Dragon Fruit: ಡ್ರ್ಯಾಗನ್ ಫ್ರೂಟ್ ಮೂಲಕ ಲಾಭಾಗಳಿಸುತ್ತಿರುವ ಕೊಪ್ಪಳ ರೈತರು; ವಿದೇಶಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಕಡಿಮೆ ನೀರು ಇರುವ ಒಣಭೂಮಿ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿರುವ ಡ್ರ್ಯಾಗನ್ ಫ್ರೂಟ್ ಈಗ ರೈತರಿಗೆ ಲಾಭದಾಯಕ ಬೆಳೆಯಾಗಿದೆ

ಡ್ರ್ಯಾಗನ್ ಫ್ರೂಟ್

ಡ್ರ್ಯಾಗನ್ ಫ್ರೂಟ್

  • Share this:
ಕೊಪ್ಪಳ (ಸೆ. 13) :ಇದು ಪಕ್ಕ ವಿದೇಶಿ ಹಣ್ಣು, ಪಾಪಸ ಕಳ್ಳಿಯ ಜಾತಿಗೆ ಸೇರಿದ ಪರಿಷ್ಕೃತ ತಳಿಯಾಗಿರುವ ಹಣ್ಣು, ಅಧಿಕ ಪೋಷಕಾಂಶ ಹೊಂದಿದ್ದು ಇತ್ತೀಚಿಗೆ ಕರ್ನಾಟಕದಲ್ಲಿಯೂ ಈ ಹಣ್ಣಿನ ಬೇಡಿಕೆ ಹೊಂದಿದೆ. ಅದು ಮತ್ಯಾವುದು ಅಲ್ಲ ಡ್ರ್ಯಾಗನ್ ಫ್ರೂಟ್​ (dragon fruit) ಮಾರುಕಟ್ಟೆಯಲ್ಲಿ ಸ್ವಲ್ಪ ದುಬಾರಿಯಾದರೂ ಸಾಕಷ್ಟು ಬೇಡಿಕೆ ಇದೆ ಈ ಹಣ್ಣಿಗೆ. ಇಂಥ ಹಣ್ಣನ್ನು ಈಗ ಒಣಭೂಮಿ ಅಧಿಕವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಅಧಿಕವಾಗಿ ಬೆಳೆಯುವತ್ತ ರೈತರು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹೊಂದಿರುವ ಹಿನ್ನಲೆ ಡ್ರ್ಯಾಗನ್ ಫ್ರೂಟ್ ಬೆಳೆಯಲು ತೋಟಗಾರಿಕೆ ಇಲಾಖೆಯಿಂದಲೂ ಉತ್ತೇಜನ ನೀಡಲಾಗುತ್ತಿದೆ. ಮೆಕ್ಸಿಕೊ, ಅಮೆರಿಕಾದಲ್ಲಿ ಬೆಳೆಯುತ್ತಿದ್ದ ಈ ಹಣ್ಣು ಇತ್ತೀಚಿಗೆ ಭಾರತದಲ್ಲಿಯೂ ಹೆಚ್ಚಿನ ಪ್ರಮಾಣ ಬೆಳೆಯುವ ಮೂಲಕ ರೈತರು ಲಾಭ ಪಡೆಯಲು ಮುಂದಾಗಿದೆ.

ಕಡಿಮೆ ನೀರು ಇರುವ ಒಣಭೂಮಿ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿರುವ ಡ್ರ್ಯಾಗನ್ ಫ್ರೂಟ್ ಈಗ ರೈತರಿಗೆ ಲಾಭದಾಯಕ ಬೆಳೆಯಾಗಿದೆ. ಕಬ್ಬಿಣಾಂಶ, ಅಧಿಕ ಪ್ರೋಟಿನ್, ಅಧಿಕ ಕ್ಯಾಲೋರಿ ಹೊಂದಿರುವ ಡ್ರ್ಯಾಗನ್ ಫ್ರೂಟ್ ಸೇವಿಸುವದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಲಿದೆ ಎಂದು ಹೇಳಲಾಗುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಕಳೆದ 2-3 ವರ್ಷಗಳಲ್ಲಿ ರೈತರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಆರಂಭಿಸಿದ್ದಾರೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಸರಿಸುಮಾರು 15 ಹೆಕ್ಟೇರ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲಾಗುತ್ತಿದೆ.  ಮುಖ್ಯವಾಗಿ ಈ ಬೆಳೆ ಕಡಿಮೆ ಪ್ರಮಾಣದ ನೀರು ಬೇಕು, ಕಲ್ಲಿನ ಕಂಬಕ್ಕೆ ಹರಡು ಈ ಗಿಡವು ಪ್ರತಿ ಎಕರೆಗೆ 400 ಗಿಡಗಳು ಬೆಳೆಸಬಹುದಾಗಿದೆ. ಪ್ರತಿ ಎಕರೆಗೆ ಡ್ರ್ಯಾಗನ್ ಫ್ರೂಟ್ ಬೆಳೆಯಲು ಸುಮಾರು 4 ಲಕ್ಷದವರೆಗೂ ಖರ್ಚು ಬರುತ್ತಿದೆ. ಆರಂಭದಲ್ಲಿ ಮಾತ್ರ ಕೊಂಚ ಖರ್ಚು ಮಾಡಬೇಕಾಗಿದ್ದು ನಂತರ ಖರ್ಚು ಕಡಿಮೆ ಎನ್ನುತ್ತಾರೆ ರೈತರು.  ಬೆಳೆಗೆ ರೋಗವು ಕಡಿಮೆ, ಸಾವಯವ ಪದ್ದತಿಯಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆಯ ಬಹುದಾಗಿದೆ.

ಇದನ್ನು ಓದಿ: ಇನ್ಮುಂದೆ ಪ್ರತಿ ಗುರುವಾರ ಶಾಸಕರ ಅಹವಾಲು ಆಲಿಸಲಿದ್ದಾರೆ ಮುಖ್ಯಮಂತ್ರಿಗಳು; ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ

ವರ್ಷದ ನಂತರ ಇಳುವರಿ ಆರಂಭವಾಗುತ್ತದೆ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಟಾವು ಮಾಡಬಹುದಾಗಿದ್ದು ಪ್ರತಿ ವರ್ಷಕ್ಕೆ 9 ಟನ್ ವರೆಗೂ ಇಳುವರಿ ಬರುತ್ತದೆ ಅದರಲ್ಲಿ ಮೂರು ಗಾತ್ರದ ಹಣ್ಣು ಬರುತ್ತಿದ್ದು ಪ್ರತಿ ಕೆಜಿಗೆ 60-150 ರೂಪಾಯಿಯವರೆಗೂ ಮಾರಾಟವಾಗುತ್ತಿದೆ.  ಈಗ ನಗರ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಮಾರಾಟ ಮಾಡಲಾಗುತ್ತಿದ್ದು, ಬೆಂಗಳೂರು, ಹುಬ್ಬಳ್ಳಿ, ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ಜನರು ಖರೀದಿಸುತ್ತಿದ್ದಾರೆ. ಆದರೆ ಇನ್ನೂ ಗ್ರಾಮೀಣ ಭಾಗದಲ್ಲಿ ಈ ಹಣ್ಣಿನ ರುಚಿ ಅಷ್ಟಾಗಿ ನೋಡಿಲ್ಲ ಎನ್ನುತ್ತಾರೆ ರೈತರು.

ತೋಟಗಾರಿಕೆ ಇಲಾಖೆಯಿಂದ ಸಣ್ಣ ಹಣ್ಣುಗಳ ಬೆಳೆಗಾಗಿ ಉತ್ತೇಜನ ನೀಡಲಾಗುತ್ತಿದೆ. ನರೇಗಾ ಯೋಜನೆಯಲ್ಲಿ ಕಂಬ, ಗುಂಡಿ ತೆಗೆಯಲು ಸಹಾಯ ಧನ ನೀಡಲಾಗುತ್ತಿದೆ. ಇದೇ ವೇಳೆ ಹನಿ ನೀರಾವರಿಗಾಗಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಡ್ರ್ಯಾಗನ್ ಫ್ರೂಟ್ ಬೆಳೆಯುವ ರೈತರನ್ನು ಉತ್ತೀಜಿಸಲಾಗುತ್ತಿದೆ, ಆದರೆ ರೈತರು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆಯಲು ಆರಂಭಿಸಬೇಕು. ಕಾರಣ ಹಣ್ಣಿನ ಮಾರುಕಟ್ಟೆ ಇನ್ನೂ ಸೀಮಿತವಾಗಿರುವದರಿಂದ ಮಾರುಕಟ್ಟೆ ಆಧಾರಿಸಿ ಬೆಳೆಯನ್ನು ಬೆಳೆಯಬೇಕೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕೃಷ್ಣಾ ಉಕ್ಕುಂದ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಸೂಕ್ತವಾದ ವಾತವರಣವಿದೆ. ಜೊತೆಗೆ ಇದು ರೈತರಿಗೆ ಲಾಭದಾಯಕವಾಗಿರುವ ಈ ಹಣ್ಣು ಬೆಳೆಯಬಹುದು ಎನ್ನುತ್ತಾರೆ ಅಧಿಕಾರಿಗಳು, ನಿಧಾನವಾಗಿ ಕೊಪ್ಪಳ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಯಲ್ಲಿ ಡ್ರ್ಯಾಗನ್ ಫ್ರೂಟ್ ನತ್ತ ವಾಲುತ್ತಿದ್ದಾರೆ, ಡ್ರ್ಯಾಗನ್ ಫ್ರೂಟ್ ನ ಲಾಭ, ಅದರ ಮಹತ್ವ ಅರ್ಥವಾದಂತೆ ಇನ್ನಷ್ಟು ಬೆಳೆಯಬಹುದಾಗಿದೆ.
Published by:Seema R
First published: