ಮಗುವಿನ ಗಂಟಲಲ್ಲಿ ಸಿಲುಕಿದ ಡಬ್ಬಿ ತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

ಆಟವಾಡುತ್ತಿದ್ದ ಮಗು ಮೆಂತೋ ಪ್ಲಸ್​ ಡಬ್ಬಿಯ ಮುಚ್ಚಳವನ್ನು ನುಂಗಿ, ಅಪಾಯಕ್ಕೆ ಸಿಲುಕಿತ್ತು

ಮಗುವಿನ ಗಂಟಲಲ್ಲಿ ಸಿಲುಕಿದ ಮುಚ್ಚಳ

ಮಗುವಿನ ಗಂಟಲಲ್ಲಿ ಸಿಲುಕಿದ ಮುಚ್ಚಳ

  • Share this:
ಕೊಪ್ಪಳ (ಜು. 1):  ವೈದ್ಯೋ ನಾರಾಯಣೋ ಹರಿ ಎಂಬ ಮಾತು ಅಕ್ಷರಃ ಸತ್ಯ ಎಂಬುದು ಅನೇಕ ಘಟನೆಗಳಲ್ಲಿ ಸಾಬೀತಾಗುತ್ತಾ ಬರುತ್ತಲೇ ಇದೆ. ಅದರಲ್ಲೂ ಕೋವಿಡ್​ ಸಂದರ್ಭದಲ್ಲಿ ವೈದ್ಯರ ಸೇವೆ ನಿಜಕ್ಕೂ ಶ್ಲಾಘನೀಯ ಅಂತಹ ಮುಂಚೂಣಿ ಕಾರ್ಯಕರ್ತರಿಗೆ ಇಂದಿನ ವೈದ್ಯರ ದಿನದಂದು ಶುಭಾಶಯಗಳು ಹರಿದು ಬರುತ್ತಿದೆ. ಜೀವ ಉಳಿಸುವಲ್ಲಿನ ಅವಿರಹಿತ ಹೋರಾಟ ನಡೆಸುವ  ವೈದ್ಯರ ಸೇವೆಯನ್ನು ಪ್ರಶಂಸಿರುವ ಪ್ರಧಾನಿ ನರೇಂದ್ರ ಮೋದಿ, ವೈದರೆಂದರೆ ದೇವರು ಎಂದಿದ್ದಾರೆ. ಅದಕ್ಕೆ ನಿದರ್ಶನದಂತೆ ಕೊಪ್ಪಳದಲ್ಲಿ ಒಂದು ಘಟನೆ ನಡೆದಿದೆ. ಮೆಂತೋ ಪ್ಲಸ್​ ಡಬ್ಬಿಯನ್ನು ನುಂಗಿದ 8 ತಿಂಗಳ ಮಗುವನ್ನು ಬದುಕಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಮಗುವಿನ ಜೀವ ಕಾಪಾಡಿದ ವೈದ್ಯರಿಗೆ ಪೋಷಕರು ಇನ್ನಿಲ್ಲದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಕೊಪ್ಪಳದ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ನಿಂಗಪ್ಪ ಎನ್ನುವವರ ಮಗು ಇಂದು ಬೆಳಗ್ಗೆ ಆಟವಾಡುತ್ತಾ ಕೈಗೆ ಸಿಕ್ಕಿದ್ದ ಮೆಂತೋ ಪ್ಲಸ್​ ಡಬ್ಬಿಯ ಮುಚ್ಚಳವನ್ನು ನುಂಗಿದೆ. ಇದನ್ನು ತಕ್ಷಣಕ್ಕೆ ಗಮನಿಸಿದ ತಾಯಿ ಮಗುವಿನ ಬಾಯಿಗೆ ಒಳಗೆ ಕೈ ಹಾಕಿ ತೆಗೆಯುವ ಯತ್ನ ಮಾಡಿದ್ದಾರೆ. ಆದರೆ, ದುರದೃಷ್ಟವಶಾತ್​ ಡಬ್ಬಿಯ ಮುಚ್ಚಳ ಮಗುವಿನ ಗಂಟಲಿಗೆ ಹೋಗಿ ಸಿಲುಕಿದೆ. ಈ ವೇಳೆ ಮಗು ಸ್ಥಿತಿ ಕೊಂಚ ಬಿಗಡಾಯಿಸಿದ್ದು, ಉಸಿರಾಡಲು ಕಷ್ಟ ಅನುಭವಿಸಿದೆ.ತಕ್ಷಣಕ್ಕೆ ತಂದೆ ನಿಂಗಪ್ಪ ಮಗುವನ್ನು ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ಮಗುವಿನ ಗಂಟಲಲ್ಲಿ ಸಿಲುಕಿದ್ದ ಡಬ್ಬಿಯ ಮುಚ್ಚಳವನ್ನು ತೆಗೆಯುವಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಯ ಇಎನ್ ಟಿ ವಿಭಾಗದ ವೈದ್ಯರಾದ ಡಾ. ಮಲ್ಲಿಕಾರ್ಜುನ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: ತಾತನಾದ ಸಂಭ್ರಮದಲ್ಲಿ ಸಚಿವ ಬಿಸಿ ಪಾಟೀಲ್

ಬಹುತೇಕ ಮಕ್ಕಳು ಆಟವಾಡುತ್ತ ಕೈಗೆ ಸಿಕ್ಕ ವಸ್ತುಗಳನ್ನು ನುಂಗುತ್ತವೆ. ಈ ವೇಳೆ ಅವು ಗಂಟಲಲ್ಲಿ ಸಿಲುಕಿ ಉಸಿರುಗಟ್ಟುತ್ತವೆ. ತಕ್ಷಣಕ್ಕೆ ಚಿಕಿತ್ಸೆ ಸಿಗದೇ ಇದ್ದರೆ, ಮಕ್ಕಳ ಜೀವಕ್ಕೆ ಅಪಾಯ. ಇಂತಹ ಸಂದರ್ಭದಲ್ಲಿ ಕೊಪ್ಪಳದ ಸರ್ಕಾರಿ ವೈದ್ಯರು ತಕ್ಷಣಕ್ಕೆ ಮಗುವಿನ ಗಂಟಲಲ್ಲಿ ಸಿಲುಕಿದ ವಸ್ತು ತೆಗೆದು ನಿಜಕ್ಕೂ ಪೋಷಕರ ಪಾಲಿನ ದೇವರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯ  ವೈದ್ಯರ ಕಾರ್ಯಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: