮೇಲೆ ಕಾಮಗಾರಿ ಶುರು ಮಾಡೊ ಪರಿಪಾಠ ರೂಢಿಸಿಕೊಂಡಿದ್ದಾರೆ. ಮೊದಲು ಇದನ್ನು ಕೈಬಿಡಿ. ಕಾಮಗಾರಿ ಪೂರ್ಣಗೊಳಿಸಿ ಆನಂತರ ಸರಕಾರದ ಅನುದಾನವನ್ನು ಕ್ಲೇಮ್ ಮಾಡಿ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ಮಗನನ್ನು ಗದರಿದ ಅಪ್ಪ:

ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಮರೇಶ್ ಕರಡಿ ಉಡಾನ್ ಯೋಜನೆ ಕುರಿತು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದಾಗ ಜಾಗದ ಸಮಸ್ಯೆ ಚರ್ಚೆಯಾಯಿತು. ಟಣಕನಕಲ್ ಬಳಿ ಜಾಗ ಖರೀದಿಸಬಹುದಲ್ಲ ಎಂದು ಅಮರೇಶ್ ಕರಡಿ ಸಲಹೆ ನೀಡಲು ಮುಂದಾದಾಗ ಸಭೆಯಲ್ಲಿ ಹಾಜರಿದ್ದ ಅಮರೇಶ್ ಕರಡಿ ಅವರ ತಂದೆ ಸಂಸದ ಸಂಗಣ್ಣ ಕರಡಿ, ಗದರಿದರು. ಪದೇ ಪದೇ ಅದನ್ನೇ ಹೇಳಬೇಡ ಸುಮ್ಮನಿರು ಎಂದು ಮನೆಯಲ್ಲಿ ಗದರುವಂತೆ ಗದರಿದಾಗ ಅಮರೇಶ್ ಸುಮ್ಮನಾದರು.
Published by:Seema R
First published: