ಕೊಪ್ಪಳ (ಜ. 28) : ದಕ್ಷಿಣದ ಕುಂಭಮೇಳ ಎಂತಲೇ ಕರೆಸಿಕೊಂಡಿರುವ ಕೊಪ್ಪಳದ ಅಜ್ಜನ ಜಾತ್ರೆ ಅದ್ಧೂರಿತನಕ್ಕೆ, ಅರ್ಥಪೂರ್ಣತೆಗೆ ಹೆಸರುವಾಸಿ. ಆದರೆ, ಈ ಸಲ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಅದ್ಧೂರಿತನಕ್ಕೆ ತಡೆ ಹಾಕಿ ಅರ್ಥಪೂರ್ಣತೆಗೆ ಮಾತ್ರ ಆದ್ಯತೆ ನೀಡಲಾಗಿದೆ. ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ನಾಡಿನ ಭಕ್ತಿ ಶ್ರದ್ದೆ ಸಾಹಿತ್ಯ ಸಂಸ್ಕೃತಿ, ಸಾಧನೆ ಸಾಧಕರ ಪರಿಚಯ...ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಸಂಗಮ ಕೇಂದ್ರ. ಈ ನಾಡಿನ ಜನತೆ ಅತ್ಯಂತ ಕಾತುರದಿಂದ ಕಾಯುತ್ತಾರೆ. ಪ್ರಸಕ್ತ ವರ್ಷ ಕೋವಿಡ್-19 ಇರುವುದರಿಂದ ಜಾತ್ರೆ ಸರಳವಾಗಿ ಆಚರಿಸಿ, ‘ಸರಳ ಜಾತ್ರೆಯ ಆಚರಣೆ ಸಮಾಜಮಖಿ ಸೇವೆಗೆ ಅರ್ಪಣೆ' ಎಂಬ ಧ್ಯೇಯದೊಂದಿಗೆ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಕಳೆದ ವರ್ಷದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಪೂಜ್ಯರ ಸಂಕಲ್ಪದಂತೆ ಗ್ರಂಥಾಲಯ ನಿರ್ಮಾಣ ಪೂರ್ಣಗೊಂಡಿದೆ. 2020ರಲ್ಲಿ ಯು.ಪಿ.ಎಸ್.ಸಿ ತೇರ್ಗಡೆಯೊಂದಿಗೆ ಐಪಿಎಸ್ಗೆ ನೇಮಕಗೊಂಡಿರುವ ಜಿಲ್ಲೆಯ ಗಂಗಾವತಿಯ ವಿನೋದ್ ಪಾಟೀಲ್ ಅವರು ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನ ಸ್ಪರ್ಧಾತ್ಮಕ ಸ್ಪರ್ಧೆಯಲ್ಲಿ ಯಶಸ್ಸು ಗಳಿಸಲು ಅವರನ್ನು ಸನ್ನದ್ಧ ಮಾಡುವ ಸಂಕಲ್ಪದೊಂದಿಗೆ ಈ ಗ್ರಂಥಾಲಯ ರೂಪಗೊಂಡಿದೆ.
ಇದು ದಿನದ 24 ಗಂಟೆಯೂ ತೆರೆದ ಗ್ರಂಥಾಲಯವಾಗಿದೆ.ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅರ್ಹರಾದ ಎಲ್ಲ ವಿದ್ಯಾರ್ಥಿಗಳಿಗೂ ಅಭ್ಯಾಸ ಮಾಡಲು ಮುಕ್ತ ಅವಕಾಶವಿದೆ. ಈ ಭಾಗದ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಇದು ಸಂಪೂರ್ಣ ಉಚಿತ ಗ್ರಂಥಾಲಯವಾಗಿದೆ. ಕೇವಲ ಅಭ್ಯಾಸ ಮಾತ್ರವಲ್ಲ, ಇಲ್ಲಿ ಬೋಧನಾ ತರಬೇತಿ, ತಜ್ಞರ ವಿಶೇಷ ತರಗತಿಗಳು, ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉನ್ನತ ಹುದ್ದೆಯಲ್ಲಿ ಸೇವೆ ಮಾಡುತ್ತಿರುವವರು ಸಮಯಾವಕಾಶ ಸಿಕ್ಕಾಗಲೆಲ್ಲಾ ಉಪನ್ಯಾಸ ನೀಡುತ್ತಾರೆ. ಇದೆಲ್ಲಾ ಮಾಹಿತಿಯೂ ನೋಂದಾಯಿತ ಅಷ್ಟು ವಿದ್ಯಾರ್ಥಿಗಳಿಗೂ ವಾಟ್ಸ್ಪ್, ಟೆಲಿಗ್ರಾಮ್ ಅಥವಾ ಸಂದೇಶದ ಮೂಲಕ ಸ್ವಯಂಚಾಲಿತವಾಗಿ ರವಾನೆಯಾಗುತ್ತದೆ.
ಸ್ಮಾರ್ಟ್ ವಿಲೇಜ್ ಮಾಡಲು ಗ್ರಾಮ ದತ್ತು:
ಭಾರತ ಹಳ್ಳಿಗಳ ದೇಶ, ಹಳ್ಳಿಗರ ದೇಶ, ಭಾರತ ವಿಕಾಸ ಕೇವಲ ನಗರಗಳಿಂದಲ್ಲ ಹಳ್ಳಿಗಳ ವಿಕಾಸವೇ ಭಾರತದ ವಿಕಾಸ. ಅಲ್ಲಿ ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ಕೃಷಿ, ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡು ಸಮೃದ್ಧಿಯಾಗಿ ಬದುಕಬೇಕು. ಸ್ಮಾರ್ಟ್ ಸಿಟಿಗಳ ಗಳ ಜೊತೆಗೆ ಸ್ಮಾರ್ಟ್ ವಿಲೇಜ್ಗಳಿಂದ ಭಾರತ ವಿಕಾಸ. ಈ ನಿಟ್ಟಿನಲ್ಲಿ ಕುಕನೂರ ತಾಲೂಕಿನ ಕಟ್ಟಕಡೆಯ ಗ್ರಾಮ ಅಡವಿಹಳ್ಳಿಯನ್ನು ದತ್ತು ತೆಗೆದುಕೊಂಡು ಶ್ರೀ ಸರ್ವೋದಯ ಸಂಸ್ಥೆ, ಶ್ರೀ ಮುಕುಂದ ಸ್ಟೀಲ್ಸ್ ಇವರ ಸಹಯೋಗದಲ್ಲಿ ಈ ಹಳ್ಳಿಯಲ್ಲಿ ಒಂದು ವರ್ಷತನಕ ನೀಲನಕ್ಷೆ ತಯಾರಿಸಿ ಕಾರ್ಯಾರಂಭ ಮಾಡಲಾಗುವುದು. ಫೇಬ್ರುವರಿ 2ನೇ ವಾರ ಅಥವಾ 3ನೇ ವಾರದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲು ಶ್ರೀಮಠ ತೀರ್ಮಾನಿಸಿದೆ.
ಗಿಣಿಗೇರಾ ಕೆರೆಯ ಸಂವರ್ಧನಾ ಸಂಕಲ್ಪ:
“ನಮ್ಮ ನಡೆ, ಕೆರೆಯ ಹೂಳೆತ್ತುವ ಕಡೆ; ನಮ್ಮಅಭಿವೃದ್ಧಿ- ನಮ್ಮ ಕೆರೆಯಿಂದ” ನೀರಿನಿಂದಲೆ ಜೀವನದ ಆರಂಭ. ನೀರಿಲ್ಲದಿದ್ದರೆ ಜೀವನವೇಇಲ್ಲ. ನದಿ ಹಳ್ಳ ಕೆರೆಗಳು ಬಾವಿಗಳು ಜೀವ ಮೂಲ ಸೆಲೆಗಳು. ಇವುಗಳಿಲ್ಲದಿದ್ದರೆ ಜೀವ ಸಂಕುಲವೇ ಅಳಿದು ಹೋಗುತ್ತವೆ. ಇಂದು ನೀರಿನ ಮೂಲಗಳನ್ನು ಮರೆತಿದ್ದೇವೆ. ಕೆರೆಗಳು ಹೂಳು ತಂಬಿವೆ. ಹಳ್ಳಿಗಳಲ್ಲಿ (ಮರಳು) ಉಸುಕಿಲ್ಲ. ಬಾವಿಗಳು ಬತ್ತಿಹೋಗಿ 500-600 ಅಡಿ ಬೋರ್ ಕೊರೆಸಿದರೂ ನೀರಿಲ್ಲ. ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ವರ್ಷಗಳಲ್ಲಿ ಹಿರೇಹಳ್ಳ, ನೀಡಸೇಸಿ, ಕಲ್ಲಭಾವಿ, ತಾವರಕೇರೆ, ಇಂದರಗಿ ಹಲಗೇರಿ ಮತ್ತುಗಂಗಾವತಿ ಹೀಗೆ ಜಿಲ್ಲೆಯ ಹಲವು ಕೆರೆಗಳಲ್ಲಿ ಜಲ ಸಂರಕ್ಷಣಾಕ್ರಾಂತಿಯೇ ನಡೆಯಿತು. ಇದು ನಿರಂತರವಾಗಿರಬೇಕೆಂಬ ಉದ್ದೇಶದಿಂದ ಈ ವರ್ಷದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಧ್ಯೇಯ ವಾಕ್ಯವೇ“ಸರಳ ಜಾತ್ರೆಯ ಆಚರಣೆ ಸಮಾಜಮಖಿ ಸೇವೆಗೆ ಅರ್ಪಣೆ”ಈ ನಿಟ್ಟಿನಲ್ಲಿ ಸುಮಾರು 300 ಎಕರೆಯಷ್ಟು ವಿಸ್ತಾರವಾದ ಗೀಣಿಗೇರಾ ಕೆರೆಯ ಸ್ವಚ್ಛತೆ, ಸಂರಕ್ಷಣೆ, ಮತ್ತುಅಭಿವೃದ್ಧಿಪಡಿಸುವ ಕಾರ್ಯಕ್ಕೆ ಪೂಜ್ಯರು ನಿರ್ಧರಿಸಿದ್ದಾರೆ.
ಈ ಸತ್ಕಾರ್ಯಕ್ಕೆ ಗೀಣಿಗೇರಿಯ ಎಲ್ಲ ಹಿರಿಯರು, ಯುವಕರು, ಜಿಲ್ಲೆಯ ಜನಪ್ರತಿನಿಧಿಗಳು, ಕಾರ್ಖಾನೆಗಳವರು ಸಹ ತಮ್ಮ ಸಹಾಯ ಹಸ್ತ ನೀಡಲು ಮುಂದೆ ಬಂದಿದ್ದಾರೆ.ಈ ಕೆರೆ ಅಭಿವೃದ್ಧಿಯಾದರೆ ಸುತ್ತಮುತ್ತಲಿನ ಸುಮಾರು 15-20 ಹಳ್ಳಿಗಳಿಗೆ ಕುಡಿಯುವ ನೀರು, ಕೃಷಿಗೆ ಬೋರವೇಲ್ಗಳು ರಿಚಾರ್ಜ, ಪರಿಸರ ಎಲ್ಲದಕ್ಕೂ ಅನುಕೂಲವಾಗುತ್ತದೆ.1 ಕೆರೆ 50 ಸಾವಿರ ಜನರನ್ನು ಬದುಕಿಸುತ್ತದೆ. 50 ಸಾವಿರ ಜನ ಸೇರಿ 1 ಕೆರೆಯನ್ನು ಬದುಕಿಸದಿದ್ದರೆ ಹೇಗೆ? ಎಂಬುದು ಶ್ರೀಗಳ ಆಲೋಚನೆ.
ಜಾತ್ರೆಯ ಸಂಭ್ರಮ ಕಡಿಮೆಯಾಗಿರಬಹುದು. ಸಮಾಜ ಸೇವೆ ಸಂಭ್ರಮ ನಿರಂತರವಾಗಿರಬೇಕು. ಸಮಾಜಮುಖಿ ಸತ್ಕಾರ್ಯವೇ ಸಂಪ್ರದಾಯವಾಗಬೇಕು. ಈ ನಿಟ್ಟಿನಲ್ಲಿ - ಈ ವರ್ಷಜಾತ್ರೆ ಸರಳವಾಗಿರಲಿ, ಅರ್ಥಪೂರ್ಣವಾಗಿರಲಿ, ವೈಶಿಷ್ಟ್ಯಪೂರ್ಣವಾಗಿರಲಿ, ಸೃಜನಾತ್ಮಕವಾಗಿರಲಿ ಎನ್ನುತ್ತಾರೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು.
ಮೊಬೈಲ್ನಲ್ಲಿ ಜಾತ್ರಾ ವಿವರ
ಇಂಟರ್ ಆ್ಯಕ್ಟೀವ್ ವಾಟ್ಸಾಪ್ ರೆಸ್ಪಾನ್ಸಿವ್ ಸಿಸ್ಟಮ್ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವುಇಂಟರ್ಯಾಕ್ಟಿವ್ ವಾಟ್ಸಾಪ್ರೆಸ್ಪಾನ್ಸಿವ್ ಸಿಸ್ಟಮ್ ಈ ವರ್ಷದ ಜಾತ್ರೆಗೆ ಅಳವಡಿಸಲಾಗಿದೆ. ಇದರಲ್ಲಿ ಭಕ್ತರು ಸಂದೇಶ ಕಳುಹಿಸಿದರೆ ಅವರ ಅಗತ್ಯಗಳಿಗನುಗುಣವಾಗಿ ಮಾಹಿತಿಯನ್ನು ವಾಟ್ಸಾಪ್ ಮೂಲಕ ಮಾಹಿತಿ ಪಡೆಯಲು ಇದು ವಿನೂತನವಾದ ಆಧುನಿಕ ತಂತ್ರಜ್ಞಾನವಾಗಿದೆ. ಮಠಮಾನ್ಯಗಳಲ್ಲಿ ಈ ಆಧುನಿಕ ತಂತ್ರಜ್ಞಾನ ಬಳಸಿದ ಮೊದಲನೇ ಮಠ ಸಂಸ್ಥಾನ ಶ್ರೀ ಗವಿಮಠವಾಗಿದೆ. ಗವಿಮಠದ ಈ ತಂತ್ರಜ್ಞಾನದಲ್ಲಿ 7975480392 ಈ ವಾಟ್ಸಾಪ್ ಸಂಖ್ಯೆಗೆ ಗವಿಮಠ (Gavimath) ಎಂದು ಸಂದೇಶ ಕಳುಹಿಸಿದಾಗ ಮರು ಸಂದೇಶ ರೂಪದಲ್ಲಿ ಶ್ರೀ ಗವಿಸಿಸದ್ಧೇಶ್ವರ ಜಾತ್ರಾ ಮಹೋತ್ಸವ-2021ರ ಪ್ರಮುಖ ವಿಷಯ ವಸ್ತುಗಳು ಲಭ್ಯವಾಗುತ್ತವೆ. ಜಾತ್ರೆಯ ನೇರಪ್ರಸಾರ ವೀಕ್ಷಿಸಲು 5 ಎಂದು ಸಂಖ್ಯೆಯನ್ನು ಸಂದೇಶ ಕಳುಹಿಸಿದಾಗ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನೇರಪ್ರಸಾರ ಮರು ಸಂದೇಶದರೂಪದಲ್ಲಿಅವರ ವಾಟ್ಸಾಪ್ಗೆ ಲಭ್ಯವಾಗುತ್ತದೆ. ಹೀಗೆ ಶ್ರೀ ಗವಿಮಠದಇತಿಹಾಸ, ಪೂಜ್ಯರ ಸಂದೇಶ, ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ಪಟ್ಟಿ, ದಾಸೋಹದ ಮಾಹಿತಿ ,ಜಾತ್ರಾ ದಿನದಂದುಅಭಿಷೇಕಕ್ಕಾಗಿಆನ್ಲೈನ್ ಪಾವತಿ ಹೀಗೆ ಹಲವಾರು ವಿಷಯ ವಸ್ತುಗಳನನು ಅಳವಡಿಸಲಾಗಿದೆ.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ